ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bank Mergers: 15 ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳ ವಿಲೀನ; ಏನೆಲ್ಲಾ ಬದಲಾಗುತ್ತೆ ಗೊತ್ತೇ?

ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ (Regional Rural Bank) ಗಳ ವಿಲೀನ ಕಾರ್ಯ ಇಂದಿನಿಂದ ಆಂಧ್ರಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ ಮತ್ತು ರಾಜಸ್ಥಾನದಲ್ಲಿ ನಡೆಯಲಿದೆ. ಹೀಗಾಗಿ ಕೆಲವು ಬದಲಾವಣೆಗಳನ್ನು ಗ್ರಾಹಕರು ನಿರೀಕ್ಷಿಸಬಹುದು. ಅದು ಏನು, ಹೇಗೆ ? ಎನ್ನುವ ಕುರಿತು ಇಲ್ಲಿದೆ ಮಾಹಿತಿ.

ಬ್ಯಾಂಕ್ ಗಳ ವಿಲೀನದಿಂದ ಏನು ಬದಲಾವಣೆ ?

ನವದೆಹಲಿ: ಬ್ಯಾಂಕಿಂಗ್ (banking) ಕ್ಷೇತ್ರದಲ್ಲಿ ಈ ತಿಂಗಳಲ್ಲಿ ಹಲವಾರು ಬದಲಾವಣೆಗಳು ಆಗಿವೆ. ಈ ಬಗ್ಗೆ ತಿಳಿದುಕೊಂಡು ಬ್ಯಾಂಕ್ ಗಳಿಗೆ ತೆರಳುವುದು ಒಳ್ಳೆಯದು. ಎಟಿಎಂ (ATM transaction) ವಹಿವಾಟಿಗೆ ಸಂಬಂಧಿಸಿ ಹೊಸ ನಿಯಮಗಳು (New Rule) ಇಂದಿನಿಂದ ಅಂದರೆ ಮೇ 1 ರಿಂದ ಜಾರಿಯಾಗುವುದರೊಂದಿಗೆ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ (Regional Rural Bank) ಗಳ ವಿಲೀನ ಕಾರ್ಯವು ಕೂಡ ಇಂದಿನಿಂದ ನಡೆಯಲಿದೆ. ಹೀಗಾಗಿ ಬ್ಯಾಂಕ್ ವಹಿವಾಟುಗಳಲ್ಲಿ ಕೊಂಚ ವಿಳಂಬ, ಅಡೆತಡೆಗಳನ್ನು ಗ್ರಾಹಕರು ಎದುರಿಸಬೇಕಾಗಬಹುದು. ಈಗಾಗಲೇ ಸರ್ಕಾರವು ಒಂದು ರಾಜ್ಯ ಒಂದು ಆರ್‌ಆರ್‌ಬಿ ನೀತಿಗೆ ಹಸಿರು ನಿಶಾನೆ ತೋರಿದೆ. ಇದರಿಂದ ಗ್ರಾಮೀಣ ಬ್ಯಾಂಕುಗಳ ಸಂಖ್ಯೆ 43 ರಿಂದ 28 ಕ್ಕೆ ಇಳಿಯಲಿದೆ.

ಮೇ 1ರಿಂದ ಜಾರಿಯಾಗಲಿರುವ ಒಂದು ರಾಜ್ಯ ಒಂದು ಆರ್‌ಆರ್‌ಬಿ ನೀತಿಯಿಂದಾಗಿ ದೇಶದ ಈ 43 ಪ್ರಾದೇಶಿಕ ಬ್ಯಾಂಕುಗಳ ಗ್ರಾಹಕರ ಮೇಲೆ ಅದು ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ಮೊದಲೇ ತಿಳಿದುಕೊಂಡಿರುವುದು ಒಳ್ಳೆಯದು. ಪ್ರಾದೇಶಿಕ ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಆಂಧ್ರಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ ಮತ್ತು ರಾಜಸ್ಥಾನದಲ್ಲಿ ಈ ತಿಂಗಳ ಆರಂಭದಲ್ಲೇ ಪ್ರಾರಂಭವಾಗಲಿದೆ.

ಏನು ಉದ್ದೇಶ ?

ಪ್ರಾದೇಶಿಕ ಬ್ಯಾಂಕುಗಳ ಸೇವೆಯನ್ನು ಅತ್ಯುತ್ತಮಗೊಳಿಸಲು ಈ ವಿಲೀನ ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ. ದೇಶಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಗಳನ್ನು ಕೈಗೆಟುಕುವಂತೆ ಮಾಡಲು ಕೇಂದ್ರ ಸರ್ಕಾರವು 11 ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 15 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು (RRB) ವಿಲೀನಗೊಳಿಸಲಿದೆ. ಇದರಿಂದ ದೇಶದಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳ ಸಂಖ್ಯೆ 43 ರಿಂದ 28 ಕ್ಕೆ ಇಳಿಯಲಿದೆ.

ಯಾವ ರಾಜ್ಯಗಳಲ್ಲಿ ಜಾರಿ ?

ಗ್ರಾಮೀಣ ಬ್ಯಾಂಕ್ ವಿಲೀನ ಪ್ರಕ್ರಿಯೆಯ ಅಧಿಸೂಚನೆಯ ಪ್ರಕಾರ ಆಂಧ್ರಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ ಮತ್ತು ರಾಜಸ್ಥಾನದಲ್ಲಿ ಇದು ಜಾರಿಯಾಗಲಿದೆ.ಇನ್ನು ಮುಂದೆ ಪ್ರತಿ ರಾಜ್ಯದಲ್ಲಿ ಒಂದೇ ಒಂದು ಆರ್‌ಆರ್‌ಬಿ ಬ್ಯಾಂಕ್ ಇರುತ್ತದೆ. ಎಲ್ಲಾ ಆರ್‌ಆರ್‌ಬಿಗಳನ್ನು ಒಂದುಗೂಡಿಸುವ ಮೂಲಕ ಸದೃಢವಾದ ಬ್ಯಾಂಕ್ ಅನ್ನು ರಚಿಸಲಾಗುತ್ತದೆ. ಇದು ತನ್ನ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತದೆ.

ವಿಲೀನ ಪ್ರಕ್ರಿಯೆ ಹೇಗೆ?

  • ಗ್ರಾಮೀಣ ಬ್ಯಾಂಕ್ ಗಳನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಇಂಡಿಯನ್ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಾಯೋಜಿಸುವ ಗ್ರಾಮೀಣ ಬ್ಯಾಂಕ್ ಗಳ ಅಡಿಯಲ್ಲಿ ವಿಲೀನಗೊಳಿಸಲಾಗುತ್ತದೆ.
  • ಆಂಧ್ರಪ್ರದೇಶದಲ್ಲಿ ನಾಲ್ಕು ಆರ್‌ಆರ್‌ಬಿ ಬ್ಯಾಂಕುಗಳಾದ ಚೈತನ್ಯ ಗೋದಾವರಿ ಗ್ರಾಮೀಣ ಬ್ಯಾಂಕ್, ಆಂಧ್ರ ಪ್ರಗತಿ ಗ್ರಾಮೀಣ ಬ್ಯಾಂಕ್, ಸಪ್ತಗಿರಿ ಗ್ರಾಮೀಣ ಬ್ಯಾಂಕ್ ಮತ್ತು ಆಂಧ್ರಪ್ರದೇಶ ಗ್ರಾಮೀಣ ವಿಕಾಸ್ ಬ್ಯಾಂಕ್ ಅನ್ನು ವಿಲೀನಗೊಳಿಸಿ ಆಂಧ್ರಪ್ರದೇಶ ಗ್ರಾಮೀಣ ಬ್ಯಾಂಕ್ ಅನ್ನು ರೂಪಿಸಲಾಗುತ್ತದೆ. ಇದರ ಪ್ರಧಾನ ಕಚೇರಿ ಅಮರಾವತಿಯಲ್ಲಿರುತ್ತದೆ ಮತ್ತು ಪ್ರಾಯೋಜಕ ಬ್ಯಾಂಕ್ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಆಗಿರುತ್ತದೆ.
  • ಉತ್ತರ ಪ್ರದೇಶದಲ್ಲಿ ಬರೋಡಾ ಯುಪಿ ಬ್ಯಾಂಕ್, ಆರ್ಯವರ್ತ್ ಬ್ಯಾಂಕ್ ಮತ್ತು ಪ್ರಥಮ್ ಯುಪಿ ಗ್ರಾಮೀಣ ಬ್ಯಾಂಕ್ ಅನ್ನು ವಿಲೀನಗೊಳಿಸಿ ಉತ್ತರ ಪ್ರದೇಶ ಗ್ರಾಮೀಣ ಬ್ಯಾಂಕ್ ಅನ್ನು ರೂಪಿಸಲಾಗುತ್ತದೆ. ಇದರ ಪ್ರಧಾನ ಕಚೇರಿ ಲಕ್ನೋದಲ್ಲಿರುತ್ತದೆ. ಪ್ರಾಯೋಜಕ ಬ್ಯಾಂಕ್ ಬರೋಡಾ ಬ್ಯಾಂಕ್ ಆಗಿರುತ್ತದೆ.
  • ಪಶ್ಚಿಮ ಬಂಗಾಳದಲ್ಲಿ, ಬಂಗಿಯಾ ಗ್ರಾಮೀಣ ವಿಕಾಸ್ ಬ್ಯಾಂಕ್, ಪಶ್ಚಿಮ ಬಂಗಾಳ ಗ್ರಾಮೀಣ ಬ್ಯಾಂಕ್ ಮತ್ತು ಉತ್ತರ ಬಂಗಾಳ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳನ್ನು ವಿಲೀನಗೊಳಿಸಿ ಪಶ್ಚಿಮ ಬಂಗಾಳ ಗ್ರಾಮೀಣ ಬ್ಯಾಂಕ್ ಆಗಿ ರೂಪಿಸಲಾಗುವುದು.
  • ಬಿಹಾರದಲ್ಲಿ ದಕ್ಷಿಣ ಬಿಹಾರ ಗ್ರಾಮೀಣ ಬ್ಯಾಂಕ್ ಮತ್ತು ಉತ್ತರ ಬಿಹಾರ ಗ್ರಾಮೀಣ ಬ್ಯಾಂಕ್‌ಗಳನ್ನು ವಿಲೀನಗೊಳಿಸಿ ಬಿಹಾರ ಗ್ರಾಮೀಣ ಬ್ಯಾಂಕ್ ಅನ್ನು ರೂಪಿಸಲಾಗುವುದು. ಪಂಜಾಬ್ ನ್ಯಾಷನಲ್ ಬ್ಯಾಂಕ್ ಪ್ರಾಯೋಜಕರಾಗಿರುತ್ತಾರೆ.
  • ಗುಜರಾತ್‌ನಲ್ಲಿ, ಬರೋಡಾ ಗುಜರಾತ್ ಗ್ರಾಮೀಣ ಬ್ಯಾಂಕ್ ಮತ್ತು ಸೌರಾಷ್ಟ್ರ ಗ್ರಾಮೀಣ ಬ್ಯಾಂಕ್‌ಗಳನ್ನು ವಿಲೀನಗೊಳಿಸಿ ಗುಜರಾತ್ ಗ್ರಾಮೀಣ ಬ್ಯಾಂಕ್ ಆಗಿ ರೂಪಿಸಲಾಗುವುದು.
  • ಜಮ್ಮು ಮತ್ತು ಕಾಶ್ಮೀರದಲ್ಲಿ ಜೆ ಆಂಡ್ ಕೆ ಗ್ರಾಮೀಣ ಬ್ಯಾಂಕ್ ಮತ್ತು ಎಲ್ಲಕ್ವೈ ಗ್ರಾಮೀಣ ಬ್ಯಾಂಕ್‌ಗಳನ್ನು ವಿಲೀನಗೊಳಿಸಿ ಜಮ್ಮು ಮತ್ತು ಕಾಶ್ಮೀರ ಗ್ರಾಮೀಣ ಬ್ಯಾಂಕ್ ಆಗಿ ರೂಪಿಸಲಾಗುವುದು. ಪ್ರಧಾನ ಕಚೇರಿ ಜಮ್ಮುವಿನಲ್ಲಿಯೇ ಉಳಿಯುತ್ತದೆ.
  • ಅದೇ ರೀತಿ ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ ಮತ್ತು ರಾಜಸ್ಥಾನದಲ್ಲಿ ತಲಾ ಎರಡು ಆರ್‌ಆರ್‌ಬಿಗಳನ್ನು ವಿಲೀನಗೊಳಿಸಿ ತಲಾ ಒಂದು ಹೊಸ ಆರ್‌ಆರ್‌ಬಿಯನ್ನು ರೂಪಿಸಲಾಗುವುದು.

ಇದನ್ನೂ ಓದಿ: Roopa Gururaj Column: ಹಾಲಿನ ಪಾಲು ಹಾಲಿಗೆ ನೀರಿನ ಪಾಲು ನೀರಿಗೆ

ಹೊಸ ಆರ್‌ಆರ್‌ಬಿ ಹೇಗಿರುತ್ತವೆ?

ಆರ್‌ಆರ್‌ಬಿಯ ಅಧಿಕೃತ ಬಂಡವಾಳ 2,000 ಕೋಟಿ ರೂ. ಆಗಿದ್ದು ಹೊಸ ಬ್ಯಾಂಕುಗಳ ನಿರ್ವಹಣೆ ಮತ್ತು ಕಾರ್ಯಾಚರಣೆಯು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಇದು ಗ್ರಾಹಕರಿಗೆ ಉತ್ತಮ ಸೇವೆಗಳನ್ನು ಒದಗಿಸುವ ಭರವಸೆಯನ್ನು ನೀಡುತ್ತದೆ. ಈ ಬದಲಾವಣೆಯು ಈ ಹಿಂದೆ 3 ಬಾರಿ ನಡೆದಿದೆ. ಇದು ಈಗ ನಾಲ್ಕನೇ ಹಂತವಾಗಿದೆ. ಮೊದಲ ಹಂತ 2006- 2010ರ ನಡುವೆ ನಡೆದಿದ್ದು, ಆಗ ಆರ್‌ಆರ್‌ಬಿಗಳ ಸಂಖ್ಯೆಯನ್ನು 196 ರಿಂದ 82ಕ್ಕೆ ಇಳಿಸಲಾಯಿತು. ಎರಡನೇ ಹಂತ 2013- 2015ರಲ್ಲಿ ನಡೆದಿದ್ದು, ಇದನ್ನು 82 ರಿಂದ 56ಕ್ಕೆ ಇಳಿಸಲಾಯಿತು. ಮೂರನೇ ಹಂತದಲ್ಲಿ 56 ರಿಂದ 43ಕ್ಕೆ ಇಳಿಸಲಾಗಿದ್ದು, ಇದೀಗ ನಾಲ್ಕನೇ ಹಂತದ ಬಳಿಕ ಆರ್‌ಆರ್‌ಬಿಗಳ ಸಂಖ್ಯೆ 28 ಇಳಿಯಲಿದೆ.

ಬ್ಯಾಂಕ್ ವಿಲೀನದ ಪರಿಣಾಮ ?

ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳ ವಿಲೀನದಿಂದ ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರದಿದ್ದರೂ ಕೆಲವೊಂದು ಬದಲಾವಣೆಗಳಾಗುವ ಸಾಧ್ಯತೆಗಳಿವೆ. ಇದು ಠೇವಣಿ, ಉಳಿತಾಯ, ಸಾಲಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಬ್ಯಾಂಕ್ ಹೆಸರು, ಐಎಫ್ ಎಸ್ ಸಿ ಕೋಡ್ ಬದಲಾಗುತ್ತದೆ. ಬ್ಯಾಂಕ್ ಗಳ ವಿಲೀನದ ಬಳಿಕ ಗ್ರಾಹಕರು ಪಾಸ್ ಪುಸ್ತಕ, ಚೆಕ್ ಬುಕ್ ಬದಲಾಯಿಸಬೇಕಾಗುತ್ತದೆ. ಗ್ರಾಹಕರ ಐಡಿ ಅಥವಾ ಖಾತೆ ಸಂಖ್ಯೆ ಬದಲಾಗುವ ಸಾಧ್ಯತೆ ಇದೆ. ಈಗಾಗಲೇ ಜಮೆ ಮಾಡಿರುವ ಹಣ, ಬ್ಯಾಂಕ್ ಬ್ಯಾಲೆನ್ಸ್, ಎಫ್ ಡಿ, ಆರ್ ಡಿ ಮೇಲೆ ಇದು ಯಾವ ಪರಿಣಾಮವನ್ನೂ ಬೀರುವುದಿಲ್ಲ.