ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಾತೃಭಾಷೆಗೆ ಆದ್ಯತೆ: ಥಾವರ್ ಚಂದ್ ಗೆಹ್ಲೋಟ್

ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ಮತ್ತು ಇತಿಹಾಸವನ್ನು ಸಂರಕ್ಷಿಸುವ ಮತ್ತು ಪ್ರಚಾರ ಮಾಡುವಲ್ಲಿ ಮತ್ತು ಸಂಶೋಧನೆ ಮತ್ತು ಶಿಕ್ಷಣವನ್ನು ಉತ್ತೇಜಿಸುವಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದ್ದಾರೆ.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಾತೃಭಾಷೆಗೆ ಆದ್ಯತೆ: ಗೆಹ್ಲೋಟ್

Profile Siddalinga Swamy Apr 4, 2025 11:02 PM

ಹೊಸಪೇಟೆ: ಅಭಿವೃದ್ದಿ ಹೊಂದಿದ ದೇಶಗಳು ಶಿಕ್ಷಣವನ್ನು ಮಾತೃಭಾಷೆ ಹಾಗೂ ಪ್ರಾದೇಶಿಕ ಮಾಧ್ಯಮದಲ್ಲಿ ನೀಡುತ್ತಿದ್ದು, ಕೇಂದ್ರ ಸರ್ಕಾರವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಇದಕ್ಕೆ ಆದ್ಯತೆ ನೀಡಿದೆ ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹೇಳಿದರು. ಕನ್ನಡ ವಿಶ್ವವಿದ್ಯಾಲಯದ ನವರಂಗ ಬಯಲುರಂಗಮಂದಿರದಲ್ಲಿ ಏರ್ಪಡಿಸಿದ್ದ ವಿವಿಯ 33ನೇ ನುಡಿಹಬ್ಬ, ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಬ್ಬ ಶಿಕ್ಷಕನು ಜ್ಞಾನವನ್ನು ಕೊಡುವುದರ ಜತೆಗೆ ವಿದ್ಯಾರ್ಥಿಗಳಿಗೆ ನಿಜವಾದ ಮಾರ್ಗದರ್ಶಕನಾಗಿರುತ್ತಾನೆ. ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳ ಜೀವನವನ್ನು ಸುಧಾರಿಸುವಲ್ಲಿ ಪ್ರಮುಖ ಕೊಡುಗೆ ನೀಡಿದೆ. ಘಟಿಕೋತ್ಸವ ವಿದ್ಯಾರ್ಥಿ ಜೀವನದ ಅತ್ಯಮೂಲ್ಯ ಕ್ಷಣಗಳಲ್ಲಿ ಒಂದಾಗಿದೆ. ಇಲ್ಲಿ ಪಡೆದ ಜ್ಞಾನ ಮತ್ತು ಕೌಶಲ್ಯ, ಪ್ರಸ್ತುತ ಕಾಲದ ಸವಾಲುಗಳನ್ನು ಎದುರಿಸಲು ಮತ್ತು ಉದಯೋನ್ಮುಖ ಅವಕಾಶಗಳ ಲಾಭವನ್ನು ಪಡೆಯಲು ಸಹಕಾರಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ನಿಗದಿಪಡಿಸಲಾಗಿದೆ. ರಾಷ್ಟ್ರೀಯ ಅಭಿವೃದ್ಧಿಗೆ ನಾಯಕತ್ವವನ್ನು ನೀಡುವುದು ನಿಮ್ಮೆಲ್ಲರ ಕರ್ತವ್ಯ. ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ವಿದ್ಯಾರ್ಥಿಗಳು ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.

ಹಂಪಿ ವೈಭವದ ಇತಿಹಾಸ ಮತ್ತು ವಾಸ್ತುಶಿಲ್ಪಕ್ಕೆ ವಿಶ್ವ ಪ್ರಸಿದ್ಧವಾಗಿದೆ. ಈ ಐತಿಹಾಸಿಕ ನೆಲದಲ್ಲಿ ನೆಲೆಗೊಂಡಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯವು ನಮ್ಮ ಶ್ರೀಮಂತ ಸಂಪ್ರದಾಯಗಳು ಮತ್ತು ಆಧುನಿಕ ಶಿಕ್ಷಣ ವ್ಯವಸ್ಥೆಯ ಸಂಯೋಜಿಸುತ್ತಿದೆ. ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ಮತ್ತು ಇತಿಹಾಸವನ್ನು ಸಂರಕ್ಷಿಸುವ ಮತ್ತು ಪ್ರಚಾರ ಮಾಡುವಲ್ಲಿ ಮತ್ತು ಸಂಶೋಧನೆ ಮತ್ತು ಶಿಕ್ಷಣವನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿಶ್ವವಿದ್ಯಾಲಯದ ಹಸ್ತಪ್ರತಿ ಭಂಡಾರದಲ್ಲಿ ಸುಮಾರು 5000 ಅಪರೂಪದ ಹಸ್ತಪ್ರತಿಗಳ ಸಂಗ್ರಹವಿರುವುದು ಹೆಮ್ಮೆಯ ಸಂಗತಿ. ದೃಶ್ಯಕಲಾ ವಿಭಾಗದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ರಚಿಸಿ, ಪ್ರದರ್ಶಿಸಿದ ಕಲಾಕೃತಿಗಳು ಆಕರ್ಷಕವಾಗಿವೆ ಎಂದು ಶ್ಲಾಘಿಸಿದರು.

ಬುಡಕಟ್ಟು ಅಧ್ಯಯನ ವಿಭಾಗವು ಸಂಗ್ರಹಿಸಿದ ಬುಡಕಟ್ಟು ಮಹಾಕಾವ್ಯಗಳು ನಮ್ಮ ಸ್ಥಳೀಯ ಕಾವ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ವಿಶ್ವವಿದ್ಯಾಲಯವು ಸಾರ್ವಜನಿಕ ಹಿತಾಸಕ್ತಿ, ರಾಷ್ಟ್ರೀಯ ಹಿತಾಸಕ್ತಿ, ಸಾಮಾಜಿಕ ಆಸಕ್ತಿ, ಶಿಕ್ಷಣ ಮತ್ತು ಸಾಹಿತ್ಯ ಇತ್ಯಾದಿ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ನ್ಯಾಯಮೂರ್ತಿ ಶಿವರಾಜ್ ವಿ.ಪಾಟೀಲ್, ಕುಂ.ವೀರಭದ್ರಪ್ಪ ಮತ್ತು ಪದ್ಮಶ್ರೀ ಎಂ. ವೆಂಕಟೇಶ್ ಕುಮಾರ್ ಅವರನ್ನು ವಿಶ್ವವಿದ್ಯಾಲಯವು ನಾಡೋಜ ಗೌರವ ಪದವಿ ನೀಡಿ ಗೌರವಿಸಿದೆ. ಈ ಮಹಾನ್ ವ್ಯಕ್ತಿಗಳ ಅತ್ಯುತ್ತಮ ಸಾಧನೆಗಳು ಮತ್ತು ಸಮಾಜದ ಪ್ರಗತಿಗೆ ಕೊಡುಗೆಗಾಗಿ ಅಭಿನಂದಿಸುತ್ತೇನೆ ಮತ್ತು ಅವರು ಸಮಾಜ ಕಲ್ಯಾಣ, ಸಾರ್ವಜನಿಕ ಹಿತಾಸಕ್ತಿ ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ಕೊಡುಗೆ ನೀಡುವುದನ್ನು ನಿರಂತರವಾಗಿ ಮುಂದವರೆಸಲಿ ಎಂದು ಮನವಿ ಮಾಡಿದರು.

ಉನ್ನತ ಶಿಕ್ಷಣ ಸಚಿವರು, ಸಮಕುಲಾಧಿಪತಿಗಳಾದ ಡಾ.ಎಂ.ಸಿ.ಸುಧಾಕರ್ ಮಾತನಾಡಿ, ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ 34 ವರ್ಷಗಳ ಹಿಂದೆ ಹುಟ್ಟು ಹಾಕಲಾದ ಕನ್ನಡ ವಿಶ್ವವಿದ್ಯಾಲಯ ಕನ್ನಡ ನಾಡು-ನುಡಿ, ನೆಲ-ಜಲ, ಇತಿಹಾಸ ಪರಂಪರೆ ಕುರಿತು ಅಧ್ಯಯನ ಮತ್ತು ಸಂಶೋಧನೆ ನಡೆಸುತ್ತಿರುವುದು ಹೆಮ್ಮೆಯ ವಿಷಯ. ಕನ್ನಡ ವಿವಿಯ ಅವಿರತ ಪ್ರಯತ್ನದಿಂದಾಗಿ ಇಂದಿನ ಘಟಿಕೋತ್ಸವದಲ್ಲಿ 198 ಜನ ವಿದ್ಯಾರ್ಥಿಗಳು ಸ್ನಾತಕ ಪದವಿ, ಪಿಎಚ್‌ಡಿ ಸ್ವೀಕರಿಸುತ್ತಿರುವುದು ನಿದರ್ಶನವಾಗಿದೆ ಎಂದರು.

ನಾಡಿನ ವಿಶೇಷ ವಿವಿಗಳಾದ ಕನ್ನಡ ವಿಶ್ವವಿದ್ಯಾಲಯ, ಸಂಸ್ಕೃತ ವಿಶ್ವವಿದ್ಯಾಲಯ, ಸಂಗೀತ ವಿಶ್ವವಿದ್ಯಾಲಯ ಮತ್ತು ಜನಪದ ವಿಶ್ವವಿದ್ಯಾಲಯಗಳು ಉದ್ದೇಶಿತ ರೀತಿಯಲ್ಲಿ ಪ್ರಗತಿ ಸಾಧಿಸಲು ಸಂಪನ್ಮೂಲಗಳ ಕೊರತೆ ಎದ್ದು ಕಾಣುತ್ತಿದೆ. ಹಣಕಾಸಿನ ಸಂಪನ್ಮೂಲ ಒದಗಿಸುವುದು ಸರ್ಕಾರದ ಜವಾಬ್ದಾರಿ ಆಗಿದೆ. ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಸಂಪುಟ ಉಪ ಸಮಿತಿ ವರದಿ ನಂತರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ರಾಜ್ಯದ ಎಲ್ಲಾ ವಿವಿಗಳಲ್ಲಿ ಅಂದಾಜು 2800 ಭೋದಕ ಹುದ್ದೆ ಸೇರಿ ಹೊಸ ಕೋರ್ಸ್‍ಗಳ ಹುದ್ದೆಗಳು ಸೇರಿ ಒಟ್ಟಾರೆಯಾಗಿ 3500 ಭೋದಕ ಹುದ್ದೆಗಳನ್ನು ತುಂಬುವ ಅಗತ್ಯವಿದೆ. ಶೀಘ್ರವೇ ಅತ್ಯಗತ್ಯವಿರುವ ಭೋಧಕ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ಶೀಘ್ರ ಕ್ರಮವಹಿಸುವ ಭರವಸೆ ನೀಡಿದರು.

ತುಮಕೂರು ವಿವಿಯ ವಿಶ್ರಾಂತ ಕುಲಪತಿಗಳು, ಘಟಿಕೋತ್ಸವದ ಮುಖ್ಯ ಭಾಷಣಕಾರ ಪ್ರೊ.ಎ.ಎಚ್.ರಾಜಾಸಾಬ್ ಮಾತನಾಡಿ, ಸಾರಸ್ವತ ಲೋಕದ ದಿಗ್ಗಜರಿಗೆ ನಾಡೋಜ ಪ್ರಶಸ್ತಿ ನೀಡಿ ಗೌರವಿಸಿರುವುದು ಶ್ಲಾಘನೀಯ. ಘಟಿಕೋತ್ಸವದಲ್ಲಿ ಪದವಿ ಪಡೆದಿರುವ ವಿದ್ಯಾರ್ಥಿಗಳು ಗುರುತರ ಸಾಧನೆಗೆ ಮುಂದಾಗಬೇಕು ಎಂದು ತಿಳಿಸಿದ ಅವರು, ಹಿಂದೆ ಕನ್ನಡ ವಿವಿಯಲ್ಲಿ 'ವಿಜ್ಞಾನ ಸಂಗಾತಿ' ಎಂಬ ಗುಣಮಟ್ಟದ ನಿಯತಕಾಲಿಕೆಯೊಂದನ್ನು ಪ್ರಕಟಿಸುತ್ತಿತ್ತು. ಅದನ್ನು ಮುಂದುವರಿಸುವಂತೆ ಸಲಹೆ ನೀಡಿದರು.

ಈ ಸುದ್ದಿಯನ್ನೂ ಓದಿ | ಹಂಪಿ ವಿವಿ 33ನೇ ನುಡಿಹಬ್ಬ; ನ್ಯಾ.ಶಿವರಾಜ್‌ ಪಾಟೀಲ್‌, ಕುಂ.ವೀ, ವೆಂಕಟೇಶ್‌ ಕುಮಾರ್‌ಗೆ ನಾಡೋಜ ಪದವಿ ಪ್ರದಾನ

ವಿವಿಯ ಕುಲಪತಿ ಡಾ. ಡಿ.ವಿ.ಪರಮಶಿವಮೂರ್ತಿ ಸ್ವಾಗತಿಸಿದರು. ಕುಲಸಚಿವ ಡಾ. ವಿಜಯ್ ಪೂಣಚ್ಛ ತಂಬಂಡ ಹಾಗೂ ವಿವಿಧ ಗಣ್ಯರು ಉಪಸ್ಥಿತರಿದ್ದರು.