ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kiran Upadhyay Column: ಅಹಂ ಅನಂತಕುಮಾರ್‌ ಹೆಗಡೆ...

Kiran Upadhyay Column: ಅಹಂ ಅನಂತಕುಮಾರ್‌ ಹೆಗಡೆ...

Kiran Upadhyay Column: ಅಹಂ ಅನಂತಕುಮಾರ್‌ ಹೆಗಡೆ...

ವಿದೇಶವಾಸಿ

ಕಿರಣ್‌ ಉಪಾಧ್ಯಾಯ, ಬಹ್ರೈನ್‌

dhyapaa@gmail.com

“ಬೋಲೋ ಭಾರತ್ ಮಾತಾ ಕೀ… ಜೈ". ಕೆಲವು ವರ್ಷಗಳ ಪ್ರಯತ್ನದ ನಂತರ ಆ ಸ್ಥಳದಲ್ಲಿ ಭಾರತದ ಬಾವುಟ ತಲೆಯೆತ್ತಿ ನಿಂತಿತ್ತು. ಅಂದು ಕರ್ನಾಟಕ ಮಾತ್ರವಲ್ಲ, ದೇಶಾದ್ಯಂತದ ಬಹುತೇಕ ಹಿಂದೂಗಳ ಬಾಯಲ್ಲಿದ್ದದ್ದು ಒಂದೇ ಹೆಸರು- ಅನಂತಕುಮಾರ್ ಹೆಗಡೆ!

ಉತ್ತರಕನ್ನಡದವರಿಗಂತೂ ಅವರು ಯಾವ ಸ್ವಾತಂತ್ರ್ಯ ಹೋರಾಟಗಾರರಿಗೂ ಕಮ್ಮಿಯಾಗಿರಲಿಲ್ಲ. ತಮ್ಮ ಜಿಲ್ಲೆಯ 23 ವರ್ಷದ ಯುವಕನೊಬ್ಬ ಸ್ವತಂತ್ರ ಭಾರತದಲ್ಲಿ ನಿರ್ಬಂಧ ಹೇರಿದ ಜಾಗದಲ್ಲಿ ಧ್ವಜ ಹಾರಿಸಿದರೆ ಮತ್ತಿನ್ನೇನು? ಅದರಲ್ಲೂ ಜಿಲ್ಲೆಯ ಮಗ ಆ ಕಾರ್ಯ ಮಾಡಿದರೆ ಕೇಳಬೇಕೆ? 1994, ಹುಬ್ಬಳ್ಳಿಯ ಈದಗಾ ಮೈದಾನ. ಅದನ್ನು ರಾಣಿ ಕಿತ್ತೂರು ಚೆನ್ನಮ್ಮ ಮೈದಾನ ಎಂದೂ ಕರೆಯುತ್ತಾರೆ. ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ವೃತ್ತದ ಪಕ್ಕದ ಲ್ಲಿಯೇ ಇರುವ ಮೈದಾನ, ಆ ಕಾಲದಲ್ಲಿ ನಿರ್ಬಂಧಿತ ಪ್ರದೇಶ. ಅಲ್ಲಿ ಯಾವುದೇ ಹಿಂದೂಗಳ ಹಬ್ಬವನ್ನು ಆಚರಿಸು ವಂತಿಲ್ಲ, ರಾಜಕೀಯ ಸಭೆ, ಮದುವೆ ಇತ್ಯಾದಿ ಸಮಾರಂಭ ಗಳೂ ನಡೆಯುವಂತಿಲ್ಲ.

ಅದೆಲ್ಲ ಹೋಗಲಿ, ಸ್ವಾತಂತ್ರ್ಯ ದಿನಾಚರಣೆಯಂದು ಭಾರತದ ರಾಷ್ಟ್ರ ಧ್ವಜವನ್ನೂ ಹಾರಿಸುವಂತಿರಲಿಲ್ಲ. ಅದಕ್ಕೂ ಮೊದಲ ವರ್ಷಗಳಲ್ಲಿ ಧ್ವಜ ಹಾರಿಸುವ ವಿಫ ಯತ್ನಗಳು ಸಾಕಷ್ಟು ನಡೆದಿದ್ದವು. ಸ್ವಾತಂತ್ರ್ಯ ದಿನಾಚರಣೆ ಬಂತೆಂದರೆ ಸಾಕು, ಪೊಲೀಸ್ ಮತ್ತು ಅರೆಸೇನಾ ಪಡೆಯವರು ಬಂದೋಬಸ್ತಿನ ಚಕ್ರವ್ಯೂಹವನ್ನೇ ನಿರ್ಮಿಸು ತ್ತಿದ್ದರು. ನುಸಿಯೂ ನುಸುಳ ಲಾಗದ ಭದ್ರತೆಯನ್ನು ಭೇದಿಸುವುದು ಸಾಮಾನ್ಯರಿಗಂತೂ ಕಷ್ಟವೇ ಆಗಿತ್ತು. ವೀರಪ್ಪ ಮೊಯ್ಲಿ ಮುಖ್ಯಮಂತ್ರಿ ಯಾಗಿದ್ದ ಅಂದಿನ ಸರಕಾರ ಗೋಲಿಬಾರ್‌ಗೂ ಅಪ್ಪಣೆ ಕೊಟ್ಟಿತ್ತು. ಅಂದಿನ ಘಟನೆಯಲ್ಲಿ ಒಬ್ಬ ಬಾಲಕ ಸೇರಿದಂತೆ ೪ ಜನ ಗೋಲಿಬಾರ್‌ಗೂ ಬಲಿಯಾಗಿದ್ದರು.

ಆದರೆ ಅದಕ್ಕೂ ಮೊದಲು ನಡೆದದ್ದು ಯಾವುದೇ ಸ್ವಾತಂತ್ರ್ಯ ಹೋರಾಟದ ಕಥೆಗೂ ಕಡಿಮೆಯಾಗಿರಲಿಲ್ಲ. ಅಗ 13ರ ರಾತ್ರಿ ಮೈದಾನದ ಹತ್ತಿರದ ಬಹುಮಹಡಿ ಕಟ್ಟಡವೊಂದರಲ್ಲಿ ನೂರಕ್ಕೂ ಹೆಚ್ಚು ಕಾರ್ಯಕರ್ತರ ವಿಶೇಷ ತಂಡವೊಂದು ಸ್ವಾತಂತ್ರ್ಯ ದಿನಾಚರಣೆಯಂದು ಈದಗಾ ಮೈದಾನದಲ್ಲಿ ಧ್ವಜಾರೋಹಣ ಮಾಡುವುದಕ್ಕಾಗಿ ಅಡಗಿ ಕುಳಿತಿತ್ತು. 2 ದಿನ ಊಟ, ತಿಂಡಿ, ನಿದ್ರೆ ಎಲ್ಲವೂ ಅಲ್ಲಿಯೇ! ಕಲ್ಲಡ್ಕ ಪ್ರಭಾಕರ್ ಭಟ್ ನೇತೃತ್ವದಲ್ಲಿ ಅನಂತ ಕುಮಾರ್ ಹೆಗಡೆ, ಜಯಶ್ಯಾಮ ನೀರ್ಕಜೆ, ರಮೇಶ್ ಕಾಸರಗೋಡ್ ಅವರ ತಂಡಗಳು ರೂಪುಗೊಂಡಿದ್ದವು. ಅಗ 15ರಂದು ಪೊಲೀಸ್ ಮತ್ತು ಅರೆಸೇನೆ ಪಡೆಯ 3 ಸುತ್ತಿನ ಭದ್ರಬೇಲಿ ಭೇದಿಸಲು, ಈದಗಾ ಮೈದಾನದ ಒಳಗೆ ತ್ರಿವರ್ಣ ಧ್ವಜ ಹಾರಿಸಲು ಬಿಜೆಪಿ ನಾಯಕಿ ಉಮಾಭಾರತಿ, ಬಿಜೆಪಿಯ ಅಂದಿನ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಸ್.ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಮೊದಲಾದವರು ಮುನ್ನುಗ್ಗುತ್ತಿದ್ದರು.

ಆದರೆ ಪೊಲೀಸರು ಅವರನ್ನೆಲ್ಲ ಬಂಧಿಸಿದರು. ಆಗ ಈ 3 ತಂಡಗಳಲ್ಲಿ ಒಂದು ತಂಡ ರಸ್ತೆಗೆ ಜಿಗಿದು ‘ಭಾರತ್ ಮಾತಾ ಕಿ ಜೈ’, ‘ವಂದೇ ಮಾತರಂ’ ಘೋಷಣೆಯೊಂದಿಗೆ ಮೈದಾನದೆಡೆಗೆ ನುಗ್ಗಿತು.

ಪೊಲೀಸರು ಆ ಕಡೆ ಗಮನಹರಿಸಿ ಅವರನ್ನು ಬಂಧಿಸುವ ವೇಳೆಗೆ ಉಳಿದ 2 ತಂಡಗಳು ಮೈದಾನದ ಕಡೆಗೆ ನುಗ್ಗಿದವು. ರಮೇಶ್ ಕಾಸರಗೋಡ್ ಈದಗಾ ಮೈದಾನದಲ್ಲಿ ಧ್ವಜ ಹಾರಿಸಿದರು. ಕ್ಷಿಪ್ರಪ್ರಕ್ರಿಯೆ ಪಡೆಯ ಜವಾನ ನೊಬ್ಬ ರಮೇಶ್ ಅವರಿಗೆ ಹೊಡೆದು ಧ್ವಜವನ್ನು ಕಿತ್ತುಕೊಂಡಾಗ ದೂರದಲ್ಲಿದ್ದ ಅನಂತ್ ಓಡಿಬಂದು, ಜವಾನನ ಕೈಯಲ್ಲಿದ್ದ ಧ್ವಜವನ್ನು ಕಸಿದುಕೊಂಡರು. ಅಷ್ಟೇ ಅಲ್ಲ, ಆ ಧ್ವಜವನ್ನು ಎತ್ತಿ ಹಿಡಿದು ರಾಷ್ಟ್ರಗೀತೆ ಯನ್ನು ಹಾಡತೊಡಗಿದರು. ಪೊಲೀಸರು ಅನಂತ್‌ ರನ್ನು ಹೊಡೆಯಲು ಮುಂದಾದಾಗ, ಏರಿದ ಧ್ವನಿಯಲ್ಲಿ ರಾಷ್ಟ್ರಗೀತೆ ಯನ್ನು ಹಾಡಿದರು. ಕೊನೆಯ ೨ ಸಾಲು ಬಾಕಿ ಇರುವಾ ಗಲೇ ಅವರನ್ನು ಪೊಲೀಸ್ ವಾಹನದೊಳಕ್ಕೆ ತಳ್ಳಲಾಯಿತು. ನಂತರ ಪೊಲೀಸರು ತಾವು ನೀಡಬೇಕಾದ ಆತಿಥ್ಯವನ್ನು ನೀಡಿದರು.

ಅದಾಗಿ 2 ವರ್ಷದ ನಂತರ, 1996ರ ಲೋಕ ಸಭಾ ಚುನಾವಣೆ. ಅದಕ್ಕೆ ಉತ್ತರಕನ್ನಡದ ಅಭ್ಯರ್ಥಿಯಾಗಿ ಅನಂತ ಕುಮಾರ್ ಹೆಗಡೆ ಅವರ ಹೆಸರನ್ನು ಬಿಜೆಪಿ ಘೋಷಿಸಿತು. ಆ ಚುನಾವಣೆಯಲ್ಲಿ ಅನಂತ್ ಗೆದ್ದರು. ‘ಅಹಂ ಅನಂತ ಕುಮಾರ ಹೆಗಡೆ ಲೋಕ ಸಭಾಯಾಃ ಸದಸ್ಯತ್ವೇನ ನಿರ್ವಾಚಿತಃ…’ ಎಂದು ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದಾಗಲಂತೂ ಜಿಲ್ಲೆಯ ಜನರ ಸಂತೋಷಕ್ಕೆ ಪಾರವೇ ಇರಲಿಲ್ಲ.

2 ವರ್ಷದ ನಂತರ ಮತ್ತೊಮ್ಮೆ ಚುನಾವಣೆ ನಡೆದು ಹೆಗಡೆ ಅದರಲ್ಲೂ ಗೆದ್ದರು. ಆದರೆ ಒಂದೇ ವರ್ಷದಲ್ಲಿ ಮತ್ತೊಂದು ಲೋಕಸಭೆ ಚುನಾವಣೆ ಬಂತು. ಅದರಲ್ಲಿ ಅನಂತಕುಮಾರ್, ಮಾರ್ಗರೇಟ್ ಆಳ್ವ ವಿರುದ್ಧ ಸ್ಪರ್ಧಿಸಿ ತೀರಾ ಕಡಿಮೆ ಅಂತರದಿಂದ ಸೋತರು. ನಂತರ, 2004ರಿಂದ 2024ರವರೆಗೆ ಸತತ 4 ಸಲ, ಒಟ್ಟು 6 ಸಲ ಉತ್ತರ ಕನ್ನಡದಿಂದ ಸಂಸದರಾಗಿ ಚುನಾಯಿತರಾದರು. ಒಮ್ಮೆ ಭಾರತ ಸರಕಾರದ ಕೌಶಲಾಭಿವೃದ್ಧಿಯ ರಾಜ್ಯ ಸಚಿವರೂ ಆಗಿ ಕಾರ್ಯ ನಿರ್ವಹಿಸಿದರು.

‘ಸಂಸದರು ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿಲ್ಲ’, ‘ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ’ ಇತ್ಯಾದಿ ಅಪವಾದಗಳನ್ನು ಎದುರಿಸಿದರು. ತಮ್ಮ ಭಾಷಣದಿಂದ ಜನರನ್ನು, ಅದರಲ್ಲೂ ಹಿಂದೂ ಯುವಕ ರನ್ನು ಆಕರ್ಷಿಸಿ ಸಾಕಷ್ಟು ಕೀರ್ತಿ ಪಡೆದರು. ತಮ್ಮ ಕೆಲವು ಹೇಳಿಕೆಗಳಿಂದಾಗಿ (ಇದರಲ್ಲಿ ಅವರ ಭಾಷಣದ ಹಿಂದೆ ಮತ್ತು ಮುಂದಿನ ಮಾತುಗಳನ್ನು ತುಂಡರಿಸಿ ಬಿತ್ತರಿಸಿದ ಮಾಧ್ಯಮಗಳ ಸಹಕಾರವೂ ಇದೆ) ಅಪಕೀರ್ತಿಗೂ ಪಾತ್ರರಾದರು. ಆದರೆ, ಇದೆಲ್ಲವೂ ಸುಳ್ಳು ಎನ್ನುವಂತೆ, ಚುನಾವಣೆಯಿಂದ ಚುನಾವಣೆಗೆ ತಮ್ಮ ಪ್ರತಿಸ್ಪರ್ಧಿಯ ವಿರುದ್ಧ ಮತಗಳ ಅಂತರವನ್ನು ಹೆಚ್ಚಿಸಿಕೊಳ್ಳುತ್ತಲೇ ಮುನ್ನಡೆದರು.

ಅವರಿಗೆ ೭ ಬಾರಿ ಉತ್ತರ ಕನ್ನಡದ ಟಿಕೆಟ್ ನೀಡಲಾಯಿತಾದರೂ ಒಮ್ಮೆಯೂ ಅವರಾಗಿಯೇ ಟಿಕೆಟ್‌ಗಾಗಿ ಪಕ್ಷದ ವರಿಷ್ಠರ ಮುಂದೆ ಕೈಕಟ್ಟಿ ನಿಲ್ಲಲಿಲ್ಲ. ಯಾರನ್ನೂ ಓಲೈಸಲಿಲ್ಲ, ಲಾಬಿ ಮಾಡಲಿಲ್ಲ. ಒಲ್ಲದ ಮನಸ್ಸಿನಿಂದ ‘ಜೀ ಹುಜೂರ್’ ಎನ್ನಲಿಲ್ಲ, ಬೆಣ್ಣೆ ಹೊಸೆಯಲಿಲ್ಲ. ಪ್ರತಿ ಬಾರಿಯೂ ಪಕ್ಷದ ಕಡೆಯಿಂದಲೇ ಅವರ ಹೆಸರು ಬರುತ್ತಿತ್ತೇವಿನಾ ಅವರು ಒಮ್ಮೆಯೂ ಟಿಕೆಟ್‌ ಗಾಗಿ ಟವಲ್ ಹಾಸಲಿಲ್ಲ. ಕೊನೆಯ 2 ಚುನಾವಣೆಯಲ್ಲಂತೂ ಅವರಿಗೆ ಸ್ಪರ್ಧಿಸುವ ಮನಸ್ಸೂ ಇರಲಿಲ್ಲ. ಪಕ್ಷದ ಒತ್ತಾಯಕ್ಕೆ ಅರ್ಧಮನಸ್ಕರಾಗಿ ಒಪ್ಪಿದರು ಎನ್ನುವಂತಿತ್ತು. ಅವರು ತಮ್ಮ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಲೂ ಇರಲಿಲ್ಲ.

ಎಷ್ಟೋ ಜನ ಅವರನ್ನು ‘ಚುನಾವಣೆಯ ವೇಳೆ ಮಾತ್ರ ಪ್ರತ್ಯಕ್ಷವಾಗುವ ಅಭ್ಯರ್ಥಿ’ ಎಂದು ಹೇಳಿದ್ದೂ ಇದೆ. ಆದರೆ, ಇತ್ತೀಚೆ ಗಿನ ಬೆಳವಣಿಗೆಯನ್ನು ನೋಡಿದಾಗ ಅವರಿಗೆ ರಾಜಕೀಯದಲ್ಲಿ ನಿಜವಾಗಿಯೂ ಆಸಕ್ತಿ ಕಡಿಮೆಯಾಗಿತ್ತು ಎನ್ನುವುದು ದೃಢ ವಾಗುತ್ತದೆ. ‘ನಾನು ರಾಜಕಾರಣಿಯಾಗಿ ಹುಟ್ಟಲಿಲ್ಲ, ರಾಜಕಾರಣಿಯಾಗಿ ಸಾಯಲು ಬಯಸು ವುದೂ ಇಲ್ಲ’ ಎಂದು ಅವರು ಆಗಾಗ ಹೇಳುತ್ತಿದ್ದರು. ಆದರೂ ನಂಬಿಕೆ ಬರುತ್ತಿರಲಿಲ್ಲ. ಯಾವ ರಾಜಕಾರಣಿ, ಅದರಲ್ಲೂ ಚುನಾಯಿತರಾಗಿ, ಮಂತ್ರಿಯಾಗಿ, ಹಾಲಿ ಸಂಸದರಾಗಿದ್ದವರು ಇಂಥ ಮಾತನ್ನಾಡಿ ಯಾರು? ಅಧಿಕಾರದಲ್ಲಿದ್ದು, ಅದರಲ್ಲೂ ಇನ್ನೂ ಸಾಕಷ್ಟು ವರ್ಷ ರಾಜಕೀಯದ ಭವಿಷ್ಯ ಇರುವವರು ಈ ಮಾತನ್ನಾಡಿ ದರಂತೂ ನಂಬಲು ಸಾಧ್ಯವೇ ಇರಲಿಲ್ಲ.

ಹುಬ್ಬಳ್ಳಿಯ ಈದಗಾ ಮೈದಾನದಲ್ಲಿ ಧ್ವಜ ಹಿಡಿದು ಭಾರತಮಾತೆಯ ಘೋಷಣೆ ಕೂಗಿ ಪೊಲೀಸರಿಂದ ಏಟು ತಿಂದು, ಅಲ್ಲಿಂದ ಸಂಸದರಾಗಿ, ಮಂತ್ರಿಯಾಗಿ, ಸಾಕಷ್ಟು ಟೀಕೆಗಳಿಗೂ ಗುರಿಯಾದ ಅನಂತಕುಮಾರ್ ಹೆಗಡೆ ಬರೋಬ್ಬರಿ 3 ದಶಕದ ನಂತರ, ಡಾಕ್ಟರ್ ಅನಂತಕುಮಾರ್ ಹೆಗಡೆ ಆಗಿದ್ದಾರೆ! ಕಳೆದ ಡಿಸೆಂಬರ್ ೨೭ರಂದು ಗುಜರಾತ್‌ನ ಅಹ್ಮದಾಬಾದ್‌ನ ವಿಶ್ವವಿದ್ಯಾಲಯವೊಂದು ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ ಎಂದರೆ ಎಲ್ಲರಿಗೂ ಆಶ್ಚರ್ಯವಾಗಬಹುದು.

ಆದರೆ ಇಂದಿನ ಅನಂತಕುಮಾರ್ ಅವರಲ್ಲಿ ಮಾತನಾಡಿದಾಗ ಅದು ಸಾರ್ಥಕವೆನಿಸುತ್ತದೆ. ಇದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ಇದು ರಾತ್ರೋರಾತ್ರಿ ನಡೆದದ್ದಲ್ಲ, ಅವರಿಗೆ ಸುಮ್ಮನೇ ಒಲಿದುಬಂದದ್ದೂ ಅಲ್ಲ. ಇದರ ಹಿಂದೆ 2 ದಶಕದ ಶ್ರಮವಿದೆ. ಕಳೆದ 2 ದಶಕಗಳಿಂದಲೂ ಅವರು ‘ನ್ಯಾನೋ ತಂತ್ರಜ್ಞಾನ’ದ ಕುರಿತು ಸಾಕಷ್ಟು ಅಧ್ಯಯನ ನಡೆಸಿದ್ದಾರೆ. ಈ ಹಾದಿಯಲ್ಲಿ ಅವರಿಗೆ ಭೇಟಿಯಾದವರು ಡಾ.ಕಟ್ಟೇಶ್ ವಿ.ಕಟ್ಟಿ. ಅವರು ಮೂಲತಃ ಧಾರವಾಡ ದವರು, ಸದ್ಯ ಅಮೆರಿಕದಲ್ಲಿದ್ದಾರೆ. ವೈದ್ಯಕೀಯ ವಿಜ್ಞಾನಿಯಾಗಿರುವ ಅವರು ‘ಹಸಿರು ನ್ಯಾನೋ ತಂತ್ರಜ್ಞಾನದ ಜನಕ’ ಎಂದೇ ಖ್ಯಾತರಾಗಿದ್ದಾರೆ.

2 ದಶಕದ ಹಿಂದೆ ಆಗಂತುಕರಾಗಿ ಕಟ್ಟಿಯವರ ಉಪನ್ಯಾಸ ಕೇಳುತ್ತಿದ್ದ ಹೆಗಡೆ, ನ್ಯಾನೋ ತಂತ್ರಜ್ಞಾನದ ಕಡೆಗೆ ಆಕರ್ಷಿತರಾಗಿ, ಮುಂದೊಂದು ದಿನ ಭಾರತವನ್ನಷ್ಟೇ ಅಲ್ಲ, ವಿಶ್ವವನ್ನೂ ಬದಲಾಯಿಸಬಲ್ಲ ಶಕ್ತಿ ಈ ತಂತ್ರಜ್ಞಾನಕ್ಕಿದೆ ಎಂದು ಮನಗಂಡರು. ಡಾ.ಕಟ್ಟಿ ಅವರೊಂದಿಗೆ ಕೈಜೋಡಿಸಿ ಈಗ ತಮ್ಮದೇ ಆದ ‘ಕದಂಬ’ ಸಂಸ್ಥೆಯಡಿ ವಿಶ್ವದ ಪ್ರಥಮ ‘ಹಸಿರು ನ್ಯಾನೋ ತಂತ್ರಜ್ಞಾನ’ದ ಔಷಧಗಳನ್ನಷ್ಟೇ ಅಲ್ಲ, ಆಸ್ಪತ್ರೆಯನ್ನೂ ಸ್ಥಾಪಿಸಿದ್ದಾರೆ.

ಕಳೆದ ಡಿಸೆಂಬರ್ ೮ರಂದು ಅದರ ಉದ್ಘಾಟನೆಯೂ ಆಗಿದೆ. ಅಲ್ಲಿ ಸಾಮಾನ್ಯ ರೋಗಗಳಿಂದ ಹಿಡಿದು ಕ್ಯಾನ್ಸರ್‌ ವರೆಗೂ ಚಿಕಿತ್ಸೆ ನೀಡಲಾಗುತ್ತದೆ. ಡಾ.ಕಟ್ಟಿಯವರ ಮಾರ್ಗದರ್ಶನದಲ್ಲಿ ಅನಂತಕುಮಾರರೇ ನ್ಯಾನೋ ರಿಯಾಕ್ಟರ್ ಕೂಡ ತಯಾರಿಸಿದ್ದಾರೆ. ಅದರ ಸಾಮರ್ಥ್ಯ ೧ ಲಕ್ಷ ಲೀಟರ್‌ನಷ್ಟಿದ್ದು, ಅದರಿಂದ ಇಡೀ ವಿಶ್ವಕ್ಕೇಪೂರೈಸಬಹುದಾದಷ್ಟು ನ್ಯಾನೋ ಪದಾರ್ಥವನ್ನು ತಯಾರಿಸಬಹುದಾಗಿದೆ.

ಈಗಾಗಲೇ ಕದಂಬ ಸಂಸ್ಥೆ ನ್ಯಾನೋ ಉತ್ಪಾದನೆಗೆ ತೊಡಗಿದ್ದು, ಔಷಧಿಗಳೊಂದಿಗೆ ಇತರ ವಸ್ತುಗಳನ್ನೂತಯಾರಿಸುತ್ತಿದೆ. ಅದರಲ್ಲಿ ಕೆಲವು ವಸ್ತುಗಳಂತೂ ವಿಶೇಷ. ಅವರು ತಯಾರಿಸಿರುವ ಒಂದು ಟಿ-ಶರ್ಟನ್ನು 47 ದಿನ ತೊಳೆಯದೆ ಉಪಯೋಗಿಸಬಹುದು ಎಂದು ಸಾಬೀತಾಗಿದೆ. ಅಂದರೆ, ಆ ಟಿ-ಶರ್ಟ್ ಧರಿಸಿ, ಬೆವರಿನಿಂದ ಒದ್ದೆಯಾದರೆ ಅದನ್ನು ಹಿಂಡಿ, ಪುನಃ ತೊಟ್ಟುಕೊಳ್ಳಬಹುದು. ನೀರಿನಲ್ಲಿ ಅಥವಾ ಸಾಬೂನ್ ಹಚ್ಚಿ ತೊಳೆಯ ಬೇಕೆಂದಿಲ್ಲ. ಹಾಗೆಯೇ ಇನ್ನೊಂದು ಉತ್ಪಾದನೆ, ಟೂತ್‌ಪೇಸ್ಟ್. ಅದನ್ನು ಬಳಸಿದ ನಂತರ ಉಗುಳಬೇಕೆಂದಿಲ್ಲ, ನುಂಗಲೂಬಹುದು. ಅದನ್ನು ನೀರಿನಲ್ಲಿ ಕದಡಿ ಚಹಾ ಅಥವಾ ಇತರ ಪಾನಿಯದಂತೆ ಸೇವಿಸಲೂಬಹುದು. ಗುಂಡು ತಾಗಿದಾಗ ಆಗುವ ಗಾಯಕ್ಕೆ ಅದನ್ನು ಲೇಪಿಸಬಹುದು.

ಅದೊಂದು ಔಷಧದಂತೆಯೂ ಕೆಲಸ ಮಾಡುತ್ತದೆ. ಇಷ್ಟು ಹೇಳುವಾಗ ಇದು ಸೇನೆಯಲ್ಲಿ ಬಳಕೆಯಾಗುತ್ತದೆಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ಲವೇ? ನಿಜ, ಇವರು ಉತ್ಪಾದಿಸಿದ ಕೆಲವು ವಸ್ತುಗಳು ಇಂದು ಅಮೆರಿಕ ಮತ್ತು ಭಾರತದ ಸೇನೆಯಲ್ಲಿ ಉಪಯೋಗಿಸಲ್ಪಡುತ್ತಿವೆ. ನಾವೆಲ್ಲ ಕುಡಿಯುವ ನೀರಿನ ಬಗ್ಗೆ ಕೇಳಿದ್ದೇವೆ. ತಿನ್ನುವ ನೀರಿನ ಬಗ್ಗೆ ಯಾರಿಗೆ ಗೊತ್ತು? ಕದಂಬ ಸಂಸ್ಥೆ, ನೀರನ್ನು ಘನೀಕರಿಸಿ, ಕ್ಯೂಬ್‌ಗಳು, ಹಾಳೆಗಳ ರೂಪದಲ್ಲೂಪೂರೈಸುತ್ತಿದೆ. ಇವನ್ನೂ ಸೇನೆಗೆಂದೇ ತಯಾರಿಸ ಲಾಗುತ್ತಿದೆ. ಉತ್ಸಾಹದಾಯಕ ಪಾನೀಯ, ಸೌಂದರ್ಯವರ್ಧಕ ಇತ್ಯಾದಿಗಳನ್ನೂ ತಯಾರಿಸ ಲಾಗುತ್ತಿದೆ.

ಇಷ್ಟು ಹೇಳುವಾಗ, ಇವೆಲ್ಲವೂ ಸರಕಾರದಿಂದ ನಿಯೋಜಿತವಾದ ಅಧಿಕೃತ ಸಂಸ್ಥೆಯಿಂದ ಮಾನ್ಯತೆ ಪಡೆದಿವೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ತಾನೆ? “ಹಸಿರು ನ್ಯಾನೋ ತಂತ್ರಜ್ಞಾನ ಆಯುರ್ವೇದಕ್ಕಿಂತ ಶೀಘ್ರ ಪರಿಣಾಮ ಕಾರಿಯಾಗಿದೆ. ಅಲೋಪತಿ ಔಷಧದಿಂದಾಗುವ ಅಡ್ಡ ಪರಿಣಾಮಗಳು ಇದರಿಂದ ಆಗುವುದಿಲ್ಲ. ಏಕೆಂದರೆ ಇಲ್ಲಿ ಬಳಸುವ ಪದಾರ್ಥಗಳೆಲ್ಲ ಗಿಡಮೂಲಿಕೆಗಳು ಹಾಗೂ ಲೋಹಗಳಿಂದ ಆಗಿರುತ್ತವೆ. ಆದ್ದರಿಂದ ಇದು ಅಲೋಪತಿ ಮತ್ತು ಆಯುರ್ವೇದದ ನಡುವಿನ ಸೇತುವೆಯಾಗಿದೆ. ಕ್ಯಾನ್ಸರ್ ಕೋಶಗಳಿಗಿಂತಲೂ ಸಣ್ಣ ಗಾತ್ರದಲ್ಲಿರುವ ನ್ಯಾನೋ ಕೋಶ ಗಳಿಗೆ ಕ್ಯಾನರ್ ಕೋಶಗಳನ್ನು ಕೊಲ್ಲುವ ಸಾಮರ್ಥ್ಯವಿದ್ದು, ಇದರಿಂದ ಶಸ್ತ್ರ ಚಿಕಿತ್ಸೆಯ ಅಗತ್ಯವೂ ಇರುವುದಿಲ್ಲ" ಎಂದು ಅನಂತಕುಮಾರ್ ಮಾತನಾಡುವಾಗ ವೈದ್ಯರಂತೆಯೂ, ವೈದ್ಯಕೀಯ ವಿಜ್ಞಾನಿಯಂತೆಯೂ ಕಾಣುತ್ತಾರೆ. ಹಾಗೆಯೇ, “ನಾನು ೩ ದಶಕಗಳ ಕಾಲ ರಾಜಕೀಯದಲ್ಲಿದ್ದೆ, ನನ್ನ ಭಾಷಣಕ್ಕೆ ಸಾವಿರಾರು ಜನ ಸೇರುತ್ತಿದ್ದರು, ನನ್ನ ಮಾತಿಗೆ ಚಪ್ಪಾಳೆ ಹೊಡೆಯುತ್ತಿದ್ದರು. ಆದರೆ ದಿನದ ಕೊನೆಗೆ, ನನಗೆ ಅಥವಾ ಅವರಿಗೆ ದಕ್ಕಿದ್ದೇನು ಎಂದರೆ ಏನೂ ಇಲ್ಲ.

ಅದೇ ಈಗ ನ್ಯಾನೋ ತಂತ್ರಜ್ಞಾನದಿಂದ ನಾನು ಸಾವಿರಾರು ಜನರ ಜೀವ ಉಳಿಸಬಹುದು, ಜನರನ್ನು ರೋಗ ಗಳಿಂದ, ನೋವಿನಿಂದ ಬಿಡುಗಡೆ ಗೊಳಿಸಬಹುದು, ಸಾಮಾನ್ಯ ಜನರ ಬದುಕು ಕಟ್ಟಿಕೊಡಬಹುದು. ಅದಕ್ಕಿಂತ ಹೆಚ್ಚು ಸಂತೋಷ ಇನ್ನೇನು ಬೇಕು? ನಾನು ರಾಜಕೀಯದಲ್ಲಿ ಇದ್ದಾಗ ಕೆಲವೊಮ್ಮೆ ಸಹಾಯ ಮಾಡಬೇಕು ಎಂದರೂ ಆಗುತ್ತಿರಲಿಲ್ಲ. ಅಲ್ಲಿ ಸಾಧಿಸಲು ಆಗದಿದ್ದದ್ದನ್ನು ಈಗ ಸಾಧಿಸುತ್ತಿದ್ದೇನೆ" ಎನ್ನುವಾಗ ತತ್ವಜ್ಞಾನಿಯಂತೆಯೂ ಕಾಣುತ್ತಾರೆ.

ಸದ್ಯ ಇಷ್ಟೇ ಹೇಳಬ. ಮೊದಲಿನ ಅನಂತ ಕುಮಾರ್ ಆಗಲಿ, ಈಗಿನ ಡಾ. ಅನಂತಕುಮಾರ್ ಹೆಗಡೆ ಆಗಲಿ, ಒಂದು ಲೇಖನಕ್ಕೆ ದಕ್ಕುವವರಲ್ಲ. ಅವರ ಕುರಿತು ಬರೆಯಲು ನೂರಾರು ಪುಟದ ಪುಸ್ತಕವೇ ಬೇಕಾದೀತು!

ಇದನ್ನೂ ಓದಿ: kiranupadhyay