Krishnaiah Shetty: ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ದೋಷಿ; ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪು
ಬ್ಯಾಂಕ್ ವಂಚನೆ ಕೇಸ್‌ನಲ್ಲಿ ಮಾಜಿ ಸಚಿವ, ಬಿಜೆಪಿ ನಾಯಕ ಕೃಷ್ಣಯ್ಯ ಶೆಟ್ಟಿ ದೋಷಿ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರೊಂದಿಗೆ ರೆಡ್ಡಿ ಎಂಟಿವಿ, ಶ್ರೀನಿವಾಸ್ ಹಾಗೂ ಮುನಿರಾಜು ಸೇರಿ ನಾಲ್ವರು ತಪ್ಪಿತಸ್ಥರು ಎಂದು ಕೋರ್ಟ್ ಹೇಳಿದೆ. ನಕಲಿ ದಾಖಲೆ ನೀಡಿ ಕೋಟ್ಯಂತರ ರೂ. ಸಾಲ ಪಡೆದು ವಂಚನೆ ಮಾಡಿದ್ದ ಆರೋಪ ಈ ನಾಲ್ವರ ಮೇಲಿದೆ.
ಬೆಂಗಳೂರು: ಬ್ಯಾಂಕ್ ವಂಚನೆ ಕೇಸ್ (Bank Fraud Case)ನಲ್ಲಿ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ (Krishnaiah Shetty) ದೋಷಿ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರೊಂದಿಗೆ ರೆಡ್ಡಿ ಎಂಟಿವಿ, ಶ್ರೀನಿವಾಸ್ ಹಾಗೂ ಮುನಿರಾಜು ಸೇರಿ ನಾಲ್ವರು ತಪ್ಪಿತಸ್ಥರು ಎಂದು ಕೋರ್ಟ್ ಹೇಳಿದೆ. ನಕಲಿ ದಾಖಲೆ ನೀಡಿ ಕೋಟ್ಯಂತರ ರೂ. ಸಾಲ ಪಡೆದು ವಂಚನೆ ಮಾಡಿದ್ದ ಆರೋಪ ಈ ನಾಲ್ವರ ಮೇಲಿದೆ. ಕೃಷ್ಣಯ್ಯ ಶೆಟ್ಟಿ ಅವರಿಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಕೋರ್ಟ್ ಶಿಕ್ಷೆಯನ್ನು 1 ತಿಂಗಳ ಕಾಲ ಅಮಾನತ್ತಿನಲ್ಲಿಟ್ಟಿದೆ.
ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ಫೆ. 6ರಂದು ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಈ ತೀರ್ಪು ಪ್ರಕಟಿಸಿದ್ದಾರೆ. 2008ರಲ್ಲಿ ಎಸ್‌ಬಿಐ ಬ್ಯಾಂಕ್ ದಾಖಲಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಂಚನೆ, ಫೋರ್ಜರಿ ಪ್ರಕರಣದಲ್ಲಿ ಈ ಆದೇಶ ಹೊರಡಿಸಲಾಗಿದೆ.
ಇಂದೇನಾಯ್ತು?
ಶಿಕ್ಷೆ ಅಮಾನತ್ತಿನಲ್ಲಿಟ್ಟು ಜಾಮೀನು ನೀಡುವಂತೆ ಕೃಷ್ಣಯ್ಯ ಶೆಟ್ಟಿ ಪರ ವಕೀಲ ನಾಗೇಂದ್ರ ನಾಯಕ್ ಅವರು ಕೋರ್ಟ್ಗೆ ಮನವಿ ಮಾಡಿದರು. ಈ ಮನವಿಯನ್ನು ಪುರಸ್ಕರಿಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, 1 ತಿಂಗಳ ಕಾಲ ಶಿಕ್ಷೆ ಅಮಾನತ್ತಿನಲ್ಲಿಟ್ಟಿದೆ. ಜತೆಗೆ 5 ಲಕ್ಷ ರೂ. ಬಾಂಡ್, ಒಬ್ಬರ ಶ್ಯೂರಿಟಿ ಒದಗಿಸಲು ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಸೂಚನೆ ನೀಡಿದರು. ಜತೆಗೆ ಇದಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶವನ್ನೂ ಒದಗಿಸಿದರು.
ಈ ಸುದ್ದಿಯನ್ನೂ ಓದಿ: ರೋಬೋಟ್ ನೆರವಿನ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗೆ ಒಳಪಟ್ಟ ಸಚಿವ ರಾಮಲಿಂಗಾರೆಡ್ಡಿ
ಏನಿದು ಪ್ರಕರಣ?
ಕೋಲಾರ ಜಿಲ್ಲೆಯ ಮಾಲೂಕು ಕ್ಷೇತ್ರದ ಬಿಜೆಪಿ ಶಾಸಕರೂ ಆಗಿದ್ದ, ಬಾಲಾಜಿ ಕೃಪಾ ಎಂಟರ್‌ಪ್ರೈಸಸ್‌ನ ಮಾಲೀಕ ಕೃಷ್ಣಯ್ಯ ಶೆಟ್ಟಿ ಸಾರ್ವಜನಿಕ ಉದ್ದಿಮೆಗಳ ನೌಕರರಿಗೆ ಗೃಹ ನಿರ್ಮಾಣಕ್ಕೆ ಸಾಲ ಕೊಡಿಸುವುದಾಗಿ ಆಮಿಷವೊಡ್ಡಿ, ಹಲವು ನೌಕರರ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ 7.17 ಕೋಟಿ ರೂ. ಬ್ಯಾಂಕ್ ಸಾಲ ಪಡೆದಿದ್ದರು. ಇದರಲ್ಲಿ 3.53 ಕೋಟಿ ರೂ. ಸಾಲ ತೀರಿಸಿಲ್ಲ ಎಂದು ಆರೋಪಿಸಲಾಗಿದೆ. ಪ್ರಕರಣವನ್ನು ಸಿಬಿಐ ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಸಿತ್ತು.