Pahalgam Terror Attack: ಹಿಂದೂ ಎಂದು ಖಚಿತಪಡಿಸಿಕೊಂಡು ಗುಂಡಿಕ್ಕಿದರು: ಬೆಂಗಳೂರು ನಿವಾಸಿಯೂ ಸೇರಿ ಇಬ್ಬರು ಕನ್ನಡಿಗರ ಬಲಿ
ಮೃತ ಭರತ್ ಭೂಷಣ್ ಹಾವೇರಿ ಜಿಲ್ಲೆ ರಾಣೇಬೆನ್ನೂರು ಮೂಲದವರು. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಭರತ್ ಭೂಷಣ್ ಬೆಂಗಳೂರಿನ ಮತ್ತಿಕೆರೆ ಜೆ.ಪಿ.ಪಾರ್ಕ್ ಬಳಿ ಕುಟುಂಬದೊಂದಿಗೆ ನೆಲೆಸಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಪತ್ನಿ ಸುಜಾತಾ ಮತ್ತು ಮೂರು ವರ್ಷದ ಮಗು ಜತೆಗೆ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು.


ಶ್ರೀನಗರ: ಸುಂದರ ಕಾಶ್ಮೀರದ ಪಹಲ್ಗಾಮ್ ಕಣಿವೆಯಲ್ಲಿ ಇಸ್ಲಾಮಿಕ್ ಉಗ್ರರು ನಡೆಸಿದ ನರಮೇಧದಲ್ಲಿ ಬೆಂಗಳೂರು ನಿವಾಸಿ ಭರತ್ ಭೂಷಣ್ ಎಂಬವರು ಮೃತಪಟ್ಟಿದ್ದಾರೆ. ಇದರೊಂದಿಗೆ ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟ ಕನ್ನಡಿಗರ ಸಂಖ್ಯೆ 2ಕ್ಕೇರಿದೆ. ಶಿವಮೊಗ್ಗ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಎಂಬವರನ್ನೂ ಅವರ ಹೆಂಡತಿ, ಮಗು ಎದುರೇ ಗುಂಡಿಕ್ಕಿ ಸಾಯಿಸಲಾಗಿದೆ.
ಮೃತ ಭರತ್ ಭೂಷಣ್ ಹಾವೇರಿ ಜಿಲ್ಲೆ ರಾಣೇಬೆನ್ನೂರು ಮೂಲದವರು. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಭರತ್ ಭೂಷಣ್ ಬೆಂಗಳೂರಿನ ಮತ್ತಿಕೆರೆ ಜೆ.ಪಿ.ಪಾರ್ಕ್ ಬಳಿ ಕುಟುಂಬದೊಂದಿಗೆ ನೆಲೆಸಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಪತ್ನಿ ಸುಜಾತಾ ಮತ್ತು ಮೂರು ವರ್ಷದ ಮಗು ಜತೆಗೆ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ಮಂಗಳವಾರ ಪಹಲ್ಗಾಮ್‌ನಲ್ಲಿ ಪತ್ನಿ ಮತ್ತು ಮಗುವಿನ ಎದುರೇ ಭರತ್ ಭೂಷಣ್ ಉಗ್ರರ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.
ಉಗ್ರರ ಭೀಕರ ದಾಳಿಯ ಬಗ್ಗೆ ಸುಜಾತಾ ಅವರು ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಪ್ರವಾಸದಲ್ಲಿ ಇದ್ದಾಗ ಬಂದೂಕುಧಾರಿ ವ್ಯಕ್ತಿಯೊಬ್ಬ ಭರತ್ ಭೂಷಣ್ ಬಳಿ ಬಂದು ಹೆಸರು ಮತ್ತು ಧರ್ಮದ ಬಗ್ಗೆ ಕೇಳಿದ್ದಾನೆ. ಇದಕ್ಕೆ ಭರತ್ ಭೂಷಣ್ ತಾನು ಹಿಂದೂ ಎಂದು ಹೇಳಿದ ತಕ್ಷಣ ಆ ವ್ಯಕ್ತಿ ತಲೆಗೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ಈ ವೇಳೆ ಸುಜಾತಾ ಅವರು ತಮ್ಮ ಮೂರು ವರ್ಷದ ಮಗುವನ್ನು ಎತ್ತಿಕೊಂಡು ಸ್ವಲ್ಪ ದೂರ ಓಡಿದರು ಎಂದು ತಿಳಿದು ಬಂದಿದೆ.
ಶಿವಮೊಗ್ಗದ ನಿವಾಸಿ ಮಂಜುನಾಥ್ ಕೂಡ ಸಾವನ್ನಪ್ಪಿದ್ದಾರೆ. ಮಂಜುನಾಥರ ಪತ್ನಿ ಪಲ್ಲವಿ ಮತ್ತು ಮಗ ಸುರಕ್ಷಿತವಾಗಿದ್ದಾರೆ. ಶಿವಮೊಗ್ಗದ ವಿಜಯನಗರ ನಿವಾಸಿ ಮೃತ ಮಂಜುನಾಥ್ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು ಎಂದು ತಿಳಿದುಬಂದಿದೆ. ಉಗ್ರರ ದಾಳಿಯ ಭಯಾನಕತೆಯನ್ನು ಮೃತ ಮಂಜುನಾಥ್ ಪತ್ನಿ ಪಲ್ಲವಿ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದು, ನನ್ನ ಕಣ್ಣೆದುರಿಗೇ ನನ್ನ ಪತಿಯನ್ನು ಸಾಯಿಸಿದ್ದಾರೆ. ನನ್ನ ಗಂಡನನ್ನು ಸಾಯಿಸಿ ನನ್ನ ಮಗನನ್ನು ಬೈದು ಹಲ್ಲೆ ಮಾಡಿದ್ದಾರೆ. ನನ್ನ ಹಾಗು ನನ್ನ ಮಗನನ್ನೂ ಕೊಂದುಬಿಡು ಎಂದು ಹೇಳಿದೆವು. ನಿನ್ನನ್ನು ಕೊಲ್ಲಲ್ಲ ಹೋಗಿ ಮೋದಿಗೆ ಹೇಳು ಎಂದು ಉಗ್ರರು ಹೇಳಿದರು. ನನ್ನ ಪತಿಯನ್ನು ಕೊಂದು ಉಗ್ರರು ಅಲ್ಲೇ ಓಡಾಡುತ್ತಿದ್ದರು ಎಂದು ಮೃತ ಮಂಜುನಾಥ್ ಪತ್ನಿ ಪಲ್ಲವಿ ಕಣ್ಣೀರಿಟ್ಟರು.
ಇನ್ನೊಬ್ಬ ಕನ್ನಡಿಗ ಅಭಿಜ್ಞಾ ರಾವ್ ಎಂಬವರಿಗೆ ಗಂಭೀರವಾದ ಗುಂಡಿನ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಯಾವ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದುಬಂದಿಲ್ಲ. ಕರ್ನಾಟಕದಿಂದ ಸಚಿವ ಸಂತೋಷ್ ಲಾಡ್ ಅವರನ್ನು ಕನ್ನಡಿಗರ ರಕ್ಷಣಾ ಕಾರ್ಯಗಳಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳಿಸಿದ್ದಾರೆ.
ಇದನ್ನೂ ಓದಿ: Pahalgam Terror Attack: ಮದುವೆಯಾಗಿ ಐದೇ ದಿನ, ಹನಿಮೂನ್‌ನಲ್ಲಿದ್ದ ನೌಕಾಪಡೆ ಅಧಿಕಾರಿಯ ಹತ್ಯೆ