Monday, 24th June 2024

ಅಗತ್ಯವಿರುವವರಿಗೆ ಸಿಗುವಂತಾಗಲಿ ಗ್ಯಾರಂಟಿ ಭಾಗ್ಯ

ವಿದ್ಯಮಾನ

ವಿನಾಯಕ ವೆಂ ಭಟ್ಟ, ಅಂಬ್ಲಿಹೊಂಡ

ಕರ್ನಾಟಕ ವಿಧಾನಸಭೆಯ ಚುನಾವಣೆಯ ಸಂದರ್ಭದಲ್ಲಿ ದೇಶಾದ್ಯಂತ ಸುದ್ದಿಯಾಗಿದ್ದ ಕಾಂಗ್ರೆಸ್ಸಿನ ಪಂಚ ಗ್ಯಾರಂಟಿಗಳು ಲೋಕಸಭಾ ಚುನಾ ವಣೆಯ ಫಲಿತಾಂಶದ ನಂತರ ಯಾಕೋ ಮಂಕಾಗುತ್ತಿರುವಂತೆ ಕಾಣುತ್ತಿದೆ. ಈ ಪುಕ್ಕಟೆ ಗ್ಯಾರಂಟಿಗಳ ಪ್ರಯಾಣ, ಏಕೋ ಮಧ್ಯ ಹಾದಿಯ ನಿಂತು ಬಿಡಬಹುದಾದ ಲಕ್ಷಣಗಳು ಕಾಣುತ್ತಿದೆ. ಬಹುತೇಕ ಯುವಕರು, ಮಹಿಳೆಯರು ಮತ್ತು ಬಡವರನ್ನು ಉದ್ದೇಶವಾಗಿರಿಸಿಕೊಂಡು ರೂಪಿಸಿದ್ದ ಈ ಪಂಚ ಗ್ಯಾರಂಟಿಗಳ ಯೋಜನೆಯ ಕಾರಣದಿಂದಲೇ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯ ಭೇರಿ ಬಾರಿಸಿತ್ತು.

ಹಾಗಾಗಿ, ಕಾಂಗ್ರೆಸ್ ಪಕ್ಷದ ಕರ್ನಾಟಕ ಮಾದರಿಯನ್ನು ಅನುಕರಿಸಲು ಶುರುವಿಟ್ಟುಕೊಂಡ ಎಲ್ಲಾ ರಾಜಕೀಯ ಪಕ್ಷಗಳು ಈ ‘ಪುಕ್ಕಟೆ ಗ್ಯಾರಂಟಿಗಳ’ ರೋಗವನ್ನು ಇತರ ರಾಜ್ಯಗಳಿಗೂ ಸಂಕ್ರಮಿಸುವಂತೆ ನೋಡಿಕೊಂಡವು. ಕರ್ನಾಟಕದ ಮಾದರಿಯ ಯಥಾವತ್ ಆಗಿ ಪ್ರಚಾರ ಮಾಡಿ ತೆಲಂಗಾಣದಲ್ಲಿ ಅದಿಕಾರಕ್ಕೆ ಬರಲು ಈ ಗ್ಯಾರಂಟಿಗಳು ಕಾಂಗ್ರೆಸ್ಸಿಗೆ ಸಹಾಯ ಮಾಡಿತ್ತು. ರಾಜಸ್ಥಾನ ಮತ್ತು ಮಧ್ಯಪ್ರದೇಶಗಳಲ್ಲಿ ಮಾತ್ರ ಕಾಂಗ್ರೆಸ್ ನ ಗ್ಯಾರಂಟಿಗಳು ಪರಿಣಾಮ ಬೀರಲಿಲ್ಲವಾದರೂ, ಅಲ್ಲಿ ಮೋದಿಯವರ ಗ್ಯಾರಂಟಿ ಕೆಲಸ ಮಾಡಿತ್ತು. ಕಾಂಗ್ರೆಸ್ ಕರ್ನಾಟಕದಲ್ಲಿ ಮುನ್ನೆಲೆಗೆ ತಂದಿದ್ದ ‘ಗ್ಯಾರಂಟಿ’
ಶಬ್ದವನ್ನು ಮತ್ತು ಪರಿಕಲ್ಪನೆಯನ್ನು ಮೋದಿ ಇದ್ದಕ್ಕಿದ್ದ ಹಾಗೆ ‘ಹೈಜಾಕ್’ ಮಾಡಿಬಿಟ್ಟರು. ಲೋಕಸಭಾ ಚುನಾವಣಾ ಪ್ರಚಾರದ ತುಂಬೆ ‘ಯೇ  ಮೋದಿಕಾ ಗ್ಯಾರಂಟಿ ಹೈ’ ಎನ್ನುವ ಘೋಷಣೆಯನ್ನು ತಮ್ಮ ಪ್ರತಿ ಭಾಷಣದಲ್ಲೂ ಬಳಸಿದರು.

ಕಾಂಗ್ರೆಸ್ಸಿನ ‘ಗ್ಯಾರಂಟಿ’ ಶಬ್ದ, ಮೋದಿಯವರಿಂದ ಅಪಹರಣಕ್ಕೊಳಗಾಗಿ ೨೦೨೪ ರ ಲೋಕಸಭಾ ಚುನಾವಣೆಯೂ ಗ್ಯಾರಂಟಿಗಳದ್ದೇ ಚುನಾವಣೆಯಾಗಿ ಹೊರಹೊಮ್ಮಿತು. ಈಗ ಆಂಧ್ರ ಪ್ರದೇಶ ಚುನಾವಣೆಯಲ್ಲಿ ನಡೆದಿದ್ದೂ ಇದೇ ಗ್ಯಾರಂಟಿಗಳ ಹವಾ. ಒಟ್ಟಿನಲ್ಲಿ ಗ್ಯಾರಂಟಿಗಳಿಲ್ಲದ ಚುನಾವಣೆಗಳನ್ನು ಇನ್ನು ಮುಂದೆ ಜನ ಕಲ್ಪಿಸಲೂ ಸಾಧ್ಯವಿಲ್ಲವೇನೋ! ಈಗ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನೇತ್ರತ್ವದ ಕಾಂಗ್ರೆಸ್ ಪಕ್ಷ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದು ಒಂದು ವರ್ಷ ಪೂರೈಸಿದೆ. ಈ ಅವಧಿಯಲ್ಲಿ ಸರಕಾರ ತಮ್ಮ ಚುನಾವಣೆಯ ಪ್ರಮುಖ ಭರವಸೆಗಳಾದ ಶಕ್ತಿ ಯೋಜನೆ, ಗೃಹ ಜ್ಯೋತಿ, ಅನ್ನ ಭಾಗ್ಯ, ಗೃಹ ಲಕ್ಷ್ಮಿ ಹಾಗೂ ಯುವನಿಧಿ ಯೋಜನೆಗಳ ಅನುಷ್ಠಾನಕ್ಕೇ ಹೆಚ್ಚು ಹಣ, ಸಮಯ ಮತ್ತು ಆದ್ಯತೆಗಳನ್ನು ನೀಡಿದೆ ಎನ್ನುವುದರಲ್ಲಿ ಯಾರಿಗೂ ಸಂಶಯವಿಲ್ಲ.

ತನ್ನ ಗ್ಯಾರಂಟಿಗಳಿಂದ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಿಸುವ ಉದ್ದೇಶದಿಂದ ಎಲ್ಲ ಸಂಪನ್ಮೂಲಗಳನ್ನು ಗ್ಯಾರಂಟಿಗಳ ಈಡೇರಿಕೆ ಗಾಗಿಯೇ ಮುಡಿಪಾಗಿರಿಸಲಾಗಿತ್ತು. ಸರಕಾರಕ್ಕೆ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಸಂಪನ್ಮೂಲವನ್ನು ಅನುದಾನಿಸಲಾಗದೇ ಕಳೆದೊಂದು ವರ್ಷದಿಂದ ರಾಜ್ಯ ಅಭಿವೃದ್ಧಿ ಶೂನ್ಯವಾಗಿತ್ತು ಮತ್ತು ಇದೇ ಕಾರಣಕ್ಕೆ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ನೀರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ಸೋತಿತು ಎನ್ನುವ ಅಭಿಪ್ರಾಯವೂ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಏನೇ ಆಗಲಿ ಈ ಉಚಿತಗಳ ಯೋಜನೆಗಳು ಮುಂದು ವರೆಯಲಿ ಎಂದು ಮುಖ್ಯಮಂತ್ರಿಗಳೇನೋ ಹೇಳುತ್ತಿದ್ದಾರೆ.

ಆದರೆ, ಕಾಂಗ್ರೆಸ್ ಸರಕಾರ ಕೇವಲ ಮತಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿತ್ತು. ದುರದೃಷ್ಟವಶಾತ್ ಈ ಗ್ಯಾರಂಟಿಗಳು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೈ ಹಿಡಿಯಲಿಲ್ಲ, ಹಾಗಾಗಿ, ಸಾಲ ಮಾಡಿ ನೌಕರರಿಗೆ ಸಂಬಳ ಕೊಡುವ ಪರಿಸ್ಥಿತಿ ತಂದುಕೊಂಡಿರುವ ಸರಕಾರ, ಈ ಯೋಜನೆಗಳನ್ನು ನಿಲ್ಲಿಸದೇ ಈಗ ಅನ್ಯ ಉಪಾಯ ಇಲ್ಲ ಎನ್ನುವುದು ಪ್ರತಿಪಕ್ಷದವರ ಅನಿಸಿಕೆ. ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಯ ಜೊತೆ
ಜೊತೆಗೆ ಈ ಐದು ಗ್ಯಾರಂಟಿಗಳನ್ನು ಜಾರಿಗೆ ತರಲಾಗುವುದು ಎನ್ನುವುದು ಕಾಂಗ್ರೆಸ್‌ನ ಚುನಾವಣಾ ಪೂರ್ವ ಆಶ್ವಾಸನೆಯಾಗಿತ್ತು. ಆದರೆ ೫೦ ಸಾವಿರ ಕೋಟಿಗೂ ಹೆಚ್ಚು ಹಣವನ್ನು ಬರೇ ಗ್ಯಾರಂಟಿಗಳಿಗೆ ಬಳಸುವಂತಾದಾಗ ಅಭಿವೃದ್ಧಿಗೆ ಉಳಿಯುವುದು ಏನು/ಎಷ್ಟು? ಸಂಬಳ ಮುಂತಾದ ಉಳಿದ ಆಡಳಿತಾತ್ಮಕ ವೆಚ್ಚಗಳು ಇದ್ದೇ ಇದೆ. ಈಗಾಗಲೇ ಇರುವ ಸಾಲಗಳ ಮರುಪಾವತಿ ಮತ್ತು ಅದರ ಬಡ್ಡಿಯ ಪಾವತಿಯನ್ನಂತೂ ತಪ್ಪದೇ ಸರಿಯಾದ ಸಮಯಕ್ಕೆ ಮಾಡಲೇಬೇಕು.

ಹಾಗೆ ಮಾಡಿದಾಗ ಮಾತ್ರ ಹೊಸ ಸಾಲಕ್ಕೆ ಅರ್ಜಿ ಸಲ್ಲಿಸಲು ಸಾಧ್ಯ ತಾನೆ? ಹಣಕಾಸಿನ ಕೊರತೆಯಿಂದಾಗಿ ನೀರಾವರಿಗೆ, ನಗರಾಭಿವೃದ್ಧಿ ಮತ್ತು ವಸತಿಗೆ,
ಲೋಕೋಪಯೋಗಿ, ಶಿಕ್ಷಣ ಮತ್ತು ಆರೋಗ್ಯ- ಕುಟುಂಬ ಕಲ್ಯಾಣ ಕಾರ್ಯಗಳಿಗಾಗಿ ಆಯವ್ಯಯದಲ್ಲಿ ಅನುಸೂಚಿತವಾಗಿದ್ದ ಹಣಗಳ ಬಳಕೆಯನ್ನೂ ಸಕಾಲಕ್ಕೆ ಮಾಡಲಾಗುತ್ತಿ. ಹಾಗಂತ ಒಂದು ವರ್ಷದಲ್ಲಿ ಸಿದ್ದರಾಮಯ್ಯ ಸರಕಾರ ಸುಮ್ಮನೆ ಕೂತಿತ್ತು ಅಂತ ಅರ್ಥವಲ್ಲ. ಪಂಚ ಗ್ಯಾರಂಟಿಗಳಿಗೆ ಹಾಗೂ ರಾಜ್ಯದ ಅಭಿವೃದ್ಧಿಗೆ ಸಂಪನ್ಮೂಲ ಕ್ರೋಢೀಕರಿಸಲು ಸರಕಾರ ಸಾಕಷ್ಟು ಕಸರತ್ತು ನಡೆಸುತ್ತಿದೆ. ಮುದ್ರಾಂಕ ಶುಲ್ಕದ ವಿಪರೀತ ಏರಿಕೆ, ಅಬಕಾರೀ ಮುಂತಾದ ತೆರಿಗೆಗಳಲ್ಲಿ ಮಾರ್ಪಾಡು, ಇಲಾಖಾವಾರು ಅನುದಾನದಲ್ಲಿ ಕಡಿತ ಮುಂತಾದ ಉಪಕ್ರಮಗಳನ್ನು ಕೈಗೊಂಡರೂ ಅವುಗಳು
ಪರ್ಯಾಪ್ತವಾದಂತೆ ಕಾಣುತ್ತಿಲ್ಲ.

ಬಕಾಸುರನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆಯಂತಾಯ್ತು ಅಷ್ಟೆ. ಜೊತೆಗೆ, ಅಂದಾಜಿನಂತೆ ತೆರಿಗೆ ಸಂಗ್ರಹ ಆಗದಿರುವುದು ಮತ್ತು ಭೀಕರ ಬರಗಾಲ, ಏಕಾದಶಿಯ ಮನೆಗೆ ಶಿವರಾತ್ರಿ ಬಂದ ಹಾಗಾಯ್ತು. ಅದಕ್ಕಾಗೇ ಸಹಜವಾಗಿ ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ, ಹೊಸ ಕಾಮಗಾರಿಗಳಿಗೆ ಗುದ್ದಲಿ
ಪೂಜೆ ಅಥವಾ ಪೂರ್ಣವಾದ ಕಾಮಗಾರಿಗಳ ಉದ್ಘಾಟನೆ ಎನ್ನುವುದು ಯಾವುದೂ ನಡೆಯಲೇ ಇಲ್ಲ. ಇನ್ನು ಆಯವ್ಯಯದಲ್ಲಿ ಪ್ರಸ್ತಾಪಿಸಿದ, ರಾಜ್ಯದ ಮೇಲೆ ಭವಿಷ್ಯದಲ್ಲಿ ಪರಿಣಾಮ ಬೀರಬಲ್ಲ ನೀರಾವರಿ ಮುಂತಾದ ಯೋಜನೆಗಳ ಕಥೆಯಂತೂ ಚಿಂತಾಜನಕವಾಗಿದೆ. ೨೦೨೪-೨೫ ನೇ ಸಾಲಿನ ನೀರಾವರಿಗಾಗಿನ ಯೋಜನಾ ವೆಚ್ಚ ೧೯.೭೭ ಸಾವಿರ ಕೋಟಿ ರುಪಾಯಿಗಳಲ್ಲಿ ಒಂದು ಚೂರೂ ಬಳಕೆ ಆದಹಾಗೆ ಕಾಣುವುದಿಲ್ಲ.

ಹೊಸ ರಸ್ತೆಗಳ ನಿರ್ಮಾಣ ಅಂತಿರಲಿ, ಇದ್ದ ರಸ್ತೆಗಳ ಗುಂಡಿ ಮುಚ್ಚುವ ಕೆಲಸವೂ ಬೆಂಗಳೂರನ್ನು ಹೊರತು ಪಡಿಸಿ ಬೇರೆ ಯಾವ ನಗರ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಆಗುತ್ತಿಲ್ಲ. ಸಂಬಂಧಿಸಿದ ಇಲಾಖೆಗಳನ್ನು ಸಂಪರ್ಕಿಸಿದರೆ ‘ದುಡ್ಡಿ’ ಎನ್ನುವುದೊಂದೇ ಉತ್ತರ. ಕ್ಷೇತ್ರಗಳು ವರ್ಷದಿಂದ ಅಭಿವೃದ್ಧಿಯನ್ನೇ ಕಾಣದ್ದರಿಂದ ಶಾಸಕರು ಹಾಗೂ ಸಚಿವರ ಮಾತಿಗೂ ಕ್ಯಾರೇ ಎನ್ನದೇ ಲೋಕಸಭೆ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ ಎಂದು ವಿಶ್ಲೇಷಿಸಬಹುದಾಗಿದೆ.

ಕಾಂಗ್ರೆಸ್ ಸರಕಾರ ದಲಿತರಿಗಾಗಿ ಮೀಸಲಟ್ಟ ಹಣವನ್ನು ಲೂಟಿ ಹೊಡೆದು, ಅಬಕಾರಿ ಸುಂಕವನ್ನು ಯದ್ವಾ ತದ್ವಾ ಹೆಚ್ಚಿಸಿಯೂ ಕಣ್ಣಿಗೆ ಕಾಣುವ ಯಾವ ಸಾಧನೆಯನ್ನೂ ಮಾಡಲಾಗದೇ ಜನರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಕೇಂದ್ರ ಸರಕಾರದಿಂದ ಒಂದೇ ಸಮನೆ ರಚ್ಚೆ ಹಿಡಿದು ತರಿಸಿಕೊಂಡ ೪.೫೦ ಸಾವಿರ ಕೋಟಿ ರುಪಾಯಿಗಳ ಬರ ಪರಿಹಾರದ ಮೊತ್ತ ಇನ್ನೂ ವಿಲೇ ಆದಹಾಗೆ ಕಾಣುತ್ತಿಲ್ಲ, ಹಾಗಾಗಿಯೇ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಅವರನ್ನೂ ಸೇರಿ ಲೋಕಸಭೆ ಚುನಾವಣೆಯಲ್ಲಿ ಸಚಿವರುಗಳಿರುವ ಕಡೆಗಳಲ್ಲಿಯೇ ಪಕ್ಷಕ್ಕೆ ಹೆಚ್ಚು
ಹಿನ್ನೆಡೆಯಾಗುವಂತಾಗಿದೆ ಎನ್ನುವ ಟೀಕೆಗಳು ಅವರ ಪಕ್ಷದ ವಲಯದಿಂದಲೇ ಕೇಳಿಬರುತ್ತಿವೆ.

ವಾರ್ಷಿಕ ಸುಮಾರು ೫೦ ಸಾವಿರ ಕೋಟಿ ರು. ವೆಚ್ಚದ ಈ ಪಂಚ ಗ್ಯಾರಂಟಿಗಳ ಈ ಯೋಜನೆಗಳು ಮೊದಲು ಆದಾಯದ ಮೂಲಗಳನ್ನು ಕೂಲಂಕುಷವಾಗಿ ಪರಾಮರ್ಷಿಸಿ ತಯಾರಿಸಿದ ಯೋಜನೆಗಳಾಗಿರಲಿಲ್ಲ. ಚುನಾವಣೆ ಹತ್ತಿರ ಬಂದುಬಿಟ್ಟಿತ್ತು, ಪಕ್ಷದ ಅಸ್ತಿತ್ವದ ದೃಷ್ಟಿಯಿಂದ ಗೆಲುವು ಅನಿವಾರ್ಯವಾಗಿತ್ತು ಹಾಗಾಗಿ ಮತದಾರನನ್ನು ಸುಲಭವಾಗಿ ತನ್ನತ್ತ ಸೆಳೆಯಲು ಇದಕ್ಕಿಂತ ಸುಲಭದ ದಾರಿ ಇಲ್ಲ ಎಂದು ಭಾವಿಸಿ ಕಾಂಗ್ರೆಸ್ ಹಿರಿಯ ನಾಯಕತ್ವ ತುರ್ತಾಗಿ ಈ ಜನಾಕರ್ಷಕ ಉಚಿತ ಯೋಜನೆಗಳನ್ನು ಘೋಷಣೆ ಮಾಡಿಯೇ ಬಿಟ್ಟಿತ್ತು. ಈ ತರಹದ ಯೋಜನೆಗಳು ರಾಜ್ಯದ ಆರ್ಥಿಕತೆಯ ಮೇಲೆ ಗಂಭೀರವಾದ ಮತ್ತು ದುರಸ್ತಿ ಮಾಡಲಾಗದ ಮಟ್ಟದಲ್ಲಿ ಪರಿಣಾಮಗಳನ್ನು ಬೀರಲಿದೆ ಎಂದು ಆರ್ಥಿಕ ತಜ್ಮರುಗಳು ಪ್ರಾರಂಭದ ಎಚ್ಚರಿಸಿದ್ದರು.

ಇಷ್ಟು ದೊಡ್ಡ ಪ್ರಮಾಣದ ಮೊತ್ತವನ್ನು ಸರಿದೂಗಿಸುವ ಸಂಪನ್ಮೂಲ ಸಂಗ್ರಹದ ಬಗ್ಗೆ ಹಣಕಾಸು ಇಲಾಖೆಯೂ ತನ್ನ ಅಸಹಾಯಕತೆಯನ್ನೂ ಹಾಗೂ ಆಕ್ಷೇಪವನ್ನೂ ಪರೋಕ್ಷವಾಗಿ ಮೊದಲೇ ವ್ಯಕ್ತಪಡಿಸಿತ್ತು. ಇದರಿಂದ ರಾಜ್ಯದ ಹಣಕಾಸು ಪರಿಸ್ಥಿತಿ ಬಿಗಡಾಯಿಸಲಿದ್ದು, ಅಭಿವೃದ್ಧಿ ಕೆಲಸಗಳು ಸಂಪೂರ್ಣ ಕುಂಠಿತವಾಗುವ ಆತಂಕ ಇದೆ ಎಂದು ಸಲಹೆ ನೀಡಿತ್ತು. ಆದರೆ, ಈ ಸಲಹೆ ಸೂಚನೆಗಳನ್ನು ಕೇಳಿಸಿಕೊಳ್ಳುವ ಮನಃಸ್ಥಿತಿಯಲ್ಲಿ ಕಾಂಗ್ರೆಸ್‌ನ ನಾಯಕತ್ವ ಇರಲಿಲ್ಲ. ಶತಾಯ ಗತಾಯ ಈ ಬಾರಿ ಅಧಿಕಾರಕ್ಕೆ ಬರಲೇಬೇಕು ಅಷ್ಟೆ!

ಉಳಿದದ್ದನ್ನು ಆಮೇಲೆ ನೋಡಿಕೊಂಡರಾಯಿತು ಎನ್ನುವ ಧೋರಣೆಯನ್ನು ಪಕ್ಷ ತಳೆದಿದ್ದ ಹಾಗೆ ಕಾಣುತ್ತದೆ. ನಿರೀಕ್ಷೆಯಂತೆ ಸರಕಾರವೇನೋ ಬಂತು ಆದರೆ ಈಗಾಗಲೇ ವಿವಿಧ ತೆರಿಗೆಗಳ ಭಾರದಿಂದ ರಾಜ್ಯದ ಜನ ಸುಸ್ತಾಗಿಹೋಗಿರುವಾಗ ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತರಲು ಅಗತ್ಯವಿರುವ ಸಂಪನ್ಮೂಲ ಕ್ರೋಢೀಕರಿಸುವುದು ಸಿದ್ದರಾಮಯ್ಯ ಸರಕಾರಕ್ಕೆ ದೊಡ್ಡ ಸವಾಲಾಯಿತು ಮತ್ತು ಈ ಸಲ ರಾಜ್ಯಕ್ಕೆ ಎದುರಾದ ಭೀಕರ ಬರಗಾಲ ಕಾಂಗ್ರೆಸ್ ಸರಕಾರಕ್ಕೆ ಗಾಯದ ಮೇಲೆ ಉಪ್ಪು ಸವರಿದಂತಾಗಿತ್ತು. (೨೦೨೪-೨೫ ರ ಆಯವ್ಯಯದಲ್ಲಿ ಪಂಚ ಗ್ಯಾರಂಟಿಗಳ ಅನುಷ್ಠಾನಕ್ಕೆ ಸುಮಾರು ೫೨ ಸಾವಿರ ಕೋಟಿ ರು.ಗಳ ಅಂದಾಜು ಮಾಡಲಾಗಿದೆ) ಇತ್ತ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಕೊರತೆ ಎದುರಾದ ಕಾರಣ ಪ್ರತಿಪಕ್ಷಗಳ ಜೊತೆಗೆ ಸ್ವಪಕ್ಷೀಯರೂ ಈ ಯೋಜನೆಗಳ ಕುರಿತು ಬಹಿರಂಗ ಅಸಮಾಧಾನ ಹೊರಹಾಕಲು ಆರಂಭಿಸಿದರು.

ಮೊನ್ನೆ ಲೋಕಸಭಾ ಚುನಾವನೆಯಲ್ಲಿ ಸಿದ್ದರಾಮಯ್ಯನವರ ತವರು ಮೈಸೂರಿನಲ್ಲಿ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿಯಾಗಿದ್ದ ಲಕ್ಷ್ಮಣ ಅವರು
ಜನರಿಗೆ ಈ ನಮ್ಮ ಗ್ಯಾರಂಟಿ ಯೋಜನೆಗಳು ಇಷ್ಟವಾದಂತೆ ಕಾಣುತ್ತಿಲ್ಲ, ಇಷ್ಟವಾಗಿದ್ದರೆ ನಮಗೇ ಮತವನ್ನು ನೀಡಬೇಕಿತ್ತು ಹಾಗಾಗಿ ಈ ‘ಪುಕ್ಕಟೆ’ ಯೋಜನೆಗಳನ್ನು ಇಲ್ಲಿಗೇ ನಿಲ್ಲಿಸುವುದು ಒಳಿತು ಎಂದು ಸಿದ್ದರಾಮಯ್ಯ ನವರಿಗೆ ನೇರವಾಗಿ ಸಲಹೆ ನೀಡಿದ್ದನ್ನು ಗಮನಿಸಬಹುದು. ಪಂಚ ಗ್ಯಾರಂಟಿಗಳು ಜಾರಿಗೆ ಬಂದ ದಿನದಿಂದ ಇಂದಿನ ದಿನದವರೆಗೆ ಸಣ್ಣ ಪುಟ್ಟ ಅಡಚಣೆಗಳನ್ನು ಹೊರತುಪಡಿಸಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿರುವ ಸರಕಾರದ ಸಾಧನೆಯನ್ನು ಮೆಚ್ಚಲೇ ಬೇಕು. ಆದರೆ, ಈ ಗ್ಯಾರಂಟಿಗಳು ಈಗಿರುವ ಮಾದರಿಯ ಮುಂದಿನ ದಿನಗಳಲ್ಲಿಯೂ ಮುಂದು ವರೆಯುತ್ತಾ, ಬೇರೆ ಅವತಾರ ತಾಳುತ್ತಾ ಅಥವಾ ಪೂರ್ಣ ನಿಂತೇ ಹೋಗುತ್ತಾ ಎನ್ನುವುದು ರಾಜ್ಯದಲ್ಲಿ ಎಲ್ಲರಿಗೂ ಇರುವ ಕುತೂಹಲ.

ಅಕ್ಕನೂ ಮನೆಗೆ ಬರಬೇಕು ಆದರೆ ಮನೆಯಲ್ಲಿನ ಅಕ್ಕಿ ಮಾತ್ರ ಖರ್ಚಾಗಬಾರದು ಎನ್ನುವಂತೆ ಅಭಿವೃದ್ಧಿಗೂ ಚ್ಯುತಿ ಬಾರದಂತೆ ಸಂಪನ್ಮೂಲ ಒದಗಿಸಿ ಒಂದು ಮಟ್ಟಿಗೆ ಶಾಸಕರ ಅಸಮಧಾನವನ್ನೂ ತುರ್ತಾಗಿ ತಣಿಸಬೇಕು ಜೊತೆಗೆ ತನ್ನ ಚುನಾವಣಾ ಪ್ರಣಾಳಿಕೆಯ ಪ್ರಮುಖ ಆಕರ್ಷಣೆಯಾಗಿದ್ದ ಪಂಚ ಗ್ಯಾರಂಟಿಗಳನ್ನೂ ನಿಲ್ಲಿಸಬಾರದು ಎನ್ನುವುದು ಕಾಂಗ್ರೆಸ್ ಉನ್ನತ ನಾಯಕತ್ವದ ಆಕಾಂಕ್ಷೆಯಾಗಿದೆ. ಮೊದಲೆಲ್ಲ ಈ ತರಹದ ಭಾಗ್ಯಗಳನ್ನು/ಯೋಜನೆಗಳನ್ನು ಅಗತ್ಯವಿರುವವರನ್ನು ಗುರುತಿಸಿ ನೀಡಲಾಗುತ್ತಿತ್ತು. ಅದರೆ ಈ ಸಲ ಹೆಚ್ಚಿನ ಮತಗಳನ್ನು ಸೆಳೆಯುವ ಹುಮ್ಮಸ್ಸಿನಲ್ಲಿ ಸಾರ್ವತ್ರಿಕ ವಾಗಿಸಿದ್ದರ ಪರಿಣಾಮ, ಸರಕಾರಕ್ಕೆ ಈಗ ಬಾಯಲ್ಲಿ ಬಿಸಿ ತುಪ್ಪ ಇಟ್ಟುಕೊಂಡು, ಉಗುಳಲು ಮನಸ್ಸಿ ನುಂಗಲು ಸಾಧ್ಯವಿ ಎನ್ನುವಂತಾಗಿದೆ.

ಚೋದ್ಯ: ಮಹಿಳೆಯರಿಗೆ ನೀಡಿದ ಈ ಉಚಿತ ಪ್ರಯಾಣದ ಯೋಜನೆಯಿಂದ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಬಂಪರ್ ಆದಾಯ ಬಂದಿದೆ ಎಂದು ವರದಿಯಾಗಿದೆ. ಬರೀ ಹೆಣ್ಣುಮಕ್ಕಳಿಗೆ ಉಚಿತ ಪ್ರಯಾಣ ಒದಗಿಸಿದ್ದಕ್ಕೆ ಕೆಎಸ್ ಆರ್‌ಟಿಸಿ ಇಷ್ಟು ಹೆಚ್ಚಿನ ಆದಾಯ ಗಳಿಸಿರುವಾಗ, ಈ ಯೋಜನೆಯನ್ನು ಗಂಡಸರಿಗೂ ವಿಸ್ತರಿಸಿದರೆ ಕೆಎಸ್‌ಆರ್ ಟಿಸಿ ಆದಾಯ ದುಪ್ಪಟ್ಟಾಗುತ್ತದಲ್ಲವೇ ಎನ್ನುವುದು ಸರಕಾರಕ್ಕೆ ನೆಟ್ಟಿಗರ (ಕುಚೋದ್ಯದ) ಪ್ರಶ್ನೆ.

(ಲೇಖಕರು: ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)

Leave a Reply

Your email address will not be published. Required fields are marked *

error: Content is protected !!