Pavana Seetha: ಸೀತಾ ನದಿಯ ಮಡಿಲು ಶುಭ್ರಗೊಳಿಸುವ ʼಪಾವನ ಸೀತಾʼ ಅಭಿಯಾನ
ಪರಿಸರ ಸ್ವಚ್ಛತೆ, ಸೀತಾ ನದಿಗೆ ಕಸ ಎಸೆಯದಂತೆ ಸ್ಥಳಿಯರು ಹಾಗೂ ಪ್ರವಾಸಿಗರ ಮನ ಒಲಿಸುವುದು, ಇತರ ನದಿಗಳ ಸ್ವಚ್ಛತಾ ಕಾರ್ಯಕ್ಕೂ ಆಯಾಯ ನದಿ ದಡದ ಊರುಗಳ ಜನತೆಗೆ ಈ ಮೂಲಕ ಪ್ರೇರಣೆಯಾಗುವುದು ಈ ಕಾರ್ಯದ ಹಿಂದಿನ ಉದ್ದೇಶವಾಗಿದೆ ಎಂದು ಆಯೋಜಕರಲ್ಲಿ ಒಬ್ಬರಾದ ವಸಂತ ಗಿಳಿಯಾರು ತಿಳಿಸಿದ್ದಾರೆ.

ಪಾವನ ಸೀತಾ ಅಭಿಯಾನ

ಬೆಂಗಳೂರು: ಸಹ್ಯಾದ್ರಿಯ ಬೆಟ್ಟಗಳಲ್ಲಿ ಹುಟ್ಟಿ ಉಡುಪಿ (Udupi News) ಜಿಲ್ಲೆಯಲ್ಲಿ ಹರಿದು ಅರಬಿ ಸಮುದ್ರವನ್ನು ಸೇರುವ ಸೀತಾ ನದಿ (Seetha River) ಕರಾವಳಿಯ ಜೀವನದಿಗಳಲ್ಲಿ ಒಂದು. ಇದರ ಸ್ವಚ್ಛತೆ ಹಾಗೂ ಪಾವಿತ್ರ್ಯವನ್ನು ಕಾಪಾಡುವ ʼಪಾವನ ಸೀತಾʼ (Pavana Seetha) ಎಂಬ ಹೆಸರಿನ ಅಭಿಯಾನವನ್ನು ಉಡುಪಿ ಜಿಲ್ಲೆಯ ಮೂಡುಗಿಳಿಯಾರು ಜನಸೇವಾ ಟ್ರಸ್ಟ್ ಮತ್ತು ಟೀಮ್ ಅಭಿಮತ ಕೈಗೊಂಡಿವೆ. ಪರಿಸರ ಸ್ವಚ್ಛತೆ, ನದಿಗೆ ಕಸ ಎಸೆಯದಂತೆ ಸ್ಥಳಿಯರು ಹಾಗೂ ಪ್ರವಾಸಿಗರ ಮನ ಒಲಿಸುವುದು, ಇತರ ನದಿಗಳ ಸ್ವಚ್ಛತಾ ಕಾರ್ಯಕ್ಕೂ ಆಯಾಯ ನದಿ ದಡದ ಊರುಗಳ ಜನತೆಗೆ ಈ ಮೂಲಕ ಪ್ರೇರಣೆಯಾಗುವುದು ಈ ಕಾರ್ಯದ ಹಿಂದಿನ ಉದ್ದೇಶವಾಗಿದೆ ಎಂದು ಆಯೋಜಕರಲ್ಲಿ ಒಬ್ಬರಾದ ವಸಂತ ಗಿಳಿಯಾರು ತಿಳಿಸಿದ್ದಾರೆ.
ವಸಂತ ಅವರು ಸಾಮಾಜಿಕ ಮೀಡಿಯಾದಲ್ಲಿ ಈ ಕುರಿತು ಹಂಚಿಕೊಂಡ ಪೋಸ್ಟ್‌ನಲ್ಲಿ ಈ ಕುರಿತು ವಿವರ ನೀಡಿದ್ದಾರೆ: "ನರಸಿಂಹ ಪರ್ವತದಲ್ಲಿ ಉಗಮಗೊಂಡು ಸಾಗರಮುಖಿಯಾಗಿ ಹರಿಯುತ್ತಾ ಬಂದು ಸ್ವರ್ಣೆಯ ಜೊತೆ ಸಂಗಮಗೊಂಡು ಪಡುಗಡಲ ಮಡಿಲಿಗೆ ಸೇರುವ ಸೀತೆ ತನ್ನ ಹರವಿನ ಹರಿವಿನುದ್ದಕ್ಕೂ ನೂರಾರು ಸನ್ನಿಧಾನಗಳ ಹಾದು ಬರುತ್ತಾಳೆ. ಜೋಮ್ಲು, ಕೂಡ್ಲು ತೀರ್ಥವಾಗಿ ಸರಿದು ಬರುತ್ತಾಳೆ, ಶೃಂಗದಲ್ಲಿ ಶೃಂಗೇರಿಯ ತಪಸ್ವಿಗಳು ಅನುಷ್ಠಾನಗೈದ ನೆಲೆಯಿಂದ ಆಕೆ ಹರಿದು ಬರುವುದು. ಅದಕ್ಕಾಗಿಯೇ ನಾವಾಕೆಯನ್ನ ’ಪಾವನ ಸೀತಾ’ ಎಂದು ಕರೆದಿದ್ದೇವೆ. ಇದೊಂದು ಜನರಲ್ಲಿ ಪರಿಸರಪರ ಜಾಗೃತಿ ಮೂಡಿಸುವ, ಪ್ರೇರಣೆಯಾಗಿ ಶ್ರಮಿಸುವ ಅಭಿಯಾನ. ಇದರಲ್ಲಿ ಪರಿಸರಪರ ಕಾಳಜಿಯ ಯಾರೂ ತೊಡಗಿಸಿಕೊಳ್ಳಬಹುದು. ಮೂಡುಗಿಳಿಯಾರು ಜನಸೇವಾ ಟ್ರಸ್ಟ್ ಮತ್ತು ಟೀಮ್ ಅಭಿಮತ ಜೊತೆಗೆ ನೀವೂ, ನಿಮ್ಮ ಸಂಘ ಸಂಸ್ಥೆಯೂ ಕೈ ಜೋಡಿಸಬಹುದು. ನೀವು ಆಸಕ್ತರೇ ಹೌದಾದರೆ ಭಾನುವಾರದ ಬೆಳಿಗ್ಗೆ ಏಳು ಗಂಟೆಯ ಒಳಗೆ ಬ್ರಹ್ಮಾವರದ ಮಾಬುಕಳ ಸೇತುವೆಯ ಬಳಿ ನಮ್ಮ ಜೊತೆ ಸೇರಿಕೊಳ್ಳಿ, ಕಸ ಹೆಕ್ಕಲು ಯಾರಪ್ಪಣೆಯೂ ಬೇಕಿಲ್ಲ. ಇದು ಒಂದು ಸಾರ್ಥಕತೆ ಕೊಡುವ ಕೆಲಸ. ಸಮಾಜಕ್ಕಾಗಿ ಚೂರು ಸಮಯವನ್ನ ಮೀಸಲಿಡಲು ನೀವು ತಯಾರಿದ್ದೀರಿ ಅಂತಾದರೆ ಬನ್ನಿ, ಜೊತೆಯಾಗೋಣ."

ವಸಂತ ಸೇರಿದಂತೆ ಆಯೋಜಕರು ಸೀತಾ ನದಿಯ ಬದಿಯಲ್ಲಿ ಕಸ ಎಸೆಯುವವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. "ಸೀತಾ ನದಿಯ ಸೇತುವೆ ಬ್ರಹ್ಮಾವರದ ಮಾಬುಕಳದ ಇಕ್ಕೆಲಗಳಲ್ಲಿ ಕಸ ಎಸೆದು ಹೋಗುವವರು ಯಾರೋ ದೂರದೂರಿನವರಲ್ಲ! ಅದೇ ಮಾಬುಕಳ, ಸಾಸ್ಥಾನ ಪರಿಸರದವರೇ ಹೆಚ್ಚು! ಯಾಕೆಂದರೆ ಸಾಸ್ತಾನದಿಂದ ಬ್ರಹ್ಮಾವರ ಹೋಗುವ ಬದಿಯಲ್ಲೇ ಮೊಟ್ಟೆಯ ಓಡುಗಳು, ಕೋಳಿಯಂಗಡಿಯ ತ್ಯಾಜ್ಯ, ಕಟಿಂಗ್ ಶಾಪಿನ ತಲೆಕೂದಲು, ಮಕ್ಕಳ ಪ್ಯಾಂಪರ್ಸ್ ರಾಶಿ ರಾಶಿ ಬಿದ್ದಿವೆ, ಕುಡಿದು ಎಸೆವ ಬಾಟಲಿಗಳು, ಅರ್ಜೆಂಟಿಗೆ ತೀಟೆ ತೀರಿಸಿಕೊಂಡು ಬಿಸಾಡಿದ ಯೂಸ್ಡ್ ಕಾಂಡೋಮುಗಳು! ಇದೆಲ್ಲವನ್ನೂ ಎತ್ತಿ ನಾವು ಈ ಸಮಾಜವನ್ನು ಹಳಿದುಕೊಂಡಿದ್ದೇವೆ, ತೀವ್ರ ಸಂಕಟ ಮತ್ತು ಅಸಹನೆಯಿಂದ" ಎಂದಿದ್ದಾರೆ.

"ಸೀತಾ ನದಿ ಅದು ನಮಗೆ ಕೇವಲ ವಾಟರ್ ಸೋರ್ಸ್ ಅಲ್ಲ ಅದು ನಮ್ಮ ಜೀವನದಿ, ಈ ಮಣ್ಣಿನ ಜಲನಿಧಿ, ನದಿ ಹಾದು ಬಂದಲ್ಲೆಲ್ಲಾ ಪುಣ್ಯಕ್ಷೇತ್ರಗಳು ಎದ್ದವು, ತಪಸ್ವಿಗಳು ಅಲ್ಲಿಗೆ ಹುಡುಕಿಕೊಂಡು ಬಂದರು, ನರಸಿಂಹ ಪರ್ವತದಿಂದ ಉಗಮಗೊಂಡು ಹರಿದು ಬರುವ ಸೀತಾ ನದಿಯ ಮಡಿಲು ಶುಭ್ರವಾಗಬೇಕಿದ್ದರೆ ಈ ಸಮಾಜಕ್ಕೊಂದು ಜಾಗೃತಿ ಮೂಡಬೇಕು, ನಾವು ಅದಕ್ಕೆ ಪ್ರೇರಣೆಯಾಗಬೇಕು ಎಂದು ನಾವು ಹೊರಟಿದ್ದು ’ಪಾವನ ಸೀತಾ’ ಎಂದು. ಐವತ್ತಕ್ಕೂ ಹೆಚ್ಚು ತರುಣರು ನಿನ್ನೆ ನೂರಕ್ಕೂ ಹೆಚ್ಚು ದೊಡ್ಡ ಬ್ಯಾಗುಗಳಲ್ಲಿ ಕಸವನ್ನ ಎತ್ತಿ ಅದನ್ನ ಡಂಪಿಂಗ್ ಯಾರ್ಡಿಗೆ ತಲುಪಿಸಿದ್ದೇವೆ. ಟೀಂ ಅಭಿಮತಕ್ಕೆ ಸಾರ್ಥಕತೆ ಇದೆ. ಅದನ್ನ ಪೂರ್ತಿ ಸ್ವಚ್ಚಗೊಳಿಸುವ ತನಕ ನಾವು ವಿರಮಿಸುವುದಿಲ್ಲ. ಮತ್ತು ಇನ್ನೂ ಅಲ್ಲಿಗೇ ಕಸ ತಂದು ಎಸೆಯುವವರನ್ನ ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ.ಈ ಸಮಾಜದ ಸಂಘ ಸಂಸ್ಥೆಗಳು ನಮ್ಮ ಜೊತೆ ಕೈಜೋಡಿಸುತ್ತವೆ ಎನ್ನುವ ನಿರೀಕ್ಷೆ ನನಗಂತೂ ಇದೆ" ಎಂದು ವಸಂತ ಗಿಳಿಯಾರು ಬರೆದಿದ್ದಾರೆ.
ಇನ್ನು ಮುಂದೆ ಇಲ್ಲಿ ಕಸ ತಂದು ಎಸೆಯುವವರನ್ನು ಪತ್ತೆ ಹಚ್ಚಿ, ಆ ಕಸದ ರಾಶಿಯನ್ನು ತಂದು ಅಂಥವರ ಮನೆ ಅಥವಾ ಅಂಗಡಿಯ ಮುಂದೆಯೇ ಸುರಿದು ಪ್ರತಿಭಟಿಸುವ ವಿನೂತನ ಪ್ರತಿಭಟನೆಯ ಮಾದರಿಯನ್ನು ಮುಂದೆ ಅನುಸರಿಸಲಿದ್ದೇವೆ ಎಂದು ವಸಂತ್ ಎಚ್ಚರಿಸಿದ್ದಾರೆ. ಇದಕ್ಕಾಗಿ ನದಿಯ ಇಕ್ಕೆಲಗಳಲ್ಲೂ ಸಿಸಿಟಿವಿ ಇನ್‌ಸ್ಟಾಲ್ ಮಾಡುವಿಕೆ, ಸ್ವಯಂಸೇವಕರ ನೇಮಕ ಸೇರಿದಂತೆ ಹಲವು ಕ್ರಮ ಕೈಗೊಳ್ಳುವ ಚಿಂತನೆ ಇದೆ.
ಸೀತಾ ನದಿ ಸ್ವಚ್ಛ ಆಗುವವರೆಗೆ ಪ್ರತಿ ಭಾನುವಾರ ಈ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ. ಇತರ ಕಡೆಯವರು ಈ ಕಾರ್ಯದಲ್ಲಿ ಕೈ ಜೋಡಿಸಲು ಬಂದರೆ ಅವರಿಗೂ ಸ್ವಾಗತವಿದೆ. ಈ ಸ್ವಚ್ಛತಾ ಕಾರ್ಯವನ್ನು ದೊಡ್ಡದಾಗಿ ವಿಸ್ತರಿಸಿ ಅಭಿಯಾನವಾಗಿ ಬೆಳೆಸುವ ಚಿಂತನೆಯಿದೆ. ಸ್ವಚ್ಛತಾ ಕಾರ್ಯದ ಬಳಿಕ ಮೇ ತಿಂಗಳಲ್ಲಿ ಸೀತಾ ನದಿಗೆ ದೀಪ ನಮಸ್ಕಾರದಂಥ ವಿಶಿಷ್ಟ ಕಾರ್ಯವನ್ನು ನೆರವೇರಿಸಲೂ ಆಯೋಜಕರು ನಿರ್ಧರಿಸಿದ್ದಾರೆ.
ಇದನ್ನೂ ಓದಿ: Vishweshwar Bhat Column: ಸ್ವಚ್ಛತೆ ಮತ್ತ ಸಾರ್ವಜನಿಕ ವರ್ತನೆ