Congress guarantees: ಗ್ಯಾರಂಟಿಗಳಿಂದ ಬಡವರಲ್ಲಿ ಸ್ವಾಭಿಮಾನ, ಆತ್ಮವಿಶ್ವಾಸ ಹೆಚ್ಚಿದೆ: ಸಿಎಂ
Congress guarantees: ಸದನದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಜನರ ಕಲ್ಯಾಣಕ್ಕೆ ಅಧಿಕಾರ ಬಳಕೆಯಾಗಬೇಕು ಎನ್ನುವ ಕಾಳಜಿಯ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇವೆಲ್ಲವೂ ವಾಸ್ತವ ಕಾರ್ಯಕ್ರಮಗಳಾಗಿರುವುದರಿಂದ ರಾಜ್ಯಪಾಲರು ಗ್ಯಾರಂಟಿಗಳನ್ನು ಶ್ಲಾಘಿಸಿದ್ದಾರೆ ಎಂದು ತಿಳಿಸಿದ್ದಾರೆ.


ಬೆಂಗಳೂರು: ಗ್ಯಾರಂಟಿ ಯೋಜನೆಗಳಿಂದ ಬಡವರಲ್ಲಿ ಆತ್ಮವಿಶ್ವಾಸ ಹೆಚ್ಚಿದ್ದು ಮಾತ್ರವಲ್ಲ, ಸ್ವಾಭಿಮಾನ ಹೆಚ್ಚುತ್ತಿದೆ. ಜನರು ಸಾಮಾಜಿಕವಾಗಿ, ಆರ್ಥಿಕವಾಗಿ ನಿರ್ಭಯವಾಗಿ, ಅವರ ಬದುಕು ಸುಧಾರಣೆಯಾಗಿದೆ. ಸಮಾಜದಲ್ಲಿ ಸಮಾನತೆಯ ಭಾವ ಮೂಡುತ್ತಿದೆ. ನಮ್ಮ ಕಾರ್ಯಕ್ರಮಗಳನ್ನು ವಿಶೇಷವಾಗಿ ಗ್ಯಾರಂಟಿ ಯೋಜನೆಗಳನ್ನು (Congress guarantees) ಮಾಧ್ಯಮಗಳು, ಜನರು, ವಿಶ್ವವಿದ್ಯಾನಿಲಯಗಳು, ವಿದ್ವಾಂಸರು ಶ್ಲಾಘಿಸಿದ್ದಾರೆ. ಕ್ಯಾಮರೂನ್ ದೇಶದ ಸುಲೇಮಾನ್ ಹ್ಯಾಂಕ್, ವಿಶ್ವಸಂಸ್ಥೆ ಜನರಲ್ ಬಾಡಿ ಅಧ್ಯಕ್ಷರು ಗ್ಯಾರಂಟಿಗಳನ್ನು ಒಪ್ಪಿಕೊಂಡಿದ್ದಾರೆ, ಮೆಚ್ಚಿಕೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸದನದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ನಮ್ಮ ಸರ್ಕಾರ ಜನರ ಆಶೀರ್ವಾದದಿಂದ 2023ರ ಮೇ 22 ರಂದು ಅಧಿಕಾರಕ್ಕೆ ಬಂದಿತು. ನಮ್ಮ ಪಕ್ಷ 136 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದು 2 ವರ್ಷಗಾಳಾಗುತ್ತಿದೆ. ಇದು ಸರ್ಕಾರ ಬಂದ ನಂತರ ರಾಜ್ಯಪಾಲರ ಎರಡನೇ ಭಾಷಣ. ಅಧಿಕಾರಕ್ಕಾಗಿ ಅಧಿಕಾರ ಮಾಡುವುದಲ್ಲ. ಜನರ ಕಲ್ಯಾಣಕ್ಕೆ ಅಧಿಕಾರ ಬಳಕೆಯಾಗಬೇಕು ಎನ್ನುವ ಕಾಳಜಿಯ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇವೆಲ್ಲವೂ ವಾಸ್ತವ ಕಾರ್ಯಕ್ರಮಗಳಾಗಿರುವುದರಿಂದ ರಾಜ್ಯಪಾಲರು ಶ್ಲಾಘಿಸಿದ್ದಾರೆ.
ಅಶೋಕ್ ಹಾಗೂ ಸುನೀಲ್ ಕುಮಾರ್ ಅವರು ಮಾತನಾಡುವಾಗ ಕರಿಮಣಿ ಮಾಲೀಕ ಯಾರು ಎಂದು ಪ್ರಶ್ನಿಸಿದ್ದಾರೆ. ನನ್ನ ಹಾಗೂ ಬಹುತೇಕ ಸದಸ್ಯರ ಪ್ರಕಾರ ಇದು ಅರ್ಥಹೀನ ಮಾತುಗಳು. ನಾನು ಹಿರಿಯ ಸದಸ್ಯರಿಂದ ಇಂಥ ಮಾತುಗಳನ್ನು ನಿರೀಕ್ಷೆ ಇರಲಿಲ್ಲ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಕರಿಮಣಿ ಮಾಲೀಕ ಯಾರು ಎನ್ನುವುದು ಕೀಳು ಅಭಿರುಚಿಯ ಪ್ರಯೋಗ.
ನಿಮ್ಮ ಪಕ್ಷದಲ್ಲಿ ಭಿನಾಭಿಪ್ರಯಗಳಿಲ್ಲವೇ? ನಿಮ್ಮ ಭಿನ್ನಾಭಿಪ್ರಾಯಗಳು ಯಾವ ಮಟ್ಟಕ್ಕೆ ಹೋಗಿವೆ ಎಂಬ ಚರ್ಚೆ ಬೇಡ. ಅಭಿರುಚಿ ಹೀನ ಎಂದಷ್ಟೇ ಹೇಳಿದ್ದೇನೆ. ನಿಮಗೆ ಸರಿಯಿದ್ದರೆ ಓಕೆ. ಜನ ಅಂತಿಮವಾಗಿ ತೀರ್ಮಾನ ಮಾಡುತ್ತಾರೆ ಎಂದು ಕಿಡಿಕಾರಿದರು.
ಗ್ಯಾರಂಟಿಗಳ ಬಗ್ಗೆ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳು ಶ್ಲಾಘಿಸಿ ಬರೆದಿರುವುದು ಸದನದ ಗಮನದಲ್ಲಿದ್ದರೂ ಬಿಜೆಪಿಯವರು ಸುಳ್ಳು ಹೇಳಿದ್ದಾರೆ. 2020 ರಲ್ಲಿ ನಾವು ಗ್ಯಾರಂಟಿಗಳನ್ನು ಘೋಷಿಸಿದಾಗಲೂ ಪತ್ರಿಕೆಗಳು ಶ್ಲಾಘಿಸಿ ಬರೆದಿವೆ. ನೀವೆಲ್ಲಾ ಇದನ್ನು ವಿರೋದಿಸಿದ್ದೀರಿ. ರಾಜ್ಯ ಸರ್ಕಾರ ಗ್ಯಾರಂಟಿ ಜಾರಿ ಮಾಡಿದರೆ ಆರ್ಥಿಕವಾಗಿ ದಿವಾಳಿಯಾಗುತ್ತದೆ. ಅಭಿವೃದ್ಧಿಗೆ ಹಣವಿರುವುದಿಲ್ಲ ಎಂದು ನೀವು ಮಾತ್ರವಲ್ಲ ದೇಶದ ಪ್ರಧಾನಿಗಳು ಕೂಡ ಟೀಕಿಸಿದ್ದರು. ಆದರೆ ನೀವೇ ಲೋಕಸಭಾ ಚುನಾವಣೆಯಲ್ಲಿ ಮೋದಿ ಕಿ ಗ್ಯಾರಂಟಿ ಎಂದು ಘೋಷಣೆ ಮಾಡಿದ್ದೀರಿ. ಗ್ಯಾರಂಟಿಗಳನ್ನು ನಿರಂತರವಾಗಿ ವಿರೋಧಿಸಿದವರೆ ಈ ಕೆಲಸ ಮಾಡಿದ್ದೀರಿ. ಅನೇಕ ರಾಜ್ಯಗಳಲ್ಲಿ ಇದನ್ನು ನಕಲು ಮಾಡಿದ್ದೀರಿ ಎಂದು ಕುಟುಕಿದರು.
ಬಿಜೆಪಿಯವರು ವ್ಯಕ್ತಿ ಪೂಜೆಯನ್ನು ಕಲಿತಿದ್ದಾರೆ. ನಾವು ವ್ಯಕ್ತಿ ಪೂಜೆ ಮಾಡುವುದಿಲ್ಲ. ಆದ್ದರಿಂದ ಸಿದ್ದರಾಮಯ್ಯ ಗ್ಯಾರಂಟಿ ಎಂದು ಘೋಷಣೆ ಮಾಡಿಲ್ಲ. ನಾವು ರಾಜ್ಯದ ಜನರ ಗ್ಯಾರಂಟಿ ಎಂದು ಘೋಷಿಸಿದ್ದೇವೆ.
ಬಿಜೆಪಿ ಆಡಳಿತದ ರಾಜ್ಯಗಳಲ್ಲೂ ಗ್ಯಾರಂಟಿ ನಕಲು
ಎನ್.ಡಿ.ಎ - ಬಿಜೆಪಿ ಸರ್ಕಾರದ ಸಚಿವರುಗಳು, ಅಧಿಕಾರಿಗಳು ನನ್ನೊಂದಿಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚಿಸಿದ್ದು ಏಕೆ ಪ್ರಶ್ನಿಸಿರುವ ಸಿಎಂ, ಕೇಂದ್ರ ಸರ್ಕಾರದ Indian institute of Public Administration ಸಂಸ್ಥೆಯ ಅಧ್ಯಕ್ಷರಾದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಹಾಗೂ ಸಚಿವ ಜಿತೇಂದ್ರ ಸಿಂಗ್ ಪ್ರಶಂಸೆಯ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕೊಟ್ಟಿದ್ದಾರೆ. ಇಲ್ಲಿ ನೀವು ವಿರೋಧಿಸುತ್ತಿದ್ದೀರಿ, ಏನಿದು? ಗ್ಯಾರಂಟಿ ಯೋಜನೆಗಳನ್ನು ನೀವು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ನಕಲು ಮಾಡಿದ್ದೀರಿ. ವಿರೋಧ ಮಾಡುವುದಾದರೆ ನಕಲು ಏಕೆ ಮಾಡಬೇಕಿತ್ತು? ಸತ್ಯ ಯಾವಾಗಲೂ ಕಹಿಯಾಗಿರುತ್ತದೆ. ನಾವು ವಾಸ್ತವವನ್ನು ಹೇಳುತ್ತಿದ್ದೇವೆ.
ದಿನಾಂಕ 3-1-2025 ರಂದು ಚಂದ್ರ ಬಾಬು ನಾಯ್ದು ಅವರ ಸರ್ಕಾರದ ಮಂತ್ರಿಗಳು ಹಾಗೂ ಅಧಿಕಾರಿಗಳು ಗ್ಯಾರಂಟಿ ಯೋಜನೆಗಳ ಕುರಿತು ಅಧ್ಯಯನ ಮಾಡಿ ಹೋಗಿದ್ದಾರೆ. ಸಚಿವ ರಾಮಲಿಂಗಾರೆಡ್ಡಿ ಹಾಗೂ ನನ್ನನ್ನು ಭೇಟಿಯಾಗಿ ಚರ್ಚಿಸಿದ್ದಾರೆ. 2-2-2025 ರಂದು ಮಹಾರಾಷ್ಟ್ರದ ಸಾರಿಗೆ ಸಚಿವರಾದ ಪ್ರತಾಪ್ ಸರ್ನಾಯಕ್ ಶಕ್ತಿ ಯೋಜನೆ ಬಗ್ಗೆ ಚರ್ಚಿಸಿ ತೆರಳಿದ್ದಾರೆ. ಅಲ್ಲಿರುವುದು ಬಿಜೆಪಿ ಸರ್ಕಾರ. 5-3-2025 ರಂದು ಕೇರಳದಿಂದ ಸಚಿವರು ಬಂದು ಅಧ್ಯಯನ ಮಾಡಿ ಹೋದರು. ಇವರೆಲ್ಲಾ ಸುಮ್ಮನೆ ಬಂದು ಹೋಗುತ್ತಾರೆಯೇ?
ಕೇಂದ್ರ ಸರ್ಕಾರದ Indian institute of Public Administration ಸಂಸ್ಥೆಯ ಅಧ್ಯಕ್ಷರಾದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಹಾಗೂ ಸಚಿವ ಜಿತೇಂದ್ರ ಸಿಂಗ್ ಪ್ರಶಂಸೆಯ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕೊಟ್ಟಿದ್ದಾರೆ. ಈ ಎರಡೂ ವರದಿಗಳು ಸರ್ಕಾರಕ್ಕೆ ಉಪಯುಕ್ತವಾಗಿದ್ದರೂ ಮೊಸರಲ್ಲಿ ಕಲ್ಲು ಹುಡುಕುತ್ತಿದ್ದೀರಿ. ನಿಮಗೆ ಎಷ್ಟು ಹುಡುಕಿದರೂ ಮೊಸರಲ್ಲಿ ಕಲ್ಲು ಸಿಗುವುದಿಲ್ಲ.
ನೀವು ಮಾಡುತ್ತಿರುವುದು ಇದೊಂದು ರಾಜಕೀಯ ಪ್ರೇರಿತ ಕೆಲಸ. ಈಗಲಾದರೂ ಸಕಾರಾತ್ಮಕವಾಗಿ ಟೀಕೆ ಮಾಡಬೇಕೆಂದು ಮನವಿ ಮಾಡುತ್ತೇನೆ. ಸರ್ಕಾರದ ತಪ್ಪುಗಳಿದ್ದರೆ, ಸರ್ಕಾರದ ಖಜಾನೆಗೆ ತೊಂದರೆಯಿದ್ದರೆ ಆಡಳಿತ ಪಕ್ಷದವರ ಗಮನಕ್ಕೆ ತರುವುದು ವಿರೋಧ ಪಕ್ಷದ ಕೆಲಸ. ಆ ಕೆಲಸ ಮಾಡಬೇಕು.
ಗ್ಯಾರಂಟಿ ಯೋಜನೆಗಳಿಗೆ ಫೆಬ್ರವರಿ ವರೆಗೆ ನಮ್ಮ ಸರ್ಕಾರ ಬರೋಬ್ಬರಿ ₹76,509 ಕೋಟಿ ನೀಡಲಾಗಿದೆ. ಇದು ಸತ್ಯ ಎನ್ನುವುದು ಸದನದಲ್ಲಿರುವ ಪ್ರತಿಯೊಬ್ಬರಿಗೂ ಸ್ಪಷ್ಟವಾಗಿ ಗೊತ್ತಿದೆ. ನಮ್ಮ ಸರ್ಕಾರ ದಿವಾಳಿಯಾಗಿದ್ದರೆ 76,509 ಕೋಟಿ ಕೊಡಲು ಸಾಧ್ಯವಿತ್ತೆ ಲೋಕಸಭಾ ಚುನಾವಣೆ ನಂತರದಲ್ಲಿ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ನಿಲ್ಲಿಸಿಬಿಡತ್ತೆ ಎಂದು ಸುಳ್ಳು ಆರೋಪ, ಅಪಪ್ರಚಾರ ಮಾಡಿದ್ರಲ್ಲಾ, ನಿಂತೋಯ್ತಾ? ರಾಜ್ಯದ ಜನರನ್ನು ಯಾವಾಗಲೂ ಮೂರ್ಖರನ್ನಾಗಿಸಲು ಪ್ರಯತ್ನಿಸಿದರೆ ಸಾಧ್ಯವಿಲ್ಲ.
ಲೋಕಸಭಾ ಚುನಾವಣೆ ನಂತರದಲ್ಲಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುವುದು ಎಂದು ಸುಳ್ಳು ಆರೋಪ, ಅಪಪ್ರಚಾರ ಮಾಡಿದರು. ಜನರಿಗೆ ಈ ಕಾರ್ಯಕ್ರಮಗಳ ಸತ್ಯಾಸತ್ಯತೆ ಗೊತ್ತಿದೆ. ಫಲಾನುಭವಿಗಳಿಗೆ ಇದರಿಂದ ಪ್ರಯೋಜನವಾಗಿದೆ. ಜೂನ್ 11, 2023 ರಿಂದ 410 ಕೋಟಿ ಬಾರಿ ಮಹಿಳೆಯರು ಶಕ್ತಿ ಯೋಜನೆಯಡಿ ಓಡಾಡಿದ್ದಾರೆ. ನೀವು ಎಷ್ಟೇ ಸುಳ್ಳು ಹೇಳಿದರೂ ಉಪಚುನಾವಣೆಯಲ್ಲಿ ಮೂರು ಸ್ಥಾನಗಳನ್ನು ಸೋತಿದ್ದೀರಿ ಎಂದರು.
ನಾವು ಬಿಜೆಪಿಯವರಂತೆ ಕೇವಲ 10% ಜನರ ಕೈಹಿಡಿದು, ಶೇ 90% ರಷ್ಟು ಜನರನ್ನು ಕೈ ಬಿಟ್ಟಿಲ್ಲ. 2024-25 ಕ್ಕೆ ₹52,009 ಕೋಟಿ ಇಟ್ಟು, ₹41,509 ಕೋಟಿ ರೂಪಾಯಿ ವೆಚ್ಚ ಮಾಡಿದ್ದೇವೆ. ಖಜಾನೆ ಖಾಲಿಯಾಗಿದೆ ಎಂಬ ಮಾತು ಸತ್ಯಕ್ಕೆ ದೂರ ತಾನೇ?
1.26 ಕೋಟಿ ಕುಟುಂಬಗಳಿಗೆ ಯೋಜನೆಗಳು ತಲುಪುತ್ತಿದ್ದು, ಕೊಟ್ಟ ಮಾತಿನಂತೆ ನಡೆದಿದ್ದೇವೆ. ಯಾವ ಕಾರಣಕ್ಕೂ ಯಾವ ಕಾರ್ಯಕ್ರಮವನ್ನೂ ನಿಲ್ಲಿಸುವುದಿಲ್ಲ. ಸಾಲಮನ್ನಾ ಮಾಡಿ ಅಂದರೆ ಹಣ ಎಲ್ಲಿಂದ ತರುವುದು ಎಂದು ಹೇಳಿದ ಬಿಜೆಪಿ, ಅದಾನಿಯವರಿಗೆ 17 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದೀರಿ. ಇದು ನ್ಯಾಯವೇ? ರಾಜಕೀಯ ದುರುದ್ದೇಶ ಬಿಟ್ಟು ಮಾತನಾಡಬೇಕೆಂದು ವಿರೋಧ ಪಕ್ಷದವರಿಗೆ ಮನವಿ ಮಾಡುತ್ತೇನೆ.
ದೇಶದ 100 ಕೋಟಿ ಜನರಿಗೆ ಕೊಳ್ಳುವ ಆಯ್ಕೆಗಳೇ ಇಲ್ಲ ಎಂದು ವರದಿ ಬಂದಿತ್ತು. 20.5 ಕೋಟಿ ಕುಟುಂಬಗಳು ಅಂದರೆ ನೂರು ಕೋಟಿ ಜನರ ವಾರ್ಷಿಕ ಆದಾಯ 87,000 ರೂಪಾಯಿಗಿಂತ ಕಡಿಮೆ ಇದೆ ಎನ್ನುವ ವರದಿ ಬಂದಿದೆ. ದೇಶದಲ್ಲಿ ಅಸಮಾನತೆ ಅಷ್ಟರ ಮಟ್ಟಿಗೆ ಇದೆ. ದೇಶದಲ್ಲಿ ಆರ್ಥಿಕ, ಸಾಮಾಜಿಕ ಅಸಮಾನತೆ ಇರುವವರೆಗೆ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಗುವುದಿಲ್ಲ. ಕೊಳ್ಳುವ ಶಕ್ತಿಯನ್ನು ಹೆಚ್ಚು ಮಾಡುವ ಸಾರ್ವತ್ರಿಕ ಮೂಲಆದಾಯ ತತ್ವವನ್ನು ನಾವು ಜಾರಿ ಮಾಡಿದ್ದೇವೆ. ಆರ್ಥಿಕ, ಸಾಮಾಜಿಕ ಶಕ್ತಿಯನ್ನು ಜನರಲ್ಲಿ ತುಂಬಿದರೆ ಜನರ ಹಾಗೂ ರಾಜ್ಯದ ಅಭಿವೃದ್ಧಿ ಸಾಧ್ಯ. ನಾವು ಸಮಾಜದ 90% ಜನರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ತುಂಬಿದ್ದೇವೆ. ನೀವು ಸಮಾಜದ 10% ಜನರಿಗೆ ಶಕ್ತಿ ತುಂಬುತ್ತಿದ್ದೀರಿ.
ಈ ಸುದ್ದಿಯನ್ನೂ ಓದಿ | CM Siddaramaiah: ಆರ್‌ಎಸ್‌ಎಸ್ ಅವರನ್ನು ಎದುರಿಸಲು ನಾವು ಸಿದ್ಧ: ಸಿಎಂ ಸಿದ್ದರಾಮಯ್ಯ
1994 ರಲ್ಲಿ 34% ಇದ್ದ ಶ್ರೀಮಂತರ ಸಂಖ್ಯೆ ಈಗ 57% ಗೆ ಹೆಚ್ಚಾಗಿದೆ. 50% ಜನರಿಗೆ ಇರುವ ಆರ್ಥಿಕ ಶಕ್ತಿ 15% ಗೆ ಕುಸಿದಿದೆ. ಇದು ಆತಂಕಕಾರಿ ಸಂಗತಿ ಅಲ್ಲವೇ? ಶ್ರೀಮಂತರು ಶ್ರೀಮಂತರಾದರೆ, ಬಡವರು ಬಡವರಾಗುತ್ತಿದ್ದಾರೆ. ಈ ಅಸಮಾನತೆಯನ್ನು ತೊಡೆದು ಹಾಕಲು ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.