Shashidhara Halady Column: ಉಪ್ಪಿನ ಸಾಗಣೆ ತಡೆಯಲು ತಂತ್ರ- ಕುತಂತ್ರ !
Shashidhara Halady Column: ಉಪ್ಪಿನ ಸಾಗಣೆ ತಡೆಯಲು ತಂತ್ರ- ಕುತಂತ್ರ !

ಶಶಾಂಕಣ
ಶಶಿಧರ ಹಾಲಾಡಿ
ರಾಯ್ ಮೋಕ್ಸಾಮ್ (ಜನನ: 1939) ಎಂಬ ಬ್ರಿಟಿಷ್ ಲೇಖಕನ ಕುರಿತು ನಮ್ಮಲ್ಲಿ ಹೆಚ್ಚು ಪರಿಚಯವಿಲ್ಲ. ಲಂಡನ್ ನಲ್ಲಿ ನೆಲೆಸಿರುವ ಈತ ಭಾರತದ ಇತಿಹಾಸದ ಕುರಿತು, ಅದರಲ್ಲಿ ಅಡಗಿರುವ ಹಲವು ವಿದ್ಯಮಾನಗಳ ಕುರಿತು ಪುಸ್ತಕಗಳನ್ನು ರಚಿಸಿದ್ದಾನೆ. ‘ದ ಥೆಫ್ಟ್ ಆಫ್ ಇಂಡಿಯಾ’, ‘ದ ಈಸ್ಟ್ ಇಂಡಿಯಾ ಕಂಪನಿ ವೈಫ್ ಆಂಡ್ ಔಟ್‌ಲಾ: ಇಂಡಿಯಾಸ್ ಬ್ಯಾಂಡಿಟ್ ಕ್ವೀನ್ ಅಂಡ್ ಮಿ’ ಮೊದಲಾದವು ಭಾರತದ ಕುರಿತು ಈತ ರಚಿಸಿದ ಪುಸ್ತಕಗಳು.
2002ರಲ್ಲಿ ಇವನು ‘ದ ಗ್ರೇಟ್ ಹೆಜ್ ಆಫ್ ಇಂಡಿಯಾ’ ಪುಸ್ತಕವನ್ನು ರಚಿಸಿ, ಬ್ರಿಟಿಷರು ಭಾರತದ ಶ್ರೀಸಾಮಾನ್ಯ ರನ್ನು ಕುಟಿಲ ತಂತ್ರದಿಂದ ಸಂಕಷ್ಟಕ್ಕೆ ದೂಡಿದ್ದನ್ನು ವಿವರವಾಗಿ ಬರೆದಿದ್ದಾನೆ. ಒಂದು ಪ್ರದೇಶದಿಂದ ಇನ್ನೊಂದು ಪ್ರಾಂತ್ಯಕ್ಕೆ ಉಪ್ಪನ್ನು ಸಾಗಿಸಲು ಬ್ರಿಟಿಷರು ಸುಂಕ ಹೇರಿದ್ದರು. ತಮ್ಮ ಕಣ್‌ತಪ್ಪಿಸಿ, ಬಡಜನರು, ಕೂಲಿಕಾರರು ಉಪ್ಪನ್ನು ಸಾಗಿಸಬಾರದು ಎಂದು ಕಟ್ಟುನಿಟ್ಟಾಗಿ ಕಾನೂನು ಮಾಡಿದ್ದ ಬ್ರಿಟಿಷರು, ಆ ಉದ್ದೇಶಕ್ಕಾಗಿ ಸಾವಿರಾರು ಮೈಲುದ್ದದ ಮುಳ್ಳುಗಿಡಗಳ ಬೇಲಿಯನ್ನೇ ರಚಿಸಿದ್ದರು! ಈ ವಿಚಾರವನ್ನು ಎಲ್ಲೋ ಓದಿದ ಈ ಲೇಖಕ, ಅದರ ಕುರಿತು ಸಂಶೋಧನೆ ನಡೆಸಲು ಭಾರತಕ್ಕೆ ಬಂದಾಗ, ಅಂಥದೊಂದು ಮುಳ್ಳಿನ ಬೇಲಿ ಇತ್ತು ಮತ್ತು ಜನಸಾಮಾನ್ಯ ರು ಉಪ್ಪನ್ನು ಸಾಗಿಸಲು ನಿರ್ಬಂಧಿಸಲಾಗಿತ್ತು ಎಂಬ ವಿಚಾರವೇ ಬಹುಪಾಲು ಜನರಿಗೆ ಮರೆತುಹೋಗಿತ್ತು!
ಎ.ಒ.ಹ್ಯೂಮ್ ಎಂಬ ಮಹಾಶಯನ ಕುರಿತು ನೀವು ಕೇಳಿರಬಹುದು. ಬ್ರಿಟಿಷ್ ಸರಕಾರದಲ್ಲಿ ಐಸಿಎಸ್ ಸಮಾನ ಹುದ್ದೆಯ ಅಧಿಕಾರಿಯಾಗಿದ್ದ ಈತನ ಪ್ರಮುಖ ಹವ್ಯಾಸವೆಂದರೆ ಪಕ್ಷಿವೀಕ್ಷಣೆ ಮತ್ತು ಸಸ್ಯಗಳ ಅಧ್ಯಯನ. ಇಲ್ಲಿನ ಪಕ್ಷಿಗಳನ್ನು ಸಂಗ್ರಹಿಸಿ, ಪ್ರಥಮ ಬಾರಿಗೆ ಅಧ್ಯಯನಕ್ಕೆ ಒಳಪಡಿಸಿ, ನಮ್ಮ ದೇಶದಲ್ಲಿ ಪಕ್ಷಿವೀಕ್ಷಣೆಗೆ ತಳಪಾಯವನ್ನು ನಿರ್ಮಿಸಿದ. ಇದರ ಜತೆಯಲ್ಲೇ, ನಮ್ಮ ದೇಶದ ಸಸ್ಯಗಳನ್ನು ಪಟ್ಟಿಮಾಡುವಲ್ಲೂ ಈತನ ಕೊಡುಗೆ ಇದೆ. ಆದರೆ ಈತ ನಮಗೆಲ್ಲಾ ಹೆಚ್ಚು ಪರಿಚಿತನಾಗಿರುವುದು ಕಾಂಗ್ರೆಸ್ ಪಕ್ಷದ ಜನಕನಾಗಿ. ಬ್ರಿಟಿಷ್ ವೈಸ್‌ರಾಯ್ ಸಹಮತದಿಂದ, 1885ರಲ್ಲಿ ಈತ ಸ್ಥಾಪಿಸಿದ ಕಾಂಗ್ರೆಸ್ ಪಕ್ಷದಲ್ಲಿ ಮೊದಲು ಸೇರ್ಪಡೆಗೊಂಡವರು ಅಂದಿನ ವಿದ್ಯಾವಂತರು, ಬುದ್ಧಿಜೀವಿಗಳು ಮತ್ತು ಸ್ಥಿತಿವಂತರು.
ಬ್ರಿಟಿಷ್ ಸರಕಾರದ ಪ್ರಮುಖ ಅಧಿಕಾರಿಯಾಗಿ ಎ.ಒ.ಹ್ಯೂಮ್ ಮಾಡಿದ ಮತ್ತೊಂದು ಘನಕಾರ್ಯವೆಂದರೆ ‘ಭಾರತದ ಮಹಾನ್ ಮುಳ್ಳು ಬೇಲಿ!’ (ದ ಗ್ರೇಟ್ ಹೆಜ್ ಆಫ್ ಇಂಡಿಯಾ). 1867-70ರ ಅವಧಿಯಲ್ಲಿ ಈತ ಅಂತರ್ದೇಶೀಯ ಸುಂಕದ ಅಧೀಕ್ಷಕನಾಗಿದ್ದಾಗ, ಸುಂಕ ಸಂಗ್ರಹಿಸುವ ವ್ಯವಸ್ಥೆಯನ್ನು ಬಲಪಡಿಸಲು ಇಂಥದೊಂದು ಮಹಾನ್ ಮುಳ್ಳುಬೇಲಿಯನ್ನು ಬೆಳೆಸುವಯೋಜನೆಯನ್ನು ರೂಪಿಸಿ, ಯಶಸ್ವಿಯಾಗಿ ಜಾರಿಗೆತಂದ. ಆ ಬೇಲಿಯ ಮುಖ್ಯ ಉದ್ದೇಶವೆಂದರೆ, ಗುಜರಾತ್ ಪ್ರಾಂತ್ಯದಿಂದ ಉತ್ತರ ಭಾರತದ ಪ್ರಾಂತ್ಯಗಳಿಗೆ ಸಾಗಣೆಗೊಳ್ಳುತ್ತಿದ್ದ ಉಪ್ಪಿನ ಮೇಲೆ ಸುಂಕ ವಸೂಲು ಮಾಡುವುದು. ಗುಜರಾತಿನ ಕಚ್ ತೀರದಲ್ಲಿ ಕಡಿಮೆ ಬೆಲೆಗೆ ಉಪ್ಪು ದೊರಕುತ್ತಿತ್ತು; ಕಡುಬಡವರಿಗೂ ಅಗತ್ಯವಿರುವ ಉಪ್ಪನ್ನು ಬೇರೆ ರಾಜ್ಯಗಳಿಗೆ, ಪ್ರಾಂತ್ಯಗಳಿಗೆ ಸಾಗಿಸಲು ಬ್ರಿಟಿಷರು ನಿರ್ಬಂಧ ವಿಧಿಸಿದ್ದರು.
ಉಪ್ಪಿನ ಮೇಲಿನ ಸುಂಕವು ಬ್ರಿಟಿಷರ ಪ್ರಮುಖ ಆದಾಯಮೂಲಗಳಲ್ಲಿ ಒಂದಾಗಿತ್ತು. 1860ರ ದಶಕದ ಮಧ್ಯಭಾಗದಲ್ಲಿ ಉತ್ತರ ಭಾರತದ ಆಗ್ರಾವನ್ನು ಬಳಸಿ ಸಾಗಿದ್ದ ಸುಮಾರು 180 ಮೈಲಿ ಉದ್ದದ ಒಣ ಮುಳ್ಳು ಬೇಲಿಯನ್ನು ಬ್ರಿಟಿಷರು ನಿರ್ಮಿಸಿ, ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿದ್ದರು. ಆದರೆ ಪ್ರತಿವರ್ಷ ಈ ಒಣಮುಳ್ಳುಗಳ ರಾಶಿಯಲ್ಲಿ ಶೇ.50ರಷ್ಟು ನಾಶ ವಾಗುತ್ತಿತ್ತು. ಇದಕ್ಕೆ ಪರಿಹಾರವಾಗಿ ಎ.ಒ.ಹ್ಯೂಮ್ ಅಳವಡಿಸಿದ್ದೇ, ಜೀವಂತ ಸಸ್ಯಗಳ ಮುಳ್ಳುಬೇಲಿ. ನಮ್ಮ ದೇಶದ ಸಸ್ಯಗಳ ಕುರಿತು ಆತ ಸಾಕಷ್ಟು ಸಂಶೋಧನೆ ನಡೆಸಿದ್ದ; ಒಣಹವೆ ಯಲ್ಲೂ ಚೆನ್ನಾಗಿ ಬೆಳೆಯುವ ಪ್ರಭೇದದ ಮುಳ್ಳುಗಿಡ ಗಳನ್ನು ಆರಿಸಿ, ನಾಲ್ಕಾರು ಅಡಿ ಅಗಲವಾಗಿ ನಾಟಿ ಮಾಡಿಸಿ, ನೀರುಣಿಸಿ, ಜೀವಂತ ಗಿಡಗಳ ಬೇಲಿ ನಿರ್ಮಿಸುವ ಯೋಜನೆಯನ್ನು ಈತ ರೂಪಿಸಿ, ಜಾರಿಗೊಳಿಸಿದ.
1870ರ ನಂತರ ಅಧಿಕಾರ ವಹಿಸಿಕೊಂಡ ಇತರ ಬ್ರಿಟಿಷ್ ಅಧಿಕಾರಿಗಳು, ಎ.ಒ.ಹ್ಯೂಮ್ ರೂಪಿಸಿದ ಈ ಜೀವಂತ ಬೇಲಿಯನ್ನು ಇನ್ನಷ್ಟು ಅಭಿವೃದ್ಧಿಪಡಿಸಿದರು. ‘ಸುಂಕ ಸಂಗ್ರಹಿಸಲು ನಿರ್ಮಾಣಗೊಂಡ ಈ ಜೀವಂತ ಮುಳ್ಳು ಬೇಲಿಯು ಬ್ರಿಟಿಷ್ ರಾಜ್ ಕೈಗೊಂಡ ಅತಿ ಅಸಹ್ಯಕಾರಿ ಮತ್ತು ಕ್ರೂರ ಯೋಜನೆ’ ಎಂದು ಆ ದಿನಗಳಲ್ಲೇ ಕುಖ್ಯಾತವಾಗಿತ್ತು.
‘ಎ ಮಾನ್‌ಸ್ಟ್ರಸ್ ಸಿಸ್ಟಂ ಟು ವಿಚ್, ಇಟ್ ವುಡ್ ಬಿ ಆಲ್‌ಮೋಸ್ಟ್ ಇಂಪಾಸಿಬಲ್ ಟು ಫೈಂಡ್ ಎ ಪ್ಯಾರಲಲ್ ಇನ್ ಎನಿ ಟಾಲರೇಬಲಿ ಸಿವಿಲೈಸ್ಡ್ ಕಂಟ್ರಿ’ ಎಂದು 1893ರಲ್ಲಿ ಇದರ ಕುರಿತು ಸರ್ ಜಾನ್ ಸ್ಟ್ರಾಚೆರಿ ಎಂಬ ಬ್ರಿಟಿಷ್ಮಂತ್ರಿ ಹೇಳಿದ್ದ. ತಮ್ಮ ಸರಕಾರವು ಭಾರತದ ವಸಾಹತಿನಲ್ಲಿ ಅಭಿವೃದ್ಧಿಪಡಿಸಿದ್ದ ಈ ಮುಳ್ಳು ಬೇಲಿಯ ಕ್ರೌರ್ಯದ ಕುರಿತು ಬ್ರಿಟನ್‌ನಲ್ಲಿ ಈತ ನೀಡಿದ ಹೇಳಿಕೆ ಪ್ರಸಿದ್ಧವಾದರೂ, ಅದು ಕೇವಲ ಮೊಸಳೆ ಕಣ್ಣೀರು ಮಾತ್ರ; ಏಕೆಂದರೆ, ಸಾವಿರಾರು ಮೈಲು ಉದ್ದದ ಆ ಜೀವಂತ ಮುಳ್ಳುಬೇಲಿ ಬೆಳೆಯುತ್ತಲೇ ಹೋಯಿತು.
ಈ ಮುಳ್ಳುಬೇಲಿಯ ಸ್ವರೂಪಕ್ಕಿಂತ, ಅದನ್ನು ನಿರ್ಮಿಸಿದ ಉದ್ದೇಶವೇ ಅಸಹ್ಯಕಾರಿ, ಭೀಭತ್ಸ, ಕ್ರೂರ. ಕಡುಬಡವ ರಿಗೂ ಅಗತ್ಯವಿದ್ದ ಉಪ್ಪನ್ನು ಒಂದು ಪ್ರಾಂತ್ಯದಿಂದ ಇನ್ನೊಂದು ಪ್ರಾಂತ್ಯಕ್ಕೆ ಭಾರತೀಯರು ಸಾಗಿಸುವಾಗ ಬ್ರಿಟಿಷ್ ಸರಕಾರಕ್ಕೆ ನೀಡಬೇಕಾಗಿದ್ದ ಅಧಿಕ ಸುಂಕವೇ ಈ ಬೇಲಿಯನ್ನು ಅಮಾನವೀಯ ಎನಿಸುವಂತೆ ಮಾಡಿತ್ತು. ಆದರೇನು ಮಾಡುವುದು, ಬ್ರಿಟಿಷರು ಹಣ ಸಂಗ್ರಹಿಸುವಾಗ, ಹೆಚ್ಚಿನ ಸುಂಕ-ಕಡಿಮೆ ಸುಂಕ ಎಂಬ ಮಾನವೀಯ ಮುಖವನ್ನು ನೋಡುತ್ತಿರಲಿಲ್ಲ. ‘ಕಲೆಕ್ಷನ್’ ಅವರ ಮೂಲಧ್ಯೇಯ- ಅದಕ್ಕಾಗಿಯೇ ತಾನೆ ನಮ್ಮ ದೇಶದ ಜಿಲ್ಲೆ ಜಿಲ್ಲೆಗಳಲ್ಲೂ ‘ಡಿಸ್ಟ್ರಿಕ್ಟ್ ಕಲೆಕ್ಟರ್ ’ಗಳನ್ನು ಅವರು ನಿಯುಕ್ತಗೊಳಿಸಿದ್ದು!
ಈ ಮುಳ್ಳುಬೇಲಿಯ ಅಂಕಿ-ಅಂಶಗಳು, ಕಾರ್ಯವಿಧಾನ, ಬೆಳೆಸಿದ ರೀತಿ, ಅದು ಸಾಧಿಸಿದ ಯಶಸ್ಸು- ಎಲ್ಲವನ್ನೂ ಭಯಾನಕ ಎಂದೇ ಹೇಳಬಹುದು. ಮುಳ್ಳುಬೇಲಿಯ ಈ ಅಸಹ್ಯಸ್ವರೂ ಪವನ್ನು ಗುರುತಿಸಿಯೇ, ಬ್ರಿಟಿಷ್ ಅಧಿಕಾರ ಶಾಹಿ ಮತ್ತು ಇತಿಹಾಸಕಾರರು ಅದರ ಅಸ್ತಿತ್ವವನ್ನೇ ನಂತರದ ದಶಕಗಳಲ್ಲಿ ಮುಚ್ಚಿಹಾಕಿದ್ದರು! 1870ರ ದಶಕ ದಲ್ಲಿ ಈ ಬೇಲಿಯು ಉತ್ತುಂಗದಲ್ಲಿದ್ದಾಗ, ಅದರ ಉದ್ದವು ಸುಮಾರು 2500 ಮೈಲಿ! (4000 ಕಿಮೀ).
ಮುಳ್ಳುಬೇಲಿಯನ್ನು ಬೆಳೆಸಲು ಅವರು ಮುಖ್ಯವಾಗಿ ಬಳಸಿದ್ದು ಜಾಲಿಮುಳ್ಳು, ಇಂಡಿಯನ್ ಪ್ಲಮ್, ಕವಳೆಕಾಯಿ (ಗರ್ಚನ ಮುಳ್ಳು), ಪಾಪಾಸುಕಳ್ಳಿ ಮೊದಲಾದ ಗಿಡಗಳನ್ನು. ಈ ಗಿಡಗಳ ಬೇಲಿಯು ಸರಾಸರಿ 10 ಅಡಿ ಎತ್ತರ ವಾಗಿತ್ತು, ನಾಲ್ಕಾರು ಅಡಿ ಅಗಲವಾಗಿತ್ತು. ಎ.ಒ.ಹ್ಯೂಮ್‌ನ ಅಧಿಕಾರಾವಧಿಯಲ್ಲಿ ಇದರ ಉಸ್ತುವಾರಿ ನೋಡಿ ಕೊಳ್ಳಲು ಸುಮಾರು 14000 ಸಿಬ್ಬಂದಿ ಕೆಲಸ ಮಾಡುತ್ತಿದ್ದುದು ದಾಖಲಾಗಿದೆ. ಈ ಮುಳ್ಳುಬೇಲಿಗೆ ಇನ್ನೊಂದು ಅಧಿಕೃತ, ಅಧಿಕಾರಯುತ ಹೆಸರೂ ಇತ್ತು: ‘ಇನ್‌ಲ್ಯಾಂಡ್ ಕಸ್ಟಂಸ್ ಲೈನ್’!
ಈ ಮಹಾನ್ ಬೇಲಿಯು ಸುಸ್ಥಿತಿಯಲ್ಲಿದ್ದ ಸಮಯದಲ್ಲಿ ಎಷ್ಟು ದಟ್ಟವಾಗಿ ಬೆಳೆದಿತ್ತೆಂದರೆ ಅದರ ಮೂಲಕ ಮನುಷ್ಯರಾಗಲೀ, ಹೇರು ಪ್ರಾಣಿಗಳಾಗಲೀ ನುಗ್ಗುವುದು ಅಸಾಧ್ಯವಾಗಿತ್ತು. ಬೇಲಿಯುದ್ದಕ್ಕೂ ಸಾಗಿದ್ದ ಕಾಲ್ದಾರಿ ಯಲ್ಲಿ ನಡೆಯುತ್ತಾ ಹೋದರೆ, ಅಲ್ಲಲ್ಲಿ ಅದನ್ನು ದಾಟಲು ದಾರಿಯನ್ನು ಮಾಡಲಾಗಿತ್ತು. ಅದೇ ಸುಂಕ ವಸೂಲಿ ಮಾಡುವ ಸ್ಥಳ. ಮುಖ್ಯವಾಗಿ ಉಪ್ಪಿನ ಮೇಲೆ ಅಽಕ ಸುಂಕವನ್ನು ಆಗ ವಸೂಲು ಮಾಡುತ್ತಿದ್ದರು. ಜತೆಗೆ ಸಕ್ಕರೆ, ಅಫೀಮು ಮೊದಲಾದ ವಸ್ತುಗಳ ಮೇಲೂ ಸುಂಕ ವಸೂಲಿಯಾಗುತ್ತಿತ್ತು.
ನಾಲ್ಕಾರು ಅಡಿ ಅಗಲದ ಈ ಮುಳ್ಳುಬೇಲಿಯನ್ನು ಬೆಳೆಸಲು, ಉಸ್ತುವಾರಿ ನೋಡಿಕೊಳ್ಳಲು ಬ್ರಿಟಿಷರು ಒಂದು ಬಲಿಷ್ಠ ವ್ಯವಸ್ಥೆಯನ್ನೇ ರೂಪಿಸಿದ್ದರು. ಬೇಲಿಯುದ್ದಕ್ಕೂ ಕಚ್ಚಾ ರಸ್ತೆ ಅಥವಾ ಕಾಲ್ದಾರಿ ಇರುತ್ತಿತ್ತು. ಅದನ್ನು ಪ್ರತಿದಿನ ಕೆಲಸಗಾರರು ಮುಳ್ಳಿನ ಪೊರಕೆಯಿಂದ ಗುಡಿಸಬೇಕಿತ್ತು. ನಂತರ, ಆ ಧೂಳುದಾರಿಯಲ್ಲಿ ಯಾರೇ ಸಾಗಿದರೂ ಹೆಜ್ಜೆಗುರುತು ಮೂಡುತ್ತಿತ್ತು. ಅದನ್ನು ಕಂಡು ಸುಂಕ ವಸೂಲಿ ಸಿಬ್ಬಂದಿ ಜಾಗೃತರಾಗಿ ಅಧಿಕಾರ ಚಲಾಯಿಸು ತ್ತಿದ್ದರು. ಬೇಸಗೆಯಲ್ಲಿ ಮುಳ್ಳಿನ ಗಿಡಗಳಿಗೆ ನೀರು ಹಾಕುವ ವ್ಯವಸ್ಥೆಯಿತ್ತು. ಕೆರೆಗಳು ಇಲ್ಲದ ಜಾಗದಲ್ಲಿ, ಅದಕ್ಕೆಂದೇ ಬಾವಿಯನ್ನು ತೋಡಲಾಗಿತ್ತು!
ಪ್ರತಿ 10ರಿಂದ 15 ಮೈಲಿ ಅಂತದಲ್ಲಿ, ಉಸ್ತುವಾರಿ ನೋಡಿಕೊಳ್ಳಲು ಒಬ್ಬ ಜಮೇದಾರ್ ಮತ್ತು 10 ನೌಕರರಿದ್ದರು. ಪಂಜಾಬಿನ ಸಿಂಧೂ ನದಿಯ ದಡದಿಂದ ಆರಂಭಗೊಂಡ ಈ ಮುಳ್ಳುಬೇಲಿಯು, ದೆಹಲಿ, ಆಗ್ರಾ ಮೊದಲಾದ ಸ್ಥಳಗಳನ್ನು ಸುತ್ತುವರಿದು, ಒಡಿಶಾ ಗಡಿಯ ತನಕ ಮುಂದುವರಿದಿತ್ತು. 2500 ಮೈಲಿ ಉದ್ದದ ಈ ಬೇಲಿಯು ಬ್ರಿಟಿಷ್ ರಾಜ್‌ನ ಕುಖ್ಯಾತ ಸಾಧನೆ. 1869-70ರಲ್ಲಿ ಬ್ರಿಟಿಷ್ ಸರಕಾರವು ಸುಮಾರು 1.25 ಕೋಟಿ ರುಪಾಯಿಗಳನ್ನು ಉಪ್ಪಿನ ಮೇಲಿನ ಸುಂಕದ ರೂಪದಲ್ಲಿ ಸಂಗ್ರಹಿಸಿತ್ತು. ಈ ಮೊತ್ತವು 1877ರಲ್ಲಿ 2.91 ಕೋಟಿ ರುಪಾಯಿಗಳಿಗೆ ಏರಿತು!
ಸಕ್ಕರೆಯ ಮೇಲಿನ ಸುಂಕದಿಂದ ವಾರ್ಷಿಕ ಸುಮಾರು 10 ಲಕ್ಷ ರುಪಾಯಿ ಬರುತ್ತಿತ್ತು. ಆದರೆ ಬಡವರ ಜೀವನಾವ ಶ್ಯಕ ವಸ್ತುವಾಗಿದ್ದ ಉಪ್ಪಿನ ಮೇಲೆ ಅಂದು ವಿಧಿಸಿದ ಅತಿಯಾದ ತೆರಿಗೆ ಅಮಾನವೀಯ. 1888ರಲ್ಲಿ ಒಂದು ಮೌಂಡ್ (ಸುಮಾರು 37 ಕೆ.ಜಿ.) ಉಪ್ಪಿಗೆ ಬ್ರಿಟಿಷರು ವಿಧಿಸಿದ ತೆರಿಗೆ ರು.2.50 (ಕೆಲವು ಪ್ರದೇಶದಲ್ಲಿ ತುಸು ಕಡಿಮೆ). ಅದು ಅಂದಿನ ಒಬ್ಬ ಕೃಷಿ ಕಾರ್ಮಿಕನ ಒಂದು ತಿಂಗಳ ವೇತನಕ್ಕಿಂತ ಜಾಸ್ತಿ!
1879ರ ಎಪ್ರಿಲ್ ೧ರಿಂದ ಜೀವಂತ ಮುಳ್ಳು ಬೇಲಿಯ ಯೋಜನೆಯನ್ನು ಬ್ರಿಟಿಷರು ಕೈಬಿಟ್ಟರು. ಜತೆಗೆ, ಆ ಬೇಲಿಯುದ್ದಕ್ಕೂ ಇದ್ದ ಸುಂಕ ವಸೂಲಾತಿ ಕೇಂದ್ರಗಳು ಮುಚ್ಚಲ್ಪಟ್ಟವು. ಇದು ಮಾನವೀಯತೆಯಿಂದಲ್ಲ. ಬದಲಿಗೆ, ಉಪ್ಪಿನ ತಯಾರಿಯ ಜಾಗದಲ್ಲೇ ಸುಂಕ ವಸೂಲಿ ವ್ಯವಸ್ಥೆಯನ್ನು ಬ್ರಿಟಿಷರು ಜಾರಿಗೆ ತಂದರು. ಗುಜರಾತ್‌ನ ವಿಶಾಲ ಪ್ರದೇಶದ ಉಪ್ಪಿನ ಗಣಿಗಳನ್ನು ಬ್ರಿಟಿಷರು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರಿಂದ,ಉತ್ತರ ಭಾರತದಲ್ಲಿ ಆರಂಭಗೊಂಡು, ಮಧ್ಯಭಾರತ ದುದ್ದಕ್ಕೂ ಹಾದುಹೋಗಿ, ಒಡಿಶಾದಲ್ಲಿ ಕೊನೆಗೊಂಡಿದ್ದ ಆ ಬೇಲಿಯ ಅವಶ್ಯಕತೆ ಅವರಿಗೆ ಕಾಣಲಿಲ್ಲ. 1879ರಿಂದ ಅವಗಣನೆಗೆ ಗುರಿಯಾದ ಈ ಮುಳ್ಳುಬೇಲಿ ನಂತರದ ನಾಲ್ಕಾರು ದಶಕಗಳಲ್ಲಿ ಮೂಲೆಗುಂಪಾಯಿತು. ಕವಳಿಗಿಡ, ಪಾಪಸು ಕಳ್ಳಿ, ಜಾಲಿ ಮೊದಲಾದ ಗಿಡಗಳು ಒಣಗಿ ಹೋದವು. ಬೇಲಿಯುದ್ದಕ್ಕೂ ಹಾದುಹೋಗಿದ್ದ ಕಾವಲುಗಾರರ ದಾರಿಯು, ಕ್ರಮೇಣ ರಸ್ತೆಯಾಗಿ ಪರಿವರ್ತನೆ ಗೊಂಡು, ಇಂದಿಗೂ ಉಪಯೋಗದಲ್ಲಿದೆ. ಸುಮಾರು 4000 ಕಿ.ಮೀ. ಉದ್ದ, 10 ಅಡಿ ಎತ್ತರ, ನಾಲ್ಕಾರು ಅಡಿ ಅಗಲದ ಈ ವ್ಯವಸ್ಥಿತ ಮುಳ್ಳುಬೇಲಿಯು ಬ್ರಿಟಿಷ್ ಸರಕಾರದ ಒಂದು ಸಾಧನೆಯಾಗಿ ಹೆಸರಾಗಿ ಬೇಕಿತ್ತು. ಆದರೆ, ಹಾಗಾಗಲಿಲ್ಲ!
ಬದಲಿಗೆ, ಇಂಥ ಅಮಾನವೀಯ ‘ಮಹಾನ್ ಮುಳ್ಳುಬೇಲಿ’ಯೊಂದು ಅಸ್ತಿತ್ವದಲ್ಲಿತ್ತು ಎಂಬ ಸತ್ಯವನ್ನೇ ವ್ಯವಸ್ಥಿತ ವಾಗಿ ಮುಚ್ಚಿ ಹಾಕಿ, ಇದರ ವಿವರಗಳು ಪ್ರಚಾರಕ್ಕೆ ಬರದಂತೆ ನೋಡಿಕೊಳ್ಳಲಾಗಿತ್ತು. ಬಿಸಿಲುಗಾಲದಲ್ಲಿ ಉಂಟಾಗುವ ಡಿಹೈ ಡ್ರೇಷನ್ ತಡೆಯಲು ಎಲ್ಲರಿಗೂ ಬೇಕಿದ್ದ ಉಪ್ಪನ್ನು, ಅತಿ ಹೆಚ್ಚಿನ ತೆರಿಗೆಗೆ ಒಳಪಡಿಸಿದ್ದಕ್ಕೆ ಬ್ರಿಟಿಷ್ ಅಧಿಕಾರಿಗಳಿಗೆ ವೈಯಕ್ತಿಕವಾಗಿ ಒಳಗೊಳಗೇ ನಾಚಿಕೆ ಇದ್ದಿರಬೇಕು; ಆದ್ದರಿಂದಲೇ ಈ ಮುಳ್ಳುಬೇಲಿ ಯನ್ನು ಬೆಳೆಸಿದ ಬ್ರಿಟಿಷ್ ಸರಕಾರದ ಸಾಧನೆಯನ್ನು ಅಂದಿನ ಇತಿಹಾಸಕಾರರು ವ್ಯವಸ್ಥಿತವಾಗಿ ಮುಚ್ಚಿ ಹಾಕಿದ್ದರು. ಎಷ್ಟರ ಮಟ್ಟಿಗೆ ಎಂದರೆ, ಇಂಥದೊಂದು ಬೇಲಿ ಇತ್ತು ಎಂಬ ವಿಚಾರವೇ ಕ್ರಮೇಣ ಮರೆತು ಹೋಯಿತು!
ಈ ಅಮಾನವೀಯ ಮುಳ್ಳುಬೇಲಿಯ ಅಸ್ತಿತ್ವವು 1995ರಲ್ಲಿ ರೋಯ್ ಮೊಕ್ಸಾಮ್‌ಗೆ ಗೊತ್ತಾಗಿದ್ದು ಆಕಸ್ಮಿಕವಾಗಿ. ಬ್ರಿಟಿಷ್ ಅಧಿಕಾರಿಯೊಬ್ಬನ ಹಳೆಯ ನೆನಪುಗಳಲ್ಲಿ ಈ ಬೇಲಿಯ ಸಾಂದರ್ಭಿಕ ಪ್ರಸ್ತಾಪವನ್ನು ಕಂಡು ಆತ ಕುತೂಹಲಗೊಂಡ. ಲಂಡನ್ ವಿಶ್ವವಿದ್ಯಾಲಯದ ಲೈಬ್ರರಿಯಲ್ಲಿ ಕ್ಯುರೇಟರ್ ಆಗಿದ್ದ ರೋಯ್ ಮೊಕ್ಸಾಮ್, ಈ ಮುಳ್ಳುಬೇಲಿಯ ವಿವರ ಕಲೆ ಹಾಕಲು ಯತ್ನಿಸಿದ. ಮೊದಲಿಗೆ ಮಾಹಿತಿ ದೊರಕಲಿಲ್ಲ. ಇನ್ನಷ್ಟು ಹುಡುಕಾಡಿ, ಹಳೆಯ ಭೂಪಟಗಳನ್ನು ತಲಾಶೆ ಮಾಡಿದಾಗ, ಒಂದೊಂದೇ ವಿವರ ಬಯಲಿಗೆ ಬರತೊಡಗಿತು.
ಈ ಬೇಲಿಯನ್ನು ಹುಡುಕಿಕೊಂಡು ೩ ಬಾರಿ ಭಾರತಕ್ಕೆ ಪ್ರವಾಸ ಮಾಡಿ, ಆ ಬೇಲಿ ಹಾದುಹೋಗಿದ್ದ ಹಳ್ಳಿಗಳನ್ನು ಸಂದರ್ಶಿಸಿ, ಅಲ್ಲಿನ ಹಿರಿಯರನ್ನು ಕೇಳಿದ. ಆದರೆ ಹೆಚ್ಚಿನವರಿಗೆ ಆ ಮುಳ್ಳುಬೇಲಿಯ ಅರಿವಿರಲಿಲ್ಲ. ಕೊನೆಗೂ ಒಂದಿಬ್ಬರು ಹಿರಿಯರು ‘ಪರ್ಮಿಟ್ ಲೈನ್’ ಎಂಬ ಹೆಸರಿನ ಮುಳ್ಳುಬೇಲಿಯ ಕುರಿತು ತಮ್ಮ ಹಿರಿಯರು ಹೇಳುತ್ತಿದ್ದು ದನ್ನು ನೆನಪಿಸಿಕೊಂಡರು. ಒಂದೆರಡು ಸ್ಥಳಗಳಲ್ಲಿ ಆ ಬೇಲಿಯ ಕುರುಹುಗಳಿದ್ದುದನ್ನು ಮೊಕ್ಸಾಮ್ ಕಂಡು ಕೊಂಡ. ಸಾಕಷ್ಟು ಸಂಶೋಧನೆ ಮಾಡಿ, 2001ರಲ್ಲಿ ‘ದ ಗ್ರೇಟ್ ಇಂಡಿಯನ್ ಹೆಜ್’ ಎಂಬ ಪುಸ್ತಕವನ್ನು ಆತ ಹೊರತಂದಾಗ, ಜಗತ್ತಿನ ಇತಿಹಾಸಜ್ಞರು, ಇತಿಹಾಸ ಪ್ರಿಯರು, ಓದುಗರು ಅಚ್ಚರಿಪಟ್ಟರು, ಬೆಚ್ಚಿಬಿದ್ದರು. ಇಂಥ ಅಮಾನವೀಯ ಬೃಹತ್ ಬೇಲಿಯ ವಿವರಗಳು ಇತಿಹಾಸದಿಂದ ಮರೆಯಾಗಿದ್ದಾದರೂ ಹೇಗೆ ಎಂಬ ಅಚ್ಚರಿ ಎಲ್ಲರಲ್ಲೂ! ಅಂದು ಬ್ರಿಟಿಷರು ವಿಧಿಸಿದ ಉಪ್ಪಿನ ಮೇಲಿನ ಅಧಿಕ ಸುಂಕವು 1948ರ ತನಕ ಮುಂದುವರಿದಿತ್ತು ಎಂಬುದು ಮತ್ತೊಂದು ಅಚ್ಚರಿ. ಆತ ಬರೆದ ಪುಸ್ತಕದ ಸಂಕ್ಷಿಪ್ತ ರೂಪವು ಕನ್ನಡದಲ್ಲೂ ಪ್ರಕಟಗೊಂಡಿದೆ.
ಇದನ್ನೂ ಓದಿ: Shashidhara Halady Column: ಸಮನ್ವಯದ ಕೊರತೆಯೇ ಇದಕ್ಕೆ ಕಾರಣವೇ ?