CM Siddaramaiah: ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ಜನವಿರೋಧಿ ಆರ್ಥಿಕ ನೀತಿಯೇ ಕಾರಣ: ಸಿಎಂ ಸಿದ್ದರಾಮಯ್ಯ
CM Siddaramaiah: ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ತೆರಿಗೆಯನ್ನು 2 ರೂಪಾಯಿಗಳಷ್ಟು ಮತ್ತು ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು 50 ರೂಪಾಯಿಯಷ್ಟು ಏರಿಕೆ ಮಾಡುವ ಬಗ್ಗೆ ರಾಜ್ಯದ ಬಿಜೆಪಿ ನಾಯಕರ ಪ್ರತಿಕ್ರಿಯೆ ಏನು ಎಂಬುದನ್ನು ನಾನು ತಿಳಿದುಕೊಳ್ಳಬಯಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.


ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಯನ್ನು ಹೆಚ್ಚಿಸುವ ಮೂಲಕ ಜನಾಕ್ರೋಶ ಯಾತ್ರೆ ಎಂಬ ಪ್ರಹಸನವನ್ನು ಶುರುಮಾಡಿರುವ ರಾಜ್ಯದ ಬಿಜೆಪಿ ನಾಯಕರಿಗೆ ಮುಟ್ಟಿ ನೋಡಿಕೊಳ್ಳುವಂತೆ ಕಪಾಳಮೋಕ್ಷ ಮಾಡಿದ್ದಾರೆ. ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ಜನವಿರೋಧಿ ಆರ್ಥಿಕ ನೀತಿಯೇ ಕಾರಣ ಎಂದು ನಾವು ಹೇಳುತ್ತಲೇ ಬಂದಿರುವ ಸತ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ದೇಶದ ಜನರ ಮುಂದೆ ಬಿಚ್ಚಿಟ್ಟು ಒಪ್ಪಿಕೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಸಿರುವ ಪ್ರತಿಕ್ರಿಯಿಸಿರುವ ಸಿಎಂ ಅವರು, ಈಗ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ತೆರಿಗೆಯನ್ನು 2 ರೂಪಾಯಿಗಳಷ್ಟು ಮತ್ತು ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು 50 ರೂಪಾಯಿಯಷ್ಟು ಏರಿಕೆ ಮಾಡುವ ಬಗ್ಗೆ ರಾಜ್ಯದ ಬಿಜೆಪಿ ನಾಯಕರ ಪ್ರತಿಕ್ರಿಯೆ ಏನು ಎಂಬುದನ್ನು ನಾನು ತಿಳಿದುಕೊಳ್ಳಬಯಸುತ್ತೇನೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆ ಇಳಿಯುತ್ತಿದ್ದರೂ ಕೇಂದ್ರ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಒಂದೇ ಸಮನೆ ಏರಿಸುತ್ತಾ ಹೋಗಲು ಕಾರಣ ಏನು ಎಂಬುದನ್ನು ಬಿಜೆಪಿ ನಾಯಕರು ರಾಜ್ಯದ ಜನರಿಗೆ ತಿಳಿಸಬೇಕು ಎಂದು ಆಗ್ರಹಿಸಿದರು.
ಅಕ್ಕಿ, ಬೇಳೆ, ಮೀನು, ಮಾಂಸ, ತರಕಾರಿಯಿಂದ ಹಿಡಿದು ಹೋಟೆಲ್ ತಿಂಡಿವರೆಗೆ ಎಲ್ಲದರ ಬೆಲೆ ಏರಿಕೆಗೆ ಮೂಲ ಕಾರಣ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಯನ್ನು ಹೆಚ್ಚಿಸುತ್ತಲೇ ಇರುವ ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಎನ್ನುವುದು ಆರ್ಥಿಕ ವ್ಯವಹಾರದ ಸಾಮಾನ್ಯ ಜ್ಞಾನ ಇದ್ದವರಿಗೆಲ್ಲ ಗೊತ್ತು. ಹೀಗಿದ್ದರೂ ಬೆಲೆ ಏರಿಕೆಯ ಪಾಪದ ಹೊರೆಯನ್ನು ನಮ್ಮ ತಲೆ ಮೇಲೆ ಕಟ್ಟಲು ಹೊರಟಿರುವ ಬಿಜೆಪಿ ನಾಯಕರ ಮುಖಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಮಸಿ ಬಳಿದಿದ್ದಾರೆ.
ಈ ಸುದ್ದಿಯನ್ನೂ ಓದಿ | DK Shivakumar: ಪೌರಕಾರ್ಮಿಕರ ಕಲ್ಯಾಣಕ್ಕೆ 730 ಕೋಟಿ ರೂ. ಮೀಸಲು: ಡಿ.ಕೆ.ಶಿವಕುಮಾರ್
ಜನಾಕ್ರೋಶ ಯಾತ್ರೆ ಹೊರಟವರ ಮುಂದೆ ಈಗ ಇರುವುದು ಎರಡೇ ಎರಡು ಆಯ್ಕೆ. ಒಂದೋ ಅವರು ಪ್ರಧಾನ ಮಂತ್ರಿ ಅವರ ಮೇಲೆ ಒತ್ತಡ ಹೇರಿ ಕೇಂದ್ರ ಸರ್ಕಾರ ಹೆಚ್ಚಿಸಿರುವ ಬೆಲೆಯನ್ನು ಇಳಿಸುವಂತೆ ಮಾಡಬೇಕು, ಇಲ್ಲವೇ ಯಾತ್ರೆಯನ್ನು ಕೊನೆಗೊಳಿಸಿ ಗಂಟುಮೂಟೆ ಕಟ್ಟಿಕೊಂಡು ತಮ್ಮ ತಮ್ಮ ಮನೆಗೆ ಮರಳಬೇಕು. ಇದರ ಹೊರತಾಗಿ ಈ ಯಾತ್ರೆಯ ಪ್ರಹಸನವನ್ನು ಮುಂದುವರಿಸಿದರೆ ಜನರ ಆಕ್ರೋಶಕ್ಕೆ ತುತ್ತಾಗುವುದು ಖಂಡಿತ ಎಂದು ತಿಳಿಸಿದ್ದಾರೆ.
ಬಿಜೆಪಿ ಜನಾಕ್ರೋಶ ಯಾತ್ರೆಗೆ ಶುಭ ಕೋರಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಜನಾಕ್ರೋಶ ಯಾತ್ರೆ ಕೈಗೊಂಡಿರುವ ರಾಜ್ಯ ಬಿಜೆಪಿ ನಾಯಕರಿಗೆ ನಾನು ಶುಭ ಕೋರುತ್ತೇನೆ. ಒಂದು ಸಮರ್ಥ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದ ವೈಫಲ್ಯ ಮತ್ತು ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಮಾಡುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತಲಾಗದ ಮನೆಮುರುಕುತನದ ಬಗ್ಗೆ ಆಕ್ರೋಶಗೊಂಡಿರುವ ರಾಜ್ಯದ ಜನರ ಮನಸ್ಸು ಅರಿಯಲು ಈ ಯಾತ್ರೆ ನೆರವಾಗಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬಿಜೆಪಿಯ ಜನಾಕ್ರೋಶ ಯಾತ್ರೆ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಇಷ್ಟೊಂದು ಅಸಮರ್ಥ, ನಿರ್ಲಜ್ಜ ಮತ್ತು ಜನವಿರೋಧಿ ವಿರೋಧ ಪಕ್ಷವನ್ನು ರಾಜ್ಯ ಎಂದೂ ಕಂಡಿಲ್ಲ. ಸ್ವಪಕ್ಷೀಯರೇ ಆರೋಪಿಸುವಂತೆ ʼಪೇಮೆಂಟ್ ಸೀಟ್ʼನಲ್ಲಿ ಕೂತಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ರಾಜ್ಯ ಸರ್ಕಾರವನ್ನು ಪ್ರಶ್ನಿಸುವ ಯಾವ ನೈತಿಕತೆ ಇದೆ? ನಮ್ಮನ್ನು ಪ್ರಶ್ನಿಸುವ ಮೊದಲು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಅವರ ಶಾಸಕ ಮಿತ್ರರು ಕಳೆದೆ ಎರಡು ವರ್ಷಗಳಿಂದ ಮಾಡುತ್ತಿರುವ ಗಂಭೀರ ಸ್ವರೂಪದ ಆರೋಪಗಳಿಗೆ ಉತ್ತರಿಸುವ ದಮ್, ತಾಕತ್ ತೋರಿಸಲಿ ಎಂದು ಸವಾಲು ಹಾಕಿದ್ದಾರೆ.
ವಿಜಯೇಂದ್ರ ವಿರುದ್ಧ ಸ್ವಪಕ್ಷೀಯರು ಮಾಡುತ್ತಿರುವ ಭ್ರಷ್ಟಾಚಾರದ ಆರೋಪಗಳು ಅವರ ಪಕ್ಷದ ಹೈಕಮಾಂಡಿಗೂ ಮನವರಿಕೆಯಾದಂತಿದೆ. ಪಕ್ಷದೊಳಗಿದ್ದು ಮಾಡುವ ಆರೋಪಗಳಿಂದ ಆಗುವ ಮುಜುಗರದಿಂದ ತಪ್ಪಿಸಿಕೊಳ್ಳಲು ಬಿಜೆಪಿ ಹೈಕಮಾಂಡ್ ಯತ್ನಾಳ್ ಅವರನ್ನು ಪಕ್ಷದಿಂದ ಹೊರಗೆ ಹಾಕಿ, ಅವರಿಂದ ಈಗ ಇನ್ನಷ್ಟು ಆರೋಪಗಳನ್ನು ಮಾಡಿಸುತ್ತಿದೆ. ಅಂತಿಮವಾಗಿ ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸುವುದೇ ಬಿಜೆಪಿ ಹೈಕಮಾಂಡ್ ಉದ್ದೇಶವಾಗಿದೆ ಎಂದಿದ್ದಾರೆ.
ಇದಕ್ಕಾಗಿ ವಿಜಯೇಂದ್ರ ತಮ್ಮ ಕುರ್ಚಿ ಉಳಿಸಿಕೊಳ್ಳಲು ಈ ಜನಾಕ್ರೋಶ ಯಾತ್ರೆಯನ್ನು ಹಮ್ಮಿಕೊಂಡಿದ್ದಾರೆಯೇ ಹೊರತು ಬೇರೆ ಯಾವ ಸಾರ್ವಜನಿಕ ಹಿತಾಸಕ್ತಿಯ ಸದುದ್ದೇಶ ಖಂಡಿತ ಈ ಯಾತ್ರೆಗೆ ಇಲ್ಲ. ವಿಜಯೇಂದ್ರ ಅವರು ತಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರದ್ದು ಮಾತ್ರವಲ್ಲ ರಾಜ್ಯದ ಜನತೆಯ ವಿಶ್ವಾಸವನ್ನೂ ಕಳೆದುಕೊಂಡಿದ್ದಾರೆ.
ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಬಜೆಟ್‌ನ 51,000 ಕೋಟಿ ರೂಪಾಯಿ ಹಣ ನೇರವಾಗಿ ಫಲಾನುಭವಿಗಳನ್ನು ತಲುಪುತ್ತಿದ್ದು, ಅವರೆಲ್ಲರೂ ಸಂತುಷ್ಟರಾಗಿದ್ದಾರೆ. ಈಗ ಅವರು ಬೀದಿಗೆ ಬಂದು ನಮ್ಮ ಪರ ಘೋಷಣೆ ಹಾಕದೆ ಇರಬಹುದು, ಆದರೆ ಅವರೆಲ್ಲರ ಆಶೀರ್ವಾದ ನಮ್ಮ ಸರ್ಕಾರದ ಪರವಾಗಿದೆ. ಮೊದಲ ದಿನದಿಂದಲೂ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಾ ಬಂದಿರುವ ಭಾರತೀಯ ಜನತಾ ಪಕ್ಷದ ಬಡವರು ಮತ್ತು ಮಹಿಳಾ ವಿರೋಧಿ ಧೋರಣೆಯನ್ನು ಅರ್ಥಮಾಡಿಕೊಳ್ಳುವಷ್ಟು ಜನ ಪ್ರಜ್ಞಾವಂತರಾಗಿದ್ದಾರೆ ಎಂದು ಟೀಕಿಸಿದ್ದಾರೆ.
ಗ್ಯಾರಂಟಿ ಯೋಜನೆಗಳ ಯಶಸ್ಸನ್ನು ವಿಫಲಗೊಳಿಸುವ ಏಕೈಕ ಉದ್ದೇಶದಿಂದ ರಾಜ್ಯದ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಜೊತೆ ಶಾಮೀಲಾಗಿ ರಾಜ್ಯಕ್ಕೆ ನ್ಯಾಯಬದ್ಧವಾಗಿ ಸಿಗಬೇಕಾದ ತೆರಿಗೆ ಪಾಲು ಮತ್ತು ಅನುದಾನಕ್ಕೆ ಕತ್ತರಿ ಹಾಕಿಸಿದ್ದಾರೆ. ರಾಜ್ಯದ ಜನ ತಮ್ಮ ಬೆವರಿನ ಗಳಿಕೆಯಿಂದ ನೀಡುತ್ತಿರುವ ಐದು ಲಕ್ಷ ಕೋಟಿ ರೂಪಾಯಿಗಳಷ್ಟು ತೆರಿಗೆ ಹಣದಲ್ಲಿ ಕೇವಲ 60,000 ಕೋಟಿ ರೂಪಾಯಿ ಮಾತ್ರ ವಾಪಸು ನೀಡುತ್ತಿರುವ ಅನ್ಯಾಯದ ಬಗ್ಗೆ ಆಕ್ರೋಶಗೊಂಡಿದ್ದಾರೆ. ಬಿಜೆಪಿ ಪಕ್ಷದ ಯಾತ್ರೆಯ ಸಮಯದಲ್ಲಿ ಈ ಆಕ್ರೋಶದ ಬಿಸಿ ಕೂಡಾ ಬಿಜೆಪಿ ನಾಯಕರಿಗೆ ತಟ್ಟಲಿದೆ.
ಕರ್ನಾಟಕದ ಜನರ ಹಿತರಕ್ಷಣೆಯ ಕಿಂಚಿತ್ತಾದರೂ ಕಾಳಜಿ ಈ ಬಿಜೆಪಿ ನಾಯಕರಿಗೆ ಇರುವುದಾದರೆ ಮೊದಲು ಇವರು ಪ್ರಧಾನಮಂತ್ರಿ ನಿವಾಸದ ಎದುರು ಹೋಗಿ ಪ್ರತಿಭಟನೆ ನಡೆಸಬೇಕು. ಕರ್ನಾಟಕವನ್ನು ಶತ್ರುರಾಜ್ಯದಂತೆ ನೋಡುತ್ತಿರುವ ನರೇಂದ್ರ ಮೋದಿ ಸರ್ಕಾರ ತೆರಿಗೆ ಪಾಲು, ಅನುದಾನ ಹಂಚಿಕೆಯಲ್ಲಿ ಅನ್ಯಾಯ ಮಾಡುತ್ತಿರುವುದು ಮಾತ್ರವಲ್ಲ ಈಗ ಕೇಂದ್ರದಲ್ಲಿ ಕರ್ನಾಟಕದ ದನಿಯನ್ನು ಕುಗ್ಗಿಸಬೇಕೆಂಬ ದುಷ್ಟ ಉದ್ದೇಶದಿಂದ ಕ್ಷೇತ್ರ ಮರುವಿಂಗಡಣೆಯನ್ನು ಮಾಡಲು ಹೊರಟಿದೆ. ಇದರ ವಿರುದ್ಧ ದನಿ ಎತ್ತಬೇಕಾಗಿರುವ ರಾಜ್ಯದಿಂದ ಆರಿಸಿಹೋಗಿರುವ ಬಿಜೆಪಿ ಸಂಸದರು ಬಾಯಿಗೆ ಬೀಗ ಹಾಕಿಕೊಂಡು ಕೇಂದ್ರದ ಗುಲಾಮರಂತೆ ವರ್ತಿಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ |Pourakarmikas: ಪೌರ ಕಾರ್ಮಿಕರಿಗೆ ಗುಡ್ ನ್ಯೂಸ್: ಮೇ 1ರಂದು ಪೌರ ಕಾರ್ಮಿಕರ ಸೇವೆ ಕಾಯಂ: ಸಿಎಂ ಘೋಷಣೆ
ವೈಯಕ್ತಿಕವಾಗಿ ನಾನು ರಾಜ್ಯದಲ್ಲಿ ರಚನಾತ್ಮಕವಾಗಿ ಕಾರ್ಯನಿರ್ವಹಿಸುವ ಸಮರ್ಥ ವಿರೋಧ ಪಕ್ಷ ಇರಬೇಕೆಂದು ಬಯಸುವವನು. ಬಿಜೆಪಿಯವರಂತೆ ರಾಜ್ಯ ಬಿಜೆಪಿ ಮುಕ್ತ ಆಗಬೇಕೆಂದು ಬಯಸುವಷ್ಟು ಕೆಟ್ಟ ಮನಸ್ಸು ನನಗಿಲ್ಲ. ನಮ್ಮ ಆಡಳಿತದಲ್ಲಿ ತಿಳಿದೋ, ತಿಳಿಯದೆಯೋ ತಪ್ಪುಗಳಾಗಿದ್ದರೆ ಅದನ್ನು ನಮ್ಮ ಗಮನಕ್ಕೆ ತರುವುದು ವಿರೋಧ ಪಕ್ಷದ ಮುಖ್ಯ ಕರ್ತವ್ಯವಾಗಿದೆ. ಆದರೆ ರಾಜ್ಯದಲ್ಲಿರುವ ವಿರೋಧ ಪಕ್ಷ ತನ್ನ ಒಳಜಗಳ ಮತ್ತು ಅಸಾಮರ್ಥ್ಯದಿಂದ ರಾಜ್ಯದ ಜನತೆ ಎದುರು ನಗೆಪಾಟಲಿಗೀಡಾಗಿದೆ ಎಂದು ಕಿಡಿಕಾರಿದ್ದಾರೆ.