Monday, 24th June 2024

ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಲು ಕಾರಣ- ಕೊಲೆಸ್ಟ್ರಾಲ್

ತುಂಟರಗಾಳಿ

ಸಿನಿಗನ್ನಡ
ನಟ ದರ್ಶನ್ ಅದೆಷ್ಟನೇ ಬಾರಿಗೋ ಮತ್ತೆ ವಿವಾದದಲ್ಲಿ ಸಿಲುಕಿದ್ದಾರೆ. ನಮ್ಮ ಕರ್ನಾಟಕದ ಜನರಿಗೆ ಇದೇನೂ ಹೊಸದಲ್ಲ ಬಿಡಿ. ಇನ್ನು ದರ್ಶನ್ ಅವರಿಗೂ ಇದು ಹೊಸದೇನಲ್ಲ. ಎಲ್ಲಿಯವರೆಗೂ ಸಾವಿನ ಮನೆ ಮುಂದೆನೂ ಡಿ ಬಾಸ್ ಡಿ ಬಾಸ್ ಅಂತ ಕೂಗೋ ಅವರ ಚೇಲಾಗಳು ಇತ್ರಾರೋ ಅಲ್ಲಿಯವರೆಗೆ ಈ ಪುರಾಣ ಮುಂದುವರಿಯುತ್ತಲೇ ಇರುತ್ತೆ. ಆದರೆ ಈ ಬಾರಿ ಇದು ಸಣ್ಣ ವಿಷಯ ಆಗಿ ಉಳಿದಿಲ್ಲ. ಕೊಲೆ ಕೇಸು ಅನ್ನೋದು ದೊಡ್ಡ ಕಂಟಕ. ದರ್ಶನ್ ಅವರಿಗೆ ಈಗಾಗಲೇ ರಾಜಕಾರಣಿಗಳ ಬೆಂಬಲ ಸಿಕ್ತಾ ಇದೆ ಅಂದರೂ ಅವರನ್ನು ಕಂಡರೆ ಆಗದ ರಾಜಕಾರಣಿಗಳೂ ಇದ್ದಾರೆ.

ಹಾಗಾಗಿ ದರ್ಶನ್ ಗೆ ಜೈಲು ಪಾಲಾಗುವುದರಿಂದ ಬಚಾವ್ ಆಗುವುದು ತೀರಾ ಸುಲಭ ಏನಲ್ಲ. ಹಾಗಂತ ಏನಾದರೂ ಗೋಲ್ ಮಾಲ್ ನಡೆದು ಈ ಮನುಷ್ಯ ಹೊರಗೆ ಬಂದರೆ ಇನ್ನು ಮುಂದೆಯಾದರೂ ಸರಿಯಾಗಿ ಬದುಕುತ್ತಾರೆ ಅನ್ನೋ ಯಾವ ನಂಬಿಕೆಯೂ ಯಾರಿಗೂ ಇಲ್ಲ. ಯಾಕಂದ್ರೆ ದರ್ಶನ್‌ರ ಈ ಅವತಾರವನ್ನು ಜನ ಬಹಳ ವರ್ಷಗಳಿಂದ ನೋಡಿದ್ದಾರೆ. ಮತ್ತು ಇದು ಸರಿ ಹೋಗೋ ತಳಿ ಅಲ್ಲ ಅತ ಎಲ್ಲರಿಗೂ ಗೊತ್ತು. ಮೇಲೆ ಪ್ರಾಣಿಪ್ರಿಯನ ಮುಖವಾಡ ಹಾಕಿ ಬದುಕೋ ಈ ಮನುಷ್ಯನ ಒಳಗೂ ಒಬ್ಬ ಕ್ರೂರ ಪ್ರಾಣಿ ಇದ್ದಾನೆ ಅನ್ನೋದು ಸಾಕಷ್ಟು ಬಾರಿ ಪ್ರೂವ್ ಆಗಿದೆ.

ಅಂದಹಾಗೆ, ಈ ಪ್ರಕರಣದಲ್ಲಿ ಕುತೂಹಲ ಮೂಡಿಸುವ ಮತ್ತು ಹಿಂಟ್ ಕೊಡುವ ಒಂದು ವಿಷಯ ಇದೆ. ರೇಣುಕಾಸ್ವಾಮಿಯನ್ನ ದರ್ಶನ್ ಚೇಲಾಗಳು ಕೊಂದಿದ್ದರೆ ಅವರು ಬೆಳಗ್ಗೆ ಎದ್ದು ಹೋಗಿ ಪೊಲೀಸರಿಗೆ ಯಾಕೆ ಶರಣಾಗುತ್ತಿದ್ದರು? ಸಿಕ್ಕಾಕ್ಕೊಂಡ್ಮೇಲೆ ನೋಡೋಣ ಅಂತ ಸುಮ್ಮನಾಗುತ್ತಿದ್ದರು. ಹೀಗೇ ತಾವೇ ಶರಣಾಗಿದ್ದಾರೆ ಅಂದ್ರೆ ಅದರ ಹಿಂದೆ ಯಾರನ್ನೋ ಬಚಾವ್ ಮಾಡುವ ಉದ್ದೇಶ ಇದೆ ಅಂತ ಅರ್ಥ ತಾನೇ? ಈ ಜಾಡನ್ನು ಹಿಡಿದು ಹೋದರೆ ಮೋಲ್ನೋಟಕ್ಕೆ ಯಾರು ಈ ಕೊಲೆ ಮಾಡಿದ್ರು ಅನ್ನೋದು ಸ್ಪಷ್ಟ ಆಗುತ್ತೆ.

ಆದ್ರೆ ಪ್ರಭಾವಿಗಳ ನೆರಳ ಹಿಂದೆ ಇರೋ ಈ ಸೆಲೆಬ್ರಿಟಿ ನಟನ ವಿಷಯದಲ್ಲಿ ಪೊಲೀಸರು ಯಾವ ರೀತಿ ಪ್ರಾಮಾಣಿಕವಾಗಿ ತಮ್ಮ ಕೆಲಸ ಮಾಡಿ ಪ್ರಾಣ ಕಳೆದುಕೊಂಡವನ ಆತ್ಮಕ್ಕೆ ಶಾಂತಿಯನ್ನಾದರೂ ಕೊಡಿಸುತ್ತಾರೆ ಅನ್ನೋದು ಈಗ ಯಕ್ಷಪ್ರಶ್ನೆ.

ಲೂಸ್ ಟಾಕ್- ದರ್ಶನ್

ಏನ್ರೀ, ನಿಮ್ದು ಮುಗಿಯದ ಕಥೆ ಆಯ್ತಲ್ಲ?
-ಏನ್ ಮಾಡೋದು ನನ್ನ ಲೈಫ್ ಯಾವಾಗ್ಲೂ ಒಂಥರಾ ತೂಗುದೀಪದ ಥರ ಆ ಕಡೆ ಈ ಕಡೆ ವಾಲಾಡ್ತಾನೇ ಇರುತ್ತೆ.

ಅಲ್ರೀ, ಏನೋ ಮೆಸೇಜ್ ಮಾಡಿದ ಅಂತ ತೀರಾ ಹಿಂಗೆ ಮಾಡೋದಾ?
-ಕಟ್ಕೊಂಡವಳ ಬಗ್ಗೆ ಏನಾದ್ರೂ ಮಾಡಿದ್ರೆ ಸುಮ್ನೆ ಇರಬಹುದು. ಆದ್ರೆ..ಇಟ್ಕೊಂ…ಹೋಗ್ಲಿ ಬಿಡಿ.

ಅದ್ಸರಿ, ಪೊಲೀಸ್ ಸ್ಟೇಷನ್‌ನಲ್ಲಿ ಶಾಮಿಯಾನ ಹಾಕಿಸಿದ್ದಾರಂತೆ?
-ಮೋಸ್ಟ್ಲೀ, ಇಬ್ರಿಗೂ ಅಧಿಕೃತವಾಗಿ ಮದ್ವೆ ಮಾಡಿಸಬಹುದು ಅನ್ಸುತ್ತೆ.

ಅದೊಂದ್ ಬಾಕಿ ಇತ್ತು ನೋಡಿ. ಆದ್ರೂ ನಿಮಗೆ ಇಂಥ ಪರಿಸ್ಥಿತಿ ಬರಬಾರದಿತ್ತು ನೋಡಿ
-ಹೌದು. ನೋಡಿ ಇವಾಗ, ನೀವು ಇವಾಗ ಯಾವಾಗ್ ಬೇಕಾದ್ರೂ ಸಿಗರೇಟ್ ಸೇದಬಹುದು, ಎಣ್ಣೆ ಹೊಡೀಬಹುದು. ನಂಗೆ ಆ ಭಾಗ್ಯ ಇಲ್ಲ.

ಅದೇನೋ ಅಂತಾರಲ್ಲ, ಅಜ್ಜಿಗೆ ಅರಿವೆ ಚಿಂತೆ ಆದ್ರೆ, ಮೊಮ್ಮಗಳಿಗೆ ಇನ್ನೇನೋ ಚಿಂತೆ ಅಂತೆ. ಮೊದ್ಲು ಹೊರಗ್ ಬರೋದ್ ನೋಡಿ. ಅಲ್ಲ, ಸುಮ್ನೆ ಕೇಳ್ತೀನಿ ತೀರಾ ನಿಮ್ಮ ಮನಸ್ಸು ಅಷ್ಟೂ ಕಂಟ್ರೋಲ್ ನಲ್ಲಿ ಇರಲ್ವಾ?
-ನಮ್ಗೆ ಒಂಥರಾ ಹಂಗೆ ಕಣ್ರೀ… ಡಿ ಬಾಸ್, ಬಾಸ್ ಅಂತ ಕೂಗೋರನ್ನ ನೋಡಿ ನೋಡಿ ‘ಕೊಲೆ’ಸ್ಟ್ರಾಲ್ ಜಾಸ್ತಿ ಆಗಿದೆ.

(ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್
ವಯಸ್ಸಾದ ಮೇಲೆ ರೋಡ್ ಟ್ರಿಪ್ ಹೋಗೋದು ಕಷ್ಟ. ಆದ್ರೂ ನಮ್ಮ ಖೇಮುಗೆ ೮೦ ವರ್ಷ ವಯಸ್ಸಾದ ಮೇಲೆ ಗೆಳೆಯರೊಂದಿಗೆ ಜಾಲಿ ಟ್ರಿಪ್  ಹೋಗಬೇಕು ಅಂತ ಆಸೆ ಬಂತು. ಅದು ಬರೀ ಆಸೆ ಆಗಿ ಉಳಿಯದೇ ಹಠ ಆಯ್ತು. ಸರಿ ಹೇಗೋ ತನ್ನ ಎ ಗೆಳೆಯರನ್ನೂ ಕಲೆ ಹಾಕಿ ನಾವು ನನ್ನ ಕಾರಲ್ಲಿ ಲಾಂಗ್ ಡ್ರೈವ್ ಮಾಡ್ಕೊಂಡು ಟ್ರಿಪ್ ಹೋಗೋಣ ಅಂದ. ಎಲ್ಲರೂ ಒಪ್ಪಿದರು. ಆದ್ರೆ ಡ್ರೈವ್ ಮಾಡೋದು ಯಾರು ಅನ್ನೋ ಪ್ರಶ್ನೆ ಬಂತು. ಖೇಮು ನಾನೇ ಕಾರ್ ಓಡಿಸ್ತೀನಿ ಅಂತ ಹಠ ಹಿಡಿದ. ಎಲ್ಲರೂ ಭಯ ಪಟ್ಕೊಂಡ್ರೂ ಕೊನೆಗೆ ಖೇಮು ಬೇಜಾರಾಗ್ತಾನೆ ಅಂತ ಒಪ್ಪಿಕೊಂಡ್ರು.

ಸರಿ ಟ್ರಿಪ್ ಶುರು ಆಯ್ತು. ಖೇಮು ತುಂಬಾ ಉತ್ಸಾಹದಿಂದ ಗಾಡಿ ಓಡಿಸ್ತಿದ್ದ. ಸ್ವಲ್ಪ ಹೊತ್ತು ಮಾತಾಡ್ತಾ ಇದ್ದ ಎಲ್ಲರೂ ನಂತರ ಮೌನಕ್ಕೆ ಶರಣಾದರು. ಹೀಗೆ ಹೈ ವೇನಲ್ಲಿ ಹೋಗುವಾಗ ಖೇಮುಗೆ ದಾರಿಯಲ್ಲಿ ಟ್ರಾಫಿಕ್ ಪೊಲೀಸ್ ಕಾಣಿಸಿದರು. ಕೈ ತೋರಿಸಿ ಗಾಡಿ ನಿಲ್ಲಿಸಿದರು. ಒಬ್ಬ ಪೊಲೀಸ್, ಕಾರ್ ಹತ್ತಿರ ಬಂದು, ಯಾಕ್ ಸರ್, ಇಷ್ಟು ಮೆತ್ತಗೆ ಹೋಗ್ತಾ ಇದ್ದೀರಾ ಅಂತ ಡ್ರೈವ್ ಮಾಡ್ತಾ ಇದ್ದ ಖೇಮುನ ಕೇಳಿದ. ಅದಕ್ಕೆ ಖೇಮು, ಅದೂ, ಹಿಂದೆ ೨೦ ಅಂತ
ರೋಡ್ ಸೈನ್ ಬೋರ್ಡ್ ನೋಡಿದೆ. ಅದಕ್ಕೆ ೨೦ ಕಿಲೋ ಮೀಟರ್ ಸ್ಪೀಡಲ್ಲಿ ಹೋಗ್ತಾ ಇದ್ದೀನಿ ಅಂದ. ಅದಕ್ಕೆ ಪೊಲೀಸ್ ಆಫೀಸರ್, ಈ ವಯಸ್ಸಲ್ಲಿ ಡ್ರೈವ್ ಮಾಡೋಕ್ ಹೋದ್ರೆ, ಹಿಂಗೇ ಆಗೋದು. ಅದು ಸ್ಪೀಡ್ ಲಿಮಿಟ್ ಅಲ್ಲ ಸರ್, ಘೆಏ ೨೫ ಅಂತ ಬೋರ್ಡ್ ಹಾಕಿರೋದು ಅಂದ.

ಅಷ್ಟು ಹೇಳಿ ಹೊರಟವನು ಮತ್ತೆ ಹಿಂದೆ ತಿರುಗಿ, ಅದ್ಸರಿ, ಹಿಂದೆ ಕೂತಿರೋರೆಲ್ಲ ಯಾಕೋ ತುಂಬಾ ಹೆದರಿಕೊಂಡಿರೋ ಥರ ಇದೆ, ಕೂದಲೆಲ್ಲ ಎದ್ದು ನಿಂತುಕೊಂಡಿದೆ, ಏನಾಯ್ತು ಅಂತ ಕೇಳಿದ. ಅದಕ್ಕೆ ಖೇಮು ಕಡೆಯಿಂದ ಉತ್ತರ ಬಂತು ‘ಅದೂ, ಈಗ ತಾನೇ ಘೆಏ೧೨೫ ಕಡೆಯಿಂದ ಪಾಸ್ ಆದ್ವಿ. ಅದಕ್ಕೇ ಅನ್ಸುತ್ತೆ.

ಲೈನ್ ಮ್ಯಾನ್

ದರ್ಶನ್ ಪರಿಸ್ಥಿತಿ ನೋಡಿ ಅನಿಸಿದ್ದು
-ನಮ್ಮ ಜೀವನ, ನಮಗೆ ಕಷ್ಟ ಬಂದಾಗ ಉಳಿದವರು ಅದನ್ನು ನೋಡಿ ಸಂಭ್ರಮಿಸುವ ಮಟ್ಟಕ್ಕೆ ಅಸಹ್ಯ ಆಗಬಾರದು

ಅಸಿಡಿಟಿ ಬರಬಾರದು ಅಂದ್ರೆ ಏನ್ ಮಾಡಬೇಕು?
-ತೇಗದ ಮರ ವನ್ನು ಒಲೆಗೆ ಇಟ್ಟು ಅಡುಗೆ ಮಾಡಬೇಕು

ಆಪತ್ ಬಂದು ಚಾಪೆ ಸುತ್ಕೊಂಡೋಗ ಅನ್ನೋದನ್ನು  ಇಂಗ್ಲಿಷ್‌ನಲ್ಲಿ ಹೆಂಗೆ ಹೇಳೋದು
-ಮ್ಯಾಟ್ ಫಿನಿಷ್

ಕೂದಲಿಗೆ ಒಳ್ಳೆ ಟ್ರೀಟ್‌ಮೆಂಟ್ ಕೊಡುವವಳು
-ಹೇರ್ ಹೋಸ್ಟೆಸ್

ಸೊಳ್ಳೆ ಪರದೆ ಮಾರಾಟ
-ಹೋಲ್ ಸೇಲ್

ಸೊಳ್ಳೆ ಪರದೆ ಡಿಸ್ಕೌಂಟ್ ಕೊಡುವಾಗ ಇರಬೇಕಾದ ಎಚ್ಚರ
-೫೦% ಕಡಿತ ಅಂತ ಹಾಕಬಾರದು.

ಮೆನಿಕ್ಯೂರ್ ಪೆಡಿಕ್ಯೂರ್ ಮಾಡಿಸಲ್ಲ ಅನ್ನೋದನ್ನು ಹೇಳೋದು ಹೇಗೆ
-ಹಲ್ಲಲ್ಲಿ ಹೋಗೋ ಉಗುರಿಗೆ ಅಷ್ಟೊಂದು ದುಡ್ಡು ಯಾಕೆ ಕೊಡಲಿ?

ಸ್ಟಾರ್ ನಟರ ಲೈಫು

ಎಲ್ಲಾ ಚೆನ್ನಾಗಿದ್ದಾಗ- ಲಕ್ಸುರಿ ಕ್ಯಾರವಾನ್
ವಯಸ್ಸಾಗಿ ಅವಕಾಶಗಳೇ ಇಲ್ಲದಾಗ- ಯಾದೋಂ ಕಿ ಕಾರ್ ವಾನ್

ವಿಶ್ವಕಪ್ ಸರಣಿಯಲ್ಲಿ ಪಾಕಿಸ್ತಾನ ಸೋಲ್ತಾ ಇರೋದನ್ನು ನೋಡಿ ಅನಿಸಿದ್ದು
-ಪಾಕಿಸ್ತಾನ ಟೀಮ್ ಫ್ಯಾನ್ಸ್ ಗೆ ಇಆಫ್ಯಾನ್ಸ್ ಗಿಂತ ಜಾಸ್ತಿ ತಾಳ್ಮೆ ಬೇಕು

ಜೀವನದ ಫಿಲಾಸಫಿ
ಉಳ್ಳವರಿಗೆ ಬೇಕಿದ್ದೆಲ್ಲ ತಕ್ಷಣ ಕಣ್ಮುಂದೆ ಬರುತ್ತೆ, ಇಲ್ಲದವರಿಗೆ ದಿನಾ ರಾತ್ರಿ ಕನಸಲ್ಲಿ ಬರುತ್ತೆ.

Leave a Reply

Your email address will not be published. Required fields are marked *

error: Content is protected !!