Koratagere Protest: ಕಲ್ಲುಗಣಿಗಾರಿಕೆ ವಿರುದ್ಧ ರೈತರ ಆಕ್ರೋಶ; ಕೊರಟಗೆರೆ ಮಿನಿ ವಿಧಾನಸೌಧಕ್ಕೆ ಮುತ್ತಿಗೆ
Koratagere Protest: ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕು ಕಸಬಾ ಹೋಬಳಿ ವಡ್ಡಗೆರೆ ಗ್ರಾಪಂಯ ಚೀಲಗಾನಹಳ್ಳಿ ಗ್ರಾಮದ ಸಮೀಪ ಕಲ್ಲುಗಣಿಗಾರಿಕೆ ಮತ್ತು ಜಲ್ಲಿಕ್ರಷರ್ ನಡೆಸಲು ಮುಂದಾಗಿರುವುದಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕೊರಟಗೆರೆ ತಾಲೂಕು ಕಚೇರಿಗೆ ಮುತ್ತಿಗೆಹಾಕಿ ರೈತರು ಪ್ರತಿಭಟನೆ ನಡೆಸಿದ್ದಾರೆ.


ಕೊರಟಗೆರೆ: ಕಲ್ಲುಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್ ಘಟಕ ಸ್ಥಾಪನೆಗೆ ವಿರೋಧಿಸಿ ರೈತಸಂಘ, ಹಸಿರು ಸೇನೆ ಮತ್ತು ಚೀಲಗಾನಹಳ್ಳಿ ಗ್ರಾಮದ ರೈತರು ಕೊರಟಗೆರೆ ತಾಲೂಕು ಕಚೇರಿಗೆ ಮುತ್ತಿಗೆಹಾಕಿ ಪ್ರತಿಭಟನೆ ನಡೆಸಿದರು. ಚೀಲಗಾನಹಳ್ಳಿ ಸಮೀಪದಲ್ಲಿ ಅರಣ್ಯ ಪ್ರದೇಶ ಮತ್ತು ಕೆರೆಕಟ್ಟೆ ಇದ್ದರೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಸ್ಥಳಪರಿಶೀಲನೆ ನಡೆಸದೇ ಅನಧಿಕೃತವಾಗಿ ಬೆಂಗಳೂರು ಮೂಲದ ಉದ್ಯಮಿಗಳಿಗೆ ಭೂಮಿ ಮಂಜೂರು ಮಾಡಿರುವ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ.
ಕೊರಟಗೆರೆ ತಾಲೂಕು ಕಸಬಾ ಹೋಬಳಿ ವಡ್ಡಗೆರೆ ಗ್ರಾಪಂಯ ಚೀಲಗಾನಹಳ್ಳಿ ಗ್ರಾಮದ ಸಮೀಪ ಕಲ್ಲುಗಣಿಗಾರಿಕೆ ಮತ್ತು ಜಲ್ಲಿಕ್ರಷರ್ ನಡೆಸಲು ಮುಂದಾಗಿರುವುದಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಚೀಲಗಾನಹಳ್ಳಿ ಸರ್ವೆ ನಂ.21ಲ್ಲಿ ಬೆಂಗಳೂರು ಮತ್ತು ತುಮಕೂರು ಮೂಲದ 10 ಜನರಿಗೆ 2014ಲ್ಲಿ ತಲಾ 5ರಿಂದ 6ಎಕರೆ ಭೂಮಿಯನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಮಂಜೂರು ಮಾಡಿತ್ತು. ಕಲ್ಲುಗಣಿಗಾರಿಕೆ ಮತ್ತು ಜಲ್ಲಿಕ್ರಷರ್ ಪ್ರಾರಂಭಕ್ಕೆ ಅನುಮತಿ ನೀಡಬಾರದು ಎಂದು 10 ವರ್ಷದಿಂದ ಚೀಲಗಾನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ನಿರಂತರ ಹೋರಾಟ ನಡೆಸುತ್ತಿದ್ದಾರೆ.
ಕೊರಟಗೆರೆ ತಾಲೂಕಿನ ಗೌರಿಕಲ್ಲು, ಬುಕ್ಕಾಪಟ್ಟಣ, ಚೀಲಗಾನಹಳ್ಳಿ, ಇರಕಸಂದ್ರಾ ಕಾಲೋನಿ ಮತ್ತು ಜೆಟ್ಟಿಅಗ್ರಹಾರ ಸಮೀಪ ಮತ್ತೆ ಗಣಿಗಾರಿಕೆ ಪ್ರಾರಂಭಕ್ಕೆ ಹುನ್ನಾರ ನಡೆದಿದೆ. ಕೊರಟಗೆರೆ ಕ್ಷೇತ್ರವನ್ನು ಮಿನಿಬಳ್ಳಾರಿ ಮಾಡಲು ಹೋರಟಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವಿರುದ್ಧ ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರುಸೇನೆ ಆಕ್ರೋಶ ಹೊರಹಾಕಿದೆ.