Monday, 24th June 2024

ಮಾರ್ಕೆಟಿಂಗ್ ವೈಫಲ್ಯ ಪಕ್ಷಗಳ ಸೋಲಿಗೆ ಕಾರಣವೇ ?

ವಿಶ್ಲೇಷಣೆ

ರಮಾನಂದ ಶರ್ಮಾ

ಲೋಕಸಭಾ ಚುನಾವಣೆ ಮುಗಿದು ಹೊಸ ಸರಕಾರ ರಚನೆ ಯಾಗುತ್ತಿರುವಂತೆ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಚುನಾವಣೆಯ ಸೋಲಿನ ಪರಾಮರ್ಷೆ ಜೋರಾಗಿ ನಡೆಯುತ್ತಿದೆ. ಪ್ರತಿಯೊಬ್ಬರೂ ತಮ್ಮ ಮೂಗಿನ ನೇರಕ್ಕೆ ವಿಶ್ಲೇಷಿಸುತ್ತಿದ್ದು ತಮ್ಮನ್ನು ಬಿಟ್ಟು ಬೇರೆ ಎಲ್ಲರತ್ತ ಬೊಟ್ಟು ತೋರಿಸುತ್ತಿzರೆ. ಹೀಗೆ ಮಾಡಿದ್ದರೆ ಹೀಗಾಗುತ್ತಿತ್ತು ಎಂದು ಕರಾರುವಾಕ್ ಅಗಿ ವಿವರಿಸುತ್ತಿದ್ದಾರೆ.

ತಾನು ಹೀಗೆಯೇ ಅಗುತ್ತದೆ ಎಂದು ಎಚ್ಚರಿಸಿದ್ದೆ ಎಂದು ತಮ್ಮ ಬೆನ್ನನ್ನು ತಾವೇ ಚಪ್ಪರಿಸಿಕೊಳ್ಳುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಯಾರೂ ಕಾರಣವನ್ನು ಹುಡುಕುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಅವರು ನೀಡುವ ಕಾರಣಗಳಲ್ಲಿ ಯಾರನ್ನೋ ರಕ್ಷಿಸುವ ಅಗೋಚರ ಹುನ್ನಾರ ಕಾಣುತ್ತದೆ ಮತ್ತು ಕೆಲವರನ್ನು ಬಲಿಪಶು ಮಾಡುವ ತಂತ್ರಗಾರಿಕೆಯೂ ಇರುತ್ತದೆ. ಚುನಾವಣೆಯನ್ನು ಗೆಲ್ಲುವುದು ಎಂದರೆ ಅಭ್ಯರ್ಥಿಗಳು ತಮ್ಮನ್ನು ತಾವು ಮಾರ್ಕೆಟಿಂಗ್
ಮಾಡಿಕೊಳ್ಳುವುದು. ಇದು ಉತ್ಪನ್ನಗಳ ಮಾರ್ಕೆಟಿಂಗ್ ಗಿಂತ ಭಿನ್ನವಾಗಿರುವುದಿಲ್ಲ. ಮಾರ್ಕೆಟಿಂಗ್‌ನ ವಿಶೇಷವೆಂದರೆ ಅದರ ಘೋಷವಾಕ್ಯಗಳು ಮತ್ತು ತಂತ್ರಗಳು ಕಾಲಕ್ಕೆ ಸರಿಯಾಗಿ, ಕಾಲಘಟ್ಟದಲ್ಲಿ ಬದಲಾಗುತ್ತಿರುವ ಬೇಡಿಕೆಗಳಿಗೆ ಸ್ಪಂದಿಸಿ ಬದಲಾಗುತ್ತಿರುತ್ತದೆ.

ಅದರೆ, ನಮ್ಮ ರಾಜಕೀಯ ಪಕ್ಷಗಳು ಮುಖ್ಯವಾಗಿ ಎರಡೂ ರಾಷ್ಟ್ರೀಯ ಪಕ್ಷಗಳು ಒಮ್ಮೆ ಫಸಲು ಕಂಡ ಮಾರ್ಕೆಟಿಂಗ್ ಸ್ಟ್ರ್ಯಾಟರ್ಜಿಗೇ ಅಂಟಿಕೊಂಡಿ ರುವುದು ಮತ್ತು ಅದನ್ನು ವಾಕರಿಕೆ ಬರುವಷ್ಟು ಬಳಸಿರುವುದು ಅವುಗಳು ತಮ್ಮ ನಿರೀಕ್ಷೆಗೆ ಸರಿಯಾಗಿ ಸ್ಪಂದಿಸದಿರುವುದೇ ಅವುಗಳ ವೈಫಲ್ಯಕ್ಕೆ ಕಾರಣ
ಎನ್ನುವ ತರ್ಕ ತೂಕ ಕಾಣುತ್ತಿದೆ. ಒಮ್ಮೆ ಯಾವುದಾದರೂ ಸೂತ್ರ ಯಶಸ್ವಿಯಾದರೆ ಅದರ ನಿರಂತರವಾಗಿ ಸಾಗಲು ಪ್ರಯತ್ನಿಸುತ್ತಾರೆ.

ಭಾಜಪವು ಪಕ್ಷವನ್ನು ಪಕ್ಕಕ್ಕೆ ತಳ್ಳಿ ಕಳೆದ ಎರಡು ಚುನಾವಣೆಯಂತೆ ಕೇವಲ ಮೋದಿ ಹೆಸರನ್ನೇ ಆಶ್ರಯಿಸಿತ್ತು. ಮೋದಿ ಅಲೆ ಮತ್ತು ಸುನಾಮಿ, ಮೋದಿ
ಗಾಳಿ ಮತ್ತು ಮೋದಿ ಚರಿಸ್ಮಾ ಇನ್ನೂ ಮ್ಯಾಜಿಕ ಮಾಡುತ್ತದೆ ಎನ್ನುವ ಅತೀವ ವಿಶ್ವಾಸದಲ್ಲಿತ್ತು. ಯಾವ ಅಭ್ಯರ್ಥಿಗಳೂ ತಮ್ಮ ಪ್ರಚಾರದಲ್ಲಿ ಪಕ್ಷದ ಬಗೆಗೆ, ಪಕ್ಷದ ಸಾಧನೆ ಬಗೆಗೆ, ಮುಂದಿನ ಯೋಜನೆಗಳ ಬಗೆಗೆ ಹೇಳಲಿಲ್ಲ. ಅವರ ಭಾಷಣ ಕೇವಲ ಮೋದಿಮಯವಾಗಿದ್ದು, ಭಾಷಣದ ಪ್ರಾರಂಭ ಮತ್ತು ಅಂತ್ಯದಲ್ಲಿ ಮೋದಿ ಮಿರುಗುತ್ತಿತ್ತು ಇನ್ನೊಮ್ಮೆ ಮೋದಿ, ಮತ್ತೊಮ್ಮೆ ಮೋದಿ, ಮೂರನೆ ಬಾರಿ ಮೋದಿ, ಮೋದಿಗೆ ಮತ ದೇಶಕ್ಕೆ ಹಿತ, ದೇಶವನ್ನು
ಉಳಿಸಲು ಮೋದಿಗೆ ಮತ, ಹಿಂದುತ್ವಕ್ಕಾಗಿ ಮೋದಿಗೆ ಮತ ಮುಂತಾದ ಘೋಷಣೆಗಳು ಮುಗಿಲು ಮುಟ್ಟುತ್ತಿದ್ದವು.

ಬಹುಷಃ ಒಬ್ಬ ಅಭ್ಯರ್ಥಿಯ ಕೈಯಲ್ಲೂ ಚುನಾವಣಾ ಪ್ರಣಾಳಿಕೆ ಕಾಣುತ್ತಿರಲಿಲ್ಲ. ಮೋದಿ ಜಪ(ವ್ಯಕ್ತಿ ಪೂಜೆ) ಇಷ್ಟು ತಾಕಕ್ಕೇರಿತ್ತು ಎಂದರೆ ರಾಜಕೀ ಯದ ಅಂಕಲಿಪಿಯನ್ನು ತಿಳಿಯದ ಹೈದರೂ ಕೂಡಾ ಚುನಾವಣಾ ಪ್ರಚಾರದ ವೈಖರಿಯನ್ನು ನೋಡಿ ಬೇಸರಿಸಿದ್ದರು. ಮೋದಿಯವರ ಹೆಸರೇ ಮೋದೀಜೀ ಜಿಂದಾಬಾದ್ ಎನ್ನುವಂತಾಗಿತ್ತು. ಸ್ವತಃ ಮೋದಿಯವರೇ ತಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದರೇನೋ ಎನ್ನುವ ಭಾವನೆ ಉಂಟಾಗಿತ್ತು.

ಮುಗ್ಧ ಮತದಾರನೊಬ್ಬ ಚುನಾವದಣೆ ಪ್ರಚಾರಕ್ಕೆ ಬಂದವರೊಬ್ಬರಿಗೆ ಸಾರ್ ಮೋದಿಯವರು ಎಲ್ಲಿ ಸ್ಪರ್ಧಿಸುತ್ತಾರೆ ಎಂದು ಕೇಳಿ ಅಭ್ಯರ್ಥಿಗೆ ಮುಜು ಗರ ಉಂಟು ಮಾಡಿದ್ದನಂತೆ. ರಾಜಕೀಯ ವಾತಾ ವರಣ ಎಪ್ಪತ್ತರ ದಶಕದ ಇಂದಿರಾ ಗಾಂಧಿಯವರ ದಿನಗಳನ್ನು ನೆನಪಿಸತೊಡಗಿತ್ತು. ಅ ದಿನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಇಂದಿರಾರಿಗೆ ಮತ ನೀಡಿ ಎನ್ನುತ್ತಿದ್ದರಂತೆ. ಇಂದಿರಾರರ ಹೆಸರಿದ್ದರೆ ಸಾಕು, ನಾಮಪತ್ರ ಸಲ್ಲಿಸಿ ಮನೆಗೆ ಬಂದು ಕಂಬಳಿ ಹೊದ್ದು ಮಲಗುತ್ತೇನೆ ಜನರು ಇಂದಿರಾಗೆ ಮತ ಹಾಕುತ್ತಾರೆ, ನಾನು ಗೆಲ್ಲುತ್ತೇನೆ ಎಂದು ಸ್ವಲ್ಪವೂ ಮುಜುಗರ ಇಲ್ಲದೆ ಶೂನ್ಯ ಸಾಧನೆ ಇದ್ದರೂ
ನಾಲ್ಕನೇ ಬಾರಿ ಸ್ಪರ್ದಿಸುತ್ತಿದ್ದ ಅಭ್ಯರ್ಥಿಯೊಬ್ಬರು ಹೇಳುತ್ತಿದ್ದರಂತೆ.

ಇಂದಿರಾ ಗಾಂಧಿಯವರು ತಮ್ಮ ೨೦ ಅಂಶಗಳ ಕಾರ್ಯಕ್ರಮವನ್ನು ಮಾರ್ಕೆಟಿಂಗ್ ಮಾಡಿ ಒಂದು ಚುನಾವಣೆಯನ್ನು ಗೆದ್ದಿದ್ದರು. ನಂತರ ಜನತಾ ಪಕ್ಷದ ವೈಫಲ್ಯದ ನಂತರ ಇಂದಿರಾ ಲಾವೋ ದೇಶ್ ಬಚಾವೋ ಎಂಬುವ ಅಕರ್ಷಕ ಘೋಷಣೆಯೊಂದಿಗೆ ಚುನಾವಣೆಯನ್ನು ಗೆದ್ದಿದ್ದರು. ಮುಂದಿನ ಚುನಾವಣೆಗಳಲ್ಲಿ ಈ ಘೋಷಣೆಗಳು law of diminishing returns ಗೆ ಬಲಿಯಾಗಿ ಪಕ್ಷವು ಸಂಕಷ್ಟಕ್ಕೆ ಸಿಲುಕಿದ್ದು ಈಗ ಇತಿಹಾಸ. ಈ ಬಾರಿ ಭಾಜಪಕ್ಕೆ ಅತಿಯಾದ ವ್ಯಕ್ತಿ ಪೂಜೆಯೇ ಸ್ವಲ್ಪಮಟ್ಟಿಗೆ ಮುಳುವಾಯಿತೇನೋ ಎನ್ನುವ ರಾಜಕೀಯ ವಿಶ್ಲೇಷಕರ ಅಭಿಪ್ರಾಯದಲ್ಲಿ ತೂಕ ಕಾಣುತ್ತದೆ.

ಭಾಜಪದ ಮಾತೃ ಸಂಸ್ಥೆ ಮತ್ತು ವೈಚಾರಿಕ ಸಲಹೆಗಾರ ರಾಷ್ಟ್ರೀ ಯ ಸ್ವಯಂಸೇವಕ ಸಂಘದ ಮೋಹನ ಭಾಗವತ್ ಕೂಡಾ ಇದೇ ಧ್ವನಿಯಲ್ಲಿ ಹೇಳಿಕೆ ನೀಡಿzರೆ. ಇದು ಅತಿ ಯಾದರೆ ಅಮೃತವೂ ವಿಷವಾಗುತ್ತದೆ ಎಂಬುದನ್ನು ನೆನಪಿಸುತ್ತದೆ. ಭಾಜಪದ ಮುಖವಾಣಿ ಎಂದೇ ಕರೆಯಲ್ಪಡುವ ಪಾಂಚಜನ್ಯ (ಹಿಂದಿ) ಮತ್ತು ಅರ್ಗನೈಸರ್ (ಇಂಗ್ಲೀಷ್) ನಿಯತಕಾಲಿಕೆಗಳಲ್ಲಿ ಈ ನಿಟ್ಟಿನಲ್ಲಿ ಸುದೀರ್ಘ ಲೇಖನ ಬಂದಿದೆಯೆಂದು ನ್ಯೂಸ್ ವೆಬ್ ಸೈ ಟ್ ಒಂದು ವರದಿ ಮಾಡಿದೆ.

ಮಾರ್ಕೆಟಿಂಗ್ ಸ್ಟ್ರಾಟೆಜಿಯಲ್ಲಿ ನಿರಂತರ ಬದಲಾವಣೆ ಮಾಡಿಕೊಳ್ಳದಿದ್ದರೆ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಮೂವ್ ಅಗುವುದಿಲ್ಲ. ಅಯೋಧ್ಯಾ ಶ್ರೀರಾಮಮಂದಿರ ನಿರ್ಮಾಣ ಭಾರೀ ಭರವಸೆ ಹುಟ್ಟಿಸಿದರೂ, ಅದು ಆಶ್ಚರ್ಯಕರ ರೀತಿಯಲ್ಲಿ ನಿರೀಕ್ಷೆಯ ಮಟ್ಟವನ್ನು ತಲುಪಲಿಲ್ಲ. ಅಯೋಧ್ಯೆ ಯಲ್ಲಿನ ಸೋಲು ಇದಕ್ಕೊಂದು ನಿದರ್ಶನ ಎನ್ನಬಹುದು. ಸಾಮಾನ್ಯವಾಗಿ ಪಕ್ಷ ಸೋತಾಗ ಅಧ್ಯಕ್ಷರನ್ನು ಟಾರ್ಗೆಟ್ ಮಾಡಿ ರಾಜೀನಾಮೆ ಕೇಳುವುದು ತೀರಾ ಸಾಮಾನ್ಯ. ಸುದೈವದಿಂದ ಯಾರೂ ಯಾರ ರಾಜೀನಾಮೆಯನ್ನು ಕೇಳಿಲ್ಲ. ಯಾರನ್ನೂ ದೂಷಿಸುತ್ತಿಲ್ಲ.

ಭಾಜಪ ಮೋದಿ ಅಲೆಯನ್ನೇ ನಂಬಿಕೊಂಡು ಚುನಾವಣಾ ಮೈದಾನಕ್ಕೆ ಇಳಿದರೆ ಕಾಂಗ್ರೆಸ್ ಪಕ್ಷ ವಿಧಾನ ಸಭಾ ಚುನಾವಣೆಯಲ್ಲಿ ಭಾರೀ ಡಿವಿಡೆಂಡ್ ನೀಡಿದ ಪಂಚ ಗ್ಯಾರಂಟಿಗಳನ್ನೇ ನೆಚ್ಚಿಕೊಂಡಿತ್ತು. ಈ ಪಂಚ ಗ್ಯಾರಂಟಿಗಳು ಕನಿಷ್ಟ ೨೦ ಸೀಟುಗಳನ್ನು ನೀಡುವುದರಲ್ಲಿ ಸಂದೇಹವಿಲ್ಲ ಎಂದು ಕ್ಲೌಡ್ ನೈನ್‌ನಲ್ಲಿ ಇತ್ತು. ಆಶ್ಚರ್ಯಕರ ರೀತಿಯಲ್ಲಿ ಪಂಚ ಗ್ಯಾರಂಟಿಗಳನ್ನೇ ಚುನಾವಣಾ ಮೈದಾನದಲ್ಲಿ ಮುಖ್ಯ ಅಸವನ್ನಾಗಿ ಬಳಸಿದರು. ಈ ಪಂಚ ಗ್ಯಾರಂಟಿಗಳು ಮೋದಿ ಗ್ಯಾರಂಟಿ ಎದುರು ತೂಕ ಕಳೆ ದುಕೊಂಡಿವೆ ಮತ್ತು ಈ ಗ್ಯಾರಂಟಿಗಳ ಮುಂದುವರಿಕೆ ಬಗೆಗೆ ಕೆಲವರ ವಿವಾದಾತ್ಮಕ ಹೇಳಿಕೆಗಳು ಉಂಟುಮಾಡಿರುವ ಡ್ಯಾಮೇಜನ್ನು ನಿರ್ಲಕ್ಷಿಸಿದರು. ಈ ಗ್ಯಾರಂಟಿಗಳನ್ನು ಬಿಟ್ಟಿ ಭಾಗ್ಯ ಎಂದು ಸಮಾಜದ ಒಂದು ವರ್ಗ, ಪ್ರಜ್ಞಾವಂತರು, ಕೆಲವು
ಮಾಧ್ಯಮಗಳು ಮತ್ತು ಕೇಂದ್ರ ಸರಕಾರ ನಿರಂತರವಾಗಿ ದಾಳಿ ನಡೆಸುತ್ತಿರುವುದನ್ನು ಗಮನಿಸಲಿಲ್ಲ.

ಹಾಗೆಯೇ ಈ ಭಾಗ್ಯಗಳನ್ನು ಅನುಭವಿಸಿದವರು ರಾಜ್ಯಕ್ಕೆ ಕಾಂಗ್ರೆಸ್, ದೆಹಲಿಗೆ ಮೋದಿ ಎಂದು ಮೆಲು ಧ್ವನಿಯಲ್ಲಿ ಉಸುರುವುದನ್ನು ನೋಡಲಿಲ್ಲ. ಪ್ರತಿ ತಿಂಗಳು ಭಾಗ್ಯ ಪಡೆಯುವಾಗಲೂ ಬಹುಷಃ ಈ ತಿಂಗಳೇ ಈ ಭಾಗ್ಯಗಳಿಗೆ ಕೊನೆ ಎನ್ನುವ ವದಂತಿಗಳು ಮತ್ತು ಭಾವನೆ ಯನ್ನು ಹುಟ್ಟಿಸಲಾಗಿತ್ತು. ಈ ಭಾಗ್ಯಗಳ ವಿರುದ್ದ ಕೇಂದ್ರ ಸರಕಾರದ ನಿರಂತರ ಅಕ್ರೋಶ ಇಂತಹ ವದಂತಿಗಳಿಗೆ ಬಲನೀ ಡಿತ್ತು. ಈ ಗ್ಯಾರಂಟಿಗಳು ನಿರಂತರವಾಗಿರುತ್ತವೆ ಎಂಧು ಭರವಸೆ ಮೂಡಿಸಲು ಕಾಂಗ್ರೆಸ್ ವಿಫಲವಾಯಿತು.

ಗ್ಯಾರಂಟಿಗಳ ಅನುಷ್ಟಾನದಲ್ಲಿ ಕಂಡು ಬಂದ ಕೆಲವು ಅಡಚಣೆಗಳು ಮತ್ತು ವಿಳಂಬವು ಗ್ಯಾರಂಟಿಗಳ ಹೊಳಪನ್ನು ಗಮನಾರ್ಹವಾಗಿ ಅಳಿಸಿ ಹಾಕಿದವು. ಕಾಂಗ್ರೆಸ್ ಪಕ್ಷದ ಇನ್ನೊಂದು ಬ್ರಹ್ಮಾಸ್ತ್ರ ಸೆಕ್ಯುಲರಿಸಂ. ಕಳೆದೊಂದು ದಶಕದಲ್ಲಿ ಸೆಕ್ಯುಲರಿಸಂ ತನ್ನ ಹಿಂದಿನ ಅರ್ಥ ಕಳೆದುಕೊಂಡು ಕೆಲವು ವರ್ಗಗಳ ತುಷ್ಠೀಕರ ಣಕ್ಕೆ ಸೀಮಿತವಾಗಿದೆ ಎಂಬುವ ಭಾವನೆ ಬಲವಾಗಿ ಮತ್ತು ಆಳವಾಗಿ ಬೇರು ಬಿಟ್ಟಿದೆ. ಈ ಪದವನ್ನು ಕೇಳಿದರೆ ಜನತೆ
ಅಕ್ರೋಶ ವ್ಯಕ್ತ ಮಾಡುತ್ತಾರೆ ಮತ್ತು ಮಾರುದ್ದ ಸರಿಯುವ ಅತುರ ತೋರಿಸುತ್ತಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು ಹಿಂದು ವಿರೋಧಿಯೇ ಎಂದು ಸಂಶಯಿಸುತ್ತಾರೆ. ಆದರೂ ಕಾಂಗ್ರೆಸ್ ಪಕ್ಷವು ಭಾಜಪ ಸೆಕ್ಯುಲರಿಸಂನ್ನು ಕೈಬಿಟ್ಟು ಅದರ
ಡಿವಿಡೆಂಡ್‌ಅನ್ನು ಬಾಚುತ್ತಿದ್ದರೂ, ಸೆಕ್ಯುಲರಿಸಂಗೆ ಬಲವಾಗಿ ಅಂಟಿಕೊಂಡು ಚುನಾವಣೆ ಯಲ್ಲಿ ತನ್ನನ್ನು ಮಾರ್ಕೆಟಿಂಗ ಮಾಡಿಕೊಳ್ಳುತ್ತಿದೆ. ಇಂದು ವಿದ್ಯಾವಂತ ವರ್ಗವೂ ಸೆಕ್ಯುಲರಿಸಂ ಪರಿಕಲ್ಪನೆಯನ್ನು ನೋಡುವ ದೃಷ್ಟಿ ಬದಲಾಗಿದ್ದು. ಕಾಂಗ್ರೆಸ್ ತನ್ನ ನಿಲುವಿನಲ್ಲಿ ಕೊಂಚ ಬದಲಾವಣೆಯನ್ನು ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದೆ.

ಎರಡೂ ಪಕ್ಷದವರು ಜನಸಾಮಾನ್ಯರನ್ನು ದಿನ ನಿತ್ಯ ಬಾಧಿಸುವ ನಿರುದ್ಯೋಗ, ಹಸಿವೆ, ಬೆಲೆ ಏರಿಕೆ, ಅರೊಗ್ಯ, ಶಿಕ್ಷಣ ಮತ್ತು ಮೂಲಭೂತ ಸೌಕರ್ಯ ಗಳನ್ನು ಮಾರ್ಕೆಟಿಂಗ್ ಮಾಡದೇ, ಭಾವನಾತ್ಮಕ ವಿಚಾರಗಳಿಗೆ ಅದ್ಯತೆ ನೀಡಿದ್ದು, ಚುನಾವಣಾ ಫಲಿತಾಂಶದಲ್ಲಿ ನಿರೀಕ್ಷೆಯಷ್ಟು ಸಿಹಿ ದೊರಕದಂತೆ ಮಾಡಿದೆ. ಭಯೋತ್ಪಾದನೆ ನಿಗ್ರಹ, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ಧತಿ, ತ್ರಿವಳಿ ತಲಾಖ್‌ಗೆ ತಲಾಖ್ ಇವೆಲ್ಲವೂ ಸರಿ. ಅದರೆ, ಅಂತಿಮವಾಗಿ ಮತದಾರ ನಿರೀಕ್ಷಿಸುವುದು ಪಕ್ಷಗಳು ತನ್ನ ಸಂಬಳದಲ್ಲಿ ಇನ್ನೊಬ್ಬರನ್ನು ದೇಹಿ ಎಂದು ಬೇಡದೇ ಬದುಕಲು ಅನುಕೂಲ ಮಾಡಿಕೊಡಬಹುದೇ ಎನ್ನುವುದು ಮೂಲಭೂತ ಅಂಶವಾಗಿರುತ್ತದೆ.

ಪಕ್ಷಗಳು ತಳ ಮಟ್ಟದಿಂದ ಜನತೆಗೆ ಏನು ಬೇಕು ಎಂಬುದನ್ನು ಕ್ರೋಢೀಕರಿಸು ತ್ತವೆ. ಅದರೆ, ಅಂತಿಮವಾಗಿ ಅವರ ಪ್ರಣಾಳಿಕೆ ಸಿದ್ಧವಾದಾಗ ಈ ಜನತೆ ಎಲ್ಲೂ ಕಾಣುವುದಿಲ್ಲ. ಎರಡೂ ಪಕ್ಷಗಳು ತಮ್ಮ ಚುನಾವಣಾ ಪ್ರಚಾರದಲ್ಲಿ ಸಕಾರಾತ್ಮಕ ಧೋರಣೆ ಮತ್ತು ನಿಲುವನ್ನು ಪಾಲಿಸದೆ ನಕಾರಾತ್ಮಕ ಮಾರ್ಗವನ್ನ ಅನುಸರಿಸಿದ್ದು ಇನ್ನೊಂದು ದುರಂತ. ತಮ್ಮ ಸಾಧನೆ ಮತ್ತು ಮುಂದಿನ ಯೋಜನೆಗಳ ಬಗೆಗೆ ಮಾತನಾಡದೆ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಳ್ಳುವುದು, ಹೀಗಳೆಯುವುದು, ಅವಮಾನಿಸುವುದಕ್ಕೆ ಹೆಚ್ಚು ಅದ್ಯತೆ ನೀಡಿದವು. ತಮ್ಮ ಭಾಷಣದಲ್ಲಿ ಮುತ್ಸದ್ಧಿತನ ತೋರಿಸುತ್ತಿದ್ದ ಮೋದಿಯವರು ಕೂಡಾ ಈ ಬಾರಿ ಹಳಿ ತಪ್ಪಿ ಮಾತನಾಡಿದ್ದು, ಮಾಜಿ ಪ್ರದಾನಿ ಮನಮೋಹನ ಸಿಂಗರು ಮೋದಿಯವರ ಭಾಷಣದ ಬಗೆಗೆ ಬೇಸರ ವ್ಯಕ್ತ ಮಾಡಿzರೆ ಮತ್ತು ಮೋದಿ ಯವರು ತಮ್ಮ ಲೆವೆಲ್ ಕಾದುಕೊಳ್ಳಬೇಕಾಗಿತ್ತು ಎಂದಿದ್ದಾರೆ.

ರಾಹುಲ್ ಗಾಂಧಿ ಮತ್ತು ಖರ್ಗೆಯವರು ಕೂಡಾ ತಮ್ಮ ಭಾಷಣದಲ್ಲಿ ಹಳಿ ತಪ್ಪಿzರೆ ಎನ್ನಲಾಗುತ್ತದೆ. ವಿಷಯಾಧಾರಿತ ಟೀಕೆಗಿಂತ ವ್ಯಕ್ತಿ ಅಧಾರಿತ ಟೀಕೆಗಳು ಮೇಲ್ಮೆಗೆ ಬಂದಿದ್ದವು ಎನ್ನುವ ಮಾತು ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ಅಹಾರವಾಗಿತ್ತು. ಸೋಲಿಗೆ ಕಾರಣಗಳು ಏನೇ ಇರಲಿ, ಪಕ್ಷಗಳ ಮಾರ್ಕೆಟಿಂಗ್ ವಿಭಾಗ ಪಕ್ಷವನ್ನು ಮಾರ್ಕೆಟ್ ಮಾಡುವುದರಲ್ಲಿ ಸೊತಿದೆ ಎನ್ನುವುದು ಸತ್ಯ.

(ಲೇಖಕರು: ಅರ್ಥಿಕ ಮತ್ತು ರಾಜಕೀಯ
ವಿಶ್ಲೇಷಕರು)

Leave a Reply

Your email address will not be published. Required fields are marked *

error: Content is protected !!