ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DC vs LSG: ಲಖನೌ ಸೂಪರ್‌ ಜಯಂಟ್ಸ್‌ ಎದುರು ಡೆಲ್ಲಿ ಕ್ಯಾಪಿಟಲ್ಸ್‌ಗೆ ಅಧಿಕಾರಯುತ ಜಯ!

DC vs LSG Match Highlights: ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ, 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 40ನೇ ಪಂದ್ಯದಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು.

IPL 2025: ಲಖನೌ ಎದುರು ಡೆಲ್ಲಿ ಕ್ಯಾಪಿಟಲ್ಸ್‌ಗೆ ಅಧಿಕಾರಯುತ ಜಯ!

ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ 8 ವಿಎಕಟ್‌ ಭರ್ಜರಿ ಜಯ.

Profile Ramesh Kote Apr 22, 2025 11:18 PM

ಲಖನೌ: ಮುಖೇಶ್‌ ಕುಮಾರ್‌ (33 ಕ್ಕೆ 4) ಪರಿಣಾಮಕಾರಿ ಬೌಲಿಂಗ್‌ ಹಾಗೂ ಅಭಿಷೇಕ್‌ ಪೊರೆಲ್‌ (51) ಹಾಗೂ ಕೆಎಲ್‌ ರಾಹುಲ್‌ (57*) ಅವರ ಅರ್ಧಶತಕಗಳ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡ, ಎದುರಾಳಿ ಲಖನೌ ಸೂಪರ್‌ ಜಯಂಟ್ಸ್‌ (Lucknow Super Giants) ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಆ ಮೂಲಕ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ಆರನೇ ಗೆಲುವು ಪಡೆದಿದೆ. ಇನ್ನು ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ವೈಫಲ್ಯದಿಂದ ಸೋಲು ಅನುಭವಿಸಿದ ಲಖನೌ ಸೂಪರ್‌ ಜಯಂಟ್ಸ್‌ ತಂಡ ಪಾಯಿಂಟ್ಸ್‌ ಟೇಬಲ್‌ನಲ್ಲಿ ಐದನೇ ಸ್ಥಾನದಲ್ಲಿಯೇ ಉಳಿದಿದೆ.

ಲಖನೌ ನೀಡಿದ್ದ 160 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ, ಅಭಿಷೇಕ್‌ ಪೊರೆಲ್‌ ಹಾಗೂ ಕೆಎಲ್‌ ರಾಹುಲ್‌ ಅರ್ಧಶತಕಗಳ ಬಲದಿಂದ 17.5 ಓವರ್‌ಗಳಿಗೆ 2 ವಿಕೆಟ್‌ಗಳಿಂದ 161 ರನ್‌ಗಳನ್ನು ಗಳಿಸಿ 8 ವಿಕೆಟ್‌ಗಳ ಗೆಲುವು ಪಡೆಯಿತು. ಈ ಗೆಲುವಿನ ಮೂಲಕ ಡೆಲ್ಲಿ ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡನೇ ಸ್ಥಾನವನ್ನು ಇನ್ನಷ್ಟು ಗಟ್ಟಿ ಮಾಡಿಕೊಂಡಿದೆ.

IPL 2025: ಆರ್‌ಸಿಬಿ ಇನ್ನೂ ಎಷ್ಟು ಪಂದ್ಯ ಗೆಲ್ಲಬೇಕು? ಎಲ್ಲಾ ತಂಡಗಳ ಪ್ಲೇಆಫ್ಸ್‌ ಲೆಕ್ಕಾಚಾರ!

ಅಭಿಷೇಕ್‌ ಪೊರೆಲ್‌ ಚೊಚ್ಚಲ ಅರ್ಧಶತಕ

ಅಭಿಷೇಕ್‌ ಪೊರೆಲ್‌ ಜೊತೆ ಇನಿಂಗ್ಸ್‌ ಆರಂಭಿಸಿದ ಕರುಣ್‌ ನಾಯರ್‌ 15 ರನ್‌ಗಳಿಸಿ ವಿಕೆಟ್‌ ಒಪ್ಪಿಸಿದರು. ಬಳಿಕ ಎರಡನೇ ವಿಕೆಟ್‌ಗೆ ಜೊತೆಯಾದ ಅಭಿಷೇಕ್‌ ಪೊರೆಲ್‌ ಹಾಗೂ ಕೆಎಲ್‌ ರಾಹುಲ್‌ 69 ರನ್‌ಗಳನ್ನು ಸಿಡಿಸಿದರು. ಅದ್ಭುತ ಬ್ಯಾಟ್‌ ಮಾಡಿದ ಅಭಿಷೇಕ್‌ ಪೊರೆಲ್‌, 36 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 5 ಬೌಂಡರಿಗಳೊಂದಿಗೆ 51 ರನ್‌ ಗಳಿಸಿ ತಮ್ಮ ಐಪಿಎಲ್‌ ವೃತ್ತಿ ಜೀವನದಲ್ಲಿ ಚೊಚ್ಚಲ ಅರ್ಧಶತಕ ಗಳಿಸಿ ವಿಕೆಟ್‌ ಒಪ್ಪಿಸಿದರು.



ಕೆಎಲ್‌ ರಾಹುಲ್‌ ಜವಾಬ್ದಾರಿಯುತ ಆಟ

ಬಳಿಕ ತಂಡದ ಜವಾಬ್ದಾರಿ ಪಡೆದ ಕೆಎಲ್‌ ರಾಹುಲ್‌ ಇನಿಂಗ್ಸ್‌ನುದ್ದಕ್ಕೂ ಆಂಕರ್‌ ಪಾತ್ರವನ್ನು ನಿರ್ವಹಿಸಿದರು. ಇವರು ಆಡಿದ 42 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 3 ಬೌಂಡರಿಗಳೊಂದಿಗೆ ಅಜೇಯ 57 ರನ್‌ ಸಿಡಿಸಿ ಡೆಲ್ಲಿ ತಂಡವನ್ನು ಬಹುಬೇಗ ಗೆಲುವಿನ ದಡ ಸೇರಿಸಿದರು. ಇವರ ಜೊತೆ ಮೂರನೇ ವಿಕೆಟ್‌ಗೆ 56 ರನ್‌ಗಳನ್ನು ಕಲೆ ಹಾಕಿದ್ದ ಅಕ್ಷರ್‌ ಪಟೇಲ್‌, ನಿರ್ಣಾಯಕ 34 ರನ್‌ಗಳನ್ನು ಸಿಡಿಸಿದರು.

159 ರನ್‌ಗಳನ್ನು ಕಲೆ ಹಾಕಿದ ಲಖನೌ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಲಖನೌ ಸೂಪರ್‌ ಜಯಂಟ್ಸ್‌ ತಂಡ, ಏಡೆನ್‌ ಮಾರ್ಕ್ರಮ್‌ ಹಾಗೂ ಮಿಚೆಲ್‌ ಮಾರ್ಷ್‌ ಬ್ಯಾಟಿಂಗ್‌ ಹೊರತಾಗಿಯೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯ ಅನುಭವಿಸಿ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 159 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ 160 ರನ್‌ಗಳ ಗುರಿಯನ್ನು ನೀಡಿತು.



ಎಲ್‌ಎಸ್‌ಜಿಗೆ ಭರ್ಜರಿ ಆರಂಭ

ಲಖನೌ ಸೂಪರ್‌ ಜಯಂಟ್ಸ್‌ ಪರ ಇನಿಂಗ್ಸ್‌ ಆರಂಭಿಸಿದ ಏಡೆನ್‌ ಮಾರ್ಕ್ರಮ್‌ ಹಾಗೂ ಮಿಚೆಲ್‌ ಮಾರ್ಷ್‌ ಪವರ್‌ನಲ್ಲಿ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಈ ಜೋಡಿ ಮೊದಲನೇ ವಿಕೆಟ್‌ಗೆ 87 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಲಖನೌಗೆ ಭರ್ಜರಿ ಆರಂಭ ತಂದುಕೊಟ್ಟರು. ಭರ್ಜರಿ ಬ್ಯಾಟ್‌ ಮಾಡಿದ ಏಡೆನ್‌ ಮಾರ್ಕ್ರಮ್‌ 33 ಎಸೆತಗಳಲ್ಲಿ 52 ರನ್‌ಗಳನ್ನು ಸಿಡಿಸಿ ದುಷ್ಮಾಂತ ಚಮೀರಗೆ ವಿಕೆಟ್‌ ಒಪ್ಪಿಸಿದರು.

ಏಡೆನ್‌ ಮಾರ್ಕ್ರಮ್‌ ವಿಕೆಟ್‌ ಒಪ್ಪಿಸಿದ ಬಳಿಕ ಪಂದ್ಯದ ಚಿತ್ರಣ ಸಂಪೂರ್ಣ ಬದಲಾಯಿತು. ಮೂರನೇ ಕ್ರಮಾಂಕದಲ್ಲಿ ನಿಕೋಲಸ್‌ ಪೂರನ್‌ ಅವರನ್ನು ಮಿಚೆಲ್‌ ಸ್ಟಾರ್ಕ್‌ ಬೌಲ್ಡ್‌ ಮಾಡಿದರು. ನಂತರ ಅಬ್ದುಲ್‌ ಸಮದ್‌ಗೆ ಮುಖೇಶ್‌ ಕುಮಾರ್‌ ಪೆವಿಲಿಯನ್‌ ಹಾದಿ ತೋರಿದರು. ನಂತರ 36 ಎಸೆತಗಳಲ್ಲಿ 45 ರನ್‌ ಗಳಿಸಿದ್ದ ಮಿಚೆಲ್‌ ಮಾರ್ಷ್‌ ಅವರನ್ನು ಕೂಡ ಮುಖೇಶ್‌ ಕುಮಾರ್‌ ಔಟ್‌ ಮಾಡಿದ್ದರು. ಅಂತಿಮ ಹಂತದಲ್ಲಿ ಆಯುಷ್‌ ಬದೋನಿ 36 ರನ್‌ ಗಳಿಸಿ ತಂಡದ ಮೊತ್ತವನ್ನು 150ರ ಸನಿಹ ತಂದರು.

IPL 2025: ಆರ್‌ಸಿಬಿ ಇನ್ನೂ ಎಷ್ಟು ಪಂದ್ಯ ಗೆಲ್ಲಬೇಕು? ಎಲ್ಲಾ ತಂಡಗಳ ಪ್ಲೇಆಫ್ಸ್‌ ಲೆಕ್ಕಾಚಾರ!

ಡೆಲ್ಲಿ ಕ್ಯಾಪಿಟಲ್ಸ್‌ ಪರ ಅತ್ಯುತ್ತಮ ಬೌಲಿಂಗ್‌ ದಾಳಿ ನಡೆಸಿದ ಮುಖೇಶ್‌ ಕುಮಾರ್‌ 4 ವಿಕೆಟ್‌ ಕಿತ್ತರೆ, ಮಿಚೆಲ್‌ ಸ್ಟಾರ್ಕ್‌ ಹಾಗೂ ಚಮೀರಾ ತಲಾ ಒಂದೊಂದು ವಿಕೆಟ್‌ ಕಿತ್ತರು.

ಸ್ಕೋರ್‌ ವಿವರ

ಲಖನೌ ಸೂಪರ್‌ ಜಯಂಟ್ಸ್‌: 20 ಓವರ್‌ಗಳಿಗೆ 159-6 (ಏಡೆನ್‌ ಮಾರ್ಕ್ರಮ್‌ 52, ಮಿಚೆಲ್‌ ಮಾರ್ಷ್‌ 45, ಆಯುಷ್‌ ಬದೋನಿ 36; ಮುಖೇಶ್‌ ಕುಮಾರ್‌ 33 ಕ್ಕೆ 4)

ಡೆಲ್ಲಿ ಕ್ಯಾಪಿಟಲ್ಸ್‌: 17.5 ಓವರ್‌ಗಳಿಗೆ 161-2 (ಕೆಎಲ್‌ ರಾಹುಲ್‌ 57*, ಅಭಿಷೇಕ್‌ ಪೊರೆಲ್‌ 51, ಅಕ್ಷರ್‌ ಪಟೇಲ್‌ 34* ; ಏಡೆನ್‌ ಮಾರ್ಕ್ರಮ್‌ 30 ಕ್ಕೆ 2)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಮುಖೇಶ್‌ ಕುಮಾರ್‌