B. Saroja Devi: ಡಾ.ರಾಜ್ ಹಾದಿಯಲ್ಲೇ ಸರೋಜಾ ದೇವಿ; ನೇತ್ರದಾನ ಮಾಡಿದ 'ಅಭಿನಯ ಸರಸ್ವತಿ'
B. Saroja Devi: ನೇತ್ರದಾನ ಮಾಡುವಂತೆ ವರನಟ ಡಾ.ರಾಜ್‌ಕುಮಾರ್ ಕೂಡ ಕರೆ ಕೊಟ್ಟಿದ್ದರು. ತಮ್ಮ ಕಣ್ಣುಗಳನ್ನು ಡಾ.ರಾಜ್ ಅವರು ದಾನ ಮಾಡಿದ್ದರು. ಇದೀಗ ಅವರ ಹಾದಿಯನ್ನೇ ಅನುಸರಿಸಿ ಹಿರಿಯ ನಟಿ ಸರೋಜಾದೇವಿ ಅವರ ಕಣ್ಣುಗಳನ್ನೂ ದಾನ ಮಾಡಲಾಗಿದೆ.


ಬೆಂಗಳೂರು: ಕನ್ನಡ ಚಿತ್ರರಂಗದ ಅಭಿನಯ ಸರಸ್ವತಿ ಬಿ. ಸರೋಜ ದೇವಿ ಅವರು ತಮ್ಮ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಸರೋಜಾದೇವಿ ಅವರ ಕಣ್ಣುಗಳನ್ನು ದಾನ ಮಾಡಲು ಕುಟುಂಬಸ್ಥರು ನಿರ್ಧಾರ ಮಾಡಿದ್ದು, ಇದರಿಂದ ಬೇರೆಯವರಿಗೆ ದಾರಿದೀಪವಾಗಿದ್ದಾರೆ. ನಟಿಯ ಕುಟುಂಬದವರ ಪ್ರಕಾರ ಸರೋಜಾ ದೇವಿ ಅವರಿಗೆ ಕಣ್ಣುಗಳನ್ನ ದಾನ ಮಾಡುವ ಆಸೆ ಇತ್ತು. ಹಾಗಾಗಿ ಅವರ ಬಯಕೆಯನ್ನು ಕುಟುಂಬಸ್ಥರು ಈಡೇರಿಸಿದ್ದು, ಐ ಬ್ಯಾಂಕ್ ಸಿಬ್ಬಂದಿಗೆ ಮಾಹಿತಿ ನೀಡಿ, ಕಣ್ಣುಗಳನ್ನ ದಾನ ಮಾಡಿದ್ದಾರೆ.
ಕತ್ತಲೆಯಲ್ಲಿ ಜೀವನ ನಡೆಸುತ್ತಿರೋ ಅಂಧರಿಗೆ ನೇತ್ರದಾನ ಮಾಡುವುದು ಪುಣ್ಯದ ಕೆಲಸ. ನೇತ್ರದಾನ ಮಾಡುವಂತೆ ವರನಟ ಡಾ.ರಾಜ್‌ಕುಮಾರ್ ಕೂಡ ಕರೆ ಕೊಟ್ಟಿದ್ದರು. ತಮ್ಮ ಕಣ್ಣುಗಳನ್ನು ಡಾ.ರಾಜ್‌ಕುಮಾರ್ ಅವರು ಕೂಡ ದಾನ ಮಾಡಿದ್ದರು. ಡಾ.ರಾಜ್‌ಕುಮಾರ್ ಹಾದಿಯನ್ನು ಅನುಸರಿಸಿ ಅನೇಕರು ನೇತ್ರದಾನ ಮಾಡಿದ್ದಾರೆ. ಇದೀಗ ಹಿರಿಯ ನಟಿ ಸರೋಜಾದೇವಿ ಅವರ ಕಣ್ಣುಗಳನ್ನೂ ದಾನ ಮಾಡಲಾಗಿದೆ.
ಈಗಾಗಲೇ ನಟಿಯ ಕಣ್ಣುಗಳನ್ನ ನಾರಾಯಣ ನೇತ್ರಾಲಾಯದ ವೈದ್ಯರು ತೆಗೆದುಕೊಂಡು ಹೋಗಿದ್ದಾರೆ. ನಾಳೆ ನಟಿ ಸರೋಜಾದೇವಿ ಅವರ ಅಂತ್ಯ ಸಂಸ್ಕಾರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕಣ್ವ ಡ್ಯಾಮಿನ ಪಕ್ಕದಲ್ಲೇ ಇರೋ ದಶಾವರದಲ್ಲಿ ಕುಟುಂಬಸ್ಥರು ಮಾಡಲಿದ್ದಾರೆ. ಒಕ್ಕಲಿಗ ಸಂಪ್ರದಾಯದಂತೆ ವಿಧಿ ವಿಧಾನಗಳು ನೆರವೇರಲಿವೆ.
ಈ ಸುದ್ದಿಯನ್ನೂ ಓದಿ | B. Saroja Devi: ಬಿ. ಸರೋಜಾ ದೇವಿ ಪತಿ ಯಾರು? ಅವರು ಸಾವನ್ನಪ್ಪಿದ್ದು ಹೇಗೆ?
ಕನ್ನಡದ ಮೊದಲ ಮಹಿಳಾ ಸೂಪರ್ ಸ್ಟಾರ್ ಎಂದು ಖ್ಯಾತಿ ಗಳಿಸಿರುವ ನಟಿ ಕನ್ನಡ ಮಾತ್ರವಲ್ಲದೇ, ತೆಲುಗು, ಹಿಂದಿ ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಸಿನಿಮಾ ಕ್ಷೇತ್ರದ ಕೊಡುಗೆಗೆ 1969ರಲ್ಲಿ ಪದ್ಮಶ್ರೀ ಮತ್ತು 1992ರಲ್ಲಿ ಪದ್ಮಭೂಷಣ ಪ್ರಶಸ್ತಿಗಳನ್ನು ಕೊಟ್ಟು ಗೌರವಿಸಲಾಗಿದೆ. ತಮ್ಮ 17ನೇ ವಯಸ್ಸಿನಿಂದ ಸಿನಿಮಾಗಳಲ್ಲಿ ನಟನೆ ಮಾಡುತ್ತಾ ಬಂದಿರುವ ನಟಿ, ಆರು ದಶಕಗಳಿಗೂ ಹೆಚ್ಚು ಕಾಲ ಸಿನಿಪ್ರಿಯರನ್ನು ರಂಜಿಸಿದ್ದಾರೆ.
ರಜನಿಕಾಂತ್, ಸುದೀಪ್ ಸೇರಿದಂತೆ ಚಿತ್ರರಂಗದ ಪ್ರಮುಖರಿಂದ ಅಂತಿಮ ನಮನ
ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗದ ದಿಗ್ಗಜ ನಟಿ ಬಿ. ಸರೋಜಾ ದೇವಿ (Saroja Devi ) ಅವರು ಸೋಮವಾರ ಬೆಳಗ್ಗೆ 9 ಗಂಟೆಗೆ ಬೆಂಗಳೂರಿನ (Bengaluru) ಮಲ್ಲೇಶ್ವರಂನ (Malleswaram) ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಗಲಿದ ಹಿರಿಯ ನಟಿಗೆ ಸಿನಿಮಾರಂದ ಗಣ್ಯರು, ಪ್ರಮುಖ ನಟ, ನಟಿಯರು ಮತ್ತು ರಾಜಕಾರಣಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ
ಅಗಲಿದ ನಟಿಗೆ ಸಂತಾಪ ಸೂಚಿಸಿದ ಸೂಪರ್‌ಸ್ಟಾರ್ ರಜನಿಕಾಂತ್, "ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದ ಮಹಾನ್ ನಟಿ ಸರೋಜಾದೇವಿ ಇನ್ನಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಬರೆದಿದ್ದಾರೆ.
"ಅಭಿನಯ ಸರಸ್ವತಿ ಎಂದೇ ಹೆಸರಾದ ಬಹುಭಾಷಾ ತಾರೆ ಶ್ರೀಮತಿ ಸರೋಜ ದೇವಿ ಅವರು ತಮ್ಮ ಮೋಹಕತೆಯೊಂದಿಗೆ ಹೊರಟಿದ್ದಾರೆ. ಹಲವು ಭಾಷೆಗಳ ಪ್ರೌಡಿಮೆ ಹೊಂದಿದ್ದ ಅವರು ಅನೇಕ ದಿಗ್ಗಜರೊಂದಿಗೆ ನಟಿಸಿ ತಾನೇ ಪಾತ್ರವಾಗಿ ಬೆಳ್ಳಿತೆರೆಯಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಪಾರಿಜಾತ ಪುಷ್ಪವೊಂದು ತನ್ನ ಪರಿಮಳದೊಂದಿಗೆ ತುಂಬು ಜೀವನ ನೆಡೆಸಿ ನಮ್ಮನ್ನು ಆಗಲಿ ಹೊರಟಿದೆ. ಕಲಾ ಸರಸ್ವತಿಗೆ ವಿನಯಪೂರ್ವಕ ನಮನ” ಎಂದು ನಟ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.
"ಸರೋಜಾ ದೇವಿ ಅಮ್ಮ ಎಲ್ಲಕಾಲಕ್ಕೂ ಮಹಾನ್ ನಟಿ. ದಕ್ಷಿಣದಲ್ಲಿ ಯಾವ ನಟಿಯೂ ಅವರ ಖ್ಯಾತಿಗೆ ಸಾಟಿಯಿಲ್ಲ. ಆಕೆಯ ಆತ್ಮೀಯತೆಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ,” ಎಂದು ನಟಿ ಮತ್ತು ರಾಜಕಾರಣಿ ಖುಷ್ಬು ಸುಂದರ್ ಹೇಳಿದ್ದಾರೆ.