Vishwavani Impact: ಕಂಡಕ್ಟರ್ ಮೇಲೆ ಮರಾಠಿ ಪುಂಡರ ಹಲ್ಲೆ ಪ್ರಕರಣ; ಕರ್ತವ್ಯಲೋಪ ಹಿನ್ನೆಲೆ ಮಾರಿಹಾಳ ಠಾಣೆ ಇನ್ಸ್ಪೆಕ್ಟರ್ ವರ್ಗಾವಣೆ
Vishwavani Impact: ನಿರ್ವಾಹಕ ಮಹಾದೇವ ಹುಕ್ಕೇರಿ ಬಸ್ ಸಮೇತವಾಗಿ ಮಾರಿಹಾಳ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಲು ಮುಂದಾಗಿದ್ದರು. ಆದರೆ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ದೂರು ದಾಖಲಿಸಿಕೊಳ್ಳದೆ ವಾಪಸ್ ಕಳುಹಿಸಿದ್ದರು. ಹೀಗಾಗಿ ಠಾಣಾಧಿಕಾರಿ ವಿರುದ್ಧ ಮೇಲಧಿಕಾರಿಗಳು ಶಿಸ್ತುಕ್ರಮ ಕೈಗೊಂಡಿದ್ದಾರೆ.


ಬೆಳಗಾವಿ: ಕಂಡಕ್ಟರ್ ಮೇಲೆ ಮರಾಠಿ ಪುಂಡರಿಂದ ಹಲ್ಲೆ ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿದ್ದ ಆರೋಪದಲ್ಲಿ ಮಾರಿಹಾಳ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಜೆ.ಐ. ಕಲ್ಯಾಣಶೆಟ್ಟಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಬಾಳೇಕುಂದ್ರಿ ಗ್ರಾಮದಲ್ಲಿ ಬಸ್ ಕಂಡಕ್ಟರ್ ಮೇಲೆ ಮರಾಠಿ ಪುಂಡರು ಹಲ್ಲೆ ನಡೆಸಿದ್ದರು. ನಂತರ ಹಲ್ಲೆಗೊಳಗಾದ ನಿರ್ವಾಹಕ ಮಹಾದೇವ ಹುಕ್ಕೇರಿ ಬಸ್ ಸಮೇತವಾಗಿ ಮಾರಿಹಾಳ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಲು ಮುಂದಾಗಿದ್ದರು. ಆದರೆ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ದೂರು ದಾಖಲಿಸಿಕೊಳ್ಳದೆ ವಾಪಸ್ ಕಳುಹಿಸಿದ್ದರು. ಹೀಗಾಗಿ ಮಾರಿಹಾಳ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಜೆ.ಐ. ಕಲ್ಯಾಣಶೆಟ್ಟಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಇನ್ನೂ ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣದ ಕಿಚ್ಚಿಗೆ ಮತ್ತಷ್ಟು ಬೆಂಕಿ ಹಚ್ಚಿದ್ದು ಪೋಕ್ಸೊ ಪ್ರಕರಣ. ಹಲ್ಲೆ ಮಾಡಿದ್ದ ಪುಂಡರು ಪ್ರಕರಣದ ದಿಕ್ಕು ತಪ್ಪಿಸಲು ಯುವತಿ ಕಡೆಯಿಂದ ಪೋಕ್ಸೊ ಪ್ರಕರಣ ದಾಖಲಿಸಿದ್ದು ಸೇರಿದಂತೆ ಇನ್ಸ್ಪೆಕ್ಟರ್ ಕಲ್ಯಾಣಶೆಟ್ಟಿ ಅವರ ಕರ್ತವ್ಯಲೋಪದ ಕುರಿತು ವಿಶ್ವವಾಣಿ ನಿರಂತರ ವರದಿ ಪ್ರಕಟಿಸಿತ್ತು.
ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿ.ಐ ಕಲ್ಯಾಣಶೆಟ್ಟಿ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಸಿಸಿಆರ್ ಬಿ ಘಟಕದ ಇನ್ಸ್ಪೆಕ್ಟರ್ ಮಂಜುನಾಥ ನಾಯಕ ಅವರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.
ಈ ಸುದ್ದಿಯನ್ನೂ ಓದಿ | Sajjan Kumar : 1984ರ ಸಿಖ್ ವಿರೋಧಿ ಗಲಭೆ ಕೇಸ್- ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್‌ಗೆ ಜೀವಾವಧಿ ಶಿಕ್ಷೆ
ಕಂಡಕ್ಟರ್ ಮೇಲಿನ ಪೋಕ್ಸೋ ಕೇಸ್ ವಾಪಸ್
ಕನ್ನಡ ಮಾತಾಡು ಎಂದಿದ್ದಕ್ಕೆ ಬಸ್ ಕಂಡಕ್ಟರ್ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಕಂಡಕ್ಟರ್ ವಿರುದ್ಧ ದಾಖಲಿಸಿದ್ದ ಪೋಕ್ಸೊ ಪ್ರಕರಣವನ್ನು ಬಾಲಕಿಯ ಪೋಷಕರು ವಾಪಸ್ ಪಡೆಯುತ್ತಿದ್ದಾರೆ. ಈ ಕುರಿತು ಬಾಲಕಿ ಪೋಷಕರು ವಿಡಿಯೋ ಹೇಳಿಕ ಬಿಡುಗಡೆ ಮಾಡಿ ಸ್ಪಷ್ಟಪಡಿಸಿದ್ದಾರೆ.
ವಿಡಿಯೊದಲ್ಲಿ ಮಾತನಾಡಿರುವ ಬಾಲಕಿ ಪೋಷಕರು, ''ಬೆಳಗಾವಿಯಿಂದ ಬಾಳೇಕುಂದ್ರಿಗೆ ನಮ್ಮ ಮಗಳು ಬರುತ್ತಿದ್ದಳು. ಟಿಕೆಟ್ ಪಡೆಯುವ ಸಂಬಂಧ ಆಗಿರುವ ಜಗಳ ಇದು. ನಾವೂ ಕನ್ನಡದ ಅಭಿಮಾನಿಗಳು, ನಮ್ಮಲ್ಲಿ ಜಾತಿ ಭೇದ ಭಾವ ಇಲ್ಲ. ವಿನಾಕಾರಣ ಕನ್ನಡ, ಮರಾಠಿ ಎಂದು ಸುಳ್ಳು ಪ್ರಚಾರ ಮಾಡುವುದು ಸರಿಯಲ್ಲ.
ಇದನ್ನು ಮುಂದಿಟ್ಟುಕೊಂಡು ಕರ್ನಾಟಕ, ಮಹಾರಾಷ್ಟ್ರ ನಡುವೆ ಜಗಳ ಆರಂಭವಾಗಿದೆ. ನಮ್ಮ ಮಗಳಿಗೆ ಅನ್ಯಾಯವಾಗಿದೆ. ನಾವು ಪ್ರಕರಣ ವಾಪಸ್ ಪಡೆಯುತ್ತೇವೆ, ಇದನ್ನು ಇಲ್ಲಿಗೆ ನಿಲ್ಲಿಸಬೇಕು. ಸ್ವಇಚ್ಛೆಯಿಂದ ಪ್ರಕರಣ ವಾಪಸ್ ಪಡೆಯುತ್ತಿದ್ದೇವೆ. ನಮ್ಮ ಮೇಲೆ ಯಾವುದೇ ಒತ್ತಡ ಇಲ್ಲ'' ಎಂದು ಬಾಲಕಿಯ ಪೋಷಕರು ಸ್ಪಷ್ಟಪಡಿಸಿದ್ದಾರೆ.
ಪ್ರಯಾಗರಾಜ್‌ಗೆ ತೆರಳುತ್ತಿದ್ದ ವಾಹನ ಅಪಘಾತ, ಇಬ್ಬರ ಸಾವು
ವಿಜಯಪುರ: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭಾಗವಹಿಸಲು ವಿಜಯಪುರ ಜಿಲ್ಲೆ ಚಡಚಣ ಪಟ್ಟಣದಿಂದ ತೆರಳಿದ್ದ ಯಾತ್ರಾರ್ಥಿಗಳ ವಾಹನವು ಗುಜರಾತ್ ರಾಜ್ಯದ ಪೋರ್ ಬಂದರ್ ಸಮೀಪ ನಿಂತಿದ್ದ ಟಿಪ್ಪರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಪಟ್ಟಣದ ಇಬ್ಬರು ಯಾತ್ರಾರ್ಥಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ. ಮೃತಪಟ್ಟ ವ್ಯಕ್ತಿಗಳನ್ನು ಚಡಚಣ ಪಟ್ಟಣದ ವಿಶ್ವನಾಥ ಅವಜಿ (55) ಹಾಗೂ ಮಲ್ಲಿಕಾರ್ಜುನ ಸದ್ದಲಗಿ (40) ಎಂದು ಗುರುತಿಸಲಾಗಿದೆ.
ಚಾಲಕ ಸಮೇತ ಒಟ್ಟು 17 ಮಂದಿ ಪ್ರಯಾಣಿಸುತ್ತಿದ್ದ ಮ್ಯಾಕ್ಸಿ ಕ್ಯಾಬ್ ನಲ್ಲಿ ನಾಲ್ವರು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು , ಪೋರ್ ಬಂದರ್ ನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಾಲಕ ನಿದ್ದೆ ಮಂಪರಿನಲ್ಲಿದ್ದಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.