Pahalgam Terror Attack: ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಮತ್ತೊಬ್ಬ ಕನ್ನಡಿಗ ಸಾವು
Pahalgam Terror Attack: ಕಾಶ್ಮೀರದಲ್ಲಿ ನಡೆದಿರುವ ಉಗ್ರರ ದಾಳಿಯಲ್ಲಿ ಶಿವಮೊಗ್ಗದ ವಿಜಯನಗರ ನಿವಾಸಿ, ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ರಾವ್ ಮೃತಪಟ್ಟಿದ್ದರು. ಇದೀಗ ರಾಜ್ಯದ ಮತ್ತೊಬ್ಬರು ಬಲಿಯಾಗಿರುವ ವಿಷಯ ತಿಳಿದುಬಂದಿದೆ. ಹಾವೇರಿಯ ಭರತ್ ಭೂಷಣ್ ಎಂಬುವವರು ಮೃತಪಟ್ಟಿದ್ದಾರೆ.


ಬೆಂಗಳೂರು: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಮತ್ತೊಬ್ಬ ಕನ್ನಡಿಗ ಮೃತಪಟ್ಟಿದ್ದಾರೆ. ಭಯೋತ್ಪಾದಕರ ದಾಳಿಯಲ್ಲಿ ಹಾವೇರಿಯ ರಾಣೇಬೆನ್ನೂರಿನ ಭರತ್ ಭೂಷಣ್ ಎಂಬುವವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಇವರು ಮಾಜಿ ಸ್ಪೀಕರ್ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಅವರ ಅಳಿಯನ ಸ್ನೇಹಿತರಾಗಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದರು.
ಇನ್ನು ಉಗ್ರರ ದಾಳಿಯಲ್ಲಿ ಶಿವಮೊಗ್ಗದ ವಿಜಯನಗರ ನಿವಾಸಿ, ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ರಾವ್ ಮೃತಪಟ್ಟಿದ್ದು, ಇವರ ಪತ್ನಿ ಪಲ್ಲವಿ ಮತ್ತು ಮಗ ಸುರಕ್ಷಿತವಾಗಿದ್ದಾರೆ.
ಕನ್ನಡಿಗರನ್ನು ವಾಪಸ್ ಕರೆತರಲು ಎಲ್ಲ ಕ್ರಮ
ಘಟನೆ ಬಗ್ಗೆ ಕಾನೂನು ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಘಟನೆ ಕುರಿತು ನಾನು ಸಿಎಂ ಜೊತೆಗೆ ಚರ್ಚಿಸಿದ್ದೇನೆ. ಕರ್ನಾಟಕದ ಹಿರಿಯ ಅಧಿಕಾರಿಗಳನ್ನು ಕಳುಹಿಸಿದ್ದೇವೆ. ಕನ್ನಡಿಗರನ್ನು ವಾಪಸ್ ತರಲು ಎಲ್ಲ ಕ್ರಮಕೈಗೊಳ್ಳುತ್ತೇವೆ. ಒಟ್ಟು 15 ಜನ ಸಿಲುಕಿರುವ ಮಾಹಿತಿ ಇದೆ. ಸಹಾಯವಾಣಿ ತೆರೆಯುವ ಬಗ್ಗೆ ಕಾರ್ಯಪ್ರವೃತ್ತರಾಗುತ್ತೇವೆ ಎಂದು ಹೇಳಿದ್ದಾರೆ. IPS ಅಧಿಕಾರಿ ಚೇತನ್ ಆರ್ ಮತ್ತು ಇನ್ನಿತರ ಅಧಿಕಾರಿಗಳ ತಂಡ ಕಾಶ್ಮೀರಕ್ಕೆ ತೆರಳಿದೆ ಎಂದು ತಿಳಿದುಬಂದಿದೆ.
ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಮಾತನಾಡಿ, ಮೃತ ಮಂಜುನಾಥ್ ಅವರ ಪತ್ನಿ ಪಲ್ಲವಿಯವರನ್ನು ಸಂಪರ್ಕಿಸಲಾಗಿದೆ. ಮಂಜುನಾಥ್ ಮೃತದೇಹ ಬೆಟ್ಟದ ಮೇಲಿರುವುದರಿಂದ, ಮೃತದೇಹ ಕೆಳಗೆ ತರಲು ಅಧಿಕಾರಿಗಳ ಜತೆ ಸಂಪರ್ಕ ಮಾಡಿದ್ದೇನೆ. ಅಲ್ಲಿನ ಸ್ಥಳೀಯ ಅಧಿಕಾರಿಗಳನ್ನ ಸಂಪರ್ಕ ಮಾಡಿದ್ದೇವೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಇರುವ ಬಗ್ಗೆ ಮಾಹಿತಿ ಇದೆ. ಮಂಜುನಾಥ್ ಅವರ ಶವ ತರಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳ ತಂಡ ಕಾಶ್ಮೀರಕ್ಕೆ ಪ್ರಯಾಣ: ಸಿಎಂ
ಬೆಂಗಳೂರು: ಕಾಶ್ಮೀರದಲ್ಲಿ ಕನ್ನಡಿಗರು ಉಗ್ರರ ದಾಳಿಗೆ (Pahalgam Terror Attack) ಗುರಿಯಾಗಿರುವ ಸುದ್ದಿ ತಿಳಿದ ತಕ್ಷಣ ಮುಖ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದುಕೊಂಡು, ತಕ್ಷಣ ಕಾರ್ಯಪ್ರವೃತ್ತರಾಗುವಂತೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ತಿಳಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದು, ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಅಧಿಕಾರಿಗಳ ಒಂದು ತಂಡ ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದೆ. ಮುಂದಿನ ಕ್ರಮಗಳ ಉಸ್ತುವಾರಿ ನೋಡಿಕೊಳ್ಳುವಂತೆ ದೆಹಲಿಯ ರೆಸಿಡೆಂಟ್ ಕಮಿಷನರ್ ಅವರಿಗೆ ಸೂಚನೆ ಕೂಡ ನೀಡಿದ್ದೇನೆ. ಇಡೀ ಘಟನೆಯ ಮೇಲೆ ನಾವು ತೀವ್ರನಿಗಾ ವಹಿಸಿದ್ದು, ದಾಳಿಯ ಸಂತ್ರಸ್ತರಾಗಿರುವ ನಮ್ಮವರ ನೆರವಿಗೆ ನಿಂತಿದ್ದೇವೆ ಎಂದು ಸಿಎಂ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Pahalgam Terror Attack: "ಪ್ಲೀಸ್ ನನ್ನ ಗಂಡನನ್ನು ಉಳಿಸಿ" ಅಂಗಲಾಚಿ ಬೇಡಿದ ಮಹಿಳೆ; ಕರುಳು ಚುರ್ ಎನ್ನುವ ವಿಡಿಯೋ ವೈರಲ್