Tuesday, 2nd July 2024

ನಂದಿನಿ, ಕನ್ನಡಿಗರದು ಬರಿ ಹಾಲಲ್ಲ, ಹೆಮ್ಮೆ ಕೂಡಾ !

ವಿದ್ಯಮಾನ

ವಿನಾಯಕ ವೆಂ.ಭಟ್ಟ, ಅಂಬ್ಲಿಹೊಂಡ

ರಾಜ್ಯದಲ್ಲಿ ಬೆಲೆ ಏರಿಕೆ ಹೆಚ್ಚಳದ ಪರ್ವ ಮುಂದುವರೆದಿದ್ದು, ವಾರದ ಹಿಂದೆಯಷ್ಟೇ ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಳ ಮಾಡಿ ಶಾಕ್ ಕೊಟ್ಟಿದ್ದ ರಾಜ್ಯ ಸರಕಾರ, ಈಗ ಹಾಲಿನ ದರ ಏರಿಕೆ ಮಾಡಿ ಗ್ರಾಹಕರನ್ನು ಮತ್ತಷ್ಟು ಸಂಕಷ್ಟಕ್ಕೆ ನೂಕಿದೆ.

ಹೌದು! ನಂದಿನಿ ಹಾಲಿನ ಬೆಲೆ ಹೆಚ್ಚಳ ಆಗಿದೆ. ಆದರೆ, ಈ ಬಾರಿ ಹಾಲಿನ ದರ ಏರಿಕೆಯಲ್ಲಿ ಸರಕಾರ ಸೃಜನಾತ್ಮಕವಾದ ಹೊಸ ದಾರಿಯೊಂದನ್ನು ಹುಡುಕಿ ಕೊಂಡಿದೆ. ೨ ರುಪಾಯಿ ಬೆಲೆ ಹೊಂದಾಣಿಕೆಯ ಜೊತೆಗೆ, ಗ್ರಾಹಕರಿಗೆ ಹೆಚ್ಚಿನ ಪ್ರಮಾಣದ ಹಾಲು ಒದಗಿಸಲು ನಂದಿನಿ ಹಾಲಿನ ಪ್ರತಿ ಪ್ಯಾಕೆಟ್ ಈಗ ೫೦ ಮಿಲಿ ಹೆಚ್ಚು ಹಾಲನ್ನು ಹೊಂದಿರುತ್ತದೆ. ದರ ಏರಿಕೆಯ ನಂತರವೂ ಬೇರೇ ರಾಜ್ಯಗಳಿಗೆ ಹೋಲಿಸಿ ದರೆ ನಮ್ಮ ರಾಜ್ಯದ ಹಾಲಿನ ಬೆಲೆಯು ಕಡಿಮೆಯೇ ಇದೆ
ಎನ್ನುವುದು ಮಹಾಮಂಡಳಿಯ ಮತ್ತು ಸರಕಾರದ ಸ್ಪಷ್ಟೀಕರಣ.

ಇದು ಬೆಲೆ ಏರಿಕೆ ಅಲ್ಲವೇ ಅಲ್ಲ, ಹೆಚ್ಚುವರಿಯಾಗಿ ಕೊಡುತ್ತಿರುವ ೫೦ ಎಮ್ ಎಲ್ ಹಾಲಿಗೆ ಎರಡು ರುಪಾಯಿ ಹೆಚ್ಚಳ ಮಾಡುತ್ತಿದ್ದೇವೆ ಅಷ್ಟೆ ಎಂದು ಕೆಎಂಎಫ್ ಹೇಳುತ್ತಿದೆ. ಈಗ ಪ್ರತಿದಿನ ೯೮ ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಸದ್ಯದಲ್ಲಿ ಒಂದು ಕೋಟಿ ಲೀಟರ್ ಮುಟ್ಟಲಿದೆ. ನಮ್ಮ ಸರಕಾರ ಅಧಿಕಾರಕ್ಕೆ ಬರುವ
ವೇಳೆ ರಾಜ್ಯದಲ್ಲಿ ನಿತ್ಯ ಸರಾಸರಿ ೭೨ ಲಕ್ಷ ಲೀಟರ್‌ಗಳಷ್ಟು ಹಾಲು ಸಂಗ್ರಹವಾಗುತ್ತಿತ್ತು, ಈ ಬಾರಿ ಉತ್ತಮ ಮಳೆಯಾಗುತ್ತಿರುವುದರಿಂದ ಜಾನುವಾರುಗಳಿಗೆ ಹಸಿರು ಮೇವು ಹೆಚ್ಚು ಲಭ್ಯವಾಗುತ್ತಿದೆ ಹಾಗಾಗಿ, ರಾಜ್ಯದಲ್ಲಿ ಹಾಲಿನ ಉತ್ಪಾದನೆಯಲ್ಲಿ ೧೫ ಪ್ರತಿಶತ ಹೆಚ್ಚಳವಾಗಿದೆ.

ಹೀಗೆ ಹೆಚ್ಚುವರಿಯಾಗಿ ಉತ್ಪಾದನೆಯಾಗುತ್ತಿರುವ ಹಾಲನ್ನು ರೈತರಿಂದ ಖರೀದಿಸುವುದನ್ನು ನಿಲ್ಲಿಸಲಾಗುವುದಿಲ್ಲ. ಹಾಗಾಗಿ, ಗ್ರಾಹಕರಿಗೂ ಹೊರೆಯಾಗದ ರೀತಿಯಲ್ಲಿ ಕೆಎಂಎಫ್ ಸಂಸ್ಥೆ ರೈತ ಪರವಾದ ಈ ನಿರ್ಧಾರ ಕೈಗೊಂಡಿದೆ ಎಂದು ಕೆಎಂಎ- ಪರವಾಗಿ ಅದರ ಅಧ್ಯಕ್ಷ ರಾದ ಭೀಮ ನಾಯ್ಕ ಅವರೂ ಮತ್ತು ಸರಕಾರದ ಪರ ವಾಗಿ ಮುಖ್ಯಮಂತ್ರಿಗಳೂ ಹೇಳುತ್ತಿzರೆ. ಹಾಲಿನ ದರ ದಲ್ಲಿ ಕೇವಲ ಎರಡು ರುಪಾಯಿಯ ಹೆಚ್ಚಳ ಕಡಿಮೆ ಯಾಯಿತು ಅನ್ಯ ರಾಜ್ಯಗಳ ಹಾಲಿನ ಬೆಲೆಯನ್ನು ಗಮನಿ ಸಿದರೆ ನಮ್ಮಲ್ಲಿ ಇನ್ನೂ ಹೆಚ್ಚಾಗಬೇಕಾಗಿತ್ತು ಎನ್ನುವುದು ಉಪ ಮುಖ್ಯಮಂತ್ರಿಗಳ ಅಭಿಪ್ರಾಯ. ಹೌದು, ನಾವು ನೀಡಿದ ಪಂಚ ಗ್ಯಾರಂಟಿಗಳಿಗೆ ಮತ್ತು ಉಳಿದ ಅಭಿವೃದ್ಧಿ ಕೆಲಸಗಳಿಗೆ ಹಣ ಬೇಕಲ್ಲ! ಅದಕ್ಕಾಗಿಯೇ ಹಾಲಿನ ದರ ವನ್ನು ಏರಿಸಿದ್ದೇವೆ ಎಂದು ಇನ್ನೊಬ್ಬ ಸಚಿವ ಸಂತೋಷ್ ಲಾಡ್ ಸಾರ್ವಜನಿಕವಾಗಿ ಹೇಳುತ್ತಿದ್ದಾರೆ.

ಮಂತ್ರಿಗಳ ಹೇಳಿಕೆಗಳಲ್ಲಿ ಪರಸ್ಪರ ತಾಳಮೇಳ ಇದ್ದಹಾಗೆ ಕಾಣುತ್ತಿಲ್ಲ. ಆದರೆ, ಗ್ರಾಹಕರು ಮಾತ್ರ ಸರಕಾರದ ಈ ಬೆಲೆ ಏರಿಕೆಯ ನಿರ್ಧಾರವನ್ನು ಮತ್ತು ಏರಿಕೆಗೆ ಅನುಸರಿಸಿದ ಬುದ್ಧಿವಂತಿಕೆಯ ವಿಧಾನವನ್ನು ಖಂಡಿಸುತ್ತಿದ್ದಾರೆ. ಬಿಸ್ಕೆಟ್ ಪ್ಯಾಕೆಟ್, ಟೂತ್ ಪೇಸ್ಟು, ಗೋಧಿ ಹಿಟ್ಟು ಮುಂತಾದ ಗೃಹ ಬಳಕೆಯ ಉತ್ಪನ್ನಗಳ ವ್ಯಾಪಾರ ಮಾಡುವಾಗ ವ್ಯಾಪಾರ ಹೆಚ್ಚಳಕ್ಕಾಗಿ, ತನ್ನ ಮಾರುಕಟ್ಟೆಯನ್ನು ಉಳಿಸಿಕೊಳ್ಳಲಿಕ್ಕಾಗಿ ಅಥವಾ ಬೇಡಿಕೆ ಮತ್ತು ಪೂರೈಕೆಯನ್ನು ಸರಿದೂಗಿಸುವ ಸಲುವಾಗಿ ಅನೇಕಬಾರಿ ಉತ್ಪಾದಕರು ತಮ್ಮ ಉತ್ಪನ್ನವನ್ನು ಶೇ. ೧೦-೨೦ ರಷ್ಟು ಹೆಚ್ಚಿನದಾಗಿ ನೀಡುವುದನ್ನು ನೋಡಿದ್ದೇವೆ. ಆದರೆ ಅಲ್ಲಿ ಮಾರಾಟದ ಗರಿಷ್ಟ ಬೆಲೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಗ್ರಾಹಕರನ್ನು ತನ್ನತ್ತ ಸೆಳೆಯಲು ಒಂದು ತಾತ್ಕಾಲಿಕ ತಂತ್ರವಾಗಿ ಈ ತರಹದ ಉಪಾಯವನ್ನು ಮಾಡುವುದನ್ನು ನಾವು ಕಾಣುತ್ತೇವೆ. ಆದರೆ, ಪ್ರಸ್ತುತ ಹಾಲಿನ ಪ್ರಮಾಣ ವೊಂದೇ ಹೆಚ್ಚಾಗಿಲ್ಲ, ಜೊತೆಗೆ ದರವೂ ಹೆಚ್ಚಾಗಿದೆ. ಗ್ರಾಹಕರಿಗೆ ಹೊರೆಯಾಗದಂತೆ ಕೆಎಂಎಫ್ ಸಂಸ್ಥೆ ರೈತ ಪರವಾದ ಈ ನಿರ್ಧಾರ ಕೈಗೊಂಡಿದೆ ಎನ್ನುವ ಮುಖ್ಯಮಂತ್ರಿಗಳಿಗೆ, ನಿಮಗೆ ಹೆಚ್ಚಿನ ಪ್ರಮಾಣದ ಹಾಲನ್ನು ನೀಡಲು ಬೇಡಿಕೆ ಇಟ್ಟವರು ಯಾರು? ಒಂದುಕಡೆ ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ರೈತರ ಹಿತರಕ್ಷಣೆ ಮಾಡುತ್ತಿದ್ದೇವೆ ಎಂದು ಸಮಜಾಯಿಷಿ ಕೊಡುವ ನೀವು ಇನ್ನೊಂದು ಕಡೆ ಗ್ರಾಹಕರಾದ ನಮ್ಮನ್ನು ಹೇಗೆ ಲಘುವಾಗಿ ತೆಗೆದುಕೊಳ್ಳುತ್ತಿದ್ದೀರಿ? ಎಂದು ಸರಕಾರಕ್ಕೆ ಈಗ ಗ್ರಾಹಕ ಸಮುದಾಯ ಪ್ರಶ್ನೆಮಾಡುತ್ತಿದೆ.

ಅಲ್ಲದೇ, ಹಾಲು ಪೂರೈಕೆ ಮಾಡುವ ರೈತರಿಗೆ ಕೊಡಬೇಕಾದ ೬೬೯ ಕೋಟಿ ರುಪಾಯಿಗಳ ಸಹಾಯ ಧನವನ್ನು ಬಡುಗಡೆ ಮಾಡದೇ ಕಳೆದ ಎಂಟು ತಿಂಗಳಿ ನಿಂದ ಕರ್ನಾಟಕ ಹಾಲು ಮಹಾ ಮಂಡಳಿ ಬಾಕಿ ಉಳಿಸಿಕೊಂದಿದೆ. ಹಾಗಾಗಿ ರೈತರ ಕಲ್ಯಾಣ ಕ್ಕಾಗಿ ಹಾಲಿನ ದರವನ್ನು ಏರಿಸುತ್ತಿದ್ದೇವೆ ಎನ್ನುವುದು
ವಿರೋಧಾಭಾಸದ ಹೇಳಿಕೆ ಆಗುವುದಿಲ್ಲವೇ ಎಂದು ರೈತರು ಕೇಳುತ್ತಿದ್ದಾರೆ.

ಕರ್ನಾಟಕದಲ್ಲಿ ಕೆಎಂಎಫ್ ಗೆ ಹಾಲಿನ ಮೇಲೆ ಏಕಸ್ವಾಮ್ಯ ಇದೆ ಎನ್ನುವ ಕಾರಣಕ್ಕೆ, ಒತ್ತಾಯಪೂರ್ವಕವಾಗಿ ಗ್ರಾಹಕರನ್ನು ಹೆಚ್ಚಿನ ಪ್ರಮಾಣದ ಹಾಲನ್ನು ಕೊಳ್ಳುವಂತಹ ಪರಿಸ್ಥಿತಿಗೆ ದೂಡುವುದು ದೇಶದ ಗ್ರಾಹಕರ ಹಿರಕ್ಷಣಾ ಕಾನೂನಿನ ಆಶಯಗಳಿಗೂ ವಿರುದ್ಧವಾದ ಉಪಕ್ರಮ ವಾಗುತ್ತದೆ. ಮತ್ತು ಅನುಚಿತ ವ್ಯಾಪಾರ ಪದ್ಧತಿಯಾಗುತ್ತದೆ. ದಿನ ಬೆಳಗಾದರೆ ಎಲ್ಲರಿಗೂ ಹಾಲು ಬೇಕೇ ಬೇಕು. ಹಾಲು ಅಗತ್ಯ ವಸ್ತುಗಳ ಪಟ್ಟಿಗೆ ಸೇರುವಂಥಾ ವಸ್ತು, ಹಾಗಾಗಿ ಬೆಲೆ ಜಾಸ್ತಿ ಮಾಡಿದರೆ ಜನರು ಕೊಳ್ಳುವುದನ್ನಂತೂ ಖಂಡಿತಾ ನಿಲ್ಲಿಸುವುದಿಲ್ಲ!

ಅಷ್ಟರಮಟ್ಟಿಗೆ ನಂದಿನಿ ಹಾಲಿನ ಮೇಲೆ ಕರ್ನಾಟಕದ ಜನರ ಅವಲಂಬನೆ ಇದೆ. ಹಾಗಾಗಿ, ಈ ಅವಲಂಬನೆಯನ್ನು ದುರುಪಯೋಗಪಡಿಸಿಕೊಂಡು ಗ್ರಾಹಕನ ಇಚ್ಛೆಗೆ ವಿರುದ್ಧವಾಗಿಯಾದರೂ ಪ್ರಮಾಣವನ್ನು ಮತ್ತು ಬೆಲೆಯನ್ನು ಹೆಚ್ಚು ಮಾಡಿ ಆಟವಾಡಿದರೆ ತೊಂದರೆ ಏನೂ ಆಗದು ಎಂದು ಸರಕಾರ ಮತ್ತು ಹಾಲು ಮಹಾಮಂಡಳಿ ತಿಳಿದು ಕೊಂಡಹಾಗೆ ಕಾಣುತ್ತಿದೆ. ಕೆಲವು ಖಾಸಗಿ ವ್ಯಾಪಾರಿ ಸಂಸ್ಥೆಗಳು ಅನುಚಿತ ವ್ಯಾಪಾರಿ ಪದ್ಧತಿಗಳಿಂದ ನಿರಂತರವಾಗಿ ಗ್ರಾಹಕನನ್ನು
ಶೋಷಿಸುತ್ತಿರುತ್ತವೆ.

ಕಾರಣ, ಗ್ರಾಹಕರು ಅವಶ್ಯಕ ಜ್ಞಾನ ವನ್ನು ಹೊಂದಿಲ್ಲದಿರುವುದರಿಂದ ಮತ್ತು ಅಸಂಘಟಿತರಾಗಿರುವುದರಿಂದ ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಅಥವಾ
ಶೋಷಣೆಯ ವಿರುದ್ಧ ಧ್ವನಿ ಎತ್ತಲು ಅವರಿಗೆ ಸಾಧ್ಯವಾಗುವುದಿಲ್ಲ. ಅನುಚಿತ ವ್ಯಾಪಾರಿ ಪದ್ಧತಿಗಳಾದ ಕಲಬೆರಕೆ, ಕಾಳಸಂತೆ ವ್ಯಾಪಾರ, ತೂಕ ಮತ್ತು ಅಳತೆಯಲ್ಲಿ ವಂಚನೆ, ದಾರಿತಪ್ಪಿಸುವ ಜಾಹೀರಾತುಗಳು ಮುಂತಾದವು ಗಳಿಂದ ಗ್ರಾಹಕ ದಿನನಿತ್ಯ ಶೋಷಣೆಗೆ ಒಳಗಾಗುತ್ತಿರುವಾಗ ಅವನನ್ನು ರಕ್ಷಣೆ ಮಾಡುವುದು ಸರಕಾರಗಳ ಜವಾಬ್ದಾರಿಯಾಗುತ್ತದೆ. ಹೀಗೆ ಗ್ರಾಹಕನ ಹಿತರಕ್ಷಣೆ ಮಾಡಬೇಕಾಗಿದ್ದ ಸರಕಾರಗಳೇ ಈ ರೀತಿ ಗ್ರಾಹಕನನ್ನು ದಾರಿ ತಪ್ಪಿಸುವ
ಕೆಲಸದಲ್ಲಿ ತೊಡಗಿದರೆ ಅವರು ಕೇಳುವುದು ಯಾರನ್ನು ಹೇಳಿ? ಈ ಕುರಿತು ಗ್ರಾಹಕರು ಹಾಲು ಮಹಾಮಂಡಳಿಯ ವಿರುದ್ಧ ಗ್ರಾಹಕ ನ್ಯಾಯಾಲಯದ ಕದ ತಟ್ಟಿದರೂ ಅಚ್ಚರಿ ಇಲ್ಲ.

ಸರಕಾರ ಮತ್ತು ಹಾಲು ಮಹಾಮಂಡಳಿ ತಿಳಿದು ಕೊಳ್ಳಬೇಕಾದ ಸಂವೇದನಾ ಶೀಲ ಸಂಗತಿ ಇನ್ನೊಂದಿದೆ. ಅದು, ಕರ್ಣಾಟಕದ ಅತ್ಯಂತ ಹೆಮ್ಮೆಯ ಸಂಸ್ಥೆಯಾದ ಕರ್ನಾಟಕದ ಹಾಲು ಮಹಾಮಂಡಳಿಯ ಜೊತೆಗೆ ಹಾಲು ಉತ್ಪಾದಕರು ಮತ್ತು ಗ್ರಾಹಕರು ಈರ್ವರೂ ಭಾವನಾತ್ಮಕ ವಾದ ಸಂಬಂಧವನ್ನು ಹೊಂದಿದ್ದಾರೆ ಎನ್ನುವುದು. ಕನ್ನಡಿ ಗರಿಗೆ ನಂದಿನಿಯ ಉತ್ಪನ್ನಗಳು ಎಂದರೆ ಕೇವಲ ಒಂದು ‘ಪ್ರೊಡಕ್ಟ್’ ಮಾತ್ರ ಅಲ್ಲ. ಅದು ಅವರ ಅಸ್ಮಿತೆ, ಹೆಮ್ಮೆ- ಹಿಗ್ಗು. ಕನ್ನಡಿಗರಿಗೆ ‘ನಂದಿನಿ’ ಎಂಬುದು ಬರಿ ಹಾಲಲ್ಲ ಅದೊಂದು ಸಂವೇದನೆಯಾಗಿದೆ. ನಮ್ಮದೇ ರಾಜ್ಯದ ಸಾವಿರಾರು ಹಳ್ಳಿಗಳಿಂದ ನಗರಕ್ಕೆ ಹರಿದು ಬರುವ
ಹಾಲನ್ನು, ತಮ್ಮದೇ ಮನೆಯ ಕೊಟ್ಟಿಗೆಯಿಂದ ಈಗತಾನೆ ಕರೆದು ತಂದ ಹಾಲಿನಂತೆ ನಗರ ಪ್ರದೇಶದ ವನಿತೆಯರು ಪ್ರೀತಿಸುತ್ತಾರೆ ಮತ್ತು ಗೌರವಿಸುತ್ತಾರೆ.

ನಂದಿನಿಯ ಉತ್ಪನ್ನಗಳನ್ನು ಬಳಸುವ ಮೂಲಕ ನಮ್ಮವರೇ ಆದ ರೈತರಿಗೆ ಸ್ವಲ್ಪ ಸಹಾಯವಾದಂತಾಗುತ್ತದೆ, ಸಹಕಾರಿ ತತ್ವದ ಆಧಾರದಲ್ಲಿ ಹುಟ್ಟು ಹಾಕಲ್ಪಟ್ಟ ಈ ಸಂಸ್ಥೆಯ ಬೆಳವಣಿಗೆಗೆ ನಮ್ಮದೂ ಸಣ್ಣ ಕಾಣಿಕೆ ಇರಲಿ ಎನ್ನುವ ಭಾವನೆ ಬಹುತೇಕ ‘ನಂದಿನಿ’ಯ ಗ್ರಾಹಕರಿಗಿದೆ. ಕರ್ನಾಟಕದ ರೈತರ
ಮನೆಮನೆಗಳಿಂದ ಹಾಲು ತಂದು ನಗರಗಳ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೇಡಿಕೆಯನ್ನು ಪೂರೈಸುತ್ತಿರುವ ಮಹತ್ಕಾರ್ಯವನ್ನು ಕೆಎಮ್‌ಎಫ್ ಮಾಡುತ್ತಿರುವುದ ರಿಂದ ಡಾ.ರಾಜ್ಕುಮಾರ್ ಅವರು, ನಂತರ ಅವರ ಮಗ ಪುನೀತ್ ರಾಜ್‌ಕುಮಾರ್ ನಯಾಪೈಸೆ ತೆಗೆದುಕೊಳ್ಳದೇ ನಂದಿನಿ ಉತ್ಪನ್ನಗಳಿಗೆ ರಾಯಭಾರಿಗಳಾಗಿ ಪ್ರೀತಿಯಿಂದ ಕೆಲಸ ಮಾಡಿಜ್ಞಾರೆ. (ಡಾ.ರಾಜ್‌ಕುಮಾರ್ ತಮ್ಮ ಜೀವಿತಾವಧಿಯಲ್ಲಿ ಮಾಡಿದ ಏಕೈಕ ಜಾಹೀರಾತು ಎಂದರೆ ಅದು
ನಂದಿನಿಗೆ ಮಾಡಿದ್ದು) ಹಾಲಿನ ಬೆಲೆ ಮತ್ತು ಪ್ರಮಾಣದ ವಿಷಯದಲ್ಲಿ ಬೇಕಾಬಿಟ್ಟಿ ನಡೆದುಕೊಳ್ಳುವ ಸಂದರ್ಭದಲ್ಲಿ ಗ್ರಾಹಕರ ಸಂವೇದನೆಗಳನ್ನು ಕರ್ನಾಟಕ ಸರಕಾರ ಮತ್ತು ಹಾಲು ಮಹಾಮಂಡಳಿ ಅರ್ಥಮಾಡಿಕೊಳ್ಳುವುದು ಸೂಕ್ತ.

ಇಂದಿನ ಕರ್ನಾಟಕದ ಕ್ಷೀರ ಕ್ರಾಂತಿಗೆ ಕೆಎಮ್‌ಎಫ್ ಎಂಬ ಸಹಕಾರಿ ಕ್ಷೇತ್ರದ ಸಂಸ್ಥೆಯ ಕೊಡುಗೆ ಅಪಾರ. ಹೊಸ ಹೊಸ ಉತ್ಪನ್ನಗಳನ್ನು ಗ್ರಾಹಕರಿಗೆ ಪರಿಚಯಿಸುವುದರ ಜೊತೆಗೆ ತನ್ನ ಸಂಘದ ಸದಸ್ಯರಿಗೆ ಅನೂಕೂಲವಾಗುವ ಜಾನುವಾರು ಮೇವನ್ನು ಪೂರೈಸುವುದು ಮುಂತಾದ ಉತ್ತಮ ಕೆಲಸವನ್ನು ಸಂಸ್ಥೆ ಮಾಡುತ್ತಾ ಬಂದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇತ್ತೀಚೆಗೆ ಅತಿಯಾದ ಪಕ್ಷ ರಾಜಕಿಯಕ್ಕೆ ಮತ್ತು ಕೆಲವು ಹಿತಾಸಕ್ತಿಗಳಿಗೆ ಸಂಸ್ಥೆಯ ಮೂಲ ಉದ್ದೇಶ ಬಲಿಯಾಗುತ್ತಿರುವಂತೆ ಭಾಸವಾಗುತ್ತಿದೆ ಮತ್ತು ಕರ್ನಾಟಕದ ಹೆಮ್ಮೆಯ ಈ ಸಂಸ್ಥೆ ಎ ಭಾಗೀದಾರಾರ (ಖಠಿZhಛಿ eಟ್ಝbಛ್ಟಿo) ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆ ಅನ್ನಿಸಲು ಶುರುವಾಗಿದೆ.

ಸಂಶೋಧನೆ ಮತ್ತು ಅಭಿವೃದ್ಧಿ (ಈ) ಕಡೆಗೆ ಗಮನವಿಲ್ಲದಿರುವುದು, ಗುಜರಾತ್‌ನ ‘ಅಮೂಲ’ನಂತೆ ತನ್ನ ವೈವಿಧ್ಯತೆಯಿಂದ ಕೂಡಿರುವ ಉತ್ಪನ್ನಗಳನ್ನು ಆಕ್ರಮಣಕಾರಿಯಾಗಿ ಮಾರ್ಕೆಟಿಂಗ್ ಮಾಡದಿರುವುದು ಮತ್ತು ಹಾಲನ್ನು ಹಾಲನ್ನಾಗಿ ಮಾತ್ರ ಮಾರಾಟ ಮಾಡದೇ ಅದರ ಮೌಲ್ಯ ವರ್ಧನೆಗೊಳಿಸಿ
ಮಾರಾಟಮಾಡಲು ಸಾಧ್ಯವಾಗದಿರುವುದು ಮತ್ತು ತನ್ನ ಹಳೆಯ ಗ್ರಾಹಕರನ್ನು ಉಳಿಸಿಕೊಂಡು ಹೊಸ ಅದರಲ್ಲೂ ಸಾಂಸ್ಥಿಕ ಗ್ರಾಹಕರನ್ನು ತಲುಪಲು ಸಾಧ್ಯವಾಗದಿರುವುದು ಸಂಸ್ಥೆಯ ಇಂದಿನ ದುಃಸ್ಥಿತಿಗೆ ಕಾರಣವಾಗಿದೆ ಎನ್ನಬಹುದು. ಮಳೆಗಾಲದಲ್ಲಿ ಸ್ವಾಭಾವಿಕವಾಗಿ ಹಾಲಿನ ಪೂರೈಕೆಯಲ್ಲಿ ಹೆಚ್ಚಳವಾಗು ತ್ತದೆ, ಇದೇನೂ ಹೊಸ ವಿಷಯವಲ್ಲ. ಈ ಕುರಿತು ಮೊದಲೇ ಚಿಂತಿಸಿ ಹಾಗೆ ಹೆಚ್ಚಳವಾಗಿ ಪೂರೈಕೆಯಾಗುವ ಹಾಲನ್ನು ಮಾರಾಟಮಾಡಲು ಹೊಸಹೊಸ ಮಾರುಕಟ್ಟೆಯನ್ನು ಹುಡುಕಿಟ್ಟುಕೊಳ್ಳುವುದು ಮಹಾಮಂಡಳವೇ ಮಾಡಬೇಕಾದ ಕೆಲಸ ತಾನೆ? ಸಂಗ್ರಹವಾಗುವ ಹಾಲನ್ನು ಮಾರಾಟ ಮಾಡ ಲಾಗದ ತನ್ನ ಅಸಮರ್ಥತೆಯ ಹೊರೆಯನ್ನು ನೇರವಾಗಿ ಗ್ರಾಹಕರ ಬೆನ್ನ ಮೇಲೆ ಹೊರಿಸುವುದು ಮತ್ತು ನಂತರ ಅದನ್ನು ರೈತರ ಹೆಸರಿನಲ್ಲಿ ಸಮರ್ಥಿಸಿಕೊಳ್ಳಲು ಪ್ರಯತ್ನಿಸುವುದು ಸರ್ವಥಾ ಸರಿಯಾದ ಕ್ರಮವಲ್ಲ.

ನೆರೆಯ ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನ ಆರೋಕ್ಯ, ಮಿಲ್ಕಿ ಮಿಸ್ಟ್, ತಿರುಮಲ, ಹಟ್ಸನ್, ದೊಡ್ಲ ಮತ್ತು ಹೆರಿಟೇಜ್ ಕಂಪನಿಗಳು ಈಗಾಗಲೇ ಕರ್ನಾಟಕದಲ್ಲಿ ನಂದಿನಿಗೆ ಪ್ರತಿಸ್ಪರ್ಧೆ ನೀಡುತ್ತಿವೆ ಮತ್ತು ಗುಜರಾತಿನ ಅಮೂಲ್ ಅಂತೂ ಯಾವುದೇ ಹಂತದಲ್ಲಿ ಕರ್ಣಾಟಕವನ್ನು ಪ್ರವೇಶಿಸಬಹುದಾಗಿದೆ. ನಾಳೆ ಕನ್ನಡಿಗರು ಇಂತಹ ಅಸಂಗತ ನಿರ್ಧಾರಗಳಿಂದ ಬೇಸತ್ತು ನಂದಿನಿಯನ್ನು ಬಿಟ್ಟು ಸರಾಸಗಟಾಗಿ ಇನ್ನೋದು ಬ್ರಾಂಡಿನ ಕಡೆಗೆ ಮುಖ ಮಾಡುವಂತಾ ದರೆ ಕರುನಾಡಿನಲ್ಲಿ ಹೈನುಗಾರಿಕೆಯನ್ನೇ ನಂಬಿರುವ ರೈತರನ್ನು ಮಾತ್ರ ದೇವರೇ ಕಾಪಾಡ ಬೇಕಾಗುತ್ತದೆ.

ಚೋದ್ಯ: ವಿದ್ಯುತ್, ಆಸ್ತಿಗಳ ಮಾರ್ಗದರ್ಶಕ ಮೌಲ್ಯ, ಮುದ್ರಾಂಕ ಮತ್ತು ನೊಂದಣಿ ಶುಲ್ಕ, ಬೀಜ ಮತ್ತು ರಸಗೊಬ್ಬರ, ವಾಣಿಜ್ಯ ಉದ್ದೇಶಕ್ಕೆ ಬಳಸುವ ವಾಹನಗಳ ಮೇಲಿನ ಸೆಸ್, ೨೫ ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ಇವಿ ವಾಹನಗಳ ಮೇಲೆ ಶೇ.೧೦ ಲೈಫ್ ಟೈಮ್ ತೆರಿಗೆ. ಶೇ.೨೦ ರಷ್ಟು ಮದ್ಯದ ಮೇಲಿನ ತೆರಿಗೆ, ಈಗ ತೈಲ ಮತ್ತು ಹಾಲಿನ ಬೆಲೆ. ಇವೆಲ್ಲದರ ದರ ಏರಿಕೆಯಿಂದ ಸರಕಾರದ ಖಜಾನೆಗೆ ಹೆಚ್ಚೆಂದರೆ ೧೦ ಸಾವಿರ ಕೋಟಿ ರು. ಬರಬಹುದು.

ಮುಂಬರುವ ವರ್ಷಗಳಲ್ಲಿ ಪಂಚ ಗ್ಯಾರಂಟಿಗಳಿಗೆ ಬೇಕಾದ ಹಣಕಾಸು ೬೦ ಸಾವಿರ ಕೋಟಿ ರು. ದಾಟಬಹುದು ಎಂದು ಅಂದಾಜಿಸಲಾಗಿದೆ. ಅಂದಮೇಲೆ,
ಸರಕಾರ ಇನ್ನೂ ಐವತ್ತು ಸಾವಿರ ಕೋಟಿ ಹೊಂದಿಸಬೇಕಿದೆ ಎಂದಾಯಿತು. ಮುಂಬರುವ ದಿನಗಳಲ್ಲಿ ಕರ್ನಾಟಕದ ಜನರ ಜೇಬು ಮತ್ತಷ್ಟು ಹಗುರವಾಗುವು ದಂತೂ ಗ್ಯಾರಂಟಿ.

(ಲೇಖಕರು: ಪ್ರಚಲಿತ ವಿದ್ಯಮಾನಗಳ ವಿಷ್ಲೇಷಕರು)

Leave a Reply

Your email address will not be published. Required fields are marked *

error: Content is protected !!