ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stock Market: ಸೆನ್ಸೆಕ್ಸ್‌ 3,000 ಅಂಕ ಜಿಗಿತ- ಹೂಡಿಕೆದಾರರಿಗೆ 22 ಲಕ್ಷ ಕೋಟಿ ಲಾಭ; ಷೇರು ಮಾರಿ ಲಾಭ ಮಾಡ್ಬೋದಾ?

ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ ಸೂಚ್ಯಂಕ ಸೆನ್ಸೆಕ್ಸ್‌(Stock Market) ಮಾರ್ಚ್‌ 17ರಿಂದ ಮಾರ್ಚ್‌ 21ರ ತನಕ ಐದು ದಿನಗಳಲ್ಲಿ ಒಟ್ಟು 3,075 ಮತ್ತು ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 951 ಅಂಕಗಳ ಏರಿಕೆಯೊಂದಿಗೆ ಚೇತರಿಸಿದೆ. ಇದರೊಂದಿಗೆ ಹೂಡಿಕೆದಾರರ ಸಂಪತ್ತಿನಲ್ಲಿ 22 ಲಕ್ಷ ಕೋಟಿ ರುಪಾಯಿ ಏರಿಕೆಯಾಗಿದೆ.

ಸೆನ್ಸೆಕ್ಸ್‌ಗೆ 3,000 ಅಂಕ ಜಿಗಿತ ಹೂಡಿಕೆದಾರರಿಗೆ 22 ಲಕ್ಷ ಕೋಟಿ ಲಾಭ

Profile Rakshita Karkera Mar 22, 2025 3:58 PM
  • ಕೇಶವ ಪ್ರಸಾದ್‌ ಬಿ.

ಮುಂಬೈ: ಕಳೆದ ವಾರ ಸೆನ್ಸೆಕ್ಸ್‌ ಮತ್ತು ನಿಫ್ಟಿ ಸತತ ಏರಿಕೆಯನ್ನು ದಾಖಲಿಸಿದೆ. ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ ಸೂಚ್ಯಂಕ ಸೆನ್ಸೆಕ್ಸ್‌(Stock Market) ಮಾರ್ಚ್‌ 17ರಿಂದ ಮಾರ್ಚ್‌ 21ರ ತನಕ ಐದು ದಿನಗಳಲ್ಲಿ ಒಟ್ಟು 3,075 ಮತ್ತು ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 951 ಅಂಕಗಳ ಏರಿಕೆಯೊಂದಿಗೆ ಚೇತರಿಸಿದೆ. ಇದರೊಂದಿಗೆ ಹೂಡಿಕೆದಾರರ ಸಂಪತ್ತಿನಲ್ಲಿ 22 ಲಕ್ಷ ಕೋಟಿ ರುಪಾಯಿ ಏರಿಕೆಯಾಗಿದೆ. ಜಾಗತಿಕ ಆರ್ಥಿಕತೆಯ ಮಂದಗತಿ, ರಿಸೆಶನ್‌ ಭೀತಿಯ ನಡುವೆಯೂ ಭಾರತದ ಷೇರು ಸೂಚ್ಯಂಕಗಳು ಕಳೆದ 4 ವರ್ಷಗಳಲ್ಲಿಯೇ ಬೆಸ್ಟ್‌ ವೀಕ್ಲಿ ಗೈನ್‌ ಅನ್ನು ದಾಖಲಿಸಿರುವುದು ಗಮನಾರ್ಹ. ಹಾಗಾದರೆ ಈಗಲೇ ಷೇರುಗಳನ್ನು ಮಾರಿ ಪ್ರಾಫಿಟ್‌ ಬುಕ್‌ ಮಾಡಬಹುದಾ? ತಜ್ಞರು ಏನು ಹೇಳ್ತಾರೆ ಎಂಬುದನ್ನು ತಿಳಿಯೋಣ. ಹಾಗಾದ್ರೆ, ಭಾರತೀಯ ಸ್ಟಾಕ್‌ ಮಾರ್ಕೆಟ್‌ ಸೂಚ್ಯಂಕಗಳು ಕಳೆದ ಕೆಲ ದಿನಗಳಿಂದ ಯಾಕೆ ಏರಿಕೆಯಾಗುತ್ತಿವೆ? ತಜ್ಞರ ಪ್ರಕಾರ ಇದಕ್ಕೆ ಮುಖ್ಯವಾಗಿ ಐದು ಕಾರಣಗಳು ಇವೆ.

ಮೊದಲನೆಯದಾಗಿ,

ಫಾರಿನ್‌ ಪೋರ್ಟ್‌ಫೋಲಿಯೊ ಇನ್ವೆಸ್ಟರ್ಸ್‌, ಅಂದ್ರೆ ವಿದೇಶಿ ಹೂಡಿಕೆದಾರರು ನಿಧಾನವಾಗಿ ಭಾರತೀಯ ಸ್ಟಾಕ್‌ ಮಾರ್ಕೆಟ್‌ಗೆ ಮತ್ತೆ ಹೂಡಿಕೆ ಮಾಡುತ್ತಿದ್ದಾರೆ. ಇದು ಸ್ಟಾಕ್‌ ಮಾರ್ಕೆಟ್‌ಗೆ ದೊಡ್ಡ ರಿಲೀಫ್.‌ ಕಳೆದ ವಾರ ಕ್ಯಾಶ್‌ ಸೆಗ್ಮೆಂಟ್‌ನಲ್ಲಿ ಎರಡು ಸಂದರ್ಭ ವಿದೇಶಿ ಹೂಡಿಕೆದಾರರು ನಿವ್ವಳ ಖರೀದಿದಾರರಾಗಿದ್ದರು. ಮಾರ್ಚ್‌ 18ರಂದು 1,463 ಕೋಟಿ ರುಪಾಯಿಗಳ ಷೇರುಗಳನ್ನು ಖರೀದಿಸಿದ್ದರು. ಮಾರ್ಚ್‌ 20ರಂದು 3,239 ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದರು. ಕಳೆದ ವರ್ಷ ಅಕ್ಟೋಬರ್‌ನಿಂದ ವಿದೇಶಿ ಹೂಡಿಕೆದಾರರು ನಿರಂತರವಾಗಿ ಷೇರುಗಳನ್ನು ಮಾರುತ್ತಿದ್ದರು. ಹೀಗಾಗಿ ಸೆನ್ಸೆಕ್ಸ್‌ ಮತ್ತು ನಿಫ್ಟಿ ಕುಸಿತಕ್ಕೀಡಾಗಿತ್ತು. ಆದರೆ ಇದೀಗ ವಿದೇಶಿ ಹೂಡಿಕೆದಾರರು ಭಾರತೀಯ ಷೇರುಗಳನ್ನು ಮತ್ತೆ ಖರೀದಿಸುತ್ತಿರುವುದು ಮಾರುಕಟ್ಟೆಯಲ್ಲಿ ಹೊಸ ಉತ್ಸಾಹ ಮೂಡಿಸಿದೆ.

ಎರಡನೆಯದಾಗಿ,

ಷೇರುಗಳ ವಾಲ್ಯುಯೇಶನ್‌ ಕೂಡ ಈಗ ಹೂಡಿಕೆದಾರರಿಗೆ ಅನುಕೂಲಕರವಾಗಿದೆ. ಕಳೆದ ವರ್ಷ ಸೆಪ್ಟೆಂಬರ್‌ 27ರಂದು 85,978ರ ಉನ್ನತ ಮಟ್ಟದಲ್ಲಿದ್ದ ಸೆನ್ಸೆಕ್ಸ್‌ 15% ಕುಸಿತಕ್ಕೀಡಾಗಿತ್ತು. ಸೆನ್ಸೆಕ್ಸ್‌ನ ಪ್ರೈಸ್‌ ಟು ಅರ್ನಿಂಗ್‌ ರೇಶಿಯೊ ಅಥವಾ PE Ratio 21 ಆಗಿದ್ದು ಎರಡು ವರ್ಷಗಳ ಸರಾಸರಿಯಾದ 23.3ಕ್ಕಿಂತ ಕಡಿಮೆ ಇದೆ. ಮುಖ್ಯವಾಗಿ ಲಾರ್ಜ್‌ ಕ್ಯಾಪ್‌ ಷೇರುಗಳಲ್ಲಿ ವಾಲ್ಯುಯೇಶನ್‌ ಕಂಫರ್ಟ್‌ ಆಗಿರುವುದನ್ನು ಇದು ಬಿಂಬಿಸಿದೆ. ಹೀಗಾಗಿ ಲಾಂಗ್‌ ಟರ್ಮ್‌ ಗೆ ಪೋರ್ಟ್‌ ಫೋಲಿಯೊವನ್ನು ಬೆಳೆಸಲು ಇದು ಉತ್ತಮ ಅವಕಾಶವಾಗಿದೆ ಎಂದು ಮೋತಿಲಾಲ್‌ ಓಸ್ವಾಲ್‌ ಪ್ರೈವೇಟ್‌ ವೆಲ್ತ್‌ ಸಂಸ್ಥೆಯ ಪ್ರಾದೇಶಿಕ ಮುಖ್ಯಸ್ಥ ಜತೇಶ್‌ ಫರಿಯಾ ತಿಳಿಸಿದ್ದಾರೆ.

ಮೂರನೆಯದಾಗಿ,

ದೇಶದ ಇತ್ತೀಚಿನ ಒಟ್ಟಾರೆ ಆರ್ಥಿಕತೆಯ ಬೆಳವಣಿಗೆಗಳೂ ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸಿದೆ. ಅವುಗಳ ಬಗ್ಗೆ ನೋಡೋದಿದ್ರೆ, ರಿಟೇಲ್‌ ಹಣದುಬ್ಬರ ಫೆಬ್ರವರಿಯಲ್ಲಿ 3.61%ಕ್ಕೆ ಇಳಿಕೆಯಾಗಿದೆ. ಜನವರಿಯಲ್ಲಿ ದೇಶದ ಕಾರ್ಖಾನೆಗಳಲ್ಲಿ ಉತ್ಪಾದನೆ ಚೇತರಿಸಿದೆ. ಇಂಡೆಕ್ಸ್‌ ಆಫ್‌ ಇಂಡಸ್ಟ್ರಿಯಲ್‌ ಪ್ರೊಡಕ್ಷನ್‌ 5% ಏರಿಕೆಯಾಗಿದೆ. ಫಿಚ್‌ ರೇಟಿಂಗ್ಸ್‌ ಪ್ರಕಾರ 2025-26ರಲ್ಲಿ 6.5% ಜಿಡಿಪಿ ಬೆಳವಣಿಗೆ ನಿರೀಕ್ಷಿಸಲಾಗಿದೆ.

ನಾಲ್ಕನೆಯದಾಗಿ,

ಅಮೆರಿಕದ ಫೆಡರಲ್‌ ರಿಸರ್ವ್‌ ಮತ್ತು ಭಾರತದ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಮುಂಬರುವ ತಿಂಗಳುಗಳಲ್ಲಿ ಬಡ್ಡಿ ದರಗಳನ್ನು ಇಳಿಸುವ ನಿರೀಕ್ಷೆ ಉಂಟಾಗಿದೆ. ಫೆಡರಲ್‌ ರಿಸರ್ವ್‌ ಈ ವರ್ಷ ಎರಡು ಸಲ ಬಡ್ಡಿ ದರ ಇಳಿಸುವ ಸಾಧ್ಯತೆ ಇದೆ. ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾವು ಏಪ್ರಿಲ್‌ನಲ್ಲಿ 0.25% ರಷ್ಟು ಬಡ್ಡಿ ದರ ಕಡಿತಗೊಳಿಸುವ ನಿರೀಕ್ಷೆ ಇದೆ. ಇದು ಷೇರು ಮಾರುಕಟ್ಟೆ ಮೇಲೆ ಸಕಾರಾತ್ಮಕ ಪ್ರಭಾವ ಬೀರಿದೆ.

ಐದನೆಯದಾಗಿ,

ಭಾರತದ ಕಾರ್ಪೊರೇಟ್‌ ವಲಯದ ಕಂಪನಿಗಳು ಜನವರಿ-ಮಾರ್ಚ್‌ ಅವಧಿಯಲ್ಲಿ ಸ್ಥಿರ ಆದಾಯ ಮತ್ತು ಲಾಭ ಗಳಿಸುವ ನಿರೀಕ್ಷೆ ಇದೆ. ಮುಂದಿನ ಒಂದು ವರ್ಷ ಕಂಪನಿಗಳ ಗಳಿಕೆಯಲ್ಲಿ 12-14% ಬೆಳವಣಿಗೆಯಾಗುವ ಸಾಧ್ಯತೆ ಇದೆ. ಇದು ಕೂಡ ಪ್ಲಸ್‌ ಪಾಯಿಂಟ್‌ ಆಗಬಹುದು.

ಭಾರತದ ದೇಶೀಯ ಆರ್ಥಿಕ ಪರಿಸ್ಥಿತಿ ವೇಗವಾಗಿ ಸುಧಾರಿಸುತ್ತಿದೆ. ಬಡ್ಡಿ ದರ ಇಳಿಕೆಗೆ ಆರ್‌ಬಿಐ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಸಾಕಷ್ಟು ನಗದನ್ನು ಬ್ಯಾಂಕಿಂಗ್‌ ವ್ಯವಸ್ಥೆಗೆ ಅದು ಪೂರೈಸಿದೆ. ಕಳೆದ ವರ್ಷ ಸೆಪ್ಟೆಂಬರ್‌ನಿಂದ ಕುಸಿತವಾಗುತ್ತಿದ್ದ ಸ್ಟಾಕ್‌ ಮಾರ್ಕೆಟ್‌ ಈಗ ಬಹುಶಃ ಬಾಟಮ್‌ ಲೆವೆಲ್‌ಗೆ ಬಂದಿದ್ದು, ಇನ್ನು ಮುಂದೆ ಬೌನ್ಸ್‌ ಬ್ಯಾಕ್‌ ಆಗಬಹುದು ಎಂದು ಮಾರುಕಟ್ಟೆ ತಜ್ಞ ಅಜಯ್‌ ಬಗ್ಗಾ ತಿಳಿಸಿದ್ದಾರೆ.

ಗ್ಲೋಬಲ್‌ ಮಾರುಕಟ್ಟೆಯಲ್ಲಿ ಈಗಲೂ ಅನಿಶ್ಚಿತತೆ ಮುಂದುವರಿದಿದೆ. ಟ್ರಂಪ್‌ ಅವರ ಟಾರಿಫ್‌ಗಳ ಸ್ವರೂಪ ಮತ್ತು ಪರಿಣಾಮಗಳ ಬಗ್ಗೆ ಸ್ಪಷ್ಟತೆ ಇಲ್ಲ. ಕನ್‌ ಸ್ಯೂಮರ್‌ ಸೆಂಟಿಮೆಂಟ್‌ ಮತ್ತು ಬಿಸಿನೆಸ್‌ ಸೆಂಟಿಮೆಂಟ್‌ ಪ್ರಬಲವಾಗಿ ಒತ್ತಡ ಹಾಕಿರುವುದರಿಂದ ಟಾರಿಫ್‌ ಕುರಿತ ಒಪ್ಪಂದವನ್ನು ಏರ್ಪಡಿಸಲು ಟ್ರಂಪ್‌ ಸರಕಾರ ಯತ್ನಿಸುತ್ತಿದೆ ಎನ್ನುತ್ತಾರೆ ಅಜಯ್‌ ಬಗ್ಗಾ. ಅವರ ಪ್ರಕಾರ ಮುಂಬರುವ ದಿನಗಳಲ್ಲಿ ಪ್ರಮುಖ ಖಾಸಗಿ ಬ್ಯಾಂಕ್‌, ವಿದ್ಯುತ್‌ ಉತ್ಪಾದನೆ ಮತ್ತು ವಿತರಣೆ ವಲಯಕ್ಕೆ ಹಣಕಾಸು ಪೂರೈಸುವ ಪವರ್‌ ಫೈನಾನ್ಸ್‌ ಕಂಪನಿಗಳ ಷೇರುಗಳು, ರಿಯಲ್‌ ಎಸ್ಟೇಟ್‌, ಸಿಮೆಂಟ್‌ ವಲಯದ ಷೇರುಗಳು ಹೂಡಿಕೆದಾರರಿಗೆ ಲಾಭದಾಯಕವಾಗುವ ನಿರೀಕ್ಷೆ ಇದೆ.

ಈಗ ICICI ಡೈರೆಕ್ಟ್‌ ಸಂಸ್ಥೆಯ ತಜ್ಞರಾದ ಧರ್ಮೇಶ್‌ ಶಾ ಅವರು ಯಾವ ಎರಡು ಕಂಪನಿಗಳ ಷೇರುಗಳನ್ನು ರೆಕಮಂಡೇಶನ್‌ ಮಾಡಿದ್ದಾರೆ ಎಂಬುದನ್ನು ತಿಳಿಯೋಣ. ಧರ್ಮೇಶ್‌ ಶಾ ಅವರು ನಿಫ್ಟಿ ಸೂಚ್ಯಂಕವು 23,700ಕ್ಕೆ ಏರಿಕೆಯಾಗಬಹುದು ಎಂದಿದ್ದಾರೆ. ಬ್ಯಾಂಕಿಂಗ್‌ ಸೆಕ್ಟರ್‌ನಲ್ಲಿ ಮುಖ್ಯವಾಗಿ ಎಕ್ಸಿಸ್‌ ಬ್ಯಾಂಕ್‌ ಷೇರನ್ನು ಹಾಗೂ ಮೆಟಲ್‌ ವಲಯದಲ್ಲಿ ಟಾಟಾ ಸ್ಟೀಲ್‌ ಷೇರನ್ನು ಧರ್ಮೇಶ್‌ ಶಾ ಅವರು ಶಿಫಾರಸು ಮಾಡಿದ್ದಾರೆ.

ದೇಶದ ಮೂರನೇ ದೊಡ್ಡ ಬ್ಯಾಂಕ್‌ ಆಗಿರುವ ಎಕ್ಸಿಸ್‌ ಬ್ಯಾಂಕ್‌ನ ಬ್ಯಾಲೆನ್ಸ್‌ ಶೀಟ್‌ ಬಹುತೇಕ 15 ಲಕ್ಷ ಕೋಟಿ ರುಪಾಯಿಗೆ ಬೆಳೆದಿದೆ. ಬ್ಯಾಂಕ್‌ ರಿಟೇಲ್‌ ಮತ್ತು ಎಸ್‌ಎಂಇ ಸಾಲಗಳಿಗೆ ಫೋಕಸ್‌ ನೀಡಿದೆ. ಎಕ್ಸಿಸ್‌ ಬ್ಯಾಂಕ್‌ ಷೇರಿನ ಈಗಿನ ದರ 1075 ರುಪಾಯಿಗಳಾಗಿವೆ. ಧರ್ಮೇಶ್‌ ಶಾ ಅವರ ಪ್ರಕಾರ ಇದರ ಟಾರ್ಗೆಟ್‌ ಪ್ರೈಸ್‌ 1,172 ರುಪಾಯಿ ಆಗಿದ್ದು, ಸ್ಟಾಪ್‌ ಲಾಸ್‌ 974 ರುಪಾಯಿ ಆಗಿದೆ. ಟಾಟಾ ಸ್ಟೀಲ್‌ ಷೇರಿನ ಈಗಿನ ದರ 157 ರುಪಾಯಿಗಳಾಗಿದೆ. ಧರ್ಮೇಶ್‌ ಶಾ ಅವರ ಪ್ರಕಾರ ಟಾರ್ಗೆಟ್‌ ಪ್ರೈಸ್‌ 176 ರುಪಾಯಿ ಆಗಿದ್ದರೆ ಸ್ಟಾಪ್‌ ಲಾಸ್‌ 147 ರುಪಾಯಿ ಆಗಿದೆ.

ಖ್ಯಾತ ಹೂಡಿಕೆದಾರ ವಿಜಯ್‌ ಕೇಡಿಯಾ ಅವರು ಒಂದು ಮಾತನ್ನು ಹೇಳ್ತಾರೆ-

Bull markets create stupid investors.

Stupid investors create bear markets.

Bear markets create smart investors.

Smart investors create bull markets."

ಷೇರು ಮಾರುಕಟ್ಟೆ ಕುಸಿತದ ಸಂದರ್ಭ ಹೂಡಿಕೆದಾರರು ಸ್ಮಾರ್ಟ್‌ ಆಗಬೇಕು. ಹೂಡಿಕೆಯ ಸುವರ್ಣಾವಕಾಶವನ್ನು ಕಂಡುಕೊಳ್ಳಬೇಕು. ಬುಲ್‌ ಮಾರ್ಕೆಟ್‌ನಲ್ಲಿ ಗ್ರೇಟ್‌ ಇನ್ವೆಸ್ಟ್‌ಮೆಂಟ್‌ ಐಡಿಯಾಗಳು ಉಂಟಾಗುವುದಿಲ್ಲ. ಅವುಗಳು ಮಾರುಕಟ್ಟೆಯ ಅನಿಶ್ಚಿತತೆಯ ನಡುವೆಯೇ ಹುಟ್ಟಿಕೊಳ್ಳುತ್ತವೆ. ಇತಿಹಾಸವನ್ನು ಗಮನಿಸಿದ್ರೆ, ಬೇರ್‌ ಮಾರ್ಕೆಟ್‌ನಲ್ಲಿ ಕಡೆಗಣಿಸಲಾಗಿದ್ದ ಷೇರುಗಳು ಬಳಿಕ ಮಲ್ಟಿ-ಬ್ಯಾಗರ್ಸ್‌ ಷೇರುಗಳಾಗಿ ಬದಲಾಗಿರುವ ಉದಾಹರಣೆಗಳು ಇವೆ ಎಂದು ವಿಜಯ್‌ ಕೇಡಿಯಾ ಅವರು ವಿವರಿಸುತ್ತಾರೆ.

ಇತ್ತೀಚಿನ ದಿನಗಳಲ್ಲಿ ಭಾರತದ ಮಾಹಿತಿ ತಂತ್ರಜ್ಞಾನ ಅಥವಾ ಐಟಿ ಕ್ಷೇತ್ರದಲ್ಲಿ ಒಂದಷ್ಟು ಅನಿಶ್ಚಿತತೆ ಉಂಟಾಗಿದೆ. ಅಕ್ಸೆಂಚರ್‌ ಪ್ರಕಾರ ಕಂಪನಿಯ ಭವಿಷ್ಯದ ಆರ್ಡರ್‌ ಗಳು ಕಡಿಮೆಯಾಗುವ ಸಾಧ್ಯತೆ ಇದೆ. ಅಮೆರಿಕ ಸರಕಾರ ತನ್ನ ವೆಚ್ಚಗಳನ್ನು ಕಡಿತಗೊಳಿಸಿದರೆ ಅಕ್ಸೆಂಚರ್‌ ಆದಾಯ ಇಳಿಯುವ ಸಾಧ್ಯತೆ ಇದೆ. ಆದರೆ ಈ ಆತಂಕ ಇತರ ಐಟಿ ಕಂಪನಿಗಳಿಗೆ ಅಷ್ಟಾಗಿ ಇಲ್ಲ ಎಂಬ ಅಭಿಪ್ರಾಯವೂ ಇದೆ. ಮಾರ್ಚ್‌ 1ರಿಂದ 15 ರ ತನಕ ವಿದೇಶಿ ಹೂಡಿಕೆದಾರರು ಐಟಿ ಸೆಕ್ಟರ್‌ನಿಂದ 6,934 ಕೋಟಿ ರುಪಾಯಿಗಳ ಹೂಡಿಕೆಯನ್ನು ಹಿಂತೆಗೆದುಕೊಂಡಿದ್ದಾರೆ. ಹೀಗಾಗಿ ಒಂದಷ್ಟು ಆತಂಕ ಮನೆ ಮಾಡಿದೆ. ಹೀಗಿದ್ದರೂ, ಭಾರತೀಯ ಐಟಿ ಕ್ಷೇತ್ರ ಈಗ ಮೊದಲಿನಂತಿಲ್ಲ. ಯಾವುದೇ ಏರಿಳಿತಗಳನ್ನು ಸಹಿಸಬಲ್ಲ ಮೆಚ್ಯೂರಿಟಿಯನ್ನು ಗಳಿಸಿಕೊಂಡಿದೆ. ಆದ್ದರಿಂದ ಇಂಥ ಹಿನ್ನಡೆಗಳು ತಾತ್ಕಾಲಿಕವಾಗಿರುತ್ತವೆ. ಭಾರತದ ಐಟಿ ವಲಯ ಗ್ಲೋಬಲ್‌ ಪವರ್‌ ಹೌಸ್‌ ಆಗಿದೆ. ಜಗತ್ತಿಗೆ ಕಡಿಮೆ ವೆಚ್ಚದಲ್ಲಿ ಐಟಿ ಸೇವೆಗಳನ್ನು ದೇಶದ ಐಟಿ ಸೆಕ್ಟರ್‌ ಒದಗಿಸುತ್ತಿರುವುದರಿಂದ ಬಹು ಬೇಡಿಕೆಯನ್ನು ಹೊಂದಿದೆ.

ಭಾರತದ ಜಿಡಿಪಿ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ವಿದೇಶಿ ವಿನಿಮಯ ಗಳಿಕೆಗೆ ಗಣನೀಯವಾದ ಕೊಡುಗೆಯನ್ನು ಸಲ್ಲಿಸುತ್ತಿದೆ. ಬೆಂಗಳೂರಿನ ಐಟಿ ಕ್ಷೇತ್ರದಲ್ಲಿ 30 ಲಕ್ಷಕ್ಕೂ ಹೆಚ್ಚು ಮಂದಿ ಉದ್ಯೋಗಿಗಳಿದ್ದಾರೆ. ಬೆಂಗಳೂರು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಟೆಕ್‌ ಹಬ್‌ ಆಗಿದೆ. ಇಲ್ಲಿ ಅಮೆಜಾನ್‌, ಮೈಕ್ರೊಸಾಫ್ಟ್‌, ಫೇಸ್‌ಬುಕ್‌, ಗೂಗಲ್‌ ಸೇರಿದಂತೆ ದಿಗ್ಗಜ ಕಂಪನಿಗಳ ಆರ್‌ &ಡಿ ಸೆಂಟರ್‌ಗಳು ಇವೆ. ಆದ್ದರಿಂದ ಭಾರತದ ಐಟಿ ಸೆಕ್ಟರ್‌ ಭವಿಷ್ಯದ ಬಗ್ಗೆ ಆತಂಕ ಪಡಬೇಕಾದ ಅವಶ್ಯಕತೆ ಈಗ ಇಲ್ಲ ಎನ್ನಬಹುದು.

ಸೆನ್ಸೆಕ್ಸ್‌ 3,075 ಪಾಯಿಂಟ್‌

ಮಾ. 17- 74,169 : 341

ಮಾ. 18 -75,301 : 1,131

ಮಾ. 19 - 75,449 : 147

ಮಾ. 20 - 76,348 : 899

ಮಾ. 21 - 76,905 : 557

ನಿಫ್ಟಿ 951 ಪಾಯಿಂಟ್‌

ಮಾ. 17- 22,508 : 111

ಮಾ. 18 - 22,834 : 325

ಮಾ. 19 - 22,907 : 73

ಮಾ. 20 - 23,190 : 283

ಮಾ. 21 - 23,350 : 159