Basavaraj Horatti resigns: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ
Basavaraj Horatti resigns: ನನ್ನ ರಾಜೀನಾಮೆಯನ್ನು ಮಾರ್ಚ್ 31ರ ಒಳಗೆ ಸ್ವೀಕರಿಸಬೇಕು. ಏಪ್ರಿಲ್ 1ರಿಂದ ಅನ್ವಯವಾಗುವಂತೆ ಕ್ರಮಕೈಗೊಂಡು ನನ್ನನ್ನು ಈ ಹುದ್ದೆಯಿಂದ ಮುಕ್ತಿಗೊಳಿಸಬೇಕು ಎಂದು ಉಪಸಭಾಪತಿಗೆ ಬರೆದ ಪತ್ರದಲ್ಲಿ ಬಸವರಾಜ ಹೊರಟ್ಟಿ ಅವರು ತಿಳಿಸಿದ್ದಾರೆ.


ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಉಪ ಸಭಾಪತಿ ಪ್ರಾಣೇಶ್ ಅವರಿಗೆ ರಾಜೀನಾಮೆ ಪತ್ರವನ್ನು ರವಾನಿಸಿದ್ದು, ವೈಯಕ್ತಿಕ ಕಾರಣಗಳಿಂದ ನಾನು ನನ್ನ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಸದನದಲ್ಲಿನ ಬೆಳವಣಿಗೆಗಳಿಂದ ಮನಸ್ಸಿಗೆ ನೋವಾಗಿದೆ. ಹೀಗಾಗಿ ಈ ಸ್ಥಾನದಲ್ಲಿ ಮುಂದುವರಿಯುವುದರಲ್ಲಿ ಅರ್ಥ ಇಲ್ಲ ಎಂದು ಹೇಳಿದ್ದ ಬಸವರಾಜ ಹೊರಟ್ಟಿ ಇದೀಗ ರಾಜೀನಾಮೆ ಸಲ್ಲಿಸಿದ್ದಾರೆ.
ನನ್ನ ರಾಜೀನಾಮೆಯನ್ನು ಮಾರ್ಚ್ 31ರ ಒಳಗೆ ಸ್ವೀಕರಿಸಬೇಕು. ಏಪ್ರಿಲ್ 1ರಿಂದ ಅನ್ವಯವಾಗುವಂತೆ ಕ್ರಮಕೈಗೊಂಡು ನನ್ನನ್ನು ಈ ಹುದ್ದೆಯಿಂದ ಮುಕ್ತಿಗೊಳಿಸಬೇಕು ಎಂದು ಉಪಸಭಾಪತಿಗೆ ಬರೆದ ಪತ್ರದಲ್ಲಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ್ದ ಬಸವರಾಜ ಹೊರಟ್ಟಿ, ಇತ್ತೀಚೆಗೆ ಸದನದಲ್ಲಿ ನಡೆದ ಬೆಳವಣಿಗೆ ನನ್ನ ಮನಸ್ಸಿಗೆ ಬೇಸರ ತಂದಿದೆ. ಸದನದಲ್ಲಿ ನಡೆದ ಬೆಳೆವಣಿಗೆಯನ್ನು ನಿಯಂತ್ರಿಸುವಲ್ಲಿ ನಾನು ವಿಫಲನಾಗಿದ್ದೇನೆ. ಸಭಾಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವುದು ಸೂಕ್ತವಲ್ಲ ಎಂದು ಹೇಳಿದ್ದರು.
ಈ ಸ್ಥಾನದಲ್ಲಿ ಏಕೆ ಇರಬೇಕು ಎನ್ನುವ ಭಾವನೆ ಬರುತ್ತಿದೆ. ಈ ಬಗ್ಗೆ ಸ್ನೇಹಿತರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದಿದ್ದ ಅವರು, ಸದನದಲ್ಲಿನ ಇತ್ತೀಚಿನ ಘಟನೆಗಳು ಮನಸ್ಸು ಘಾಸಿಗೊಳಿಸಿವೆ. ಸದನದಲ್ಲಿ ಯಾರು ಯಾರಿಗೆ ಗೌರವ ಕೊಡುವುದಿಲ್ಲ. 'ಮೇಲ್ಮನೆ ಚಿಂತಕರ ಚಾವಡಿ. ದೇಶಕ್ಕೆ ಮಾದರಿಯಾಗಿದೆ. ಅಂತಹ ಮೇಲ್ಮನೆಯ ಸಭಾಪತಿಯಾಗಿದ್ದೇನೆ ಎನ್ನುವುದೇ ಗೌರವ. ಆ ಸ್ಥಾನದಲ್ಲಿದ್ದು, ನಿಯಮಬದ್ಧವಾಗಿ ಸದನ ನಡೆಸದಿದ್ದರೆ ಏನು ಉಪಯೋಗ ಎಂಬ ಭಾವನೆ ಮೂಡುತ್ತಿದೆ' ಎಂದು ಹೇಳಿದ್ದರು.
'ಅಮಾನತು ಮಾಡುವುದು ಒಳ್ಳೆಯ ಸಂಪ್ರದಾಯವಲ್ಲ. ಒಂದೆರಡು ದಿನ ಅಮಾನತು ಮಾಡಬಹುದು, ಅರಾರು ತಿಂಗಳು ಅಮಾನತು ಮಾಡುವುದು ಸರಿಯಲ್ಲ. ಅವರು ಕೂಡ ಸಭಾಧ್ಯಕ್ಷರ, ಸಭಾಪತಿಗಳ ಪೀಠದ ಮೇಲೆ ಹತ್ತುವುದು ಸರಿಯಲ್ಲ. ಸಿ.ಟಿ ರವಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಕರಣದಲ್ಲಿ ನನ್ನ ಅನುಭವ ಆಧರಿಸಿ ತೀರ್ಮಾನ ಮಾಡಿದ್ದೇನೆ ಎಂದು ಹೇಳಿದರು.
ಸದನ ನಡೆಸುವುದು ಬಹಳ ಕಷ್ಟವಾಗಿದೆ. ಆ ಸ್ಥಾನದಲ್ಲಿ ಕುಳಿತು ಸರಿಯಾಗಿ ಸದನ ನಡೆಸದಿದ್ದರೆ ನಾವು ಅಯೋಗ್ಯರು ಎನ್ನಿಸಿಕೊಳ್ಳಬೇಕಾಗುತ್ತದೆ. ಮಹತ್ವದ ವಿಷಯಗಳಿದ್ದರೂ ಅದನ್ನು ಬಿಟ್ಟು ಬೇರೆ ವಿಚಾರ ಮಾತನಾಡುತ್ತಾರೆ. ಮಹತ್ವದ ಮಸೂದೆಗಳು ಚರ್ಚೆಗಳಾಗದೆ ಗದ್ದಲದಲ್ಲಿ ಪಾಸಾಗುತ್ತಿವೆ. ವಿಧಾನ ಪರಿಷತ್ತಿನಲ್ಲಿ ಜೈಕಾರ, ಧಿಕ್ಕಾರ ಕೂಗಬಾರದು. ಆದರೂ ಯಾರೂ ನಿಯಮ ಪಾಲಿಸುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದರು.