Sunday, 7th July 2024

ಡಾ. ಕಿರೋಡಿ ಲಾಲ್ ಮೀನಾ ಸಚಿವ ಸ್ಥಾನಕ್ಕೆ ರಾಜೀನಾಮೆ

ರಾಜಸ್ಥಾನ: ಭಜನ್‌ಲಾಲ್ ಶರ್ಮಾ ಸರ್ಕಾರದ ಹಿರಿಯ ಸದಸ್ಯ ಡಾ. ಕಿರೋಡಿ ಲಾಲ್ ಮೀನಾ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ತಮ್ಮ ರಾಜೀನಾಮೆಯನ್ನು ಸಿಎಂ ಭಜನಲಾಲ್ ಶರ್ಮಾ ಅವರಿಗೆ ಕಳುಹಿಸಿದ್ದಾರೆ. ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ.

2024 ರ ಲೋಕಸಭಾ ಚುನಾವಣೆಯ ಫಲಿತಾಂಶಗಳು ಹೊರಬರುವ ಮೊದಲು, ಮೀನಾ ಅವರು ತಮ್ಮ ಪ್ರಭಾವದ ಪ್ರದೇಶದಲ್ಲಿ ಯಾವುದೇ ಸ್ಥಾನವನ್ನು ಕಳೆದುಕೊಂಡರೆ, ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು.

ಪೂರ್ವ ರಾಜಸ್ಥಾನಕ್ಕೆ ಸೇರಿದ ಮೀನಾ ಸಮುದಾಯದ ಹಿರಿಯ ನಾಯಕರಲ್ಲಿ ಡಾ. ಕಿರೋಡಿ ಲಾಲ್ ಮೀನಾ ಕೂಡ ಪ್ರಮುಖರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ರಾಜಸ್ಥಾನದಲ್ಲಿ ರಚನೆಯಾದ ಬಿಜೆಪಿಯ ಭಜನ್ ಲಾಲ್ ಸರ್ಕಾರದಲ್ಲಿ ಅವರನ್ನು ಕೃಷಿ ಸಚಿವರನ್ನಾಗಿ ಮಾಡಲಾಯಿತು. ಆದರೆ, ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ, ತಮ್ಮ ಉಸ್ತುವಾರಿಯಲ್ಲಿರುವ ಏಳು ಸ್ಥಾನಗಳಲ್ಲಿ ಒಂದಾದರೂ ಬಿಜೆಪಿ ಸೋತರೆ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಭರವಸೆ ನೀಡಿದ್ದರು. ಈಗ ಪೂರ್ವ ರಾಜಸ್ಥಾನದಲ್ಲಿ ಪಕ್ಷದ ಸೋಲಿನ ನೈತಿಕ ಹೊಣೆ ಹೊತ್ತು ಅವರು ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಜ್ಯದ ದೌಸಾ, ಟೋಂಕ್-ಸವಾಯಿ ಮಾಧೋಪುರ್, ಭರತ್‌ಪುರ, ಭಿಲ್ವಾರಾ, ಕೋಟಾ-ಬುಂಡಿ, ಕರೌಲಿ-ಧೋಲ್‌ಪುರ್ ಮತ್ತು ಜೈಪುರ ಗ್ರಾಮಾಂತರ ಕ್ಷೇತ್ರಗಳು ಬಿಜೆಪಿ ನಾಯಕ ಕಿರೋಡಿ ಅವರ ಉಸ್ತುವಾರಿಯಲ್ಲಿದ್ದವು.

ಲೋಕಸಭೆಯ ಫಲಿತಾಂಶದಲ್ಲಿ ಬಿಜೆಪಿ 7 ರಲ್ಲಿ 4 ಸ್ಥಾನಗಳಲ್ಲಿ ಸೋಲನ್ನು ಎದುರಿಸಬೇಕಾಯಿತು. ಜೈಪುರ ಗ್ರಾಮಾಂತರ ಸಂಸದೀಯ ಸ್ಥಾನವನ್ನು ಬಿಜೆಪಿ ಕಠಿಣ ಹೋರಾಟದ ನಂತರ ಗೆಲ್ಲಲು ಸಾಧ್ಯವಾಯಿತು.

ಕಿರೋಡಿ ಲಾಲ್​ ಮೀನಾ ಎರಡು ಬಾರಿ ಸಂಸದರಾಗಿದ್ದರು. ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅವರನ್ನು ಸವಾಯಿ ಮಾಧೋಪುರದಿಂದ ಕಣಕ್ಕಿಳಿಸಿತ್ತು.

Leave a Reply

Your email address will not be published. Required fields are marked *

error: Content is protected !!