Murder Case: ಪ್ರೇಯಸಿಯ ಕತ್ತು ಸೀಳಿ ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Murder Case: ಬೆಳಗಾವಿಯ ಶಹಾಪುರದ ನವಿಗಲ್ಲಿಯಲ್ಲಿ ಭೀಕರ ಘಟನೆ ನಡೆದಿದೆ. ಚಿಕ್ಕಮ್ಮನ ಮನೆಗೆ ಹೋಗಿದ್ದ ಯುವಕನ ಜತೆ ಸೇರಿ ವಿಷ ಸೇವಿಸಿದ್ದಳು. ಬಳಿಕ ಯುವತಿಯ ಕತ್ತು ಸೀಳಿ ಕೊಲೆಗೈದ ಯುವಕ ತಾನೂ ಅತ್ಮಹತ್ಯೆ ಮಾಡಿಕೊಂಡಿದ್ದಾನೆ.


ಬೆಳಗಾವಿ: ಯುವಕನೊಬ್ಬ ತನ್ನ ಪ್ರೇಯಸಿಯ ಕತ್ತು ಸೀಳಿ ಕೊಲೆಗೈದು, ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ಘಟನೆ ಬೆಳಗಾವಿಯ ಶಹಾಪುರದ ನವಿಗಲ್ಲಿಯಲ್ಲಿ ನಡೆದಿದೆ. ಐಶ್ವರ್ಯಾ ಮಹೇಶ್ ಲೋಹಾರ(18) ಕೊಲೆಯಾದ ಯುವತಿ. ಪ್ರಿಯಕರ ಪ್ರಶಾಂತ ಯಲ್ಲಪ್ಪ ಕುಂಡೇಕರ (29) ಆತ್ಮಹತ್ಯೆ ಮಾಡಿಕೊಂಡವನು. ಸಂಜೆ 5 ಗಂಟೆಗೆ ಐಶ್ವರ್ಯಾ ಚಿಕ್ಕಮ್ಮನ ಮನೆಗೆ ಬಂದಿದ್ದಳು. ಬಳಿಕ ಮೊದಲು ಐಶ್ವರ್ಯಾ, ಪ್ರಶಾಂತ್ ವಿಷ ಸೇವಿಸಲು ಯತ್ನಿಸಿದ್ದರು. ನಂತರ ಚಾಕುವಿನಿಂದ ಪ್ರೇಯಸಿ ಐಶ್ವರ್ಯಾ ಕತ್ತು ಸೀಳಿ ಕೊಲೆ ಮಾಡಿದ ಪ್ರಶಾಂತ್ ಬಳಿಕ ಅದೇ ಚಾಕುವಿನಿಂದ ತಾನೂ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸ್ಥಳಕ್ಕೆ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಬೆಳಗಾವಿಯ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.
ಈ ಸುದ್ದಿಯನ್ನೂ ಓದಿ | ಮೃತ ತಾಯಿಯ ಆಶೀರ್ವಾದ ಪಡೆದು ಪರೀಕ್ಷೆ ಬರೆದ ಪುತ್ರ; ಭಾವುಕ ಕ್ಷಣಕ್ಕೆ ನೆಟ್ಟಿಗರು ಸಾಕ್ಷಿ
ಹುಣಸೂರಿನಲ್ಲಿ ಕಲ್ಲಿನಿಂದ ಜಜ್ಜಿ ವೃದ್ಧ ದಂಪತಿ ಕೊಲೆ
ಮೈಸೂರು: ಹುಣಸೂರು (Hunsur) ತಾಲ್ಲೂಕಿನ ನಾಡಪ್ಪನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ವೃದ್ಧ ದಂಪತಿಯನ್ನು (Senior couple) ಭೀಕರವಾಗಿ ಹತ್ಯೆ (Double murder Case) ಮಾಡಲಾಗಿದೆ. ಅಪರಿಚಿತ ದುಷ್ಕರ್ಮಿಗಳು ದೊಡ್ಡ ಗಾತ್ರದ ಕಲ್ಲಿನಿಂದ ಹೊಡೆದು ಕೊಂದಿದ್ದಾರೆ. ಮೃತರನ್ನು ಬಿಲ್ಕೆರೆ ಹೋಬಳಿಯ ನಾಡಪ್ಪನಹಳ್ಳಿ ನಿವಾಸಿಗಳಾದ ರಂಗಸ್ವಾಮಿಗೌಡ (65) ಮತ್ತು ಅವರ ಪತ್ನಿ ಶಾಂತಮ್ಮ (52) ಎಂದು ಗುರುತಿಸಲಾಗಿದೆ.
ದಂಪತಿಗೆ ಗ್ರಾಮ ಪಂಚಾಯಿತಿ ಸದಸ್ಯ ದೇವರಾಜ್ ಮತ್ತು ಒಬ್ಬ ಮಗಳು ಸೇರಿದಂತೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ಒಣಗಿದ ಶುಂಠಿಯನ್ನು ಸಂಗ್ರಹಿಸಲು ಕೆಲಸಗಾರ ಗಣೇಶ್ ಸಂಜೆ ತೋಟದ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ದಂಪತಿಗಳನ್ನು ಕಂಡು ಗಾಬರಿಗೊಂಡು ತಕ್ಷಣ ದೇವರಾಜ್‌ಗೆ ಮಾಹಿತಿ ನೀಡಿದರು.
ದೇವರಾಜ್ ಸ್ಥಳಕ್ಕೆ ಬರುವ ಹೊತ್ತಿಗೆ, ಅವರ ಪೋಷಕರಿಬ್ಬರೂ ಸಾವನ್ನಪ್ಪಿದ್ದರು. ದಕ್ಷಿಣ ವಲಯ ಐಜಿಪಿ ಡಾ. ಬೋರಲಿಂಗಯ್ಯ, ಎಸ್ಪಿ ವಿಷ್ಣುವರ್ಧನ್, ಡಿವೈಎಸ್ಪಿ ಗೋಪಾಲಕೃಷ್ಣ, ಸಬ್ ಇನ್ಸ್‌ಪೆಕ್ಟರ್ ಲೋಲಾಕ್ಷಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೈಸೂರಿನಿಂದ ಬಂದ ಶ್ವಾನ ದಳ ಮತ್ತು ಬೆರಳಚ್ಚು ತಜ್ಞರೊಂದಿಗೆ ವಿಧಿವಿಜ್ಞಾನ ತಂಡವನ್ನು ಸಹ ಸಾಕ್ಷ್ಯಗಳನ್ನು ಸಂಗ್ರಹಿಸಲು ನಿಯೋಜಿಸಲಾಗಿತ್ತು. ದುಷ್ಕರ್ಮಿಗಳು ದರೋಡೆ ಪ್ರಯತ್ನಿಸಿ ಅಥವಾ ವೈಯಕ್ತಿಕ ದ್ವೇಷದಿಂದ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.