Food Poison: ಹೋಳಿ ಹಬ್ಬದ ಪಾರ್ಟಿಯಲ್ಲಿ ಕಲುಷಿತ ಆಹಾರ ಸೇವನೆ, ವಿದ್ಯಾರ್ಥಿ ಸಾವು, 6 ಮಂದಿ ಮೇಲೆ ಎಫ್‌ಐಆರ್
ಮಂಡ್ಯ ಜಿಲ್ಲೆಯ ಮಳವಳ್ಳಿಯ ಹಾಸ್ಟೆಲ್‌ನಲ್ಲಿ ವಿಷಾಹಾರ ಸೇವಿಸಿ ಅಸ್ವಸ್ಥರಾದ ವಿದ್ಯಾರ್ಥಿಗಳಿಗೆ ಮಂಡ್ಯ ಮಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. 35ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ಚಸ್ಥಗೊಂಡಿದ್ದರು.

ಮಂಡ್ಯದಲ್ಲಿ ವಿಷಾಹಾರದಿಂದ ವಿದ್ಯಾರ್ಥಿಗಳು ಅಸ್ವಸ್ಥ

ಮಂಡ್ಯ: ಹೋಳಿ ಹಬ್ಬದ (Holi Festival) ಪಾರ್ಟಿಯಲ್ಲಿ ಕಲುಷಿತ ಆಹಾರ (food poison) ಸೇವಿಸಿ ಒಬ್ಬ ವಿದ್ಯಾರ್ಥಿ ಸಾವನ್ನಪ್ಪಿದ (Student death) ಘಟನೆ ಮಂಡ್ಯ (Mandya news) ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ನಡೆದಿದೆ. ಮತ್ತೊಬ್ಬ ವಿದ್ಯಾರ್ಥಿಯ ಸ್ಥಿತಿ ಗಂಭೀರವಾಗಿದೆ. ಈ ಘಟನೆಯ ಸಂಬಂಧ ಶಿಕ್ಷಣ ಸಂಸ್ಥೆಯ ಆರು ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಈ ಕುರಿತು ಬಿಇಓ ಉಮಾ ನೀಡಿದ ದೂರಿನ ಆಧಾರದ ಮೇಲೆ ಕೇಸ್ ದಾಖಲಾಗಿದೆ. ಬಿಇಓ ನೀಡಿದ ದೂರಿನ ಹಿನ್ನಲೆಯಲ್ಲಿ, ಹೋಳಿ ಹಬ್ಬ ಆಯೋಜಿಸಿದ್ದ ಪುಷ್ಪೇಂದ್ರ ಕುಮಾರ್, ಹೋಟೆಲ್ ಮಾಲೀಕ ಸಿದ್ದರಾಜು, ಕಲ್ಯಾಣ ಮಂಟಪದ ನೌಕರ ಕೃಷ್ಣ, ಗೋಕುಲ ವಿದ್ಯಾ ಸಂಸ್ಥೆಯ ಮುಖ್ಯಸ್ಥ ಲಂಕೇಶ್ ಸೇರಿದಂತೆ 6 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ವಿಷಾಹಾರ ಸೇವಿಸಿ ಅಸ್ವಸ್ಥರಾದ ವಿದ್ಯಾರ್ಥಿಗಳಿಗೆ ಮಂಡ್ಯ ಮಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. 35ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ಚಸ್ಥಗೊಂಡಿದ್ದರು. ಮೇಘಾಲಯ ಮೂಲದ ಕೇರ್ ಲಾಂಗ್ (14) ಎಂಬ ವಿದ್ಯಾರ್ಥಿ ಸಾವನ್ನಪ್ಪಿದ್ದ. ಉಳಿದವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ನಾಮಪಟ್ಟಿ ಎಂಬ ವಿದ್ಯಾರ್ಥಿ ಪರಿಸ್ಥಿತಿ ಚಿಂತಾಜನಕವಾಗಿದೆ.
ವಿಷಾಹಾರ ಸೇವಿಸಿ ತೀವ್ರ ಅಸ್ವಸ್ಥರಾಗಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಐಸಿಯುಗೆ ದಾಖಲಿಸಲಾಗಿದೆ. ಒಟ್ಟು ನಾಲ್ವರು ವಿದ್ಯಾರ್ಥಿಗಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣದಲ್ಲಿ ಮೂವರು ವಿದ್ಯಾರ್ಥಿಗಳು ಮಂಡ್ಯ ಮಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಓರ್ವ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮಾರ್ಚ್15ರಂದು ಮಳವಳ್ಳಿಯಲ್ಲಿ ನಡೆದ ಹೋಳಿ ಆಚರಣೆಯಲ್ಲಿ ಭಾಗಿಯಾಗಿದ್ದವರಿಗೆ ಸ್ಥಳೀಯ ಹೋಟೆಲ್‌ನಿಂದ ಆಹಾರವನ್ನು ನೀಡಲಾಗಿತ್ತು. ಬಳಿಕ ಉಳಿದ ಆಹಾರವನ್ನು ಗೋಕುಲ ವಿದ್ಯಾರ್ಥಿ ನಿಲಯಕ್ಕೆ ನೀಡಲಾಗಿತ್ತು. ಈ ಆಹಾರ ಸೇವಿಸಿದ 30 ವಿದ್ಯಾರ್ಥಿಗಳು ವಾಂತಿ ಭೇದಿಯಿಂದ ಅಸ್ವಸ್ಥರಾಗಿದ್ದಾರೆ.
ಸಿಎಂ ಸಿದ್ಧರಾಮಯ್ಯ ಕಳವಳ
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಸಿಎಂ ಸಿದ್ಧರಾಮಯ್ಯ ಅವರು ಕಳವಳ ವ್ಯಕ್ತಪಡಿಸಿದ್ದರು. "ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಟಿ.ಕಾಗೇಪುರದ ಖಾಸಗಿ ವಸತಿ ಶಿಕ್ಷಣ ಸಂಸ್ಥೆಯಲ್ಲಿ ವಿಷಾಹಾರ ಸೇವಿಸಿ ವಿದ್ಯಾರ್ಥಿಯೊಬ್ಬ ಮೃತಪಟ್ಟು ಹಲವು ಮಕ್ಕಳು ತೀವ್ರ ಅಸ್ವಸ್ಥಗೊಂಡ ವಿಚಾರ ತಿಳಿದು ನೋವಾಯಿತು. ಈ ಘಟನೆ ನನ್ನ ಗಮನಕ್ಕೆ ಬಂದ ಕೂಡಲೇ ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಮಕ್ಕಳಿಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡುವಂತೆ ಹಾಗೂ ಘಟನೆಗೆ ಕಾರಣರಾದವರ ಮೇಲೆಯೂ ಕಠಿಣ ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದೆ, ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ. ಈ ದುರ್ಘಟನೆಯಲ್ಲಿ ಮಡಿದ ಬಾಲಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲಾಗುವುದು. ಬೇರೆಡೆ ತಯಾರಿಸಿದ ಆಹಾರವನ್ನು ಸೇವಿಸುವ ಮುನ್ನ ಅದರಲ್ಲಿಯೂ ಚಿಕ್ಕ ಮಕ್ಕಳಿಗೆ ನೀಡುವ ಮುನ್ನ ಹೆಚ್ಚು ಜಾಗೃತೆ ವಹಿಸಿ. ಅಜಾಗರೂಕತೆಗೆ ಅಮೂಲ್ಯ ಜೀವಗಳು ಬಲಿಯಾಗದಿರಲಿ" ಎಂಬುದಾಗಿ ಎಚ್ಚರಿಸಿದ್ದರು.
ಇದನ್ನೂ ಓದಿ: ಗೇಟ್ ಮೇಲೆ ಹರಿದ ಕಾರು! ಚಾಲಕನ ನಿರ್ಲಕ್ಷ್ಯದಿಂದ ಬಾಲಕಿ ಸ್ಥಳದಲ್ಲೇ ಸಾವು