ನಾಮ ಹಾಕಿದ ಮಾತ್ರಕ್ಕೆ ಹಿಂದು ಆಗಲ್ಲ: ಯತ್ನಾಳ್ ವಿರುದ್ಧ ಕಲ್ಲಡ್ಕ ಪ್ರಭಾಕರ್ ಭಟ್ ಕಿಡಿ
kalladka Prabhakar Bhat: ವಿಜಯಪುರ ಶಾಸಕ ಹಾಗೂ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿರುವುದನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಕಲ್ಲಡ್ಕ ಪ್ರಭಾಕರ ಭಟ್ ಅವರು ಸಮರ್ಥಿಸಿಕೊಂಡಿದ್ದಾರೆ.


ಮಂಡ್ಯ: ನಾಮ ಹಾಕಿದ ಮಾತ್ರಕ್ಕೆ ಹಿಂದು ಆಗುವುದಿಲ್ಲ. ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿದರೆ ಮಾತ್ರ ಹಿಂದುತ್ವ ಆಗುತ್ತದೆಯೇ? ಹಿಂದುತ್ವದಲ್ಲಿ ಒಂದು ಶಿಸ್ತಿದೆ, ಅನುಶಾಸನ ಇದೆ. ಅನುಶಾಸನ ಇಲ್ಲದಿದ್ದರೆ ಶಿಸ್ತಾಗುವುದಿಲ್ಲ. ಪಕ್ಷದ ಅನುಶಾಸನದಲ್ಲೂ ಇರಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಕಲ್ಲಡ್ಕ ಪ್ರಭಾಕರ ಭಟ್ (kalladka Prabhakar Bhat) ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯಪುರ ಶಾಸಕ ಹಾಗೂ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿರುವುದನ್ನು ಸಮರ್ಥಿಸಿಕೊಂಡರು.
ಹಿಂದುತ್ವವಾದಿ ಎಂದು ಏನು ಬೇಕಾದರೂ ಮಾತನಾಡುವುದಲ್ಲ. ಮಾತನಾಡುವಾಗ ಪ್ರಜ್ಞೆ ಇರಬೇಕು. ಮಾತಿನ ಮೇಲೆ ನಿಗಾ ವಹಿಸಬೇಕು.ಒಂದು ಸಂಘಟನೆಯಲ್ಲಿದ್ದಾಗ ಮಾತು ಗಡಿ ಮೀರಿ ಹೋಗಬಾರದು. ಪಕ್ಷದ ಸಮಿತಿ ಒಳಗೆ ಮಾತನಾಡಬೇಕು. ಬೀದಿಯಲ್ಲಿ ಮಾತನಾಡುವುದು ಹಿಂದುತ್ವದ ಲಕ್ಷಣ ಅಲ್ಲ. ಹಿಂದುತ್ವದಲ್ಲಿ ಶಿಸ್ತು ಇದೆ. ಅದು ಇಲ್ಲದಿದ್ದರೆ ಹಿಂದುತ್ವವಾದಿ ಆಗಲು ಸಾಧ್ಯವಿಲ್ಲ. ಪಕ್ಷದಲ್ಲಿ ಶಿಸ್ತಿನಿಂದ ಇರದಿದ್ದರೆ ಇಂತಹ ಸಮಸ್ಯೆ ಆಗುತ್ತವೆ ಎಂದು ತಿಳಿಸಿದರು.
ಯಡಿಯೂರಪ್ಪ ಕುಟುಂಬದ ಅಂತ್ಯ ಶುರು: ಯತ್ನಾಳ್
ಮತ್ತೊಂದು ಕಡೆ ಯತ್ನಾಳ್ ಅವರು ಯಡಿಯೂರಪ್ಪ ಕುಟುಂಬದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಇಂದಿನಿಂದಲೇ ಯಡಿಯೂರಪ್ಪ ಕುಟುಂಬದ ಅಂತ್ಯ ಶುರುವಾಗಲಿದೆ ಎಂದು ಶಪಥ ಮಾಡಿದ್ದಾರೆ.
‘ಹೊಸ ಪಕ್ಷ ಕಟ್ಟುವುದಿಲ್ಲ ಎಂದಿರುವ ಯತ್ನಾಳ್ ಅವರು, ಹಾಗೆಂದು ಹೈಕಮಾಂಡ್ ಮುಂದೆ ಹೋಗಿ ಕೈ ಕಟ್ಟಿ ನಿಲ್ಲುವುದಿಲ್ಲ. ನಾನು ಭ್ರಷ್ಟಾಚಾರ ಮಾಡಿ ಲೂಟಿ ಮಾಡಿಲ್ಲ. ಯಾವುದೇ ಕೆಟ್ಟ ಕೆಲಸ ಮಾಡಿಲ್ಲ. ಸನಾತನ ಧರ್ಮ ರಕ್ಷಣೆ ಮಾಡಿದ್ದೇನೆ. ಗೋರಕ್ಷಣೆ ಮಾಡಿದ್ದೇನೆ. ನಾನು ಪಕ್ಷಕ್ಕೆ ಮತ್ತೆ ಬಂದೇ ಬರುತ್ತೇನೆ. ಆದರೆ ನನ್ನನ್ನು ಮತ್ತೆ ಗೌರವಯುತವಾಗಿ ವಾಪಸ್ ಕರೆಸಿಕೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Basanagouda Patil Yatnal: ಬಿಎಸ್‌ವೈ ಕುಟುಂಬದ ವಿರುದ್ಧ ಹೋರಾಟ ಮುಂದುವರಿಸುವೆ: ಗುಡುಗಿದ ಯತ್ನಾಳ್
ಕುಟುಂಬ ರಾಜಕಾರಣ, ಭ್ರಷ್ಟಾಚಾರ, ಹೊಂದಾಣಿಕೆ ರಾಜಕಾರಣದ ವಿರುದ್ಧ ನನ್ನ ಹೋರಾಟ ಮುಂದುವರಿಯುತ್ತದೆ. ಇದರ ಅರಿವು ವರಿಷ್ಠರಿಗೂ ಇದೆ. ರಾಜ್ಯಾದ್ಯಂತ ಸುತ್ತಾಟ ನಡೆಸಿ ಜನ ಜಾಗೃತಿ ಮಾಡುತ್ತೇನೆ. ಬಿಜೆಪಿಯ ಮೂಲ ಸಿದ್ಧಾಂತ ಉಳಿಸುವ ಪ್ರಯತ್ನ ಮಾಡುತ್ತೇನೆ. ಹೊಸ ಪಕ್ಷ ಕಟ್ಟುವುದಿಲ್ಲ. ಇದೇ ಪಕ್ಷ ರಿಪೇರಿ ಮಾಡಿ ಬಿಜೆಪಿಗೆ ಮರಳುತ್ತೇನೆ. ಬಿಜೆಪಿಯನ್ನು ತಮ್ಮ ಕುಟುಂಬದ ಆಸ್ತಿ ಮಾಡಿಕೊಂಡಿರುವ ಭ್ರಷ್ಟರ ಕಿತ್ತು ಹಾಕಿ ಸನಾತನ ಹಿಂದೂ ಧರ್ಮ ಉಳಿಯುವಂತೆ ಕೆಲಸ ಮಾಡುತ್ತೇವೆ ಎಂದಿದ್ದಾರೆ.