Road Accident: ರಾಜ್ಯದಲ್ಲಿ ನಾಲ್ಕು ಕಡೆ ಘೋರ ಅಪಘಾತ, ನಾಲ್ವರು ಸಾವು
ಬೆಂಗಳೂರು, ಹಾಸನ, ಕಲಬುರಗಿ ಹಾಗೂ ಉತ್ತರ ಕನ್ನಡದ ಕಾರವಾರಗಳಲ್ಲಿ ನಾಲ್ಕು ಪ್ರತ್ಯೇಕ ಅಪಘಾತಗಳು ನಿನ್ನೆ ಸಂಭವಿಸಿದ್ದು, ಈ ಅಪಘಾತಗಳಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ನಾಲ್ಕು ಕಡೆಗಳಲ್ಲಿ ನಿನ್ನೆ ನಾಲ್ಕುು ಪ್ರತ್ಯೇಕ ಅಪಘಾತಗಳು (Road Accident) ಸಂಭವಿಸಿವೆ. ಇವುಗಳಲ್ಲಿ ನಾಲ್ಕು ಮಂದಿ ಸಾವಿಗೀಡಾಗಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಬೆಂಗಳೂರು (Bengaluru news), ಹಾಸನ (Hassan news), ಕಲಬುರಗಿ (kalaburagi news) ಹಾಗೂ ಕಾರವಾರಗಳಲ್ಲಿ (Uttara Kannada News) ಈ ಅಪಘಾತಗಳು ನಡೆದಿವೆ.
ಬೆಂಗಳೂರಿನಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ರಸ್ತೆ ಬದಿ ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಇನ್ನೂ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ದೇವನಹಳ್ಳಿ ಬಳಿ ಕಂಬಳಿಪುರದಲ್ಲಿ ನಡೆದಿದೆ. ರಸ್ತೆಯ ಬದಿಯಲ್ಲಿ ನಿಂತಿದ್ದ ಟ್ರಕ್‌ಗೆ ವೇಗವಾಗಿ ಬಂದ ಕಾರು ಭೀಕರವಾಗಿ ಡಿಕ್ಕಿ ಹೊಡೆದಿದೆ. ಈ ವೇಳೆ ನಿಯಂತ್ರಣ ತಪ್ಪಿ ಟ್ರಕ್ಕಿಗೆ ಕಾರು ಡಿಕ್ಕಿ ಹೊಡೆದಿದೆ. ಕೂಡಲೇ ಕಾರು ಚಾಲಕ ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರವಾದ ಗಾಯಗಳಾಗಿವೆ. ಮೃತ ಚಾಲಕನನ್ನು ಆಂಧ್ರ ಮೂಲದ ಅಮರ್ ಪ್ರಸಾದ್ ಎಂದು ಗುರುತಿಸಲಾಗಿದೆ. ಅಪಘಾತದ ರಭಸಕ್ಕೆ ಕಾರು ಮೂರು ರೌಂಡ್ ಪಲ್ಟಿ ಹೊಡೆದಿದೆ.
ಹಾಸನದಲ್ಲಿ ಟ್ರಾಕ್ಟರ್ ಪಲ್ಟಿಯಾಗಿ ಯುವಕ ದುರಂತ ಸಾವು
ಹಾಸನ: ಹಾಸನದಲ್ಲಿ ಟ್ರ್ಯಾಕ್ಟರ್ ನಿಯಂತ್ರಣ ಕಳೆದುಕೊಂಡು ಪಲ್ಟಿಯಾದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಕ್ಕಿಹಳ್ಳಿ ನಡೆದಿದೆ. ಮೃತ ಯುವಕನನ್ನು ಹಾಸನ ತಾಲೂಕಿನ ಮಲ್ಲಾಪುರ ಗ್ರಾಮದ ಸಂಜು (25) ಎಂದು ಗುರುತಿಸಲಾಗಿದೆ. ಬೇಲೂರು ತಾಲ್ಲೂಕಿನ ಹಕ್ಕಿಹಳ್ಳಿ ಸಮೀಪದ ಸಿಲ್ವರ್ ಸ್ಯಾಂಡ್ ಕ್ರಷರ್‌ನಿಂದ ಲೋಡ್ ತುಂಬಿಕೊಂಡು ಬರುತ್ತಿದ್ದಾಗ ಟ್ರ್ಯಾಕ್ಟರ್ ಪಲ್ಟಿಯಾಗಿದ್ದು, ಸಂಜು ಟ್ರ್ಯಾಕ್ಟರ್ ಅಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕ್ರಷರ್ ಮಾಲೀಕರು ಸಮರ್ಪಕ ರಸ್ತೆ ವ್ಯವಸ್ಥಿತವಾಗಿ ನಿರ್ಮಿಸದ ಕಾರಣ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಕುರಿತು ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.
ಕಾರವಾರದಲ್ಲಿ ಟೆಂಪೋ ಡಿಕ್ಕಿಯಾಗಿ ನೌಕಾನೆಲೆಯ ಕಾರ್ಮಿಕ ದುರ್ಮರಣ
ಉತ್ತರಕನ್ನಡ : ಉತ್ತರಕನ್ನಡದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ನಿಯಂತ್ರಣ ತಪ್ಪಿ ಟೆಂಪೋ ಡಿಕ್ಕಿಯಾಗಿ ನೌಕಾ ನೆಲೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಸಾವನ್ನಪ್ಪಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಕಟ್ಟಡ ಕಾರ್ಮಿಕ ಜಸ್ತಿ ಮಂಡಾಲ್ (50) ಸಾವನ್ನಪ್ಪಿರುವ ಕಾರ್ಮಿಕ ಎಂದು ತಿಳಿದುಬಂದಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ನೌಕಾ ನೆಲೆಯಲ್ಲಿ ನಿನ್ನೆ ರಾತ್ರಿ ಘಟನೆ ಸಂಭವಿಸಿದೆ. ಎಲ್ ಎನ್ ಟಿ ಕಂಪನಿಯ ಗುತ್ತಿಗೆ ಆಧಾರದಲ್ಲಿ ಮಂಡಾಲ್ ಕೆಲಸ ಮಾಡುತ್ತಿದ್ದ. ಕೆಲಸ ಮುಗಿದ ಬಳಿಕ ಕಾರ್ಮಿಕರನ್ನು ಕರೆದೊಯ್ಯಲು ಟೆಂಪೋ ಬಂದಿತ್ತು. ಈ ವೇಳೆ ನಿಯಂತ್ರಣ ತಪ್ಪಿ ಕಾರ್ಮಿಕ ಮಂಡಾಲ್‌ಗೆ ಟೆಂಪೋ ಡಿಕ್ಕಿ ಹೊಡೆದಿದೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಮಂಡಾಲ್‌ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿ ಆಗದೆ ಜಸ್ತಿ ಮಂಡಾಲ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಸದ್ಯ ಕಾರವಾರ ಪೊಲೀಸರು ಟೆಂಪೋ ಚಾಲಕರ ಅಜಯ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಾರ್ಮಿಕರು ಮತ್ತು ಕುಟುಂಬಸ್ಥರು ಪರಿಹಾರ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಮೃತ ಜಸ್ತಿ ಮಂಡಾಲ್ ಕುಟುಂಬಕ್ಕೆ 20 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಒತ್ತಾಯ ಮಾಡಿದ್ದು, ಕಾರವಾರ ಗ್ರಾಮೀಣ ಠಾಣೆ ಪೋಲಿಸರು ಭೇಟಿ ನೀಡಿದ್ದಾರೆ.
ಟ್ರಾಕ್ಟರ್‌ಗೆ ಕಾರು ಡಿಕ್ಕಿ, ಮಹಿಳೆ ಸಾವು
ಕಲಬುರ್ಗಿ : ಕಲಬುರ್ಗಿಯಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಕಬ್ಬು ತುಂಬಿದ ಟ್ರಾಕ್ಟರ್ ಗೆ ಕಾರು ಢಿಕ್ಕಿಯಾಗಿ ಸ್ಥಳದಲ್ಲೇ ಮಹಿಳೆ ಮೃತಪಟ್ಟಿದ್ದಾರೆ. ಮೂವರು ಗಾಯಗೊಂಡಿರುವ ಘಟನೆ ಅಫಜಲಪುರ ತಾಲ್ಲೂಕಿನ ಚೌಡಾಪುರ ತಾಂಡ ಬಳಿ ನಡೆದಿದೆ.
ಕಲಬುರಗಿ ನಗರ ಪ್ರಶಾಂತ ನಗರ ನಿವಾಸಿ ವಿದ್ಯಾ (40) ಸ್ಥಳದಲ್ಲೇ ಮೃತಪಟ್ಟ ದುರ್ದೈವಿ. ನಿತಿನ್ ಕುಮಾರ್ (42) ಮಕ್ಕಲಾದ್ ವೈಷ್ಣವಿ (15) ಗಂಭೀರ ಗಾಯಗೊಂಡಿದ್ದು, ವೇದಾಂತ (10) ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಗಾಯಗೊಂಡವರಿಗೆ ಕಲಬುರ್ಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಚೌಡಾಪುರ ತಾಂಡಾ ಬಳಿ ಕಬ್ಬು ತುಂಬಿಕೊಂಡು ಹೊರಟಿದ್ದ ಟ್ರಾಕ್ಟರ್ ಗೆ ಕಲಬುರ್ಗಿ ಕಡೆಯಿಂದ ವೇಗವಾಗಿ ಬಂದಂ ಕಾರು ಡಿಕ್ಕಿ ಹೊಡೆದಿದೆ. ಹಾಗಾಗಿ ಈ ಒಂದು ದುರಂತ ಸಂಭವಿಸಿದೆ.ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರೀಶೀಲಿಸಿದರು. ಅಪಘಾತದ ಕುರಿತು ದೇವಲಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Rahul Dravid: ಬೆಂಗಳೂರಲ್ಲಿ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಕಾರು ಅಪಘಾತ!