Yeshwanth Sinha Column: ಭಾರತದಲ್ಲಿ ಜಾತ್ಯಾತೀತತೆ ಸತ್ತುಹೋಗಿದೆಯೇ ?
ಸಂವಿಧಾನದ ಪ್ರಕಾರ, ಭಾರತವು ಒಂದು ಜಾತ್ಯತೀತ ರಾಷ್ಟ್ರ. ಆದರೆ ನಮ್ಮಲ್ಲಿ ಜಾತ್ಯತೀತತೆ ಸತ್ತು ಹೋಗಿದೆಯೇ ಮತ್ತು ಭಾರತವು ಕೊನೆಗೂ ಒಂದು ಹಿಂದೂ ರಾಷ್ಟ್ರ ವಾಗಿದೆಯೇ ಎಂಬುದು ನನಗೆ ಗೊತ್ತಿಲ್ಲ. ಆದರೆ, ಜಾತ್ಯತೀತತೆಯಲ್ಲಿ ಮತ್ತು ಸಂವಿಧಾನ ದಲ್ಲಿ ನಂಬಿಕೆ ಇರುವವರೆಲ್ಲರೂ ಗಾಢನಿದ್ರೆ ಯಲ್ಲಿ ಇರುವಂತೆ ಭಾಸವಾಗುತ್ತಿದೆ.

ಕೇಂದ್ರದ ಮಾಜಿ ವಿದೇಶಾಂಗ ಸಚಿವರು, ಲೇಖಕ ಯಶವಂತ ಸಿನ್ಹಾ

ವಿಷಾದಯೋಗ
ಯಶವಂತ್ ಸಿನ್ಹಾ
ನಮ್ಮ ಸಂವಿಧಾನದ ಪ್ರಕಾರ, ಭಾರತವು ಒಂದು ಜಾತ್ಯತೀತ ರಾಷ್ಟ್ರ. ಈ ತತ್ವವು ಸಂವಿಧಾನದ 25ರಿಂದ 28ರವರೆಗಿನ ವಿಧಿಗಳಲ್ಲಿ ಪ್ರತಿಪಾದಿಸಲ್ಪಟ್ಟಿದೆ. ಇದನ್ನು ಮತ್ತೊಂದು ರೀತಿಯಲ್ಲಿ ಹೇಳುವು ದಾದರೆ, ಭಾರತ ಎಂಬ ರಾಷ್ಟ್ರಕ್ಕೆ ಯಾವುದೇ ಧರ್ಮವಿಲ್ಲ. ಹೀಗಾಗಿ, ಅದು ಎಲ್ಲ ಧರ್ಮ ಗಳನ್ನೂ ಸಮಾನವಾಗಿ ಪರಿಗಣಿಸುವುದು ಅಗತ್ಯವಾಗಿದೆ ಮತ್ತು ಅದು ಯಾವುದೇ ಧರ್ಮವನ್ನು ಉತ್ತೇಜಿ ಸಲು/ಪ್ರವರ್ತಿಸಲು/ಪ್ರಚಾರ ಮಾಡಲು ಸಾಧ್ಯವಿಲ್ಲ. ಮೂಲ ಸಂವಿಧಾನದಲ್ಲಿ ಜಾತ್ಯತೀ ತತೆ ಎಂಬ ಪದವನ್ನು ಉಲ್ಲೇಖಿಸಿರಲ್ಲವಾದರೂ, ಈ ಉಪ ಬಂಧಗಳು ಅಥವಾ ನಿಬಂಧನೆಗಳನ್ನು ಸಂವಿಧಾನದಲ್ಲಿ ಅಳವಡಿಸುವ ಮೂಲಕ, ಭಾರತವು ಯಾವುದೇ ಅಸ್ಪಷ್ಟತೆ ಅಥವಾ ಸಂದೇಹಕ್ಕೆ ಆಸ್ಪದವಿಲ್ಲದೆ ಒಂದು ಜಾತ್ಯತೀತ ರಾಷ್ಟ್ರವಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿತು.
ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಮಾಡಲಾದ 42ನೇ ತಿದ್ದುಪಡಿಯ ಮೂಲಕ ‘ಜಾತ್ಯತೀತ’ ಎಂಬ ಪರಿಭಾಷೆಯನ್ನು ಸಂವಿಧಾನದ ಪೀಠಿಕೆಯಲ್ಲಿ ಸೇರಿಸಲಾಯಿತು. ಆ ತಿದ್ದುಪಡಿಯ ಸಿಂಧು ತ್ವವನ್ನು ಸರ್ವೋಚ್ಚ ನ್ಯಾಯಾಲಯವು ಇತ್ತೀಚೆಗೆ ಎತ್ತಿ ಹಿಡಿದಿದೆ. ತುರ್ತುಪರಿಸ್ಥಿತಿಯ ಅವಧಿ ಯಲ್ಲಿ ಇದನ್ನು ಸಂವಿಧಾನದಲ್ಲಿ ಸೇರಿಸಲಾಗಿದ್ದರೂ, ಅದು ಹಾಗೆ ಕಳಂಕಿತವಾಗೇನೂ ಇರಲಿಲ್ಲ. ಆದ್ದರಿಂದ, ಭಾರತವು ಒಂದು ‘ದೇವಪ್ರಭುತ್ವದ ರಾಷ್ಟ್ರ’ವಲ್ಲ ಮತ್ತು ಹಾಗೆ ಆಗಲು ಸಾಧ್ಯವೂ ಇಲ್ಲ.
ಇದನ್ನೂ ಓದಿ: Rangaswamy Mookanahalli Column: ಹಣಕಾಸು ನಿರ್ವಹಣೆ ಬಹಳ ಮುಖ್ಯ !
ಈಗ, ಭಾರತದಲ್ಲಿನ ಜಾತ್ಯತೀತತೆಯ ಸ್ಥಿತಿಗತಿಯನ್ನು ಅವಲೋಕಿಸೋಣ. ಇದು 1951ರ ಕಾಲ ಘಟ್ಟದ ಮಾತು. ರಾಜೇಂದ್ರ ಪ್ರಸಾದರು ಭಾರತದ ರಾಷ್ಟ್ರಪತಿಯಾಗಿದ್ದರು ಮತ್ತು ಜವಾಹರ ಲಾಲ್ ನೆಹರು ಅವರು ಪ್ರಧಾನ ಮಂತ್ರಿಯಾಗಿದ್ದರು. ಆಗ ಗುಜರಾತಿನ ಸೌರಾಷ್ಟ್ರ ಪ್ರದೇಶದಲ್ಲಿ ಸೋಮ ನಾಥ ದೇವಾಲಯವನ್ನು ಮರುನಿರ್ಮಿಸಲಾಗಿತ್ತು ಮತ್ತು ಅದು ಉದ್ಘಾಟನೆಗೆ ಸಿದ್ಧವಾಗಿತ್ತು.
ಸೌರಾಷ್ಟ್ರದ ರಾಜಪ್ರಮುಖರು ಈ ಮಂದಿರವನ್ನು ಉದ್ಘಾಟಿಸಲು ರಾಜೇಂದ್ರ ಪ್ರಸಾದರನ್ನು ಆಹ್ವಾನಿಸಿದ್ದರು. ಹೀಗಾಗಿ ಪ್ರಧಾನಿಯವರಿಗೆ ಪತ್ರವೊಂದನ್ನು ಬರೆದ ರಾಷ್ಟ್ರಪತಿಗಳು, “ಮಂದಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲು ನನ್ನನ್ನು ಆಹ್ವಾನಿಸಲಾಗಿದೆ ಹಾಗೂ ಈ ಕಾರ್ಯ ಕ್ರಮದಲ್ಲಿ ಭಾಗವಹಿಸುವುದಕ್ಕೆ ಸಂಬಂಿಇ ನನಗೇನೂ ಅಭ್ಯಂತರವಿಲ್ಲ" ಎಂದು ಹೇಳಿಕೊಂಡಿ ದ್ದರು.
ಈ ಪತ್ರಕ್ಕೆ ಅಂದೇ ಉತ್ತರಿಸಿದ ನೆಹರು, “ಸೋಮನಾಥ ಮಂದಿರದ ಈ ಭವ್ಯ ಉದ್ಘಾಟನೆಯಲ್ಲಿ ಸ್ವತಃ ರಾಷ್ಟ್ರಪತಿಗಳು ಪಾಲ್ಗೊಳ್ಳುವುದು/ತೊಡಗಿಸಿಕೊಳ್ಳುವುದು ನನಗೆ ಅಷ್ಟೇನೂ ಸರಿಯೆಂದು ಕಾಣುತ್ತಿಲ್ಲ" ಎಂದು ಹೇಳಿಕೊಂಡಿದ್ದರು. ತರುವಾಯದಲ್ಲಿ ಈ ವಿಷಯದ ಕುರಿತಾಗಿ ಅವರಿಬ್ಬರ ನಡುವೆ ಹೀಗೆಯೇ ಪತ್ರ ವ್ಯವಹಾರ ನಡೆಯಿತು ಮತ್ತು ಅದರಲ್ಲಿ ಕೊನೆಗೆ ಜಯಗಳಿಸಿದ್ದು ರಾಷ್ಟ್ರ ಪತಿ ರಾಜೇಂದ್ರ ಪ್ರಸಾದರೇ!
ಹಾಗೆ ನೋಡಿದರೆ, ಸದರಿ ಉದ್ಘಾಟನಾ ಸಮಾರಂಭಕ್ಕಾಗಿ 5 ಲಕ್ಷ ರುಪಾಯಿಗಳ ಅನುದಾನ ನೀಡಿ ದ್ದಕ್ಕಾಗಿ ಪ್ರಧಾನಿ ನೆಹರು ಅವರು ಅಂದಿನ ಸೌರಾಷ್ಟ್ರ ಸರಕಾರವನ್ನು ಆಕ್ಷೇಪಿಸಿದ್ದೂ ಉಂಟು. ನೆಹರು ಮಾಡಿದ ಸಾಕಷ್ಟು ಕೆಲಸಗಳು ಟೀಕೆಗೆ ಗುರಿಯಾಗಿರಬಹುದು, ಆದರೆ ಅವರೊಬ್ಬ ಬದ್ಧತೆ ಯುಳ್ಳ ಜಾತ್ಯತೀತವಾದಿ ಆಗಿದ್ದರು ಎಂಬುದಂತೂ ಸತ್ಯ. ಧರ್ಮವನ್ನು ರಾಜಕಾರಣದೊಂದಿಗೆ ಅಥವಾ ಸರಕಾರದೊಂದಿಗೆ ಬೆರೆಸುವ ಕಸರತ್ತನ್ನು ವಿರೋಧಿಸುತ್ತಿದ್ದ ಅವರು, ನಮ್ಮ ದೇಶದ ಸಂವಿಧಾನವನ್ನು ಅಕ್ಷರಶಃ ದಾಖಲೆಯಲ್ಲಿ ಮತ್ತು ವಾಸ್ತವದಲ್ಲಿ ಅನುಸರಿಸುವಂತಾಗ ಬೇಕು ಎಂದು ಬಯಸಿದ್ದರು.
ಇಷ್ಟೆ ಪೀಠಿಕೆಯನ್ನು ನೀಡಿದ್ದೇಕೆ ಎಂಬುದು ನಿಮಗೆ ಈಗಾಗಲೇ ಗೊತ್ತಾಗಿರಬಹುದು. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾಕುಂಭಮೇಳವು ಇತ್ತೀಚೆಗಷ್ಟೇ ಸಂಪನ್ನಗೊಂಡಿತು ಅಲ್ಲವೇ? ತಮಾಷೆಯೆಂದರೆ ಇದನ್ನೊಂದು ಅಧಿಕೃತ/ಸರಕಾರಿ ಕಾರ್ಯ ಕ್ರಮದ ರೀತಿಯ ಆಚರಿಸಲಾಯಿತು; ಅಂದರೆ, ಉತ್ತರ ಪ್ರದೇಶದ ಸರಕಾರ ಮಾತ್ರವಲ್ಲದೆ, ಕೇಂದ್ರ ಸರಕಾರ ಕೂಡ ಇದಕ್ಕೆ ಒತ್ತಾಸೆಯಾಗಿ ನಿಂತಿತು, ಅದರಲ್ಲಿ ಪಾಲ್ಗೊಂಡಿತು ಮತ್ತು ಆ ಕಾರ್ಯ ಕ್ರಮಕ್ಕಾಗಿ ದೊಡ್ಡ ಮೊತ್ತದ ಹಣವನ್ನೇ ಖರ್ಚು ಮಾಡಿತು!
ನಿಮ್ಮಲ್ಲಿ ಬಹುತೇಕರಿಗೆ ಗೊತ್ತಿರುವಂತೆ, ಜನಗಣತಿಯಂಥ ಬೃಹತ್ ಕಾರ್ಯವನ್ನು ನಾವು ಹಲವು ವರ್ಷಗಳಿಂದ ಮುಂದೂಡಿಕೊಂಡೇ ಬಂದಿದ್ದೇವೆ. ಆದರೆ, ಉತ್ತರ ಪ್ರದೇಶ ಸರಕಾರ ಮಾತ್ರ, ಸದರಿ ಮಹಾಕುಂಭಮೇಳದ ಸಂದರ್ಭದಲ್ಲಿ ಪ್ರಯಾಗ್‌ರಾಜ್‌ಗೆ ಭೇಟಿಯಿತ್ತ ಕೋಟ್ಯಂತರ ಜನರ ಪೈಕಿ ಪ್ರತಿಯೊಬ್ಬರನ್ನೂ ಎಣಿಸಿರುವಂತೆ ತೋರುತ್ತದೆ!
ಇದು ಏನನ್ನು ಹೇಳುತ್ತದೆ? ಇದು ಜಾತ್ಯತೀತತೆಯ ಕುರಿತಾಗಿ ಸರಕಾರವೊಂದಕ್ಕೆ ಇರಬೇಕಾದ ಬದ್ಧತೆಯ ಪ್ರತಿಬಿಂಬವೇ? ಸರಕಾರವೊಂದು ಶಾಸಕಾಂಗ, ನ್ಯಾಯಾಂಗ ಮತ್ತು ಎಲ್ಲಾ ಸ್ತರಗಳಲ್ಲಿನ ಕಾರ್ಯಾಂಗ ಹಾಗೂ ಮಾಧ್ಯಮಗಳು ಸೇರಿದಂತೆ ಆಳುಗ ವ್ಯವಸ್ಥೆಯ ಎಲ್ಲಾ ಅಂಗಗಳನ್ನೂ ಒಳಗೊಂಡಿರುತ್ತದೆ.
ಆದ್ದರಿಂದ, ಸರಕಾರವೊಂದರ ಎಲ್ಲಾ ಅಂಗಭಾಗಗಳೂ ಧರ್ಮವನ್ನು ಒಂದು ಖಾಸಗಿ ಬಾಬತ್ತು ಅಥವಾ ಖಾಸಗಿ ವ್ಯವಹಾರ ಎಂಬಂತೆ ಪರಿಗಣಿಸಬೇಕು ಹಾಗೂ ಅದನ್ನು ಒಂದು ಬಹಿರಂಗ ಪ್ರದರ್ಶನವಾಗಿ ಕೈಗೊಳ್ಳಬಾರದು. ಹಾಗೆ ಬಹಿರಂಗ ಪ್ರದರ್ಶನಕ್ಕೆ ಮುಂದಾದಲ್ಲಿ, ಅದು ಧರ್ಮ ವೊಂದನ್ನು ಉತ್ತೇಜಿಸುವುದಕ್ಕೆ/ಪ್ರವರ್ತಿಸುವುದಕ್ಕೆ ಅಥವಾ ಅದರ ಕುರಿತು ಪ್ರಚಾರ ಮಾಡುವು ದಕ್ಕೆ ಸಮಾನವಾಗುತ್ತದೆ.
ಅದರಲ್ಲೂ ನಿರ್ದಿಷ್ಟವಾಗಿ, ಸರಕಾರದ ಆಯಕಟ್ಟಿನ ಜಾಗಗಳನ್ನು ಅಲಂಕರಿಸಿರುವವರು/ಉನ್ನತ ಸ್ತರದ ಅಧಿಕಾರಿಗಳು, ತಾವೊಂದು ನಿರ್ದಿಷ್ಟ ಧರ್ಮವನ್ನು ಪ್ರವರ್ತಿಸುತ್ತಿದ್ದೇವೆ/ಪ್ರಚಾರ ಮಾಡು ತ್ತಿದ್ದೇವೆ ಎಂಬುದನ್ನು ತೋರಿಸುವಂಥ ಯಾವ ಬಾಬತ್ತಿನಲ್ಲೂ ತೊಡಗಬಾರದು. ಈ ಮಾನ ದಂಡವನ್ನು ಇಟ್ಟುಕೊಂಡು ನೋಡಿದರೆ, ಭಾರತದಲ್ಲಿ ಪ್ರಸ್ತುತ ಕಾಣಬರುತ್ತಿರುವ ಪರಿಸ್ಥಿತಿಯು ಅಪೇಕ್ಷಿತ ಮಟ್ಟವನ್ನು ತಲುಪುವುದು ಇನ್ನೂ ಬಾಕಿಯಿದೆ.
ಏಕೆಂದರೆ, ಭಾರತದಲ್ಲಿನ ಕಾರ್ಯಾಂಗ-ಸಜ್ಜಿಕೆಯು ತನ್ನ ಧಾರ್ಮಿಕ ನಂಬಿಕೆಗಳನ್ನು ಭವ್ಯವಾಗಿ /ಬಹಿರಂಗವಾಗಿ ಪ್ರದರ್ಶಿಸುತ್ತಿದೆ ಹಾಗೂ ಒಂದು ಧರ್ಮವನ್ನು ಅದು ಪ್ರವರ್ತಿಸುತ್ತಿರುವಂತೆ/ಪ್ರಚಾರ ಮಾಡುತ್ತಿರುವಂತೆ ತೋರುತ್ತಿದೆ. ಕಳೆದ ವರ್ಷ, ಪ್ರಧಾನಿಯವರು ಟ್ವಿಟರ್ ಮೂಲಕ ಹಂಚಿಕೊಂಡ ಒಂದಷ್ಟು ಚಿತ್ರಗಳನ್ನು ನೀವು ಗಮನಿಸಿರಬಹುದು- ಭಾರತದ ಅಂದಿನ ಮುಖ್ಯ ನ್ಯಾಯಮೂರ್ತಿಗಳು ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮವೊಂದರಲ್ಲಿ ಪ್ರಧಾನಿಯವರು ಪಾಲ್ಗೊಂಡಿದ್ದುದನ್ನು ಅವು ಅನಾವರಣಗೊಳಿಸಿದ್ದವು.
ಇದು, ಮಿಕ್ಕ ಧರ್ಮಗಳ ಅನುಯಾಯಿಗಳನ್ನು ಪರಿಣಾಮಕಾರಿಯಾಗಿ ಪ್ರತ್ಯೇಕಿಸಿದಂತೆ ಬಿಂಬಿಸುವ ರೀತಿಯಲ್ಲಿತ್ತು. ಮಸೀದಿಗಳ ಅಡಿಯಲ್ಲಿ ದೇವಾಲಯಗಳ ಕುರುಹು ಏನಾದರೂ ಇವೆಯೇ ಎಂಬು ದನ್ನೂ ಕಂಡುಹಿಡಿಯಲಿಕ್ಕೆ ದೇಶದ ಹಲವೆಡೆ ಮಸೀದಿಗಳ ತಳಪಾಯಗಳನ್ನು ಅಗೆಯಲಾಗುತ್ತಿದೆ ಹಾಗೂ ಇಸ್ಲಾಂ ಧರ್ಮದೊಂದಿಗೆ ಸಂಬಂಧವನ್ನು ಹೊಂದಿರುವಂತೆ ತೋರಿದ ಕಾರಣಕ್ಕೆ ಕೆಲ ವೊಂದು ಸ್ಥಳಗಳ ಹೆಸರುಗಳನ್ನು ಬದಲಾಯಿಸಲಾಗಿದೆ.
ಕೇಂದ್ರದಲ್ಲಿ ಪ್ರಸ್ತುತ ಗದ್ದುಗೆ ಹಿಡಿದಿರುವ ಸರಕಾರವು, ಭೂತಕಾಲದ ಅಥವಾ ದೂರದ ಭವಿಷ್ಯತ್ ಕಾಲದ ಬದುಕುವಂತೆ ನಮ್ಮನ್ನು ಒತ್ತಾಯಿಸುತ್ತದೆ; ಇದರಿಂದಾಗಿ ನಮಗೆ ವರ್ತಮಾನದ ನೋವು ಅನುಭವಕ್ಕೇ ಬರುವುದಿಲ್ಲ. ನಾನೊಬ್ಬ ನಾಸ್ತಿಕ ಆಗಿರುವ ಕಾರಣದಿಂದಲೇ ಹೀಗೆ ಹೇಳುತ್ತಿರುವೆ ಎಂದು ನೀವು ಒಂದೊಮ್ಮೆ ಭಾವಿಸುವುದಾದರೆ, ನಿಮಗೆ ಒಂದು ವಿಷಯವನ್ನು ನಾನು ಸ್ಪಷ್ಟ ಪಡಿಸಬೇಕು.
ಅದೆಂದರೆ, ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ನಮಗೆ ಸೇರಿದ ಆವರಣದಲ್ಲಿ ಒಂದು ದೇಗುಲವಿದೆ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿರುವ (ಎನ್‌ಸಿಆರ್) ನನ್ನ ಮನೆಯಲ್ಲಿ ಒಂದು ಪೂಜಾ ಮಂದಿರವಿದೆ. ಪ್ರತಿದಿನ ಮುಂಜಾನೆ ನಾನು ದೇವರಿಗೆ ನಿಯತವಾಗಿ ಪೂಜೆ ಸಲ್ಲಿಸುವುದುಂಟು ಮತ್ತು ಪ್ರಾರ್ಥಿಸುವುದುಂಟು. ಬಿಹಾರ-ಜಾರ್ಖಂಡ್ ಭಾಗದಲ್ಲಿ ಒಂದು ಪ್ರಸಿದ್ಧ ಯಾತ್ರಾಸ್ಥಳವಿದೆ; ಇಲ್ಲಿ ಯಾತ್ರಿಕರು, ಬಿಹಾರದ ಸುಲ್ತಾನ್‌ಗಂಜ್‌ನಿಂದ ಗಂಗಾ ಜಲವನ್ನು ತೆಗೆದುಕೊಂಡು ಹೋಗ ಬೇಕಾಗುತ್ತದೆ ಮತ್ತು ಇಲ್ಲಿ ನದಿಯು ಉತ್ತರ ದಿಕ್ಕಿನೆಡೆಗೆ ಹರಿಯುತ್ತದೆ.
ಅಂತೆಯೇ ಯಾತ್ರಿಕರು ಅಲ್ಲಿನ ಪವಿತ್ರ ನದಿಯಿಂದ ನೀರನ್ನು ಸಂಗ್ರಹಿಸಿ ಬಿದಿರಿನ ಅಡ್ಡೆಯಲ್ಲಿ ಅದನ್ನು ತಮ್ಮ ಹೆಗಲ ಮೇಲೆ ಹೊತ್ತೊಯ್ಯುತ್ತಾರೆ ಹಾಗೂ ‘ಬಾಬಾಧಾಮ್’ ಎಂದೂ ಪ್ರಸಿದ್ಧ ವಾಗಿರುವ ದಿಯೋಘರ್‌ವರೆಗಿನ 100 ಕಿ.ಮೀ.ಗೂ ಹೆಚ್ಚಿನ ಅಂತರವನ್ನು ಅವರು ಬರಿಗಾಲ ಕ್ರಮಿ ಸುತ್ತಾರೆ. ಈ ಯಾತ್ರೆಯಲ್ಲಿ ನಾನು 5 ಬಾರಿ ಭಾಗವಹಿಸಿರುವೆ ಮತ್ತು ಅದೇ ವೇಳೆಗೆ ನಾನೊಬ್ಬ ‘ಕಟ್ಟಾ ಜಾತ್ಯತೀತವಾದಿ’ ಎಂದೂ ಹೇಳಲು ಬಯಸುವೆ.
ಆದರೆ, ಸರಕಾರದ ಆಯಕಟ್ಟಿನ ಸ್ಥಾನದಲ್ಲಿರುವ ಕೆಲವರು, ಒಂದೇ ಧರ್ಮದ ಬಗ್ಗೆ ತಮ್ಮ ಒಲವು ವ್ಯಕ್ತಪಡಿಸುತ್ತಿರುವುದು ಸ್ಪಷ್ಟವಾಗಿದೆ; ಇವರೆಲ್ಲ ‘ಈದ್’ ಹಬ್ಬದ ವೇಳೆ ಒಂದು ಮಸೀದಿಗೆ ತೆರಳಿ, ಅಲ್ಲಿರುವ ಇತರ ಭಕ್ತರೊಂದಿಗೆ ಪ್ರಾರ್ಥನೆ ಸಲ್ಲಿಸುತ್ತಾರೆಯೇ? ಅಥವಾ ಈ ದೇಶದ ಕ್ರೈಸ್ತ ಬಾಂಧ ವರು ಹಾಗೂ ಇತರ ಅಲ್ಪಸಂಖ್ಯಾತರ ವಿಷಯದಲ್ಲೂ ಇದೇ ಪರಿಪಾಠವನ್ನು ಅನು ಸರಿಸುತ್ತಾರೆ ಯೇ? ನಮ್ಮಲ್ಲಿ ಜಾತ್ಯತೀತತೆ ಸತ್ತುಹೋಗಿದೆಯೇ ಮತ್ತು ಭಾರತವು ಕೊನೆಗೂ ಒಂದು ಹಿಂದೂ ರಾಷ್ಟ್ರವಾಗಿದೆಯೇ ಎಂಬುದು ನನಗೆ ಗೊತ್ತಿಲ್ಲ. ಆದರೆ, ಜಾತ್ಯತೀತತೆಯಲ್ಲಿ ಮತ್ತು ಸಂವಿಧಾನ ದಲ್ಲಿ ನಂಬಿಕೆ ಇರುವವರೆಲ್ಲರೂ ಗಾಢನಿದ್ರೆಯಲ್ಲಿ ಇರುವಂತೆ ಭಾಸವಾಗುತ್ತಿದೆ.
(ಲೇಖಕರು ಕೇಂದ್ರದ ಮಾಜಿ ವಿದೇಶಾಂಗ ಸಚಿವರು)