Pocso case: ಸದ್ಗುರುಗೆ ಮತ್ತೊಂದು ಸಂಕಷ್ಟ- ಇಶಾ ಫೌಂಡೇಶನ್‌ನ ನಾಲ್ವರು ಸಿಬ್ಬಂದಿ, ಹಳೆ ವಿದ್ಯಾರ್ಥಿ ವಿರುದ್ಧ FIR
ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇರೆಗೆ ಕೊಯಮತ್ತೂರಿನ (Coimbatore) ಇಶಾ ಫೌಂಡೇಶನ್ (Isha Foundation) ಶಾಲೆಯ ನಾಲ್ವರು ಸಿಬ್ಬಂದಿ ಮತ್ತು ಒಬ್ಬ ಹಳೆ ವಿದ್ಯಾರ್ಥಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ (POCSO case) ತಮಿಳುನಾಡು ಪೊಲೀಸರು (Tamilnadu police) ಪ್ರಕರಣ ದಾಖಲಿಸಿದ್ದಾರೆ. ಈ ಘಟನೆ 2017 ರಿಂದ 2019 ರ ನಡುವೆ ನಡೆದಿದೆ ಎನ್ನಲಾಗಿದೆ. ಈ ಆರೋಪವನ್ನು ಇಶಾ ಫೌಂಡೇಶನ್ ತಳ್ಳಿ ಹಾಕಿದೆ. ಇದೊಂದು ದುರುದ್ದೇಶಪೂರಿತ ಆರೋಪ ಎಂದು ಹೇಳಿದೆ.


ತಮಿಳುನಾಡು: ಇಶಾ ಫೌಂಡೇಶನ್ ( Isha Foundation) ಕೊಯಮತ್ತೂರಿನಲ್ಲಿ (Coimbatore ) ನಡೆಸುತ್ತಿರುವ ಶಾಲೆಯ ನಾಲ್ವರು ಸಿಬ್ಬಂದಿ ಮತ್ತು ಹಳೆ ವಿದ್ಯಾರ್ಥಿಯ ವಿರುದ್ಧ ಪೋಕ್ಸೊ ಕಾಯ್ದೆಯಡಿಯಲ್ಲಿ (Pocso case) ತಮಿಳುನಾಡು ಪೊಲೀಸರು (tamilnadu police) ಎಫ್‌ಐಆರ್ ದಾಖಲಿಸಿದ್ದಾರೆ. 2017 ರಿಂದ 2019 ರ ನಡುವೆ ಶಾಲೆಯ ಓರ್ವ ವಿದ್ಯಾರ್ಥಿಗೆ ಇವರೆಲ್ಲ ಸೇರಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವಿದ್ಯಾರ್ಥಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಈ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಶಾ ಫೌಂಡೇಶನ್ ಈ ಆರೋಪಗಳು ಸುಳ್ಳು, ದುರುದ್ದೇಶಪೂರಿತ ಎಂದು ಹೇಳಿದೆ.
ಇಶಾ ಫೌಂಡೇಶನ್ ವತಿಯಿಂದ ನಡೆಸಲಾಗುತ್ತಿರುವ ಕೊಯಮತ್ತೂರಿನ ಶಾಲೆಯಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ. 2019ರಲ್ಲಿ ಕೆಲವರು ಈ ರೀತಿ ಆರೋಪಗಳನ್ನು ಮಾಡಿದರು. ಆದರೆ ಆಗ ಅದನ್ನು ಸರಿಯಾಗಿ ತನಿಖೆ ಮಾಡಿ ಪರಿಹರಿಸಲಾಗಿದೆ. ಬೆದರಿಕೆ ಪ್ರಕರಣವಾದ್ದರಿಂದ ಪ್ರಕರಣದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗೆ ವಲಸೆ ಪ್ರಮಾಣಪತ್ರ ನೀಡಲಾಗಿದೆ ಎಂದು ಇಶಾ ಫೌಂಡೇಶನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಕೊಯಮತ್ತೂರಿನ ಇಶಾ ಹೋಮ್ ಶಾಲೆಯಲ್ಲಿ ವಿದ್ಯಾರ್ಥಿಗೆ ಸಹಪಾಠಿಯೊಬ್ಬ ಪದೇ ಪದೇ ಕಿರುಕುಳ ನೀಡಿದ್ದಾನೆ. ಈ ಬಗ್ಗೆ ಪೋಷಕರಿಗೆ ಹೇಳಬಾರದೆಂದು ಮಗುವಿಗೆ ಸೂಚಿಸಲಾಗಿತ್ತು. ಇಶಾ ಹೋಮ್ ಶಾಲೆಯ ಪ್ರಾಂಶುಪಾಲ ಪ್ರಕಾಶ್ ಸೋಮಯಾಜಿ ಮತ್ತು ಸಾಮಾನ್ಯ ಸಂಯೋಜಕ ಸ್ವಾಮಿ ವಿಭು ಅವರಿಗೆ ಈ ಬಗ್ಗೆ ಮಗುವಿನ ಸಹಪಾಠಿಯೊಬ್ಬ ತಿಳಿಸಿದ್ದ ಎಂದು ವಿದ್ಯಾರ್ಥಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.
2019ರಲ್ಲಿ ತಾವು ದೂರು ನೀಡಿದ ಮೇಲೆ ನಮ್ಮ ಫೋನ್ ಕರೆಯನ್ನು ನಿರಾಕರಿಸಲಾಗಿದೆ. ಮಾಹಿತಿ ತಿಳಿದ ತಕ್ಷಣ ನಾನು ಶಾಲೆಗೆ ಕರೆ ಮಾಡಿದೆ. ಆದರೆ ಅವರು ಎರಡು ದಿನಗಳವರೆಗೆ ಪ್ರತಿಕ್ರಿಯಿಸಲಿಲ್ಲ. ಬಳಿಕ ನಾನು ಪೊಲೀಸರ ಬಳಿ ಹೋಗಬೇಕಾಗುತ್ತದೆ ಎನ್ನುವ ಸಂದೇಶವನ್ನು ಕಳುಹಿಸಿದೆ. ಆಗಲೂ ಶಾಲೆಯಿಂದ ಸರಿಯಾದ ಪ್ರತಿಕ್ರಿಯೆ ಬರಲಿಲ್ಲ. ಯಾಕೆಂದರೆ ಆರೋಪಿ ವಿದ್ಯಾರ್ಥಿ ಗಣ್ಯ ಕುಟುಂಬಕ್ಕೆ ಸೇರಿದವನಾಗಿದ್ದ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಮಗು ಶಾಲೆಗೆ ಹೋಗಲು ನಿರಾಕರಿಸಿ ಆತ್ಮಹತ್ಯೆಗೆ ಮುಂದಾದ ಬಗ್ಗೆ ತಾಯಿ ಶಾಲೆಯ ಆಡಳಿತ ಮಂಡಳಿಗೆ ತಿಳಿಸಿದಾಗ ಅವರು ಪೊಲೀಸರ ಬಳಿ ಹೋಗದಂತೆ ತಡೆಯಲು ಪ್ರಯತ್ನಿಸಿದರು ಎಂದು ಅವರು ದೂರಿನಲ್ಲಿ ಹೇಳಿದ್ದಾರೆ. 2024ರ ಡಿಸೆಂಬರ್ 12ರಂದು ಈ ಬಗ್ಗೆ ಪೊಲೀಸ್ ದೂರು ದಾಖಲಾಗಿದ್ದು, ಅದರ ಅನಂತರ 2025ರ ಜನವರಿ 31ರಂದು ಪೋಕ್ಸೊ ಕಾಯ್ದೆಯಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಇದರಲ್ಲಿ ಶಾಲೆಯ ಪ್ರಾಂಶುಪಾಲರಾದ ಪ್ರಕಾಶ್ ಸೋಮಯಾಜಿ ಮತ್ತು ಸಾಮಾನ್ಯ ಸಂಯೋಜಕ ಸ್ವಾಮಿ ವಿಭು.ಅವರ ಹೆಸರನ್ನು ಉಲ್ಲೇಖಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಅಹಮದಾಬಾದ್‌ನಲ್ಲಿ ಓದುತ್ತಿರುವ ಮಗುವನ್ನು ಕರೆತರಬೇಕಿದೆ ಎಂದು ಹೇಳಿ ತಮಿಳುನಾಡು ಪೊಲೀಸರು 60 ದಿನಗಳವರೆಗೆ ಎಫ್‌ಐಆರ್ ಪ್ರತಿಯನ್ನು ನೀಡಲು ವಿಳಂಬ ಮಾಡಿದ್ದಾರೆ ಎಂದು ಮಗುವಿನ ತಾಯಿ ಆರೋಪಿಸಿದ್ದಾರೆ.
ಮಾರ್ಚ್ 17 ರಂದು ರಾತ್ರಿ ನನಗೆ ವಾಟ್ಸಾಪ್ ಮೂಲಕ ಸಮನ್ಸ್ ಬಂದಿದ್ದು, ಮಾರ್ಚ್ 28 ರಂದು ನಾವು ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾದೆವು. ಅವರು ವಿವರವಾದ ಹೇಳಿಕೆಯನ್ನು ಪಡೆದರು. ನನಗೆ ಎಫ್‌ಐಆರ್ ಪ್ರತಿ ಬಂದಿಲ್ಲ ಎಂದು ನಾನು ಅವರಿಗೆ ತಿಳಿಸಿದಾಗ ಪೊಲೀಸರು ಅದನ್ನು ಸಂಗ್ರಹಿಸದಿದ್ದಕ್ಕಾಗಿ ನನ್ನನ್ನು ದೂಷಿಸಿದರು. ಮ್ಯಾಜಿಸ್ಟ್ರೇಟ್ ಆದೇಶಿಸಿದ ಅನಂತರವೇ ನನಗೆ ಪ್ರತಿ ಸಿಕ್ಕಿತು. ಈ ಘಟನೆಯ ಬಳಿಕ ತಮ್ಮ ಕುಟುಂಬ ಆನ್‌ಲೈನ್ ಮೂಲಕ ಸಾಕಷ್ಟು ನಿಂದನೆಯನ್ನು ಅನುಭವಿಸಿದೆ ಎಂದು ಮಗುವಿನ ತಾಯಿ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.
ಇದನ್ನೂ ಓದಿ: Om Prakash Murder Case: ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆ; ಪತ್ನಿ ಪಲ್ಲವಿ ತಪ್ಪೊಪ್ಪಿಗೆ
ದೂರುದಾರರ ಮಗು ಪದವಿ ಪಡೆದ ಅನಂತರ ತಾಯಿ ಜೂನ್ 2022 ರಿಂದ ಶಾಲೆಯಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡಿದ್ದಾರೆ ಎಂದು ಇಶಾ ಫೌಂಡೇಶನ್ ಹೇಳಿಕೊಂಡಿದೆ. ಅವರ ನಡವಳಿಕೆಯ ಬಗ್ಗೆ ವಿದ್ಯಾರ್ಥಿಗಳು, ಪೋಷಕರು ಮತ್ತು ಸಿಬ್ಬಂದಿಯಿಂದ ಬಂದ ದೂರುಗಳಿಂದಾಗಿ ಶಾಲೆಯೊಂದಿಗಿನ ಅವರ ಸಂಬಂಧವನ್ನು 2024ರ ಮಾರ್ಚ್ ತಿಂಗಳಲ್ಲಿ ಕೊನೆಗೊಳಿಸಲಾಯಿತು. ತನ್ನನ್ನು ತೆಗೆದುಹಾಕಿದ್ದರಿಂದ ಅತೃಪ್ತರಾಗಿರುವ ಅವರು ಶಾಲೆಗೆ ಕಳಂಕ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಇಶಾ ಫೌಂಡೇಶನ್ ಹೇಳಿದೆ.