ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr N Someshwara Column: ಮಮ್ಮಿಗಳಿಂದ ಅಸ್ಥಿಭಂಗವನ್ನು ಗುಣಪಡಿಸುವವರೆಗೆ...

ಈಜಿಪ್ಷಿಯನ್ನರು ಪಿರಮಿಡ್ಡುಗಳ ಭಿತ್ತಿಯನ್ನು ರೂಪಿಸಲು ಇದೇ ಜಿಪ್ಸಮ್ ಅನ್ನು ಬಳಸುತ್ತಿದ್ದರು. ಜಗತ್ತಿನ ಪ್ರಥಮ ವೈದ್ಯ ಎಂದು ಹೆಸರಾದ ‘ಇಮ್‌ಹೋಟೆಪ್’ನ ಸಮಾಧಿಯಲ್ಲಿ, ಪಿಒಪಿಯಿಂದ ತಯಾ ರಿಸಿದ ಕೆಲವು ಪಾತ್ರೆಗಳು, ಕೆಲವು ಶಸವೈದ್ಯಕೀಯ ಉಪಕರಣಗಳು ಹಾಗೂ ಮಿಶ್ರಣಗಳು ದೊರೆತಿವೆ. ಕೆಲವು ಮಮ್ಮಿಗಳಲ್ಲಿರುವ ಮುರಿದ ಮೂಳೆಗಳು ಹದವಾಗಿ ಕೂಡಿಕೊಂಡಿರುವುದನ್ನು ನಾವು ನೋಡ ಬಹುದು.

ಮಮ್ಮಿಗಳಿಂದ ಅಸ್ಥಿಭಂಗವನ್ನು ಗುಣಪಡಿಸುವವರೆಗೆ...

ಹಿಂತಿರುಗಿ ನೋಡಿದಾಗ

naasomeswara@gmail.com

ಕರ್ನಾಟಕದಲ್ಲಿ ಚೌತಿ ಹಬ್ಬ ಬಂದಿತೆಂದರೆ ಮಕ್ಕಳಿಗೆ ಬಹಳ ಸಂಭ್ರಮ. ಮೂರು ದಿನ, ಐದು ದಿನ ಅಥವಾ ಒಂಬತ್ತು ದಿನಗಳ ಕಾಲ ಗಣಪನನ್ನು ಪೂಜಿಸಿ, ನಾನಾ ರೀತಿಯ ನೈವೇದ್ಯಗಳನ್ನು ಅರ್ಪಿಸಿ, ಅವನನ್ನು ನೀರಿನಲ್ಲಿ ಮುಳುಗಿಸುವ ದಿನ ಬಂದಾಗ ಮಕ್ಕಳ ಗೋಳು, ರೋದನೆ, ಅಳು, ಹಠವನ್ನು ಹೇಳತೀರದು.

ಗಣಪತಿಯನ್ನು ನೀರಿನಲ್ಲಿ ಮುಳುಗಿಸುವ ಪದ್ಧತಿಯನ್ನು ಮಕ್ಕಳು ಉಗ್ರವಾಗಿ ವಿರೋಧಿಸುವುದು ಸಾಮಾನ್ಯವಾದಾಗ ಹೆತ್ತವರಿಗೆ ಹೇಳಿಕೊಳ್ಳಲಾಗದ ಸಂಕಟ. ಮಕ್ಕಳ ಮನಸ್ಸಿಗೆ ಸಮಾಧಾನವಾಗು ವಂತೆ ನಡೆದುಕೊಳ್ಳಬೇಕೋ ಅಥವಾ ಸಂಪ್ರದಾಯವನ್ನು ಪರಿಪಾಲಿಸಬೇಕೋ... ಕೊನೆಗೆ ಒಂದು ಉಪಾಯವನ್ನು ಕಂಡುಕೊಂಡರು. ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ದೊಡ್ಡ ಗಣಪ ನನ್ನು ತಂದರು.‌

ಜತೆಗೆ ಒಂದು ಪುಟ್ಟ ಮಣ್ಣಿನ ಗಣಪ. ಹಬ್ಬ ಮುಗಿದ ಮೇಲೆ ಮಣ್ಣಿನ ಗಣಪವನ್ನು ನೀರಿನಲ್ಲಿ ಬಿಟ್ಟರು. ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪನನ್ನು ಅಲಂಕಾರ ಮೂರ್ತಿಯನ್ನಾಗಿ‌ ಕಪಾಟಿನಲ್ಲಿಟ್ಟರು. ಕೆಲವು ಸಂಪ್ರದಾಯನಿಷ್ಠರು ಪೂಜೆ ಮಾಡಿದ ಗಣಪನನ್ನೇ ನೀರಿನಲ್ಲಿ ವಿಸರ್ಜಿಸಬೇಕು ಎಂದು ಪಟ್ಟು ಹಿಡಿದಾಗ, ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪನನ್ನು‌ ನೀರಿನಲ್ಲಿ ಬಿಟ್ಟರು. ‌ಆನಂತರವೇ ಬಂತು ಸಮಸ್ಯೆ! ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪನು ನೀರಿನಲ್ಲಿ ಕರಗಲೇ ಇಲ್ಲ!

ಇದನ್ನೂ ಓದಿ: Dr N Someswara Column: ಭೂಲೋಕದ ದೇವತೆಗಳೋ, ಯಮನ ಸೋದರರೋ ?

ಮುಂಬಯಿಯ ಕಡಲ ನೀರಿನಲ್ಲಿ ಮುಳುಗಿಸಿದ ಗಣಪನು ನೀರಿನಲ್ಲಿ ಕರಗದೆ, ಅವನ ಅವಶೇಷ ಗಳು ಮರುದಿನ ಸಮುದ್ರ ದಡದ ಮೇಲೆಲ್ಲ ಬಂದು ಬಿದ್ದಿರುವುದು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇದೇ ಅವಸ್ಥೆಯು ಕೋಲ್ಕತ್ತದ ನವರಾತ್ರಿಯ ದುರ್ಗೆಯ ಮೂರ್ತಿಗೂ ಒದಗುವುದನ್ನು ನಾವು ನೋಡಿದ್ದೇವೆ.

ಜಿಪ್ಸಮ್: ಏನಿದು ಪ್ಲಾಸ್ಟರ್ ಆಫ್ ಪ್ಯಾರಿಸ್? ಇದನ್ನು ಕನ್ನಡದಲ್ಲಿ ಏನೆಂದು ಕರೆಯುತ್ತಾರೆ? ಹೆಸರೇ ಸೂಚಿಸುವ‌ ಹಾಗೆ ಇದು ಪ್ಯಾರಿಸ್ ನಗರದಲ್ಲಿ ಮೊದಲ ಬಾರಿಗೆ ತಯಾರಿಸಲಾದ ಪ್ಲಾಸ್ಟರ್. ಪ್ಲಾಸ್ಟರನ್ನು ಕನ್ನಡದಲ್ಲಿ ಲೇಪನ, ಗಾರೆ, ಗಿಲಾವು, ಪಳಾಸಿ ಎಂದು ಕರೆಯಬಹುದು.

ಸರಳವಾಗಿ ‘ಪ್ಯಾರಿಸ್ ಗಿಲಾವು’ ಅಥವಾ ‘ಪ್ಯಾರಿಸ್ ನಗರಿಯ ಗಿಲಾವು’ ಎನ್ನಬಹುದು. ಈ ಪದ ಪ್ರಯೋಗವು ಅರ್ಥವನ್ನು ಥಟ್ಟನೆ ಬಿಟ್ಟುಕೊಡದ ಕಾರಣ, ಮೂಲ ‘ಪ್ಲಾಸ್ಟರ್ ಆಫ್‌ ಪ್ಯಾರಿಸ್’ ಅನ್ನೇ ಬಳಸಬಹುದು. ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಎನ್ನುವುದು ಒಂದು ರಾಸಾಯನಿಕ‌ ವಸ್ತುವಿನ ಹೆಸರು. ರಾಸಾಯನಿಕವಾಗಿ ಇದನ್ನು ‘ಕ್ಯಾಲ್ಷಿಯಂ ಸಲೇಟ್ ಡೈಹೈಡ್ರೇಟ್’ ಎಂದು ಕರೆಯುವರು.

ಇದನ್ನು ‘ಕ್ಯಾಲ್ಷೀಕೃತ ಜಿಪ್ಸಮ್’ ಅಥವಾ ‘ಜಿಪ್ಸಮ್ ಪ್ಲಾಸ್ಟರ್’ ಎಂದೂ ಕರೆಯುವರು. ಕ್ಯಾಲ್ಷಿಯಂ ಸಲ್ಫೇಟ್ ಡೈಹೈಡ್ರೇಟನ್ನು 150 ಡಿಗ್ರಿ ಸೆಲ್ಷಿಯಸ್‌ವರೆಗೆ ಕಾಯಿಸುವರು. ಆಗ ಜಿಪ್ಸಮ್‌ನಲ್ಲಿರುವ ನೀರಿನಂಶವು ಆವಿಯಾಗುತ್ತದೆ. ಉಳಿದುದನ್ನು ‘ಕ್ಯಾಲ್ಷಿಯಂ ಸಲ್ಫೇಟ್ ಹೆಮಿಹೈಡ್ರೇಟ್’ ಎನ್ನು ವರು. ಇದು ಪುಡಿರೂಪದಲ್ಲಿರುತ್ತದೆ. ಇದಕ್ಕೆ ನೀರನ್ನು ಬೆರೆಸಿ ಕಲಸಿದಾಗ ನಾದಿದ ಹಿಟ್ಟಿನಂಥ ಕಣಕವಾಗುತ್ತದೆ. ನೋಡನೋಡುತ್ತಿರುವಂತೆಯೇ ಈ ಕಣಕವು ಗಟ್ಟಿಯಾಗಿ ಬಿರುಸಾಗುತ್ತದೆ.

ಕಲ್ಲಿನಂತೆ ಗಟ್ಟಿಯಾಗುತ್ತದೆ. ನಂತರ ಇದನ್ನು ಒಡೆದೇ ಪುಡಿ ಮಾಡಬೇಕಾಗುತ್ತದೆ. ಹಾಗಾಗಿ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಮನುಷ್ಯರ ಮೂರ್ತಿಗಳನ್ನು‌ ಒಳಗೊಂಡಂತೆ ನಾನಾ ರೀತಿಯ ಕಲಾಕೃತಿಗಳನ್ನು ರಚಿಸುವ ಕಲೆಯು ಜಗದಾದ್ಯಂತ ಜನಪ್ರಿಯವಾಯಿತು. ಈ ‘ಪಿಒಪಿ’ಯು ಆಸ್ಪತ್ರೆ ಯನ್ನು ಪ್ರವೇಶಿಸಿ, ಮುರಿದ ಮೂಳೆಗಳನ್ನು ತ್ವರಿತವಾಗಿ ಮರು ಜೋಡಿಸಿ, ನವಜೀವನವನ್ನು ಆರಂಭಿಸುವುದಕ್ಕೆ ಇಂಬು ಕೊಟ್ಟ ಕಥೆಯು ರೋಚಕವಾಗಿದೆ.

Screenshot_1 ok

ಪ್ರಾಚೀನ ಈಜಿಪ್ಷಿಯನ್ನರು: ಪಿಒಪಿಯ ಮೊದಲ ಬಳಕೆಯನ್ನು ಕಂಡುಕೊಂಡವರು ಪ್ರಾಚೀನ ಈಜಿಪ್ಷಿಯನ್ ವೈದ್ಯರು (ಕ್ರಿ.ಪೂ.3000-ಕ್ರಿ.ಪೂ.300). ಈಜಿಪ್ಟಿನ ‘ಫೈಯುಮ್’ ಮತ್ತು ಸುತ್ತಮುತ್ತಲ ಪ್ರದೇಶದ ಮರಳುಗಾಡಿನಲ್ಲಿ ಜಿಪ್ಸಮ್ ನೈಸರ್ಗಿಕವಾಗಿ ದೊರೆಯುತ್ತದೆ. ಇದನ್ನು ಕಾಯಿಸಿ, ಪುಡಿ ಮಾಡಿ, ನೀರನ್ನು ಬೆರೆಸಿ ಬಳಸುವುದನ್ನು ಅವರು ತಿಳಿದಿದ್ದರು.

ಕ್ರಿ.ಪೂ.17ನೆಯ ಶತಮಾನದ ‘ಎಡ್ವಿನ್ ಪ್ಯಾಪಿರಸ್ ಸುರುಳಿ’ಯಲ್ಲಿ ‘ಅಸ್ಥಿಭಂಗ ಮತ್ತು ಅದರ ನಿರ್ವಹಣೆ’ಯನ್ನು ವಿವರಿಸುವಾಗ ಮೂಳೆ ಮುರಿದ ಭಾಗವನ್ನು ಚಲನರಹಿತವನ್ನಾಗಿಸಲು, ದಬ್ಬೆಗಳಿಗೆ ಲಿನನ್ ಬಟ್ಟೆಯನ್ನು ಸುತ್ತಿ, ಅದನ್ನು ಗೋಂದು ಮತ್ತು ಜಿಪ್ಸಮ್ ನಲ್ಲಿ ಮುಳುಗಿಸಿ, ಹೊರತೆಗೆದು ಗಟ್ಟಿಯಾದ ದಬ್ಬೆಯನ್ನು ಮುರಿದ ಅಂಗದ ಪಾರ್ಶ್ವಗಳಲ್ಲಿ ಇಟ್ಟು ಕಟ್ಟಬೇಕು ಎನ್ನುವ ವಿವರವು ದೊರೆಯುತ್ತದೆ.

ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಸಿ‌ ‘ಡೆಂಟಲ್ ಬ್ರಿಡ್ಜ್’ ರೂಪಿಸಿ (ಕೃತಕ ದಂತ) ಅದನ್ನು ಬಂಗಾರದ ತಂತಿಗಳಿಂದ ಬಿಗಿಯುತ್ತಿದ್ದರು. ರೋಗಿಯ ಮುರಿದ ಹಲ್ಲುಗಳನ್ನು, ಪಿಒಪಿಯನ್ನು ತುಂಬಿ ಸರಿಪಡಿಸುತ್ತಿದ್ದರು. ದವಡೆ ಮುರಿದರೆ, ಅದಕ್ಕೆ ಜಿಪ್ಸಮ್ ಲೇಪಿಸಿ ಸ್ಥಿರಗೊಳಿಸುತ್ತಿದ್ದರು. ಫ್ಯಾರೋ ಗಳ ಮಮ್ಮೀಕರಣದಲ್ಲಿ ಮೊದಲು ದೇಹವನ್ನು ನೇಟ್ರಮ್ ಮೊದಲಾದ ರಾಸಾಯನಿಕ ಗಳಿಂದ ಸಂಸ್ಕರಿಸಿ ಶುಷ್ಕಗೊಳಿಸುತ್ತಿದ್ದರು.

ನಂತರ ಇಡೀ ದೇಹವನ್ನು ಲಿನನ್ ಬಟ್ಟೆಯಿಂದ ಸುತ್ತಿ, ಅದರ ಮೇಲೆ ಜಿಪ್ಸಮ್ ಅನ್ನು ಲೇಪಿಸು ತ್ತಿದ್ದರು. ಆಗ ಶವಕ್ಕೆ ನಿರ್ದಿಷ್ಟ ಆಕಾರ ದೊರೆತು, ಮೂಲರೂಪವನ್ನು ಬಹುಪಾಲು ಹೋಲುತ್ತಿತ್ತು. ಹಾಗೆಯೇ ಶವವು ಯಾರದೆಂದು ಗುರುತಿಸಲು, ಜಿಪ್ಸಮ್ ಬಳಸಿ ಶವದ ಮುಖವಾಡವನ್ನು ರೂಪಿಸಿ, ಅದಕ್ಕೆ ಬಣ್ಣ ಹಚ್ಚಿ, ಮಮ್ಮೀಕೃತ ಫ್ಯಾರೋವಿನ ಮುಖಕ್ಕೆ ಹೊಂದಿಸುತ್ತಿದ್ದರು.

ಈಜಿಪ್ಷಿಯನ್ನರು ಪಿರಮಿಡ್ಡುಗಳ ಭಿತ್ತಿಯನ್ನು ರೂಪಿಸಲು ಇದೇ ಜಿಪ್ಸಮ್ ಅನ್ನು ಬಳಸುತ್ತಿದ್ದರು. ಜಗತ್ತಿನ ಪ್ರಥಮ ವೈದ್ಯ ಎಂದು ಹೆಸರಾದ ‘ಇಮ್‌ಹೋಟೆಪ್’ನ ಸಮಾಧಿಯಲ್ಲಿ, ಪಿಒಪಿಯಿಂದ ತಯಾರಿಸಿದ ಕೆಲವು ಪಾತ್ರೆಗಳು, ಕೆಲವು ಶಸವೈದ್ಯಕೀಯ ಉಪಕರಣಗಳು ಹಾಗೂ ಮಿಶ್ರಣಗಳು ದೊರೆತಿವೆ. ಕೆಲವು ಮಮ್ಮಿಗಳಲ್ಲಿರುವ ಮುರಿದ ಮೂಳೆಗಳು ಹದವಾಗಿ ಕೂಡಿಕೊಂಡಿರುವುದನ್ನು ನಾವು ನೋಡಬಹುದು. ಮೂಳೆಗಳು ಇಷ್ಟು ಸೊಗಸಾಗಿ ಕೂಡಿಕೊಂಡಿರಬೇಕಾದರೆ, ಅವರು ಬಹುಶಃ ಜಿಪ್ಸಮ್ ಅನ್ನು ಬಳಸಿಯೇ ಮುರಿದ ಮೂಳೆಗಳನ್ನು ಸ್ಥಿರಗೊಳಿಸಿರಬೇಕೆಂದು ಕಾಣುತ್ತದೆ.

ಗ್ರೀಕ್-ರೋಮನ್ನರು: ಗ್ರೀಕ್ ಮತ್ತು ರೋಮನ್ ವೈದ್ಯರು, ಪ್ರಾಚೀನ ಈಜಿಪ್ಷಿಯನ್ ವೈದ್ಯರು ಜಿಪ್ಸಮ್ ಅನ್ನು ಹೇಗೆ ವೈವಿಧ್ಯಮಯವಾಗಿ ಬಳಸಿದರೋ, ಹಾಗೆ ಬಳಸಿದ ಹಾಗೆ ಕಾಣುವುದಿಲ್ಲ. ಆಧುನಿಕ ವೈದ್ಯಕೀಯ ವಿಜ್ಞಾನದ ಪಿತಾಮಹ ಹಿಪ್ಪೋಕ್ರೇಟ್ಸ್ (ಕ್ರಿ.ಪೂ.460-ಕ್ರಿ.ಪೂ.370) ಮುರಿದ ಮೂಳೆಗಳನ್ನು ಸ್ಥಿರಗೊಳಿಸಲು ಲಿನೆನ್ ಬಟ್ಟೆಯನ್ನು ಮೇಣದಲ್ಲಿ ನೆನೆಯಿಸಿ, ಅದಕ್ಕೆ ಅಂಟನ್ನು ಬೆರೆಸಿ, ದೃಢವಾಗಿಸಿ ಮುರಿದ ಮೂಳೆಗಳ ಅಕ್ಕಪಕ್ಕದಲ್ಲಿಟ್ಟು ಲಿನೆನ್‌ನಿಂದ ಕಟ್ಟಿ ಸ್ಥಿರಗೊಳಿಸಬೇಕು ಎಂದಿದ್ದಾನೆ.

ರೋಮನ್ ವೈದ್ಯರು ಜೇಡಿಮಣ್ಣಿನೊಡನೆ ಹಿಟ್ಟು ಅಥವಾ ಸ್ಟಾರ್ಚ್ ಬೆರೆಸಿ ಮುರಿದ ಮೂಳೆ ಗಳನ್ನು ಸ್ಥಿರಗೊಳಿಸುತ್ತಿದ್ದರು. ಮೊದಲನೆಯ ಶತಮಾನದ ರೋಮನ್ ಮಿಲಿಟರಿ ವೈದ್ಯಕೀಯ ಕೈಪಿಡಿಯು ಮುರಿದ ಮೂಳೆಗಳನ್ನು ಸ್ಥಿರಗೊಳಿಸಲು ವೈನ್ ಮತ್ತು ಬೂದಿ ಬೆರೆತ ದ್ರಾವಣದಲ್ಲಿ ಮರದ ತೊಗಟೆಗಳನ್ನು ಮುಳುಗಿಸಿ ಕಟ್ಟಬೇಕು ಎನ್ನುತ್ತದೆ.

ಪ್ರಾಚೀನ ಭಾರತೀಯರು: ಅಸ್ಥಿಭಂಗ ಚಿಕಿತ್ಸೆಯ ಬಗ್ಗೆ ಸುಶ್ರುತ ಮಹರ್ಷಿಗಳು (ಕ್ರಿ.ಪೂ.600) ವಿಸ್ತೃತ ವಾಗಿ ವರ್ಣಿಸಿರುವರು. ಮೊದಲು ‘ಅವಪೀಡನ’, ಅಂದರೆ ಮೂಳೆಗಳನ್ನು ಹದವಾಗಿ ಎಳೆದು, ಮುರಿದ ಎರಡು ಭಾಗಗಳನ್ನು ಸ್ವಸ್ಥಾನದಲ್ಲಿ ಜೋಡಿಸುವುದು. ನಂತರ ‘ಬಂಧನ’, ಎಂದರೆ ಮುರಿದ ಮೂಳೆಗಳನ್ನು ಬಂಧನಕ್ಕೆ ಒಳಪಡಿಸುವುದು, ಅಂದರೆ ಅಲುಗದಂತೆ ಸ್ಥಿರಗೊಳಿಸುವುದು.

ಕೊನೆಯಲ್ಲಿ ‘ಭೃಂಗಕ’, ಅಂದರೆ ಮುರಿದ ಮೂಳೆಗಳು ಬೇಗ ಕೂಡಿಕೊಳ್ಳಲು ಅಗತ್ಯವಾದ ಆಹಾರ ಮತ್ತು ಔಷಧಗಳನ್ನು ನೀಡುವುದು (ಅಸ್ಥಿಭಗ್ನೇಷು ತು ಸುಪಿಂಡೀಕೃತ್ಯ ಸ್ಥಿರೀಕೃತ್ಯ ಚ ಯಥಾ ಸುಖಮ್ ಬಂಧನಂ ಕಾರಯೇತ್). ಸುಶ್ರುತ ಮಹರ್ಷಿಗಳು ಜಿಪ್ಸಮ್ ಬಗ್ಗೆ ಪ್ರಸ್ತಾಪಿಸಿಲ್ಲ.

ಮುರಿದ ಮೂಳೆಗಳನ್ನು ಸ್ಥಿರವಾಗಿಸಲು ದಬ್ಬೆಗಳನ್ನು ಔಷಧೀಯ ಅಂಟು ಮತ್ತು ಮೇಣದಲ್ಲಿ ಅದ್ದಿ ಆಯಕಟ್ಟಿನ ಸ್ಥಳದಲ್ಲಿಟ್ಟು, ಅದರ ಮೇಲೆ ‘ಗೈರಿಕಾ’ ಎಂಬ ಕೆಂಪುಮಣ್ಣು ಮತ್ತು ‘ಸುಣ್ಣ’ ವನ್ನು ಪುಡಿ ಮಾಡಿ ನೀರಿನಲ್ಲಿ ಬೆರೆಸಿ ಲೇಪಿಸಿದರೆ ಅದು ಕಲ್ಲಿನಂತೆ ಗಟ್ಟಿಯಾಗಿ ಮೂಳೆಗಳನ್ನು ಸ್ಥಿರವಾಗಿಸುತ್ತಿತ್ತು.

ಮಧ್ಯಯುಗ: ಯುರೋಪಿನಲ್ಲಿ ಮಧ್ಯಯುಗವು ಕ್ರಿ.ಶ.800-ಕ್ರಿ.ಶ.1500ರವರೆಗೆ ಕಂಡುಬಂದಿತು. ಈ ಅವಧಿಯಲ್ಲಿ ಯುರೋಪಿಯನ್ ಹಾಗೂ ಇಸ್ಲಾಮ್ ವೈದ್ಯರು ಜಿಪ್ಸಮ್ ಬಳಕೆಯನ್ನು ಅರ್ಥ ಮಾಡಿಕೊಂಡಿದ್ದರು. ಚರ್ಚ್ ಮತ್ತು ಕೆಥೆಡ್ರಲ್‌ಗಳ ನಿರ್ಮಾಣದಲ್ಲಿ ಜಿಪ್ಸಮ್ ಅನ್ನು ವಿಪುಲವಾಗಿ ಬಳಸಿದರು. ಆದರೆ ವೈದ್ಯಕೀಯವಾಗಿ ಜಿಪ್ಸಮ್ ಅನ್ನು ಬಳಸಿದ ಉದಾಹರಣೆಗಳು ದೊರೆಯುವುದಿಲ್ಲ.

ನವೋದಯ: 18ನೆಯ ಶತಮಾನ. ನವೋದಯದ ಕಾಲದಲ್ಲಿ ಎಲ್ಲ ಜ್ಞಾನಶಾಖೆಗಳು ಅಭಿವೃದ್ಧಿ ಹೊಂದಿದ ಹಾಗೆ ರಸಾಯನ ವಿಜ್ಞಾನವೂ ಅಭಿವೃದ್ಧಿಹೊಂದಿತು. ಆಂಟಾಯ್ನ್ ಫ್ರಾಂಕೋಯಿಸ್ ದಿ ಫ್ಯೊರೋಕ್ರಾಯ್ (1755-1809) ಎಂಬ ರಸಾಯನ ವಿಜ್ಞಾನಿಯು, ವಿಶ್ವವಿಖ್ಯಾತ ರಸಾಯನ ವಿಜ್ಞಾನಿಯಾದ ಆಂಟಾಯ್ನ್ ಲವಾಸಿಯೆ (1743-1794), ಗಯ್ಟನ್ ದ ಮೋರ್ವೆ (1737-1816) ಮತ್ತು ಕ್ಲಾಡ್ ಬೆರ್ಥೋಲೆಟ್ (1748-1822) ಮುಂತಾದ ಪ್ರಖ್ಯಾತ ವಿಜ್ಞಾನಿಗಳ ಸಹಚರನಾಗಿ ಕೆಲಸ ಮಾಡುತ್ತಿದ್ದ. ಈತನು ಜಿಪ್ಸಮ್ಮಿನ ರಾಸಾಯನಿಕ ಸಂಯೋಜನೆಯನ್ನು ಪತ್ತೆ ಹಚ್ಚಿದ.

ಅದು ಕೈಗಾರಿಕಾ ಕ್ರಾಂತಿಯ ಕಾಲವಲ್ಲವೇ! ಹಾಗಾಗಿ ಜಿಪ್ಸಮ್ ಅನ್ನು ಬೃಹತ್ ಪ್ರಮಾಣದಲ್ಲಿ ತಯಾರಿಸುವ ಕಾರ್ಖಾನೆಗಳು ಯುರೋಪಿನಾದ್ಯಂತ ತಲೆಯೆತ್ತಿದವು. ಕಟ್ಟಡಗಳ ನಿರ್ಮಾಣದಲ್ಲಿ ಜಿಪ್ಸಮ್ ಒಂದು ಪ್ರಮಾಣಬದ್ಧವಾದ ಕಚ್ಚಾ ಸಾಮಗ್ರಿಯಾಗಿ ಪ್ರಸಿದ್ಧವಾಯಿತು.

ಮಾತಿಜ್ಸೇನ್: ಪಿಒಪಿಯ ಮೊದಲ ಅಧಿಕೃತ ವೈದ್ಯಕೀಯ ಉಪಯೋಗವನ್ನು ಡಚ್ ಮಿಲಿಟರಿ ಸರ್ಜನ್ ಆಂಟೋನಿಯಸ್ ಮಾತಿಜ್ಸೆನ್ (1805-1878) ಕಂಡುಕೊಂಡ. 1851. ಇವನು ಬ್ಯಾಂಡೇಜ್ ಬಟ್ಟೆಯನ್ನು ಪಿಒಪಿಯ ಗಂಜಿಯಂಥ ದ್ರಾವಣದಲ್ಲಿ ನೆನೆಯಿಸಿ, ಅದನ್ನು ಮುರಿದ ಮೂಳೆಯ ಭಾಗಕ್ಕೆ ಸಾವಕಾಶವಾಗಿ ಸುತ್ತಿದ. ಅದರ ಮೇಲೆ ಮತ್ತಷ್ಟು ಗಂಜಿಯನ್ನು ಲೇಪಿಸಿದ.

ನೋಡನೋಡುತ್ತಿರುವಂತೆಯೇ ಆ ಜಿಪ್ಸಮ್ ಪಟ್ಟಿಯು ಕಲ್ಲಿನಂತೆ ಗಟ್ಟಿಯಾಯಿತು. ಇದುವೇ ಇಂದಿಗೂ ಬಳಕೆಯಲ್ಲಿರುವ ಪ್ಲಾಸ್ಟರ್ ಕಟ್ಟಿನ ಮೊತ್ತಮೊದಲ ಪ್ರಯೋಗ. ಅಂದಿನಿಂದ, ಮುರಿದ ಮೂಳೆಗಳನ್ನು ಸ್ಥಿರಗೊಳಿಸಲು ಪಿಒಪಿ ಲೇಪನವನ್ನು ಹಾಕುವುದು ಒಂದು ಪ್ರಮಾಣಬದ್ಧವಾದ ಚಿಕಿತ್ಸೆಯಾಗಿ ಹೆಸರನ್ನು ಗಳಿಸಿತು (ಈ ಯಶಸ್ವಿ ಪ್ರಯೋಗ ವನ್ನು ಮೊದಲ ಬಾರಿಗೆ ಪ್ಯಾರಿಸ್ಸಿನಲ್ಲಿ ಮಾಡಿದ ಕಾರಣ ಜಿಪ್ಸಮ್ಮಿಗೆ ಪಿಒಪಿ ಎಂಬ ಹೆಸರು ಬಂದಿತು).

1853ರಲ್ಲಿ ಜರ್ಮನಿಯ ಒಂದು ವೈದ್ಯಕೀಯ ನಿಯತಕಾಲಿಕವು ಈ ವಿಧಾನವನ್ನು ‘ಅಸ್ಥಿಭಂಗ ಚಿಕಿತ್ಸೆಯಲ್ಲಿನ ಒಂದು ಕ್ರಾಂತಿಕಾರಕ ಹೆಜ್ಜೆ’ ಎಂದು ಕರೆಯಿತು. ‘ಇದೊಂದು ಅತ್ಯಂತ ಸರಳವಾದ, ಆದರೆ ಅತ್ಯಂತ ಪರಿಣಾಮಕಾರಿಯಾದ ಚಿಕಿತ್ಸಾ ವಿಧಾನ’ ಎಂದು ಹೊಗಳಿತು.

ಕ್ರಿಮಿಯನ್ ಯುದ್ಧವು 1853-1856ರವರೆಗೆ ನಡೆಯಿತು. ಈ ಯುದ್ಧದಲ್ಲಿ ಅನೇಕ ಸೈನಿಕರು ಸಂಕೀರ್ಣ ಮೂಳೆ ಮುರಿತಗಳಿಗೆ ತುತ್ತಾಗಿದ್ದರು. ಆಗ ಬ್ರಿಟಿಷ್ ಶುಶ್ರೂಷಕಿ ಫ್ಲಾರೆನ್ಸ್ ನೈಟಿಂಗೇಲ್ (1820-1910), ಮಾತಿಜ್ಸೇನ್ ಅವರಿಗೆ ಕರೆ ಕಳುಹಿಸಿದಳು. ಮೂಳೆ ಮುರಿತಕ್ಕೆ ಒಳಗಾದ ಎಲ್ಲ ಸೈನಿಕ ರಿಗೆ ಸ್ವಯಂ ಮುಂದೆ ನಿಂತು ಪಿಒಪಿ ಕಟ್ಟನ್ನು ಹಾಕಲು ನೆರವಾದಳು. ಅದುವರೆಗೂ ಬಳಕೆ ಯಲ್ಲಿದ್ದ ವಿವಿಧ ರೀತಿಯ ಕಟ್ಟುಗಳಿಗಿಂತ, ಈ ಹೊಸ ಕಟ್ಟು ಅತ್ಯಂತ ಪರಿಣಾಮಕಾರಿಯಾಗಿ ಗುಣಪಡಿಸುತ್ತಿದ್ದುದನ್ನು ದಾಖಲಿಸಿದಳು.

ವೈವಿಧ್ಯ: ಕ್ರಿ.ಶ.1800-ಕ್ರಿ.ಶ.1940ರವರೆಗಿನ ಅವಧಿಯನ್ನು ‘ಪಿಒಪಿ ಸುವರ್ಣಕಾಲ’ ಎಂದು ಕರೆಯು ವುದುಂಟು. ಪಿಒಪಿಯನ್ನು ಅಸ್ಥಿಭಂಗವನ್ನು ಸ್ಥಿರಪಡಿಸುವುದರಲ್ಲಿ ಬಳಸುವುದರ ಜತೆಯಲ್ಲಿ, ಜನ್ಮದತ್ತ ಅಂಗಾಲು ವಿರೂಪಗಳನ್ನು ಸರಿಪಡಿಸಲೂ ಬಳಸಲಾರಂಭಿಸಿದರು. ಪ್ರಧಾನ ಶಸ್ತ್ರಚಿಕಿತ್ಸೆ ಗಳಾದ ಮೇಲೆ, ಗಾಯವು ಬೇಗ ಗುಣವಾಗಲೆಂದು ಗಾಯವಾದ ಭಾಗವನ್ನು ಸ್ಥಿರಗೊಳಿಸಲು ಪಿಒಪಿಯನ್ನು ಪರಿಣಾಮಕಾರಿಯಾಗಿ ಬಳಸಿದರು.

ಅಸ್ಥಿಛೇದನ ಅಥವಾ ಆಸ್ಟಿಯಾಟಮಿಯಲ್ಲಿ ಮೂಳೆಗಳನ್ನು ಛೇದಿಸುವುದುಂಟು, ಇಲ್ಲವೇ ಮೂಳೆಯ ಅಂಶವನ್ನು ಸೇರಿಸುವುದುಂಟು, ಇಲ್ಲವೇ ಮೂಳೆಗಳಿಗೆ ಹೊಸ ಆಕಾರವನ್ನು ನೀಡು ವುದುಂಟು. ಕೀಲು ಗಳ ಬೆಸುಗೆ ಅಥವಾ ಜಾಯಿಂಟ್ ಫ್ಯೂಶನ್ ಶಸ್ತ್ರಚಿಕಿತ್ಸೆಗಳು ಸಹ ಪಿಒಪಿ ಕಟ್ಟಿನ ಕಾರಣ ಯಶಸ್ವಿಯಾಗಲಾರಂಭಿಸಿದವು.

ಭಾರತದ ಮುಂಬಯಿಯ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆ ಹಾಗೂ ವೆಲ್ಲೂರಿನ ಕ್ರಿಶ್ಚಿ ಯನ್ ಮೆಡಿಕಲ್ ಕಾಲೇಜಿನಲ್ಲಿ ಪಿಒಪಿ ಕಟ್ಟುಗಳನ್ನು ಹಾಕುವ ಯಶಸ್ವಿ ಪ್ರಯೋಗಗಳು ನಡೆದವು. ರಾಜಸ್ತಾನವು ಜಿಪ್ಸಮ್ ಭರಿತ ರಾಜ್ಯವಾಗಿದ್ದುದರಿಂದ ದೇಶದ ಅಗತ್ಯಕ್ಕೆ ಬೇಕಾಗುವಷ್ಟು ಜಿಪ್ಸಮ್ ಅನ್ನು ಪೂರೈಸುತ್ತಿದೆ.

ಆಧುನಿಕತೆ: ಈಗ ಮುರಿದ ಮೂಳೆಯನ್ನು ಸ್ಥಿರಗೊಳಿಸಲು ಪಿಒಪಿಯನ್ನು ಹಾಕುವ ಪ್ರಸಂಗಗಳು ಕಡಿಮೆ. 1970ರ ದಶಕದಲ್ಲಿ ‘ಫೈಬರ್ ಗ್ಲಾಸ್ ಕ್ಯಾಸ್ಟಿಂಗ್’ ವಸ್ತುಗಳು ದೊರೆಯಲಾರಂಭಿಸಿದವು. ಇದು ಪಿಒಪಿ ಕಟ್ಟಿಗಿಂತ ಹಗುರವಾಗಿತ್ತು. ನೀರಿನಲ್ಲಿ ನೆನೆಯುತ್ತಿರಲಿಲ್ಲ. ಹೆಚ್ಚು ದಿನ ಬಾಳಿಕೆ ಬರುತ್ತಿತ್ತು. ಆದರೆ ಇವು ಸ್ವಲ್ಪ ದುಬಾರಿ. ಹಾಗಾಗಿ ಇಂದಿಗೂ ಗ್ರಾಮೀಣ ಭಾರತದಲ್ಲಿ ಪಿಒಪಿ ಕಟ್ಟುಗಳನ್ನು ಹಾಕುವ ಪದ್ಧತಿಯಿದೆ.

ಪ್ಲಾಸ್ಟರ್ ಆಫ್ ಪ್ಯಾರಿಸ್ ಕೆಲವು ಅವಗುಣಗಳನ್ನು‌ ಹೊಂದಿದೆ. ಮೊದಲನೆಯದು ಇದು ನೀರಿನಲ್ಲಿ ಕರಗುವುದಿಲ್ಲ. ಹಾಗಾಗಿ ಕೈಕಾಲು-ಮುಖ-ಮೂತಿ ಮುರಿದ ಗಣಪನು, ಕಾಳಿಯು ಸಮುದ್ರ ದಡದಲ್ಲಿ ಅನಾಥವಾಗಿ ಬೀಳಬೇಕಾದ ಅನಿವಾರ್ಯತೆಯೊದಗಿದೆ. ಪಿಒಪಿ ಧೂಳು ಅತ್ಯಂತ ಸೂಕ್ಷ್ಮ ಕಣ ಗಳನ್ನು ಉಳ್ಳಂಥದ್ದು. ಇದು ಶ್ವಾಸಕೋಶಗಳ ಒಳಗೆ ಹೋದರೆ ತೊಂದರೆಯಾಗುತ್ತದೆ. ಪಿಒಪಿ ಯನ್ನು ಸಾವಕಾಶವಾಗಿ ಹಾಕಬೇಕು. ಬೇಗ ಬೇಗ ಹಾಗೂ ದಪ್ಪನೆಯ ಲೇಪನವನ್ನು ಹಾಕಿದರೆ, ಉಷ್ಣತೆಯು ತೀವ್ರವಾಗಿ, ಅದು ಅಂಗವನ್ನೇ ಸುಡುವ ಸಾಧ್ಯತೆಯಿರುತ್ತದೆ. ಅದರಲ್ಲೂ ಮಕ್ಕಳು ಮತ್ತು ವೃದ್ಧರಿಗೆ ಕಟ್ಟು ಹಾಕುವಾಗ ಅತೀವ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ.