Sudha Murthy: ವಿಜಯಪುರ ಏರ್‌ಪೋರ್ಟ್ ಯಾವಾಗ ಶುರು ಮಾಡ್ತೀರಿ? ರಾಜ್ಯಸಭೆಯಲ್ಲಿ ಸುಧಾ ಮೂರ್ತಿ ಪ್ರಶ್ನೆ
ವಿಜಯಪುರ ವಿಮಾನ ನಿಲ್ದಾನ ಯಾವಾಗ ಉದ್ಘಟನೆಯಾಗಲಿದ ಎಂದು ರಾಜ್ಯ ಸಭೆಯಲ್ಲಿ ಸುಧಾ ಮೂರ್ತಿ ಪ್ರಶ್ನಿಸಿದ್ದಾರೆ. ʼʼಆಗ ಹೇಳ್ತೀನಿ, ಈಗ ಹೇಳ್ತೀನಿ ಅನ್ನೋದು ಬೇಡ. ನಂಗೆ ಈಗಲೇ ಹೇಳಿ ಯಾವಾಗ ಶುರು ಮಾಡ್ತೀರಿ ಅಂತ. ಲಿಖಿತ ರೂಪದಲ್ಲಿ ನನಗೆ ಉತ್ತರ ಬೇಕು” ಎಂದು ಅವರು ಆಗ್ರಹಿಸಿದ್ದಾರೆ. ಇದಕ್ಕೆ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಉತ್ತರಿಸಿ, ʼʼಈ ವರ್ಷವೇ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಲಿದೆʼʼ ಎಂದು ಭರವಸೆ ನೀಡಿದ್ದಾರೆ.
ಹೊಸದಿಲ್ಲಿ: ವಿಜಯಪುರ ಭಾಗದ ಜನರ ಬಹು ಬೇಡಿಕೆಗಳಲ್ಲಿ ಒಂದಾದ ವಿಮಾನ ನಿಲ್ದಾಣ ಸಿದ್ಧವಾಗಿದೆ. ಆದರೆ ಇನ್ನೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ (Vijayapura Airport). ಈ ಬಗ್ಗೆ ರಾಜ್ಯಸಭೆ (Rajya Sabha)ಯಲ್ಲಿ ಡಾ. ಸುಧಾಮೂರ್ತಿ (Sudha Murthy) ಅವರು ಧ್ವನಿ ಎತ್ತಿದರು. ''ವಿಮಾನ ನಿಲ್ದಾಣ ಯಾವಾಗ ಉದ್ಘಾಟನೆಯಾಗುತ್ತದೆ ಎನ್ನುವುದನ್ನು ಈಗಲೇ ಹೇಳಿʼʼ ಎಂದು ಅವರು ಪ್ರಶ್ನೋತ್ತರ ಅವಧಿಯಲ್ಲಿ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಅವರಿಗೆ ಕೇಳಿದರು. ಜತೆಗೆ ಅದಕ್ಕೆ ಈಗ ಲಿಖಿತ ರೂಪದಲ್ಲಿ ಬರೆದುಕೊಡಿ ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಅವರು, ʼʼಈ ವರ್ಷವೇ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಲಿದೆʼʼ ಎಂದು ಭರವಸೆ ನೀಡಿದರು.
ʼʼಬಿಜಾಪುರ ಅಥವಾ ವಿಜಯಪುರ ಉತ್ತರ ಕರ್ನಾಟಕದ ಜನಪ್ರಿಯ ಪ್ರವಾಸಿ ತಾಣ. ಅಲ್ಲಿ ಕೇವಲ 4 ತಿಂಗಳು ಚಳಿಗಾಲ ಇರುತ್ತದೆ, ಉಳಿದಂತೆ ಉರಿ ಬಿಸಿಲಿರುತ್ತದೆʼʼ ಎಂದು ಹೇಳುವ ಮೂಲಕ ಸುಧಾ ಮೂರ್ತಿ ಮಾತು ಆರಂಭಿಸಿದರು.
ʼʼಇಲ್ಲಿನ ಅನೇಕ ಮಂದಿ ಪ್ರವಾಸೋದ್ಯಮವನ್ನೇ ಅವಲಂಬಿಸಿದ್ದಾರೆ. ವಿಮಾನ ನಿಲ್ದಾಣವೇನೋ ಸಿದ್ದವಾಗಿದೆ. ಆದರೆ ಇನ್ನೂ ವಿಮಾನ ಹಾರಾಟ ಆರಂಭವಾಗಿಲ್ಲ. ರಾಜ್ಯ ಸರ್ಕಾರವನ್ನು ಕೇಳಿದರೆ ಕೇಂದ್ರ ಅನುಮತಿ ಕೊಡಬೇಕು ಎನ್ನುತ್ತಾರೆ. ಕೇಂದ್ರವನ್ನು ಕೇಳಿದರೆ ಅವರು ರಾಜ್ಯದತ್ತ ಬೆರಳು ತೋರಿಸುತ್ತಾರೆ. ಹೀಗಾಗಿ ಯಾವಾಗ ವಿಮಾನ ನಿಲ್ದಾಣ ಕಾರ್ಯಾರಂಭವಾಗುತ್ತದೆ ಎನ್ನುವ ಬಗ್ಗೆ ನನಗೆ ಲಿಖಿತ ರೂಪದಲ್ಲಿ ಉತ್ತರ ಬೇಕುʼʼ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ: Sudha Murthy: ಬರ್ತ್‌ಡೇ ಪಾರ್ಟಿಗಾಗಿ ಉಳಿಸಿದ ಹಣ ದಾನ ಮಾಡುವಂತೆ ಮಗಳಿಗೆ ಹೇಳಿದ್ರಂತೆ ಸುಧಾ ಮೂರ್ತಿ!
ರಾಮಮೋಹನ್ ನಾಯ್ಡು ಪ್ರತಿಕ್ರಿಯಿಸಿ, ʼʼಈ ಬಗ್ಗೆ ನಾವು ನಿಕಟವಾಗಿ ಮೇಲ್ವಿಚಾರಣೆ ನಡೆಸುತ್ತಿದ್ದೇವೆ. ಬಹುತೇಕ ಎಲ್ಲ ಕಾರ್ಯಗಳೂ ಮುಗಿದಿವೆ. ಪರವಾನಗಿಯೂ ತಯಾರಾಗಿದೆ. ಈ ವರ್ಷ ಎಲ್ಲ ಕೆಲಸ ಮುಗಿಯಲಿದೆʼʼ ಎಂದು ತಿಳಿಸಿದರು. ʼʼಸದ್ಯದಲ್ಲೇ ಈ ಬಗ್ಗೆ ಸಭೆ ಕರೆಯುತ್ತೇವೆʼʼ ಎಂದೂ ಹೇಳಿದರು.
2008ರಲ್ಲಿ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಅವರು ವಿಜಯಪುರ ತಾಲೂಕಿನ ಮದಭಾವಿ ಬಳಿ ವಿಮಾನ ನಿಲ್ದಾಣಕ್ಕೆ ಭೂಮಿಪೂಜೆ ಮಾಡಿದ್ದರು. ಒಟ್ಟು 727.01 ಎಕರೆ ಜಮೀನಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಾಗಿತ್ತು. ನಂತರ ನಿರ್ಮಾಣ ಕಾಮಗಾರಿ ನಡೆದಿರಲಿಲ್ಲ. ಬಳಿಕ 2021ರಲ್ಲಿ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗೆ ಅವರು ವರ್ಚ್ಯೂವಲ್ ಮೂಲಕ ಚಾಲನೆ ನೀಡಿದ್ದರು. ಸದ್ಯ ರನ್‍ವೇ, ಎಸಿಟಿ, ಟ್ಯಾಕ್ಸಿ ವೇ, ಎಪ್ರಾನ್, ಪ್ಯಾಸೆಂಜರ್ ಟರ್ಮಿನಲ್ ಬಿಲ್ಡಿಂಗ್, ಇಸೋಲೇಶನ್ ಬೇ, ಒಳ ರಸ್ತೆಗಳು, ಪೆರಿಪೆರಲ್ ರಸ್ತೆಗಳು ಮುಕ್ತಾಯವಾಗಿವೆ.