ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WAVES-2025: ಮುಂಬೈಯಲ್ಲಿ ದೇಶದ ಮಾಧ್ಯಮ, ಮನೋರಂಜನಾ ಕ್ಷೇತ್ರದ ನಾವೀನ್ಯತೆಯ ಪ್ರದರ್ಶನ

ಭಾರತದಲ್ಲಿಇದೇ ಮೊದಲ ಬಾರಿಗೆ ವಿಶ್ವ ಆಡಿಯೋ ದೃಶ್ಯ ಮತ್ತು ಮನರಂಜನಾ ಶೃಂಗಸಭೆಯಾದ ವೇವ್ಸ್ 2025 ಮುಂಬೈಯಲ್ಲಿ ಗುರುವಾರ ಆರಂಭಗೊಂಡಿದ್ದು ಮೇ 4ರವರೆಗೆ ನಡೆಯಲಿದೆ. ಭಾರತ ಸರ್ಕಾರದಿಂದ ಆಯೋಜಿಸಿರುವ ನಾಲ್ಕು ದಿನಗಳ ಈ ಜಾಗತಿಕ ಶೃಂಗಸಭೆಯಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ತನ್ನ ಮಾಧ್ಯಮ, ಮನರಂಜನೆ ಮತ್ತು ಡಿಜಿಟಲ್ ಕ್ಷೇತ್ರದ ನಾವೀನ್ಯತೆಯನ್ನು ಪ್ರದರ್ಶಿಸಲಿದೆ.

ವಿಶ್ವ ಆಡಿಯೋ ದೃಶ್ಯ, ಮನರಂಜನಾ ಶೃಂಗಸಭೆಗೆ ಚಾಲನೆ

ಮುಂಬೈ: ಭಾರತದಲ್ಲಿಇದೇ ಮೊದಲ ಬಾರಿಗೆ ವಿಶ್ವ ಆಡಿಯೋ ದೃಶ್ಯ ಮತ್ತು ಮನರಂಜನಾ ಶೃಂಗಸಭೆಯಾದ (World Audio Visual and Entertainment Summit) ವೇವ್ಸ್ 2025 (WAVES- 2025) ಗುರುವಾರ ಮುಂಬೈಯಲ್ಲಿ ಆರಂಭಗೊಂಡಿದ್ದು, ಮೇ 4ರವರೆಗೆ ನಡೆಯಲಿದೆ. ಇದು ದೇಶದ ಮಾಧ್ಯಮ ಮತ್ತು ಮನರಂಜನಾ (media and entertainment) ಉದ್ಯಮಕ್ಕೆ ಒಂದು ಮಹತ್ವದ ಕ್ಷಣ ಎಂದು ಬಣ್ಣಿಸಲಾಗುತ್ತಿದೆ. ಭಾರತ ಸರ್ಕಾರದಿಂದ ಆಯೋಜಿಸಿರುವ 4 ದಿನಗಳ ಈ ಜಾಗತಿಕ ಶೃಂಗಸಭೆಯಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ತನ್ನ ಮಾಧ್ಯಮ, ಮನರಂಜನೆ ಮತ್ತು ಡಿಜಿಟಲ್ ಕ್ಷೇತ್ರದ ನಾವೀನ್ಯತೆಯನ್ನು ಪ್ರದರ್ಶಿಸಲಿದೆ.

ನಾಲ್ಕು ದಿನಗಳ ವೇವ್ಸ್ ಶೃಂಗಸಭೆಯಲ್ಲಿ 10,000 ಕ್ಕೂ ಹೆಚ್ಚು ಪ್ರತಿನಿಧಿಗಳು, 1,000 ಕ್ರಿಯೇಟರ್ಸ್, 300ಕ್ಕೂ ಹೆಚ್ಚು ಕಂಪೆನಿಗಳು ಮತ್ತು 100ಕ್ಕೂ ಹೆಚ್ಚು ದೇಶಗಳಿಂದ 350ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳ ಪ್ರಮುಖರು ಭಾಗವಹಿಸಲಿದ್ದಾರೆ.

ಶೃಂಗಸಭೆಯ ಕಾರ್ಯಸೂಚಿಯಲ್ಲಿ 42 ಪೂರ್ಣಾವಧಿ ಅಧಿವೇಶನಗಳು, 39 ಬ್ರೇಕ್‌ಔಟ್ ಅಧಿವೇಶನಗಳು ಮತ್ತು 32 ಮಾಸ್ಟರ್‌ಕ್ಲಾಸ್‌ಗಳನ್ನು ಆಯೋಜಿಸಲಾಗಿದೆ. ವೈವಿಧ್ಯಮಯವಾಗಿರುವ ಅಧಿವೇಶನದಲ್ಲಿ ವಿವಿಧ ಪ್ರಸಾರ ಕಾರ್ಯಕ್ರಮ, ಆ್ಯನಿಮೇಷನ್, ದೃಶ್ಯ ಪರಿಣಾಮಗಳು, ಗೇಮಿಂಗ್, ಕಾಮಿಕ್ಸ್, ರಿಯಾಲಿಟಿ, ಚಲನಚಿತ್ರಗಳು ಮತ್ತು ಡಿಜಿಟಲ್ ಮಾಧ್ಯಮದಂತಹ ಉದ್ಯಮದ ವಿವಿಧ ವಲಯಗಳ ಕುರಿತು ಸಂವಾದಗಳು ನಡೆಯಲಿದೆ.

ಈ ಶೃಂಗಸಭೆಯ ಮೂಲಕ ದೇಶದ ಮಾಧ್ಯಮ ಮತ್ತು ಮನೋರಂಜನಾ ಕ್ಷೇತ್ರದಲ್ಲಿ ಜಾಗತಿಕ ಸಹಯೋಗವನ್ನು ಬೆಳೆಸುವ, ಭಾರತದಲ್ಲಿ ಹೂಡಿಕೆಗಳನ್ನು ಆಕರ್ಷಿಸುವ ಮತ್ತು ದೇಶದೊಳಗೆ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.

ವೇವ್ಸ್ ಉದ್ಘಾಟನೆ ವೇಳೆ ಭಾರತೀಯ ಮನರಂಜನಾ ಉದ್ಯಮದ ಪ್ರಮುಖ ವ್ಯಕ್ತಿಗಳು ಉಪಸ್ಥಿತರಿದ್ದರು. ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎಂ.ಎಂ.ಕೀರವಾನಿ ಮತ್ತು 30 ಸದಸ್ಯರ ಆರ್ಕೆಸ್ಟ್ರಾದ ರೋಮಾಂಚಕಾರಿ ಪ್ರದರ್ಶನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಬಳಿಕ ನಟ ಶರದ್ ಕೇಳ್ಕರ್ ನಿರೂಪಿಸಿದ ಭಾರತದ ಸಿನಿಮೀಯ ಮತ್ತು ಕಥೆ ಹೇಳುವ ಪರಂಪರೆಯೊಳಗೆ ಇಂದ್ರೀಯ-ಸಮೃದ್ಧ ಪ್ರಯಾಣವಾದ 'ಸೂತ್ರಧಾರ್ ರೀನ್ವೆಂಟೆಡ್' ಕಾರ್ಯಕ್ರಮ, ಬಳಿಕ ಸಂವಾದ ನಡೆಯಿತು.

ʼಲೆಜೆಂಡ್ಸ್ ಆಂಡ್ ಲೆಗಸೀಸ್: ದಿ ಸ್ಟೋರೀಸ್ ದಟ್ ಶೇಪ್ಡ್ ಇಂಡಿಯಾಸ್ ಸೋಲ್ʼ ಶೀರ್ಷಿಕೆಯ ಚರ್ಚೆಯಲ್ಲಿ ನಟಿ ಹೇಮಾ ಮಾಲಿನಿ, ನಟರಾದ ಮಿಥುನ್ ಚಕ್ರವರ್ತಿ, ರಜನಿಕಾಂತ್, ಮೋಹನ್ ಲಾಲ್ ಮತ್ತು ಚಿರಂಜೀವಿಯಂತಹ ಹಿರಿಯ ನಟರು ಭಾಗವಹಿಸಿದ್ದರು. ಅಕ್ಷಯ್ ಕುಮಾರ್ ಇದನ್ನು ನಿರ್ವಹಿಸಿದರು.



ʼದಿ ನ್ಯೂ ಮೇನ್‌ಸ್ಟ್ರೀಮ್: ಬ್ರೇಕಿಂಗ್ ಬಾರ್ಡರ್ಸ್, ಬಿಲ್ಡಿಂಗ್ ಲೆಜೆಂಡ್ಸ್ʼ ಎಂಬ ಮತ್ತೊಂದು ಆಕರ್ಷಕ ಸಂವಾದದಲ್ಲಿ ಎಸ್.ಎಸ್. ರಾಜಮೌಳಿ, ಎ.ಆರ್.ರೆಹಮಾನ್, ಅನಿಲ್ ಕಪೂರ್, ಆಲಿಯಾ ಭಟ್ ಮತ್ತು ವಿಕ್ಕಿ ಕೌಶಲ್ ಅವರು ಪಾಲ್ಗೊಂಡಿದ್ದು, ನಿರ್ಮಾಪಕ ಕರಣ್ ಜೋಹರ್ ನಿರ್ವಹಿಸಿದರು. ಇನ್ನೊಂದು ಸಂವಾದದಲ್ಲಿ ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಮುಖೇಶ್ ಅಂಬಾನಿ ಮತ್ತು ಅಡೋಬ್ ಇಂಕ್‌ನ ಸಿಇಒ ಶಂತನು ನಾರಾಯಣ್ ಭಾಗವಹಿಸಿದ್ದರು.

ಇದನ್ನೂ ಓದಿ: Kavita Krishnamurthy: ಪಾಕಿಸ್ತಾನಿ ಕಲಾವಿದರ ಮೇಲೆ ಬ್ಯಾನ್‌- ಹಿರಿಯ ಗಾಯಕಿ ಕವಿತಾ ಕೃಷ್ಣಮೂರ್ತಿ ಅಚ್ಚರಿ ಹೇಳಿಕೆ

ವೇವ್ಸ್ ಶೃಂಗಸಭೆಯ ಉದ್ದೇಶ

ಈ ಶೃಂಗಸಭೆಯು ಕೇವಲ ಚರ್ಚೆ ಮತ್ತು ಪ್ರದರ್ಶನಕ್ಕಾಗಿ ಅಲ್ಲ. "ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್" ನ ಒಂದು ಪ್ರಮುಖ ಅಂಶವಾಗಿದೆ. ಇದರ ಪ್ರಯುಕ್ತ ಆಯೋಜಿಸಿದ್ದ 32 ಸ್ಪರ್ಧೆಗಳಲ್ಲಿ 1,100 ಅಂತಾರಾಷ್ಟ್ರೀಯ ಸ್ಪರ್ಧಿಗಳು ಸೇರಿದಂತೆ 85,000ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ವೇವ್ಸ್ ಸಿಐಸಿ ಪ್ರಶಸ್ತಿ ಪ್ರದಾನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ. ಶೃಂಗಸಭೆಯು ಸ್ಟಾರ್ಟ್‌ಅಪ್‌ಗಳಿಗೆ ಹೂಡಿಕೆದಾರರು ಮತ್ತು ಮಾರ್ಗದರ್ಶಕರನ್ನು ಸಂಪರ್ಕಿಸಲು ನಿರ್ಮಿಸಿರುವ ವೇದಿಕೆಯಾಗಿದೆ. ಶೃಂಗಸಭೆಯು ವೇವ್ಸ್ ಬಜಾರ್ ಅನ್ನು ಒಳಗೊಂಡಿದೆ. ಅಲ್ಲದೇ ಕಥೆ ಹೇಳುವ ವಲಯಗಳಲ್ಲಿ ಸಾಂಪ್ರದಾಯಿಕ ಕಲೆಗಳಿಂದ ಡಿಜಿಟಲ್ ವರೆಗಿನ ಭಾರತದ ಪ್ರಯಾಣವನ್ನು ಪ್ರತಿಬಿಂಬಿಸಲಾಗಿದೆ. ವೀಕ್ಷಣಾ ಕೊಠಡಿ ಗ್ರಂಥಾಲಯವು ಎಂಟು ದೇಶಗಳ 100 ಚಲನಚಿತ್ರಗಳನ್ನು ಪ್ರದರ್ಶಿಸುತ್ತಿದೆ.