#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

IPL 2025: ವಿರಾಟ್‌ ಕೊಹ್ಲಿ ನಾಯಕನಾಗದೇ ಇರಲು ಕಾರಣ ತಿಳಿಸಿದ ಆರ್‌ಸಿಬಿ ಡೈರೆಕ್ಟರ್‌!

Rajat patidar RCB's Captain: ಮುಂಬರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ( ಐಪಿಎಲ್‌) ಟೂರ್ನಿಯ ನಿಮಿತ್ತ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ರಜತ್‌ ಪಾಟಿದಾರ್‌ ನೂತನ ನಾಯಕರಾಗಿ ನೇಮಕಗೊಂಡಿದ್ದಾರೆ. ಆ ಮೂಲಕ ವಿರಾಟ್‌ ಕೊಹ್ಲಿ ನಾಯಕತ್ವಕ್ಕೆ ಮರಳುತ್ತಾರೆಂಬ ಸುದ್ದಿ ಸುಳ್ಳಾಯಿತು. ಈ ಬಗ್ಗೆ ಆರ್‌ಸಿಬಿ ಕ್ರಿಕೆಟ್‌ ಡೈರೆಕ್ಟರ್‌ ಮೊ ಬೊಬಟ್‌ ಪ್ರತಿಕ್ರಿಯೆ ನೀಡಿದ್ದಾರೆ.

ವಿರಾಟ್‌ ಕೊಹ್ಲಿ ಆರ್‌ಸಿಬಿಗೆ ನಾಯಕನಾಗದೇ ಇರಲು ಕಾರಣವೇನು?

ವಿರಾಟ್‌ ಕೊಹ್ಲಿ-ರೆಜತ್‌ ಪಾಟಿದಾರ್

Profile Ramesh Kote Feb 13, 2025 1:39 PM

ಬೆಂಗಳೂರು: ಹದಿನೆಂಟನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ನಿಮಿತ್ತ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡಕ್ಕೆ ನಾಯಕ ಯಾರಾಗುತ್ತಾರೆಂಬ ಪ್ರಶ್ನೆಗೆ ಗುರುವಾರ ಸಿಕ್ಕಿದೆ. ಮಧ್ಯ ಪ್ರದೇಶ ಬ್ಯಾಟ್ಸ್‌ಮನ್‌ ರಜತ್‌ ಪಾಟಿದಾರ್‌ (Rajat Patidar) ಅವರಿಗೆ ಆರ್‌ಸಿಬಿ ನಾಯಕತ್ವವನ್ನು ನೀಡಲಾಗಿದೆ. ಆ ಮೂಲಕ ವಿರಾಟ್‌ ಕೊಹ್ಲಿ (virat Kohli ನಾಯಕತ್ವಕ್ಕೆ ಮರಳುತ್ತಾರೆಂಬ ಸುದ್ದಿ ಸುಳ್ಳಾಯಿತು. ಆರ್‌ಸಿಬಿಗೆ ನಾಯಕನನ್ನು ನೇಮಿಸಿದ ಬಳಿಕ ಮಾತನಾಡಿದ ಬೆಂಗಳೂರು ಫ್ರಾಂಚೈಸಿಯ ಕ್ರಿಕೆಟ್‌ ಡೈರೆಕ್ಟರ್‌ ಮೊ ಬೊಬಟ್‌, ವಿರಾಟ್‌ ಕೊಹ್ಲಿಗೆ ನಾಯಕತ್ವ ನೀಡಿಲ್ಲವೇಕೆಂದು ಬಹಿರಂಗಪಡಿಸಿದ್ದಾರೆ.

ರಜತ್‌ ಪಾಟಿದಾರ್‌ ನಾಯಕತ್ವದಲ್ಲಿ ಮಧ್ಯ ಪ್ರದೇಶ ತಂಡ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯಲ್ಲಿ ಪೈನಲ್‌ಗೆ ಲಗ್ಗೆ ಇಟ್ಟಿತ್ತು. ಆದರೆ, ಫೈನಲ್‌ ಹಣಾಹಣಿಯಲ್ಲಿ ಮುಂಬೈ ವಿರುದ್ಧ ಸೋತು ರನ್ನರ್‌ ಅಪ್‌ಗೆ ತೃಪ್ತಿಪಟ್ಟುಕೊಂಡಿತ್ತು. ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯಲ್ಲಿ ರಜತ್‌, ಮಧ್ಯ ಪ್ರದೇಶ ತಂಡವನ್ನು ಮುನ್ನಡೆಸಿದ್ದರು. ಅಂದ ಹಾಗೆ ಮೆಗಾ ಹರಾಜಿನ ಬಳಿಕ ವಿರಾಟ್‌ ಕೊಹ್ಲಿ ಆರ್‌ಸಿಬಿ ನಾಯಕತ್ವಕ್ಕೆ ಮರಳುವ ಸಾಧ್ಯತೆ ಇತ್ತು ಎಂದು ಹೇಳಲಾಗಿತ್ತು. ಏಕೆಂದರೆ ಹರಾಜಿನಲ್ಲಿ ನಾಯಕತ್ವದ ಸೂಕ್ತವಾಗುವ ಆಟಗಾರರನ್ನು ಬೆಂಗಳೂರು ಫ್ರಾಂಚೈಸಿ ಖರೀದಿಸಿರಲಿಲ್ಲ. ಆದರೆ, ಫೆಬ್ರವರಿ 13 ರಂದು ಬುಧವಾರ ಆರ್‌ಸಿಬಿ ರಜತ್‌ ಪಾಟಿದಾರ್‌ಗೆ ನಾಯಕತ್ವವನ್ನು ನೀಡಿದೆ.

IPL 2025: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ರಜತ್‌ ಪಾಟಿದಾರ್‌ ನಾಯಕ!

ವಿರಾಟ್‌ ಕೊಹ್ಲಿಗೆ ಆರ್‌ಸಿಬಿ ನಾಯಕನಾಗುವ ಅಗತ್ಯವಿಲ್ಲ: ಮೊ ಬೊಬಟ್‌

ರಜತ್‌ ಪಾಟಿದಾರ್‌ ಅವರನ್ನು ಆರ್‌ಸಿಬಿ ತಂಡಕ್ಕೆ ನಾಯಕನಾಗಿ ನೇಮಿಸಿದ ಬಳಿಕ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್‌ಸಿಬಿ ಕ್ರಿಕೆಟ್‌ ಡೈರೆಕ್ಟರ್‌ ಮೊ ಬೊಬಟ್‌, ವಿರಾಟ್‌ ಕೊಹ್ಲಿಗೆ ಏಕೆ ನಾಯಕತ್ವ ನೀಡಲಿಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ.



"ಆರ್‌ಸಿಬಿಗೆ ನಾಯಕನನ್ನು ನೇಮಿಸಲು ಆಂಡಿ ಫ್ಲವರ್‌ ಮತ್ತು ನನಗೆ ಹಲವು ಆಯ್ಕೆಗಳಿದ್ದವು. ಸ್ಥಳೀಯ ಆಟಗಾರನನ್ನೇ ನಾಯಕನ್ನಾಗಿ ನೇಮಿಸಿದರೆ, ತಂಡಕ್ಕೆ ನೆರವಾಗಬಹುದು ಎಂಬ ಕಾರಣಕ್ಕೆ ಭಾರತೀಯ ಆಟಗಾರನ ಕಡೆಗೆ ನಮ್ಮ ಒಲವಿತ್ತು. ಹೌದು! ವಿರಾಟ್‌ ಕೊಹ್ಲಿ ಕೂಡ ನಾಯಕತ್ವಕ್ಕೆ ನಮ್ಮ ಆಯ್ಕೆಯಲ್ಲಿದ್ದರು. ಆದರೆ, ವಿರಾಟ್‌ ಕೊಹ್ಲಿಗೆ ತಂಡದ ನಾಯಕತ್ವದ ಅಗತ್ಯವಿರಲಿಲ್ಲ. ಈ ಅಭಿಪ್ರಾಯವನ್ನು ಅವರು ಸ್ವತಃ ಹೇಳಿಕೊಂಡಿದ್ದಾರೆ. ಅವರು ತಮ್ಮ ಬ್ಯಾಟಿಂಗ್‌ ಮೂಲಕ ತಂಡವನ್ನು ಮುನ್ನಡೆಸಲಿದ್ದಾರೆ. ಅವರು ಮೈದಾನದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಅವರು ತಮ್ಮ ಶಕ್ತಿಯಿಂದ ತಂಡಕ್ಕೆ ಬಲ ತುಂಬಲಿದ್ದಾರೆ. ಅವರು ಅಭ್ಯಾಸ ನಡೆಸುವ ಹಾದಿ ಹಾಗೂ ಆಹಾರ ಪದ್ದತಿಯೊಂದಿಗೆ ಅವರೊಬ್ಬ ಅದ್ಭುತ ನಾಯಕ. ವಿರಾಟ್‌ ಕೊಹ್ಲಿ ಸಹಾಯವನ್ನು ರಜತ್‌ ಪಾಟಿದಾರ್‌ ಪಡೆಯಲಿದ್ದಾರೆಂದು ನಮಗೆ ಖಚಿತತೆ ಇದೆ. ನಿರ್ಧಾರದಲ್ಲಿ ವಿರಾಟ್‌ ಕೊಹ್ಲಿ ಅವರ ಸಾಕಷ್ಟು ಶಕ್ತಿ ಅಡಗಿದೆ. ರಜತ್‌ ಪಾಟಿದಾರ್‌ ನಾಯಕನಾಗಲು ಅರ್ಹರಾಗಿದ್ದಾರೆಂಬುದು ವಿರಾಟ್‌ ಕೊಹ್ಲಿ ತಿಳಿದಿದೆ," ಎಂದು ಮೊ ಬೊಬಟ್‌ ತಿಳಿಸಿದ್ದಾರೆ.



ಎರಡನೇ ಗರಿಷ್ಠ ಸ್ಕೋರರ್‌ ರಜತ್‌ ಪಾಟಿದಾರ್‌

ಪ್ರಸಕ್ತ ಆವೃತ್ತಿಯ ಟಿ20 ದೇಶಿ ಕ್ರಿಕೆಟ್‌ನಲ್ಲಿ ರಜತ್‌ ಪಾಟಿದಾರ್‌ 10 ಪಂದ್ಯಗಳಿಂದ 61ರ ಸರಾಸರಿ ಹಾಗೂ 186ರ ಸ್ಟ್ರೈಕ್‌ ರೇಟ್‌ನಲ್ಲಿ 428 ರನ್‌ಗಳನ್ನು ಸಿಡಿಸಿದ್ದಾರೆ. ಆ ಮೂಲಕ 2024-24ರ ಸಾಲಿನ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರಜತ್‌ ಎರಡನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಅಗ್ರ ಸ್ಥಾನದಲ್ಲಿ ಮುಂಬೈ ನಾಯಕ ಅಜಿಂಕ್ಯ ರಹಾನೆ ಇದ್ದಾರೆ. 2013 ರಿಂದ 2021ರವರೆಗೆ ವಿರಾಟ್‌ ಕೊಹ್ಲಿ 143 ಪಂದ್ಯಗಳಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸಿದ್ದಾರೆ.ಆ ಮೂಲಕ ಎಂಎಸ್‌ ಧೋನಿ ಬಳಿಕ ಐಪಿಎಲ್‌ ಟೂರ್ನಿಯಲ್ಲಿ ಒಂದು ತಂಡವನ್ನು ಅತಿ ಹೆಚ್ಚು ಪಂದ್ಯಗಳಲ್ಲಿ ಮುನ್ನಡೆಸಿದ ನಾಯಕ ಎಂಬ ಕೀರ್ತಿಗೆ ಕೊಹ್ಲಿ ಭಾಜನರಾಗಿದ್ದಾರೆ.