ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ramanand Sharma Column: ಎಲ್ಲಿ ಹೋದವು ಆ ದುಡಿಯುವ ಕೈಗಳು...?

ಹಿಂದೆಲ್ಲಾ ಮನೆತುಂಬಾ ಮಕ್ಕಳಿರುತ್ತಿದ್ದರು; ಒಬ್ಬಿಬ್ಬರು ಕಲಿತು ದುಡಿಯಲು ಮನೆ ಬಿಟ್ಟು ಹೊರಹೋದರೂ, ಉಳಿದವರಿಂದ ಮನೆಯವರ ಬದುಕು ನಿರಾಳವಾಗಿ ಸಾಗುತ್ತಿತ್ತು. ಆದರೀಗ ಪರಿಸ್ಥಿತಿ ಬದಲಾಗಿದೆ. ಮನೆಯಲ್ಲಿ ಒಬ್ಬರೋ ಇಬ್ಬರೋ ಮಕ್ಕಳು ಇರುತ್ತಿದ್ದು, ಅವರು ಕಲಿತು ಜೀವನೋಪಾಯ ಅಥವಾ ಸುಖ ಜೀವನ ವನ್ನು ಅರಸುತ್ತಾ ಬೆಂಗಳೂರು, ಮುಂಬೈ, ದುಬೈ, ಇಂಗ್ಲೆಂಡ್, ಅಮೆರಿಕ ಅಥವಾ ಆಸ್ಟ್ರೇಲಿಯಾಕ್ಕೆ ತೆರಳುತ್ತಿರುವುದರಿಂದ ಊರಿನ ಮನೆಗಳು ಅಕ್ಷರಶಃ ವೃದ್ಧಾಶ್ರಮ ಗಳಾಗುತ್ತಿವೆ. ಅದರಲ್ಲೂ, ಒಮ್ಮೆ ವಿದೇಶಕ್ಕೆ ಹೋದವರು ಮನೆಗೆ ಮರಳುವುದು ವಿರಳ.

ಎಲ್ಲಿ ಹೋದವು ಆ ದುಡಿಯುವ ಕೈಗಳು...?

Profile Ashok Nayak Mar 12, 2025 7:12 AM

ವಿಶ್ಲೇಷಣೆ

ರಮಾನಂದ ಶರ್ಮ

ಹಿಂದೆಲ್ಲಾ ಮನೆತುಂಬಾ ಮಕ್ಕಳಿರುತ್ತಿದ್ದರು; ಒಬ್ಬಿಬ್ಬರು ಕಲಿತು ದುಡಿಯಲು ಮನೆಬಿಟ್ಟು ಹೊರಹೋದರೂ, ಉಳಿದವರಿಂದ ಮನೆಯವರ ಬದುಕು ನಿರಾಳವಾಗಿ ಸಾಗುತ್ತಿತ್ತು. ಆದರೀಗ ಪರಿಸ್ಥಿತಿ ಬದಲಾಗಿದೆ. ಮನೆಯಲ್ಲಿ ಒಬ್ಬರೋ ಇಬ್ಬರೋ ಮಕ್ಕಳು ಇರುತ್ತಿದ್ದು, ಅವರು ಕಲಿತು ಜೀವನೋಪಾಯ ಅಥವಾ ಸುಖ ಜೀವನ ವನ್ನು ಅರಸುತ್ತಾ ಬೆಂಗಳೂರು, ಮುಂಬೈ, ದುಬೈ, ಇಂಗ್ಲೆಂಡ್, ಅಮೆರಿಕ ಅಥವಾ ಆಸ್ಟ್ರೇಲಿಯಾಕ್ಕೆ ತೆರಳುತ್ತಿರುವುದರಿಂದ ಊರಿನ ಮನೆಗಳು ಅಕ್ಷರಶಃ ವೃದ್ಧಾಶ್ರಮ ಗಳಾಗುತ್ತಿವೆ. ಅದರಲ್ಲೂ, ಒಮ್ಮೆ ವಿದೇಶಕ್ಕೆ ಹೋದವರು ಮನೆಗೆ ಮರಳುವುದು ವಿರಳ.

ಇಂದು ಯಾರ ಮನೆಗೇ ಹೋಗಿ ಬಂಧು-ಮಿತ್ರರನ್ನು ಭೇಟಿಯಾಗಲಿ, ಮಾಮೂಲು ರಾಜಕೀಯ, ಹವಾಮಾನ, ಕ್ರಿಕೆಟ್, ಬಾಲಿವುಡ್ ಗಿಂತ ಹೆಚ್ಚಾಗಿ, “ಮನೆಯ ಗಂಡುಮಕ್ಕಳಿಗೆ ವಧು ಸಿಗುತ್ತಿಲ್ಲ, ಮನೆ-ತೋಟ-ಜಮೀನುಗಳ ಕೆಲಸಕ್ಕೆ ಕಾರ್ಮಿಕರು ಸಿಗುತ್ತಿಲ್ಲ, ಅವರು ಬಯಸುವ ಕೂಲಿ ನೀಡಲಾಗುತ್ತಿಲ್ಲ" ಎಂಬ ಮಾತುಗಳೇ ಮುನ್ನೆಲೆಯಲ್ಲಿರುತ್ತವೆ.

ಇದನ್ನೂ ಓದಿ: Ramanand Sharma Column: ರಾಜಕೀಯ ವೀಕ್ಷಕರ ಊಹೆ ಸುಳ್ಳಾಗಲಿಲ್ಲ

ಕೆಲವರಿಗೆ ಇದು ಅತಿಶಯೋಕ್ತಿ ಎನಿಸಬಹುದು, ಆದರೆ ಇದು ಸತ್ಯ. ದೇಶದ ಇನ್ನಿತರೆಡೆ ಹೇಗೋ? ಆದರೆ ದಕ್ಷಿಣದಲ್ಲಿ, ಮುಖ್ಯವಾಗಿ ಕರ್ನಾಟಕದಲ್ಲಿ ಈ ಸಮಸ್ಯೆ ‘ಎಚ್ಚರಿಕೆಯ ಗಂಟೆ’ಯಾಗಿದೆ. ‘ವೈಟ್ ಕಾಲರ್’ ಉದ್ಯೋಗಸ್ಥರಲ್ಲಿ ಈ ಸಮಸ್ಯೆ ಅಷ್ಟಾಗಿ ಕಾಣದಿದ್ದರೂ, ಅಸಂಘಟಿತ ವಲಯದಲ್ಲಿ, ಮುಖ್ಯವಾಗಿ ಕೃಷಿಕರು ಮತ್ತಿತರ ಕಸುಬುಗಾರರಲ್ಲಿ ಇದು ಎದ್ದು ಕಾಣುತ್ತಿದೆ.

‘ಕೃಷಿಕಾರ್ಯಕ್ಕೆ ಕಾರ್ಮಿಕರ ಕೊರತೆ’ ಎಂಬುದು ಹಳ್ಳಿಗಳಲ್ಲಿಂದು ದಿನನಿತ್ಯದ ಮಾತು. ಮಲೆನಾಡಿನಲ್ಲಿ ಗೊನೆ ಕೊಯ್ಯುವ, ಅಡಕೆ ಸುಲಿಯುವ ಕೆಲಸಗಳಿಗೆ ಕೂಲಿಗಳಿಲ್ಲದೆ, ಸಾಂಪ್ರದಾಯಿಕ ಗೊನೆಕೊಯ್ಲು ಇತಿಹಾಸದ ಪುಟವನ್ನು ಸೇರುತ್ತಿದೆ. ಅಡಕೆ ಕೃಷಿಕರು ತಮ್ಮ ಜಮೀನಿನಲ್ಲಿನ ಅಡಕೆಯನ್ನು ಫಲಗುತ್ತಿಗೆಗೆ ನೀಡುತ್ತಿದ್ದಾರೆ.

Old House ok

ಆ ಗುತ್ತಿಗೆದಾರರು ಇಂತಿಷ್ಟು ಎಂದು ಹಣ ನೀಡಿ, ಅಡಕೆಯನ್ನು ಮರದಿಂದ ಕೊಯ್ದು ಒಯ್ಯುತ್ತಾರೆ ಹಾಗೂ ಕೊಯ್ದು, ಸುಲಿದು, ಬೇಯಿಸಿ, ಒಣಗಿಸಿ, ಮಾರುಕಟ್ಟೆಗೆ ಕಳುಹಿಸಿ, ಒಳ್ಳೆಯ ಬೆಲೆಗಾಗಿ ಕಾಯಬೇಕಾಗುವಲ್ಲಿನ ಬೆಳೆಗಾರರ ಆತಂಕವನ್ನು ನಿವಾರಿಸುತ್ತಾರೆ. ಆದರೆ “ಈ ಪರಿಪಾಠದಿಂದಾಗಿ, ಸಾಂಪ್ರದಾಯಿಕ ಗೊನೆಕೊಯ್ಲಿನಲ್ಲಿ ದಕ್ಕಬೇಕಾದ ಆದಾಯಕ್ಕಿಂತ ಸುಮಾರು ಶೇ.25-30ರಷ್ಟು ಕಡಿಮೆಯಿರುತ್ತದೆ; ಕಾರ್ಮಿಕರ ಕೊರತೆ ಯಿಂದಾಗಿ ತೋಟದ ಅಭಿವೃದ್ಧಿಯು ನಿಂತ ನೀರಾಗಿ, ಇಳುವರಿ ಕಡಿಮೆಯಾಗಿದೆ.

ಹೀಗಾಗಿ ಬಂದಷ್ಟನ್ನು ಹರಿದು ತಿನ್ನುತ್ತೇವೆ" ಎಂದು ನಿರ್ವಿಕಾರವಾಗಿ ಹೇಳುತ್ತಾರೆ ತಲೆ ತಲಾಂತರಗಳಿಂದ ಅಡಕೆ ಕೃಷಿಯನ್ನು ಮಾಡಿಕೊಂಡು ಬಂದವರು. ಈ ಪರಿಸ್ಥಿತಿಗೆ ಕಾರಣವೇನು? ದೇಶದ ಜನಸಂಖ್ಯೆಯ ನಿಯಂತ್ರಣಕ್ಕೆಂದು 4 ದಶಕಗಳಿಂದ ಯುದ್ಧೋ ಪಾದಿಯಲ್ಲಿ ಜಾರಿಗೆ ತಂದ, ‘ಚಿಕ್ಕ ಸಂಸಾರ, ಚೊಕ್ಕ ಸಂಸಾರ’, ‘ಮಿತ ಕುಟುಂಬ, ಹಿತ ಕುಟುಂಬ’, ‘ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗ’ ಎಂಬ ಘೋಷವಾಕ್ಯಗಳೊಡನೆ ಆಚರಿಸಿದ ‘ಜನಸಂಖ್ಯೆ ನಿಯಂತ್ರಿಸಿ, ದೇಶವನ್ನು ಉಳಿಸಿ’ ಎಂಬ ಅಭಿಯಾನದ ಫಲವಿದು.

ದಕ್ಷಿಣ ಭಾರತದಲ್ಲಿ ಈ ಅಭಿಯಾನವನ್ನು ಶಿಕ್ಷಿತರು-ಅಶಿಕ್ಷಿತರು, ಬಡವ-ಬಲ್ಲಿದರೆಲ್ಲರೂ ಗಂಭೀರವಾಗಿ ಅಳವಡಿಸಿಕೊಂಡಿದ್ದೇ ಈ ಪರಿಸ್ಥಿತಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ. ಒಂದು ಕಾಲಕ್ಕೆ ‘ನಾವಿಬ್ಬರು, ನಮಗೆ ಬರೇ ಮಕ್ಕಳು’ ಎನ್ನುವ ಪರಿಸ್ಥಿತಿಯಿದ್ದುದು ಕ್ರಮೇಣ ‘ನಾವಿಬ್ಬರು ನಮಗಿಬ್ಬರು’ ಎನ್ನುವಂತಾಗಿ, ತರುವಾಯದಲ್ಲಿ ‘ನಾವಿಬ್ಬರು ನಮಗೊಂದೇ ಮಗು’ ಎನ್ನುವಂತಾಗಿರುವುದು ಈ ದುರಂತಕ್ಕೆ ಕಾರಣ ಎನ್ನುತ್ತಾರೆ ಬದುಕಿನ ಮುಸ್ಸಂಜೆ ಯಲ್ಲಿರುವವರು.

ಈ ಬದಲಾವಣೆ ಮೌನವಾಗಿ ನಡೆಯುತ್ತಿದ್ದರೂ, ಅದರ ದುಷ್ಪರಿಣಾಮವನ್ನು ಜನರಾಗಲೀ ಸರಕಾರವಾಗಲೀ ಗಮನಿಸದಿರುವುದು ದುರಂತ. ವರ್ಷಗಳ ಹಿಂದೆ, ತೆಲುಗುದೇಶಂ ನಾಯಕ ಚಂದ್ರಬಾಬು ನಾಯ್ಡು, “ದೇಶದಲ್ಲಿ ಯುವಜನರ ಸಂಖ್ಯೆ ಕಡಿಮೆಯಾಗುತ್ತಿದೆ, ವೃದ್ಧರ ಸಂಖ್ಯೆ ಏರುತ್ತಿದೆ. ಅಂದರೆ, ದುಡಿಯುವ ಕೈಗಳ ಸಂಖ್ಯೆ ಕಡಿಮೆಯಾಗುತ್ತಿದೆ. ದೇಶದ ಅಭಿವೃದ್ಧಿಯ ನಿಟ್ಟಿನಲ್ಲಿ ಇದು ಅಪಾಯಕಾರಿ" ಎಂದು ಎಚ್ಚರಿಸಿದ್ದರು.

ಈ ಎಚ್ಚರಿಕೆಯನ್ನು ಅಂದು ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ; ಆದರೆ ದಿನಗಳೆದಂತೆ ನಾಯ್ಡು ಮಾತಿಗೆ ಸಹಮತ ವ್ಯಕ್ತವಾಗುತ್ತಿದೆ. 60ರ ದಶಕದಲ್ಲಿ, ದೇಶದಲ್ಲಿನ ಜನಸಂಖ್ಯಾ ಸ್ಪೋಟದ ಬಗ್ಗೆ ಪ್ರಶ್ನಿಸಿದಾಗ ಅಂದಿನ ಪ್ರಧಾನಿ ನೆಹರು, “ದೇಶದ ಅಭಿವೃದ್ಧಿಗೆ ದುಡಿಯುವ ಕೈಗಳು ಬೇಕು" ಎನ್ನುತ್ತಾ ಆ ಪ್ರಶ್ನೆಯನ್ನು ಅಲ್ಲಿಯೇ ಚಿವುಟಿದ್ದರು; ನೆಹರುರ ದೂರದೃಷ್ಟಿಯಲ್ಲಿ ಇಂದಿನ ಕಾರ್ಮಿಕರ ಕೊರತೆಯ ಮುಂಗಾಣ್ಕೆ ಇತ್ತೇನೋ ಎನಿಸುತ್ತದೆ.

“ವಿವಾಹವಾದ ನಂತರ ವಿಳಂಬ ಮಾಡದೆ ಮಕ್ಕಳನ್ನು ಹೆರಬೇಕು" ಎಂದು ಕರೆಕೊಟ್ಟಿ ದ್ದಾರೆ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್; ಈ ಕರೆಯಲ್ಲಿ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯ ಚರ್ಚಾವಿಷಯ ಅಡಕವಾಗಿದ್ದರೂ, ಜನಸಂಖ್ಯಾ ಕುಸಿತದ ಕಳವಳ ವೂ ಅದರಲ್ಲಿ ಹುದುಗಿತ್ತು ಎನ್ನಲಾಗುತ್ತಿದೆ.

ಹಿಂದೆಲ್ಲಾ ಮನೆತುಂಬಾ ಮಕ್ಕಳಿರುತ್ತಿದ್ದರು; ಒಬ್ಬಿಬ್ಬರು ಕಲಿತು ದುಡಿಯಲು ಮನೆಬಿಟ್ಟು ಹೊರಹೋದರೂ, ಉಳಿದವರಿಂದ ಮನೆಯವರ ಬದುಕು ನಿರಾಳವಾಗಿ ಸಾಗುತ್ತಿತ್ತು. ಆದರೀಗ ಪರಿಸ್ಥಿತಿ ಬದಲಾಗಿದೆ. ಮನೆಯಲ್ಲಿ ಒಬ್ಬರೋ ಇಬ್ಬರೋ ಮಕ್ಕಳು ಇರುತ್ತಿದ್ದು, ಅವರು ಕಲಿತು ಜೀವನೋಪಾಯ ಅಥವಾ ಸುಖಜೀವನವನ್ನು ಅರಸುತ್ತಾ ಬೆಂಗಳೂರು, ಮುಂಬೈ, ದುಬೈ, ಇಂಗ್ಲೆಂಡ್, ಅಮೆರಿಕ ಅಥವಾ ಆಸ್ಟ್ರೇಲಿಯಾಕ್ಕೆ ತೆರಳುತ್ತಿರುವುದರಿಂದ ಊರಿನ ಮನೆಗಳು ಅಕ್ಷರಶಃ ವೃದ್ಧಾಶ್ರಮಗಳಾಗುತ್ತಿವೆ.

ಅದರಲ್ಲೂ, ಒಮ್ಮೆ ವಿದೇಶಕ್ಕೆ ಹೋದವರು ಮನೆಗೆ ಮರಳುವುದು ವಿರಳ. ಮನೆಯವರ ಪಾಲಿಗೆ ಅವರು ಲೆಕ್ಕದಿಂದ ಹೊರಗೆ. ಇದು ಬಹುತೇಕರ ಕಥೆಯಾಗಿದ್ದು, ಮನೆಯಲ್ಲಿ ದುಡಿಯುವ ಕೈಗಳು ಕಡಿಮೆಯಾಗುತ್ತಿವೆ. ಇದು ಹಳ್ಳಿಗಳಿಗಷ್ಟೇ ಸೀಮಿತವಾಗದೆ ಪಟ್ಟಣ-ನಗರಗಳಿಗೂ ಹಬ್ಬಿರುವ ಪರಿಸ್ಥಿತಿ. ಇಲ್ಲಿನ ಅಪಾರ್ಟ್‌ಮೆಂಟ್‌ಗಳನ್ನು ಒಮ್ಮೆ ಸೂಕ್ಷ್ಮವಾಗಿ ಅವಲೋಕಿಸಿದರೆ, ಬದುಕಿನ ಸಂಧ್ಯಾಕಾಲದಲ್ಲಿರುವವರು ಪರವೂರಿನಲ್ಲಿ ಅಥವಾ ವಿದೇಶ ಗಳಲ್ಲಿ ಇರುವ ತಮ್ಮ ಮಕ್ಕಳು-ಮೊಮ್ಮಕ್ಕಳನ್ನು ನೆನೆಯುತ್ತಾ ದಿನ ಕಳೆಯುತ್ತಿರುವುದು ಕಣ್ಣಿಗೆ ರಾಚುತ್ತದೆ.

ಇನ್ನು ಹಳ್ಳಿಗಳಲ್ಲಾದರೋ, ಕೂಲಿಯವರಿಂದ ಕೆಲಸ ಮಾಡಿಸಿಕೊಂಡು, ಇರುವ ತುಂಡು ಭೂಮಿಯನ್ನು ನೋಡಿಕೊಂಡು, ಟಿವಿ ಧಾರಾವಾಹಿ, ಕ್ರಿಕೆಟ್ ಪಂದ್ಯಗಳನ್ನು ಆನಂದಿಸಿ ಕೊಂಡು, ಮಕ್ಕಳು ಬಂದುಹೋಗುವ ದಿನವನ್ನು ಕಾಯುತ್ತಿರುವ ವೃದ್ಧ ತಾಯಿ-ತಂದೆ ಯರು, ತಮ್ಮ ನಂತರ ಈ ತುಂಡುಭೂಮಿ ಯಾರ ಪಾಲಾಗಬಹುದೆಂದು ಕೊರಗುತ್ತಾ ಕೂರುವುದಿದೆ.

ಜನಸಂಖ್ಯಾ ಕುಸಿತದಿಂದ ದುಡಿಯುವ ಕೈಗಳು ಕಡಿಮೆಯಾಗಿವೆ ಎನ್ನುವುದು ಸತ್ಯ ವಾದರೂ, ಸಾಕ್ಷರತೆ ಮತ್ತು ಉನ್ನತ ಶಿಕ್ಷಣದ ವ್ಯಾಪಕತೆಯ ಪ್ರಭಾವ ಇದರಲ್ಲಿದೆ ಎನ್ನುವು ದನ್ನು ಅಲ್ಲಗಳೆಯಲಾಗದು. ಉನ್ನತ ಶಿಕ್ಷಣದ ಮೂಲಕ ಮೇಲೇರುವ ಅತೀವ ಹಂಬಲ, ಅದಕ್ಕೆ ಪೂರಕವಾಗಿ ದೊರಕಿದ ಬ್ಯಾಂಕ್ ಸಾಲ, ಇರುವ ತುಂಡುಭೂಮಿಯಲ್ಲಿ ಮನೆಯ ವರೆಲ್ಲ ಬದುಕಿನ ಬಂಡಿಯನ್ನು ಓಡಿಸಲಾಗದ ಸ್ಥಿತಿ, ಐಟಿ ಕ್ರಾಂತಿ ಮತ್ತು ಹಣಕಾಸು ವಲಯದಲ್ಲಿ ತೆರೆದುಕೊಂಡ ಉದ್ಯೋಗಾವಕಾಶಗಳು, ಯುವಜನರು ಅಧಿಕ ಸಂಖ್ಯೆಯಲ್ಲಿ ಹುಟ್ಟೂರನ್ನು ತೊರೆದು ನಗರ/ವಿದೇಶಗಳತ್ತ ಮುಖಮಾಡುವಂತೆ ಮಾಡಿವೆ.

ಕೆಲ ವರ್ಷಗಳ ಹಿಂದೆ ಕಂಡುಬಂದ ಆರ್ಥಿಕ ಸುಧಾರಣೆ, ಜಾಗತೀಕರಣ ಮತ್ತು ಉದಾರೀ ಕರಣದಂಥ ಬೆಳವಣಿಗೆಗಳು ಈ ಪರಿಪಾಠಕ್ಕೆ ಮತ್ತಷ್ಟು ಇಂಬುನೀಡಿದ್ದರಿಂದ, ಸ್ಥಳೀಯ ವಾಗಿ ದುಡಿಯುವ ಕೈಗಳ ಕೊರತೆಯಾಗುವಂತಾಯಿತು.

ಇತ್ತೀಚೆಗೆ, ಯಾವುದೋ ಕೆಲಸಕ್ಕಾಗಿ ಮಲೆನಾಡಿನಿಂದ ಬೆಂಗಳೂರಿಗೆ ಬಂದಿದ್ದ ಮಹಿಳೆ ಯೊಬ್ಬರು ಊರಿಗೆ ತೆರಳುವ ಗಡಿಬಿಡಿಯಲ್ಲಿದ್ದರು. ಕಾರಣ ಕೇಳಿದಾಗ, “ಮನೆಗೆ ಬೀಗ ಹಾಕಿ ಬಂದಿರುವೆ. ಊರಲ್ಲಿ ಕಳ್ಳರ ಕಾಟವಿದೆ. ಮನೆಯಲ್ಲಿ ಕಳ್ಳತನ ಮಾಡಲು ವಜ್ರ-ವೈಡೂ ರ್ಯ-ಆಭರಣಗಳು ಇಲ್ಲದಿದ್ದರೂ, ಕೈಗೇನೂ ಸಿಗಲಿಲ್ಲವೆಂಬ ಸಿಟ್ಟಿನಲ್ಲಿ ಅವರು ಮನೆ ಬಾಗಿಲು, ಕಪಾಟುಗಳನ್ನು ಮುರಿದು ಹೋಗುತ್ತಾರೆ.

ಅವುಗಳ ದುರಸ್ತಿಗೆ ಕೆಲಸದವರು ಸಿಗದೇ ಪರದಾಡಬೇಕಾಗುತ್ತದೆ" ಎಂದರು! ವಿಚಿತ್ರ ಎನಿಸಿದರೂ ಇದು ಸತ್ಯ. ಏಕೆಂದರೆ, ಇಂದು ಹೊಸಮನೆ ಕಟ್ಟಲಿಕ್ಕೆ ಮತ್ತಿತರ ದೊಡ್ಡ ಕೆಲಸಗಳಿಗೆ ಜನರು ಸಿಗುತ್ತಾರೆ; ಆದರೆ ಸಣ್ಣಪುಟ್ಟ ಕೆಲಸಕ್ಕೆ ಸಿಗುವುದು ದುಸ್ತರ. ಮನೆಯ ಸುಣ್ಣ-ಬಣ್ಣ, ಇಲೆಕ್ಟ್ರಿಕಲ್ ರಿಪೇರಿ, ವಾಟರ್‌ಪ್ರೂಫಿಂಗ್, ನೀರಿನ ನಲ್ಲಿಯ ದುರಸ್ತಿ ಮುಂತಾ ದ ಕೆಲಸಗಳಿಗೆ ಸ್ಥಳೀಯವಾಗಿ ಕೆಲಸಗಾರರು ಸಿಗುವುದಿಲ್ಲ, ಸಿಕ್ಕರೂ ಅವರು ಕೈಗೆ ಟುಕಲಾ ಗದಷ್ಟು ದುಬಾರಿ.

ಹೀಗಾಗಿ, ಇತ್ತೀಚಿನ ದಿನಗಳಲ್ಲಿ ಈ ಕೆಲಸಗಳಲ್ಲಿ ಬಿಹಾರಿಗಳು ಮತ್ತಿತರ ಉತ್ತರ ಭಾರತೀ ಯರ ಪಾರಮ್ಯವೇ ಕಾಣುತ್ತಿದೆ. ಮನೆಗೆಲಸಕ್ಕೂ, ಮುಂಜಾನೆಯ ಕಾರು ತೊಳೆಯು ವುದಕ್ಕೂ ವಲಸಿಗರೇ ಬೇಕು. ಬಡಾವಣೆಯೊಂದರ ಅಪಾರ್ಟ್ ಮೆಂಟ್‌ನಲ್ಲಿ ವಾಚ್‌ಮನ್ ಕೆಲಸ ಮಾಡುವ ನೇಪಾಳಿಯೊಬ್ಬ ದಿನಾಲು ಸುಮಾರು 30 ಕಾರುಗಳನ್ನು ತೊಳೆದರೆ, ಅವನ ಪತ್ನಿ ನಾಲ್ಕಾರು ಮನೆಗಳಲ್ಲಿ ಮನೆಗೆಲಸ ಮಾಡುತ್ತಾಳೆ. ಆತ ಬೆಂಗಳೂರಿಗೆ ಬಂದ 4 ವರ್ಷದಲ್ಲಿ ಇಲ್ಲಿ ದುಡಿದು ನೇಪಾಳದಲ್ಲಿ ಮನೆ ಕಟ್ಟಿಸಿದನಂತೆ! ಇಂಥವರು ಅದೆಷ್ಟು ಜನರಿದ್ದಾರೋ? ಹೀಗಾಗಿ, ಇಲ್ಲಿ ಹುಟ್ಟುವ ಒಂದಿಷ್ಟು ಪ್ರಶ್ನೆಗಳೆಂದರೆ- ಇಂಥ ಕೆಲಸ ಗಳನ್ನು ಮಾಡಲು ಸ್ಥಳೀಯವಾಗಿ ಜನರಿಲ್ಲವೇ? ಇದ್ದರೂ ಅವರು ಇಂಥ ಕೆಲಸಗಳನ್ನು ಮಾಡುವುದಿಲ್ಲವೇ? ಅವರನ್ನು ಕೀಳರಿಮೆ ಬಾಧಿಸುತ್ತಿದೆಯೇ? ಇಂಥ ಕೆಲಸಗಳನ್ನು ಮಾಡಲು ಬೆಂಗಳೂರಿನಲ್ಲಿ ಉತ್ತರ ಭಾರತೀಯರ ಮಾಲೀಕತ್ವದ ಕೆಲವು ಏಜೆನ್ಸಿಗಳಿದ್ದು, ಅಲ್ಲಿನವರಿಗೆ ಒಂದು ಫೋನಾಯಿಸಿದರೆ ಸಮಯಕ್ಕೆ ಸರಿಯಾಗಿ ಕೆಲಸವನ್ನು ಪೂರೈಸಿ ಹೋಗುತ್ತಾರೆ.

ಇದು ನಮ್ಮವರಿಂದೇಕೆ ಸಾಧ್ಯವಿಲ್ಲ? ಒಂದು ಕಾಲಕ್ಕೆ ಉಡುಪಿ ಹೋಟೆಲ್ ಗಳಲ್ಲಿ ಕರಾ ವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕದ ಹುಡುಗರು ಕೆಲಸ ಮಾಡುವುದನ್ನು ಕಾಣ ಬಹುದಾಗಿತ್ತು. ಆದರೆ ಇಂದು ಅವರ ಜಾಗವನ್ನು ಹಿಂದಿವಾಲಾಗಳು, ನೇಪಾಳಿಗಳು ಮತ್ತು ಈಶಾನ್ಯ ಭಾರತೀಯರು ಆಕ್ರಮಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಉತ್ತರ ಭಾರತೀಯರು ಮಾಡುವ ‘ಬೆಂಗಳೂರು ನಮ್ಮಿಂದಲೇ ಅಭಿವೃದ್ಧಿಯಾಗಿದೆ, ಆಗುತ್ತಿದೆ’ ಎಂಬ ಕಾಮೆಂಟುಗಳನ್ನು ಸಂಪೂರ್ಣ ತಳ್ಳಿಹಾಕುವಂತಿಲ್ಲ. ಕೋವಿಡ್ ಸಮಯದಲ್ಲಿ ವಲಸಿಗರು ಟ್ರೇನ್ ತುಂಬಿ ತಮ್ಮೂರುಗಳಿಗೆ ಮರಳಿದಾಗ, ಬೆಂಗಳೂರಿಗರಿಗೂ ಕಾರ್ಮಿಕರ ಕೊರತೆಯ ಅನುಭವವಾಗಿತ್ತು, ಕಟ್ಟಡ ನಿರ್ಮಾಣ ಚಟುವಟಿಕೆಯು ಬಹುತೇಕ ನಿಂತಿತ್ತು..!

(ಲೇಖಕರು ಅರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)