Pahalgam Terror Attack: ಉಗ್ರರ ದಾಳಿಯಲ್ಲಿ ಮೃತಪಟ್ಟ ಕನ್ನಡಿಗರ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ ಸಾಂತ್ವನ
Pahalgam Terror Attack: ಕಾಶ್ಮೀರ ಪ್ರವಾಸಕ್ಕೆಂದು ತೆರಳಿರುವ 40ಕ್ಕೂ ಅಧಿಕ ಕನ್ನಡಿಗರು ಭಯೋತ್ಪಾದಕ ದಾಳಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಅವರೆಲ್ಲರನ್ನೂ ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ವಿಶೇಷ ವಿಮಾನದ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಯಾರೊಬ್ಬರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.


ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತರಾದವರ ಕುಟುಂಬದವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Pahalgam Terror Attack) ಅವರು ದೂರವಾಣಿ ಮೂಲಕ ಮಾತನಾಡಿ ಸಾಂತ್ವನ ಹೇಳಿದ್ದಾರೆ. ಶಿವಮೊಗ್ಗದ ಮಂಜುನಾಥ ರಾವ್ ಅವರ ಪತ್ನಿ ಪಲ್ಲವಿ ಹಾಗೂ ಬೆಂಗಳೂರಿನ ಮತ್ತಿಕೆರೆಯ ಭರತ್ ಭೂಷಣ್ ಅವರ ಪತ್ನಿ ಸುಜಾತ ಅವರೊಂದಿಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಮಾತನಾಡಿ ಧೈರ್ಯ ಹೇಳಿದ್ದಾರೆ.
ಇನ್ನು ಕಾಶ್ಮೀರ ಪ್ರವಾಸಕ್ಕೆಂದು ತೆರಳಿರುವ 40ಕ್ಕೂ ಅಧಿಕ ಕನ್ನಡಿಗರು ಭಯೋತ್ಪಾದಕ ದಾಳಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಅವರೆಲ್ಲರನ್ನೂ ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ವಿಶೇಷ ವಿಮಾನದ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪ್ರತಿಯೊಬ್ಬ ಕನ್ನಡಿಗನನ್ನು ಮರಳಿ ರಾಜ್ಯಕ್ಕೆ ಕ್ಷೇಮವಾಗಿ ಕರೆತರುವ ಸಂಕಲ್ಪದೊಂದಿಗೆ ನಮ್ಮ ಸರ್ಕಾರವು ಕಾರ್ಯಾಚರಣೆಗೆ ಇಳಿದಿದೆ. ಯಾರೊಬ್ಬರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಸಿಎಂ ಭರವಸೆ ನೀಡಿದ್ದಾರೆ.
ಕನ್ನಡಿಗರ ರಕ್ಷಣೆಗಾಗಿ ರಾಜ್ಯದ ಅಧಿಕಾರಿಗಳ ತಂಡ
ಇದಕ್ಕೂ ಮೊದಲು ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ ಅವರು, ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಕ್ಷಣಕ್ಷಣಕ್ಕೂ ಏರುತ್ತಿರುವುದು ಆತಂಕ ಹೆಚ್ಚಿಸಿದೆ. ದಾಳಿಗೆ ಬಲಿಯಾದ ಅಮಾಯಕ ಜೀವಗಳನ್ನು ನೆನಪಿಸಿಕೊಂಡರೆ ಎದೆ ನಲುಗುತ್ತದೆ. ಮಡಿದ ಎಲ್ಲರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಭಯೋತ್ಪಾದಕರ ಈ ಹೇಯ ಕೃತ್ಯದಲ್ಲಿ ಪ್ರವಾಸಕ್ಕೆಂದು ತೆರಳಿದ್ದ ಹಲವು ಕನ್ನಡಿಗರು ಕೂಡ ಸಾವನ್ನಪ್ಪಿರುವುದು ಅತ್ಯಂತ ದುಃಖದ ವಿಚಾರ. ಉಗ್ರಕೃತ್ಯದಿಂದಾಗಿ ದೂರದ ಕಾಶ್ಮೀರದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ರಾಜ್ಯದ ಅಧಿಕಾರಿಗಳ ತಂಡವನ್ನು ರವಾನಿಸಲಾಗಿದೆ.
ಈ ಸಂದರ್ಭದಲ್ಲಿ ನಮ್ಮ ಸರ್ಕಾರದಿಂದ ಹೆಚ್ಚಿನ ನೆರವಿನ ಅಗತ್ಯ ಇದೆ ಎನ್ನುವುದನ್ನು ಅರಿತು ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರಿಗೆ ಕಾಶ್ಮೀರಕ್ಕೆ ತೆರಳಿ ಇಡೀ ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸುವಂತೆ ಸೂಚನೆ ನೀಡಿದ್ದೇನೆ. ಸಂತ್ರಸ್ತ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವ ಕಾರ್ಯವನ್ನು ನಮ್ಮ ಸರ್ಕಾರ ಮಾಡಲಿದೆ ಎಂದು ಸಿಎಂ ತಿಳಿಸಿದ್ದರು.
ಕನ್ನಡಿಗರ ನೆರವಿಗಾಗಿ ಸಹಾಯವಾಣಿ
ಉಗ್ರಕೃತ್ಯದಿಂದಾಗಿ ಕಾಶ್ಮೀರದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಧಾವಿಸಿದ್ದು, ಪ್ರವಾಸಿಗರ ಮಾಹಿತಿ ನೀಡಲು ಸಹಾಯವಾಣಿ ಆರಂಭಿಸಿದೆ. ಪ್ರವಾಸಿಗರ ಸಂಬಂಧಿಕರು, ಪರಿಚಯಸ್ಥರು ಅಥವಾ ಟೂರ್ ಏಜೆನ್ಸಿಯವರು ಪ್ರವಾಸಕ್ಕೆ ತೆರಳಿರುವವರ ವಿವರಗಳನ್ನು ನೀಡಲು ತಕ್ಷಣವೇ ಸಹಾಯವಾಣಿಗೆ ಕರೆ ಮಾಡಿ, ಮಾಹಿತಿ ನೀಡಲು ಸರ್ಕಾರ ಕೋರಿದೆ.
ಸಹಾಯವಾಣಿ ಸಂಖ್ಯೆಗಳು: 080-43344334, 080-43344335, 080-43344336, 080-43344342 ಸಂಪರ್ಕಿಸಬಹುದು.