Dr N Someshwara Column: ಅವರು ಸ್ವತಃ ಆಪರೇಶನ್ ಮಾಡಿಕೊಂಡರು !
ಒಂದು ವೇಳೆ ಇದೇ ಅಪೆಂಡಿಸೈಟಿಸ್ ವೈದ್ಯರಿಗೇ ಆದರೆ? ಅವರಿಗೆ ಶಸ್ತ್ರಚಿಕಿತ್ಸೆಯನ್ನು ನಡೆಸಲು ಮತ್ತೊಬ್ಬ ವೈದ್ಯನು ಇಲ್ಲದೇ ಹೋದರೆ? ಆಗ ಆ ವೈದ್ಯನಿಗೆ ಇರುವುದು ಒಂದೇ ದಾರಿ
Ashok Nayak
January 1, 2025
ಹಿಂದಿರುಗಿ ನೋಡಿದಾಗ
ಡಾ.ನಾ.ಸೋಮೇಶ್ವರ
ನಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ವರ್ಮಿಫಾರಂ ಅಪೆಂಡಿಕ್ಸ್ ಎಂಬ ಭಾಗವಿದೆ. ನಮ್ಮ ದೇಹದ ಯಾವ ಭಾಗ ಬೇಕಾದರೂ ಸೋಂಕಿಗೆ ಒಳಗಾಗಿ ಉರಿಯೂತದ ಲಕ್ಷಣಗಳನ್ನು ತೋರಬಹುದು. ಇದುವೇ ಅಪೆಂಡಿಸೈಟಿಸ್! ಸಕಾಲದಲ್ಲಿ ಚಿಕಿತ್ಸೆಯನ್ನು ನೀಡದಿದ್ದರೆ, ಇದು ಸಿಡಿದು ಜೀವಹಾನಿಗೆ ಕಾರಣವಾಗಬಹುದು. ವೈದ್ಯಕೀಯ ಸವಲತ್ತುಗಳು ಹಾಗೂ ಶಸ್ತ್ರವೈದ್ಯರೇ ಇಲ್ಲದಂಥ ಸ್ಥಳಗಳಲ್ಲಿ ಹುಳುಗರುಳು ಉರಿಯೂತವಾದರೆ? ಅವರುಸಾಯುವುದು ಬಹುಶಃ ಅನಿವಾರ್ಯವಾಗಬಹುದು.
ಒಂದು ವೇಳೆ ಇದೇ ಅಪೆಂಡಿಸೈಟಿಸ್ ವೈದ್ಯರಿಗೇ ಆದರೆ? ಅವರಿಗೆ ಶಸ್ತ್ರಚಿಕಿತ್ಸೆಯನ್ನು ನಡೆಸಲು ಮತ್ತೊಬ್ಬ ವೈದ್ಯನು ಇಲ್ಲದೇ ಹೋದರೆ? ಆಗ ಆ ವೈದ್ಯನಿಗೆ ಇರುವುದು ಒಂದೇ ದಾರಿ. ಅವನು ಸಾಯಬೇಕು ಇಲ್ಲವೇ ಸ್ವಯಂ ಶಸ್ತ್ರಚಿಕಿತ್ಸೆಯನ್ನು ಮಾಡಿಕೊಳ್ಳಬೇಕು. ಅಂಥ ಸಂದರ್ಭವನ್ನು ಎದುರಿಸಿದ ವೈದ್ಯರು ಸ್ವಯಂ ಶಸ್ತ್ರಚಿಕಿತ್ಸೆಯನ್ನು (ಆಟೋ ಅಪೆಂಡಿಕ್ಟಮಿ) ಮಾಡಿಕೊಂಡ ಎರಡು ಅಪರೂಪದ ಘಟನೆಗಳು ವೈದ್ಯಕೀಯ ಇತಿಹಾಸದಲ್ಲಿ ಸಂಭವಿಸಿವೆ. ಅವುಗಳ ಬಗ್ಗೆ ಸ್ಥೂಲವಾಗಿ ತಿಳಿಯೋಣ.
ಉಭಯ ಶಸ್ತ್ರಚಿಕಿತ್ಸೆ: ಇವಾನ್ ಓ ನೀಲ್ ಕೇನ್ ಅಮೆರಿಕದ ಓರ್ವ ಶಸ್ತ್ರವೈದ್ಯ. ಈತನು 1880ರಿಂದ 1930 ರವರೆಗೆ, ಅಮೆರಿಕದ ಪೆನ್ಸಿಲ್ವೇನಿಯದಲ್ಲಿರುವ ಕೇನ್ ಸಮ್ಮಿತ್ ಆಸ್ಪತ್ರೆಯಲ್ಲಿ ಶಸ್ತ್ರವೈದ್ಯಕೀಯ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡಿದ. ಈತ ಪ್ರಧಾನವಾಗಿ ರೈಲ್ವೆ ಕಾರ್ಮಿಕರ ತುರ್ತು ಅಪಘಾತಗಳಿಗೆ ಸಂಬಂಧಿಸಿದ ಹಾಗೆ ಚಿಕಿತ್ಸೆಯನ್ನು ನೀಡುತ್ತಿದ್ದ. ಅನೇಕ ಸಂದರ್ಭಗಳಲ್ಲಿ ಎಲ್ಲಿ ಅಪಘಾತವಾಯಿತೋ, ಅಲ್ಲಿಯೇ ತಾತ್ಕಾಲಿಕ ಆಸ್ಪತ್ರೆಗಳನ್ನು ನಿರ್ಮಿಸಿ ಚಿಕಿತ್ಸೆಯನ್ನು ನೀಡಬೇಕಾಗುತ್ತಿತ್ತು. ಈ ರೈಲ್ವೆ ಆಸ್ಪತ್ರೆಗಳು ಸಾಂಪ್ರದಾಯಿಕ ಆಸ್ಪತ್ರೆ ಗಳಿಗಿಂತ ಭಿನ್ನವಾಗಿರುತ್ತಿದ್ದವು. ಒಳ್ಳೆಯ ಕೊಠಡಿಗಳಿರುತ್ತಿರಲಿಲ್ಲ. ಗಾಳಿ ಬೆಳಕು ಕಡಿಮೆ ಇರುತ್ತಿದ್ದವು. ಸ್ವಚ್ಛತೆಯ ಲವಲೇಶ ಕುರುಹೂ ಕಾಣುತ್ತಿರಲಿಲ್ಲ.
ನುರಿತ ಸಿಬ್ಬಂದಿಯಿರುತ್ತಿರಲಿಲ್ಲ. ಮುಖ್ಯವಾಗ ಸಮಗ್ರ ಅರಿವಳಿಕೆಯ (ಜನರಲ್ ಅನೆಸ್ತೀಸಿಯ) ಸೌಲಭ್ಯ ಇರುತ್ತಿರಲಿಲ್ಲ. ಹಾಗಾಗಿ ಕೇನ್, ತಾನು ಮಾಡುತ್ತಿದ್ದ ಬಹುಪಾಲು ಶಸ್ತ್ರಚಿಕಿತ್ಸೆಗಳನ್ನು, ಸ್ಥಳೀಯ ಅರಿವಳಿಕೆಯಲ್ಲಿಯೇ(ಲೋಕಲ್ ಅನೆಸ್ತೀಸಿಯ) ಮಾಡುತ್ತಿದ್ದ.
ಇದು ಹಲವು ಶಸ್ತ್ರವೈದ್ಯರಿಗೆ ನಂಬಲಸಾಧ್ಯವಾದ ವಿಚಾರವಾಗಿತ್ತು. ಸಮಗ್ರ ಅರಿವಳಿಕೆಯಲ್ಲಿ ಬಳಸುತ್ತಿದ್ದ ಈಥರಿನ ಮೇಲೆ ಅವನಿಗೆ ನಂಬಿಕೆಯಿರಲಿಲ್ಲ. ಅದರ ಬದಲು ನೋವೋಕೇನ್ (ಪ್ರೋಕೇನ್) ಎನ್ನುವ ಸ್ಥಳೀಯ ಅರಿವಳಿಕೆಯನ್ನೆ ಹೆಚ್ಚು ನಂಬುತ್ತಿದ್ದ. ನೋವೋಕೇನ್ ಬಳಸಿ, 4000ಕ್ಕೂ ಹೆಚ್ಚು ಹುಳುಗರುಳ ಛೇದನ ಶಸ್ತ್ರ ಚಿಕಿತ್ಸೆಗಳನ್ನು ನಡೆಸಿದ್ದ. ಇವಾನನಿಗೆ 60 ವರ್ಷಗಳಾಗಿದ್ದವು. ಆಗ ಅವನಿಗೆ ಹುಳುಗರುಳ ಉರಿಯೂತದ (ಅಪೆಂಡಿಸೈಟಿಸ್) ಲಕ್ಷಣಗಳು ಕಾಣಿಸಿಕೊಂಡವು. ಆಗ ಕೇನ್ ಆಸ್ಪತ್ರೆಯಲ್ಲಿಯೇ ಇದ್ದ ಅವನು, ಹುಳುಗರುಳ ಛೇದನಕ್ಕೆ ಸಮಗ್ರ ಅರಿವಳಿಕೆಗಿಂತ ಸ್ಥಳೀಯ ಅರಿವಳಿಕೆ ಶ್ರೇಷ್ಠ ಎನ್ನುವುದನ್ನು ವೈದ್ಯಕೀಯ ವಲಯಕ್ಕೆ ತೋರಲು ತನ್ನ ಮೇಲೆಯೇ ತಾನು ಹುಳುಗರುಳ ಛೇದನದ ಶಸ್ತ್ರಚಿಕಿತ್ಸೆಯನ್ನು ಮಾಡಿಕೊಳ್ಳಲು ನಿರ್ಧರಿಸಿದ.
1921ರ ಫೆಬ್ರವರಿ 15. ಶಸ್ತ್ರಚಿಕಿತ್ಸೆಗೆ ಅಗತ್ಯವಾದ ಎಲ್ಲ ಉಪಕರಣಗಳನ್ನು ಇವಾನ್ ಸಿದ್ಧಪಡಿಸಿಕೊಂಡ. ಶಸ್ತ್ರ ಚಿಕಿತ್ಸಾ ಮೇಜಿನ ಮೇಲೆ ಮಲಗಿಕೊಂಡ. ಕ್ರಿಮಿನಾಶಕಗಳನ್ನು ಬಳಸಿ ತನ್ನ ಉದರದ ಬಲಮೂಲೆಯ ಪ್ರದೇಶ ವನ್ನು ಶುದ್ಧೀಕರಿಸಿದ. ತನ್ನ ಜತೆಯಲ್ಲಿ ನಂಬುಗೆಯ ಸಹಾಯಕ ವೈದ್ಯಕೀಯ ಸಿಬ್ಬಂದಿಯನ್ನು ಹಾಗೂ ಸಹಾಯಕ ವೈದ್ಯರನ್ನು ಇರಿಸಿಕೊಂಡ. ಅಕಸ್ಮಾತ್ ಶಸ್ತ್ರಚಿಕಿತ್ಸೆಯು ಅನಿರೀಕ್ಷಿತ ಅವಘಡಕ್ಕೆ ತುತ್ತಾದರೆ, ನೆರವಿಗೆ ಇರಲೆಂದು ಈ ಪೂರ್ವಸಿದ್ಧತೆಯು ನಡೆದಿತ್ತು.
ಇವಾನ್, ನೋವೋಕೇನ್ ಸ್ಥಳೀಯ ಅರಿವಳಿಕೆಯನ್ನು ತನ್ನ ಉದರದ ಮೂಲೆಯ ಪ್ರದೇಶದಲ್ಲಿ ಚುಚ್ಚಿ, ಆಭಾಗದಲ್ಲಿರುವ ಸಂವೇದನೆಯನ್ನು ಸಮಗ್ರವಾಗಿ ಅಳಿಸಿದ. ಮುಖ್ಯವಾಗಿ ಎಲ್ಲಿ ತಾನು ಉದರವನ್ನು ಸೀಳಿ ಹುಳು ಗರುಳನ್ನು ತೆಗೆಯಬೇಕಾಗಿತ್ತೋ, ಆ ಪ್ರದೇಶದಲ್ಲಿ ಸ್ಪರ್ಶವು ಸ್ವಲ್ಪವೂ ಇರದಂತೆ ಎಚ್ಚರವಹಿಸಿದ. ಸ್ಕಾ ಲ್ಪೆಲ್ ತೆಗೆದುಕೊಂಡ. ‘ಮ್ಯಾಕ್‌ಬರ್ನಿ ಛೇದನ’ವನ್ನು ಮಾಡಿದ (ಚಾರ್ಲ್ಸ್ ಮ್ಯಾಕ್ ಬರ್ನಿ ಎಂಬ ಅಮೆರಿಕನ್ ಶಸ್ತ್ರ ವೈದ್ಯನು 1894ರಲ್ಲಿ ಹುಳುಗರುಳ ಛೇದನವನ್ನು ಸರಳವಾಗಿಸುವ ಸ್ಥಳವನ್ನು ನಿಖರವಾಗಿ ಗುರುತಿಸಿದ್ದ). ಚರ್ಮ ವನ್ನು, ಅದರ ಕೆಳಗಿದ್ದ ಕೊಬ್ಬಿನ ಪದರವನ್ನು, ಅದರ ಕೆಳಗಿದ್ದ ಸ್ನಾಯು ಪದರಗಳನ್ನು ಕ್ರಮಬದ್ಧವಾಗಿ ಸೀಳಿದ.
ಅವನು ಮಲಗಿದ್ದ ಭಂಗಿಯ ಕಾರಣ, ಶಸ್ತ್ರಚಿಕಿತ್ಸಾ ಪ್ರದೇಶವು ಪರಿಪೂರ್ಣವಾಗಿ ಕಾಣುತ್ತಿರಲಿಲ್ಲ. ಹಾಗಾಗಿ ಈ ಎಲ್ಲ ಛೇದನಗಳನ್ನು ಆತ ಕೇವಲ ಸ್ಪರ್ಶಜ್ಞಾನದಿಂದ ಮಾಡಿದ. ಉರಿಯೂತಕ್ಕೆ ಒಳಗಾಗಿ ಊದಿಕೊಂಡಿದ್ದ ಹುಳುಗರುಳನ್ನು ತನ್ನ ಬೆರಳುಗಳಿಂದಲೇ ಗುರುತಿಸಿದ. ಅದನ್ನು ನೇರವಾಗಿ ನೋಡಲು ಸಾಧ್ಯವಿರಲಿಲ್ಲ. ಅವನು ಅದಾಗಲೆ ೪,೦೦೦ಕ್ಕೂ ಹೆಚ್ಚು ಹುಳುಗರುಳ ಛೇದನವನ್ನು ಮಾಡಿ ಮುಗಿಸಿದ್ದ ಕಾರಣ,
ಅವನಿಗೆ ಆ ಪ್ರದೇಶದ ಪ್ರತಿಯೊಂದು ರಚನೆಯೂ ಪರಿಚಿತವಾಗಿತ್ತು. ಛೇದಿಸಬೇಕಾದ ಹುಳುಗರುಳ ಭಾಗವನ್ನುಸ್ಪರ್ಶದಿಂದಲೇ ಗುರುತಿಸಿದ, ದಾರದಿಂದ ಬಿಗಿದ, ಛೇದಿಸಿದ.
ಸಿಡಿಯಲು ಸಿದ್ಧವಾಗಿದ್ದ ಹುಳುಗರುಳನ್ನು ಪ್ರತ್ಯೇಕಿಸಿ ಪಕ್ಕಕ್ಕೆ ತೆಗೆದಿಟ್ಟ. ನಂತರ ಒಂದೊಂದೇ ಪದರವನ್ನು ಹೊಲಿಯಲಾರಂಭಿಸಿದ. ಚರ್ಮದ ಮೇಲಿದ್ದ ಸೀಳನ್ನು ಸ್ವಸ್ಥವಾಗಿ ಹೊಲಿದ ಮೇಲೆ ನಿರುಮ್ಮಳನಾದ. ಕೇನ್ ಮಾಡಿದ ಸ್ವ-ಶಸ್ತ್ರಚಿಕಿತ್ಸೆಯು ವೈದ್ಯಕೀಯ ರಂಗದಲ್ಲಿ ಒಂದು ಹೊಸ ದಾಖಲೆಯನ್ನು ಸೃಜಿಸಿತು.
ಹುಳುಗರುಳ ಛೇದನಕ್ಕೆ ಸ್ಥಳೀಯ ಅರಿವಳಿಕೆ ಸಾಕಾಗುತ್ತದೆ ಎನ್ನುವುದನ್ನು ನಿರೂಪಿಸಿತು. ಶಸ್ತ್ರವೈದ್ಯರಿಗೆ ಹದ್ದಿನ ಕಣ್ಣು, ಸಿಂಹದ ಗುಂಡಿಗೆ ಹಾಗೂ ಹೆಣ್ಣಿನ ಬೆರಳುಗಳಿರಬೇಕಂತೆ! ಇವಾನನಿಗೆ ಸಿಂಹದ ಗುಂಡಿಗೆಯಿತ್ತು, ಅಪಾರಅನುಭವವಿತ್ತು. ಹಾಗಾಗಿ ಅವನು ಅತ್ಯಂತ ಆತ್ಮವಿಶ್ವಾಸದಿಂದ ತನ್ನ ಶಸ್ತ್ರಚಿಕಿತ್ಸೆಯನ್ನು ತಾನೇ ಪೂರ್ಣಗೊಳಿಸಿದ. 1932. ಇವಾನನಿಗೆ 70 ವರ್ಷಗಳ ವಯಸ್ಸು. ಅವನಿಗೆ ತೊಡೆಸಂದಿನ ಅಂಡವಾಯು (ಇಂಗ್ವೈನಲ್ ಹರ್ನಿಯ) ಆಗಿತ್ತು. ಆಗಲೂ ಅವನು ಸ್ವಯಂ-ಶಸ್ತ್ರಚಿಕಿತ್ಸೆಯನ್ನು ಮಾಡಿಕೊಂಡ.
ಸಮಗ್ರ ಅರಿವಳಿಕೆಯ ಗೊಡವೆಗೆ ಹೋಗದೆ ಸ್ಥಳೀಯ ಅರಿವಳಿಕೆ, ನೋವೋಕೇನ್ ಅನ್ನೇ ಬಳಸಿದ. ಹೀಗೆ, ಕೇನ್ ಎರಡು ಸಲ ಸ್ವಯಂ-ಶಸ್ತ್ರಚಿಕಿತ್ಸೆಗಳನ್ನು ಮಾಡಿಕೊಂಡ ಅಪರೂಪದ ವ್ಯಕ್ತಿಯಾಗಿ ವೈದ್ಯಕೀಯ ಇತಿಹಾಸದಲ್ಲಿ ದಾಖಲಾದ. ಲಿಯೋನಿಡ್ ರೋಗೋಜ಼ೋವ್: ಇವಾನ್ ಸ್ವತಃ ಮಾಡಿಕೊಂಡ ಹುಳುಗರುಳ ಛೇದನಕ್ಕಿಂತ ಸಂಪೂರ್ಣ ಭಿನ್ನ ಪರಿಸರದ, ಅಸಹಾಯಕ ಸ್ಥಿತಿಯಲ್ಲಿ, ಮತ್ತೋರ್ವ ಶಸ್ತ್ರವೈದ್ಯನು ಸ್ವಯಂ ಹುಳುಗರುಳ ಛೇದನವನ್ನು ಮಾಡಿಕೊಂಡ ಕಥೆ ಮತ್ತಷ್ಟು ರೋಚಕವೂ, ಭಯಾನಕವೂ ಆಗಿದೆ.
ಲಿಯೋನಿಡ್ ಐವನೋವಿಚ್ ರೋಗೋಜ಼ೋವ್ ರಷ್ಯಾದ ಓರ್ವ ಶಸ್ತ್ರವೈದ್ಯನಾಗಿದ್ದ. ದಕ್ಷಿಣ ಧ್ರುವದಲ್ಲಿರುವಅಂಟಾರ್ಕ್ಟಿಕ ಖಂಡದಲ್ಲಿ ‘ನೋವೋಲಾಜ಼ರೆವಸ್ಕಾಯ’ ಎಂಬ ಹೆಸರಿನ ಕೇಂದ್ರವನ್ನು ರಷ್ಯಾ 1961ರಲ್ಲಿ ಸ್ಥಾಪಿಸಿತ್ತು. ಈ ಕೇಂದ್ರವು ಅಂಟಾರ್ಕ್ಟಿಕದಲ್ಲಿ ಜನವಸತಿ ಇಲ್ಲದ ಏಕಾಂತ ಸ್ಥಳದಲ್ಲಿತ್ತು. ಈಗ ರಷ್ಯ ತನ್ನ ಆರನೆಯ ತಂಡವನ್ನು ದಕ್ಷಿಣ ಧ್ರುವಕ್ಕೆ ಕಳುಹಿಸಲಿತ್ತು. ರೋಗೋಜ಼ೋವ್ ಆ ತಂಡದ ವೈದ್ಯನಾಗಿ ಸೇರಿಕೊಂಡ.
1961ರ ಏಪ್ರಿಲ್ 29. ರೋಗೋಜ಼ೋವನಿಗೆ ಜ್ವರ, ವಾಕರಿಕೆ, ವಾಂತಿ, ವಿಪರೀತ ನಿಶ್ಶಕ್ತಿ, ಜತೆಗೆ ಉದರದಬಲಮೂಲೆಯಲ್ಲಿ ತೀವ್ರಸ್ವರೂಪದ ನೋವು ಕಾಣಿಸಿಕೊಂಡಿತು. ನುರಿತ ವೈದ್ಯನಾಗಿದ್ದ ಅವನಿಗೆ ತನಗೆಹುಳುಗರುಳ ಉರಿಯೂತವಾಗಿದೆ ಎಂದು ತಿಳಿಯಲು ಕಷ್ಟವಾಗಲಿಲ್ಲ. ಆದರೂ ಲಭ್ಯವಿದ್ದ ಲಕ್ಷಣ ಶಾಮಕಔಷಧಗಳನ್ನು ಸೇವಿಸಿದ. ಆದರೆ 24 ಗಂಟೆಗಳ ಅವಧಿಯಲ್ಲಿ ಅವನ ರೋಗಲಕ್ಷಣಗಳು ಉಲ್ಬಣವಾದವು. ಯಾವಕ್ಷಣದಲ್ಲಾದರೂ ಅಪೆಂಡಿಕ್ಸ್ ಸಿಡಿಯಬಹುದು ಎಂಬ ಅನುಮಾನ ತೀವ್ರವಾಯಿತು. ರಷ್ಯನ್ ವಿಜ್ಞಾನಿಗಳ ನಡುವೆಅವನೊಬ್ಬನೇ ವೈದ್ಯನಾಗಿದ್ದ. ಇತರ ದೇಶಗಳ ಶಿಬಿರದಿಂದ ಸಹಾಯ ಕೇಳೋಣವೆಂದರೆ, ಅಂಥ ಶಿಬಿರಗಳುಸಮೀಪದಲ್ಲಿ ಎಲ್ಲಿಯೂ ಇರಲಿಲ್ಲ. ಮತ್ತೊಂದು ರಷ್ಯನ್ ಕೇಂದ್ರವು 1000 ಕಿ.ಮೀ. ದೂರದಲ್ಲಿತ್ತು. ಮುಖ್ಯವಾಗಿಅವನನ್ನು ಸಾಗಿಸಲು ಯಾವುದೇ ವಿಮಾನವಿರಲಿಲ್ಲ. ಎಲ್ಲಕ್ಕೂ ಮಿಗಿಲಾಗಿ ಹೊರಗಿನಿಂದ ವೈದ್ಯಕೀಯ ನೆರವನ್ನುಯಾಚಿಸಲು ಸಮಯವಿರಲಿಲ್ಲ. ರೋಗೋಜ಼ೋವನ ಹುಳುಗರುಳು ಸಿಡಿಯುವ ಹಂತದಲ್ಲಿದ್ದ ಕಾರಣ, ಅದೊಂದು ತುರ್ತುಸ್ಥಿತಿಯಾಗಿತ್ತು. ಹೀಗಾಗಿ, ಅದು ಸಿಡಿಯುವ ಮೊದಲೇ ಆತ ಸ್ವತಃ ಶಸ್ತ್ರಚಿಕಿತ್ಸೆಯನ್ನು ಮಾಡಿಕೊಳ್ಳಲೇ ಬೇಕಿತ್ತು, ಇಲ್ಲದಿದ್ದರೆ ಈ ಹಿಮಸ್ಮಶಾನದಲ್ಲಿ ಸಮಾಧಿಯಾಗಬೇಕಾಗಿತ್ತು.
1961ರ ಮೇ 1, ಮಧ್ಯಾಹ್ನ 1 ಗಂಟೆಯ ಸಮಯ. ರೋಗೋಜ಼ೋವ್ ಕೇಂದ್ರದಲ್ಲಿದ್ದ ವೈದ್ಯಕೀಯ ಕೊಠಡಿಗೆಬಂದ. ಶಸಚಿಕಿತ್ಸೆಗೆ ಅಗತ್ಯವಾದ ಎಲ್ಲ ಉಪಕರಣಗಳನ್ನು ಕ್ರಿಮಿಶುದ್ಧೀಕರಿಸಿಕೊಂಡ. ಹಾಗೆಯೇ ಕೆಲವು ಕನ್ನಡಿಗಳನ್ನು ಆಯ್ಕೆ ಮಾಡಿಕೊಂಡ. ಕೇನ್ ಇವಾನ್ ಯಾವುದೇ ಕನ್ನಡಿಯನ್ನು ಬಳಸದೇ ಹಾಗೆಯೇ ಶಸ್ತ್ರಚಿಕಿತ್ಸೆಯನ್ನು ಮಾಡಿಕೊಂಡಿದ್ದ. ಅಂಥ ಭಂಡಧೈರ್ಯ ರೋಗೋಜ಼ೋವನಿಗೆ ಇರಲಿಲ್ಲ. ಹಾಗಾಗಿ ಕನ್ನಡಿಗಳನ್ನು ಸಿದ್ದಪಡಿಸಿಕೊಂಡ. ನೆರವಿಗೆ ಕಾರಿನ ಚಾಲಕ ಹಾಗೂ ಹವಾಮಾನ ತಜ್ಞನನ್ನು ಕರೆಯಿಸಿಕೊಂಡು ಒಬ್ಬರಿಗೆ ಕನ್ನಡಿಯನ್ನು ಹಿಡಿದುಕೊಳ್ಳಲು, ಮತ್ತೊಬ್ಬರಿಗೆ ಕೇಳಿದ ಉಪಕರಣವನ್ನು ಎತ್ತಿಕೊಡಲು ಹೇಳಿದ. ಹಾಸಿಗೆಯ ಮೇಲೆ ಮಲಗಿಕೊಂಡ.
ಶಸ್ತ್ರಚಿಕಿತ್ಸೆಯ ಕ್ಷೇತ್ರವನ್ನು ಕ್ರಿಮಿಶುದ್ಧೀಕರಿಸಿದ. ನಂತರ ಸ್ಥಳೀಯ ಅರಿವಳಿಕೆಯಾದ ನೋವೋಕೇನನ್ನು, ಉದರ ಛೇದನ ಮಾಡಬೇಕಾಗಿದ್ದ ಸ್ಥಳದಲ್ಲಿ ಸಾಕಷ್ಟು ಚುಚ್ಚಿದ. ಆ ಪ್ರದೇಶವು ಮರಗಟ್ಟಿತು. ಸ್ಕಾ ಲ್ಪೆಲ್ ತೆಗೆದುಕೊಂಡು ೧೦-೧೨ ಸೆಂ.ಮೀ. ಉದ್ದದ ಓರೆ ಛೇದನವನ್ನು ಮಾಡಿದ. ಎಲ್ಲ ಪದರಗಳನ್ನು ಬಿಡಿಸಿಕೊಂಡು ಉದರವನ್ನು ಪ್ರವೇಶಿಸಿದ. ಅಲ್ಲಿ ಮೂಗರುಳು ಹಾಗೂ ಹುಳುಗರುಳನ್ನು ಗುರುತಿಸುವಲ್ಲಿ ಸ್ವಲ್ಪ ಗೊಂದಲವಾಯಿತು.
ಅಕಸ್ಮಾತ್ ಮೂಗರುಳನ್ನು ಛೇದಿಸಿ ಬಿಟ್ಟ! ತಕ್ಷಣವೇ ತಪ್ಪನ್ನು ಅರಿತು, ಛೇದಿಸಿದ್ದ ಮೂಗರುಳನ್ನು ಮತ್ತೆ ಹೊಲಿದ. ನಂತರ ಹುಳುಗರುಳನ್ನು ಗುರುತಿಸಿ ಅದನ್ನು ಛೇದಿಸಿದ. ಹುಳುಗರುಳು ಕೆಂಪಗೆ ಊದಿಕೊಂಡು ಯಾವ ಕ್ಷಣ ಬೇಕಾದರೂ ಸಿಡಿಯಲು ಸಿದ್ಧವಾಗಿತ್ತು. ರೋಗೋಜ಼ೋವ್‌ನನ್ನು ತಲೆಸುತ್ತು ಮತ್ತು ವಾಕರಿಕೆ ಒಮ್ಮೆಲೆ ಆವರಿಸಿತು. ತಕ್ಷಣವೇ ಎಲ್ಲ ಚಟುವಟಿಕೆಗಳನ್ನು ಸುಮಾರು 30 ನಿಮಿಷ ನಿಲ್ಲಿಸಿದ, ಸಾವರಿಸಿಕೊಂಡ. ನಂತರ ಶಸ್ತ್ರಚಿಕಿತ್ಸೆ ಯನ್ನು ಮುಂದುವರಿಸಿದ. ಪದರಗಳನ್ನೆಲ್ಲ ಸರಿಯಾಗಿ ಹೊಲಿದ. ಚರ್ಮಸೀಳನ್ನು ಹೊಲಿದು ಮುಗಿಸುವಾಗ 4 ಗಂಟೆಯ ಸಮಯ. ಹೀಗೆ ತನ್ನ ಮೇಲೆ ತಾನೇ ಯಶಸ್ವಿ ಹುಳುಗರುಳ ಛೇದನ ಶಸ್ತ್ರಚಿಕಿತ್ಸೆಯನ್ನು ಮಾಡಿಮುಗಿಸಲು 4 ಗಂಟೆಗಳನ್ನು ತೆಗೆದುಕೊಂಡಿದ್ದ!
ಪ್ರತಿಜೈವಿಕ ಔಷಧಗಳು, ನೋವು ನಿವಾರಕ ಗುಳಿಗೆಗಳೆಲ್ಲವನ್ನು ತೆಗೆದುಕೊಂಡ. 5 ದಿನಗಳಲ್ಲಿ ಜ್ವರವೂ ಪೂರ್ಣ ನಿಂತಿತು. 7ನೇ ದಿನ ಹೊಲಿಗೆಗಳನ್ನು ಬಿಚ್ಚಿದ. 2 ವಾರಗಳವರೆಗೆ ವಿಶ್ರಾಂತಿ ತೆಗೆದುಕೊಂಡ. ನಂತರ ಪೂರ್ಣ ಚೇತರಿಸಿಕೊಂಡು ಕೆಲಸಕ್ಕೆ ಮರಳಿದ. ರೋಗೋಜ಼ೋವನ ಜತೆಯಲ್ಲಿದ್ದವರು ಅವನು ಸ್ವತಃ ಶಸ್ತ್ರಚಿಕಿತ್ಸೆ ಮಾಡಿಕೊಳ್ಳುವ ಪ್ರತಿಯೊಂದು ಹಂತದ ಛಾಯಾಚಿತ್ರಗಳನ್ನು ತೆಗೆದಿದ್ದರು.
ಈ ಚಿತ್ರಗಳು ರಷ್ಯಾವನ್ನು ತಲುಪಿ ಅಲ್ಲಿನ ಜನಸಾಮಾನ್ಯರನ್ನು ಆಶ್ಚರ್ಯದಲ್ಲಿ ಮುಳುಗಿಸಿತು. ರೋಗೋಜ಼ೋವವೈದ್ಯಕೀಯ ಸಾಹಸ ಮತ್ತು ಧೈರ್ಯಕ್ಕೆ ಅತ್ಯುತ್ತಮ ಉದಾಹರಣೆಯಾದ. ರೋಗೋ ಜ಼ೋವ್ ಹೇಗೆ ದಕ್ಷಿಣಧ್ರುವದ ಮಂಜಿನ ನಡುವೆ ಸಿಲುಕಿ, ಅಸಹಾಯಕನಾಗಿ ತನ್ನ ಮೇಲೆ ತಾನೇ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಬೇಕಾದಂಥ ತುರ್ತು ಸಂದರ್ಭ ಒದಗಿತೋ, ಅಂಥ ತುರ್ತು ಸಂದರ್ಭವು ಬಾಹ್ಯಾಕಾಶ ಯಾನದಲ್ಲೂ ಸಂಭವಿಸುವ ಸಾಧ್ಯತೆ ಯನ್ನು ತಳ್ಳಿಹಾಕಲಾಗುವುದಿಲ್ಲ. ಹಾಗಾಗಿ ಇಂದಿನ ಬಾಹ್ಯಾಕಾಶ ಯಾತ್ರಿಗಳಿಗೂ ತುರ್ತು ವೈದ್ಯಕೀಯದ ಬಗ್ಗೆ ಸಂಪೂರ್ಣ ತರಬೇತಿಯನ್ನು ನೀಡಿರುತ್ತಾರೆ.
ಇದನ್ನೂ ಓದಿ: Dr N Someshwara Column: ಎರಡು ಅಲಗಿನ ಖಡ್ಗ ಫೀನಾಲ್ !