ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Saroja Devi: ರಜನಿಕಾಂತ್, ಸುದೀಪ್ ಸೇರಿದಂತೆ ಚಿತ್ರರಂಗದ ಕಲಾವಿದರಿಂದ ನಟಿ ಸರೋಜಾದೇವಿಗೆ ಅಂತಿಮ ನಮನ

ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗದ ದಿಗ್ಗಜ ನಟಿ ಬಿ. ಸರೋಜಾ ದೇವಿ ಅವರು ಸೋಮವಾರ ಬೆಳಗ್ಗೆ 9 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರಂನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಗಲಿದ ಹಿರಿಯ ನಟಿಗೆ ಸಿನಿಮಾರಂದ ಗಣ್ಯರು, ಪ್ರಮುಖ ನಟ, ನಟಿಯರು ಮತ್ತು ರಾಜಕಾರಣಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ

‘ಅಭಿನಯ ದೇವತೆ’ ಸರೋಜಾದೇವಿ ನಿಧನಕ್ಕೆ ಗಣ್ಯರ ಕಂಬನಿ

ಸರೋಜಾ ದೇವಿ

Profile Sushmitha Jain Jul 14, 2025 4:29 PM

ಬೆಂಗಳೂರು: ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗದ ದಿಗ್ಗಜ ನಟಿ ಬಿ. ಸರೋಜಾ ದೇವಿ (Saroja Devi ) ಅವರು ಸೋಮವಾರ ಬೆಳಗ್ಗೆ 9 ಗಂಟೆಗೆ ಬೆಂಗಳೂರಿನ (Bengaluru) ಮಲ್ಲೇಶ್ವರಂನ (Malleswaram) ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಗಲಿದ ಹಿರಿಯ ನಟಿಗೆ ಸಿನಿಮಾರಂದ ಗಣ್ಯರು, ಪ್ರಮುಖ ನಟ, ನಟಿಯರು ಮತ್ತು ರಾಜಕಾರಣಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ

ಸರೋಜಾ ದೇವಿ ಅವರ ವೃತ್ತಿಜೀವನವು ದಶಕಗಳವರೆಗೆ ನಾಲ್ಕು ಪ್ರಮುಖ ಚಿತ್ರರಂಗಗಳಲ್ಲಿ ವಿಸ್ತರಿಸಿತ್ತು. ಎಂ.ಜಿ. ರಾಮಚಂದ್ರನ್ (MGR), ಶಿವಾಜಿ ಗಣೇಶನ್, ಎನ್.ಟಿ. ರಾಮರಾವ್ ಜೊತೆಗೆ ನಟಿಸಿದ ಅವರು, ಬಾಲಿವುಡ್‌ನ ದಿಲೀಪ್ ಕುಮಾರ್ (ಪೈಗಾಮ್, 1959), ರಾಜೇಂದ್ರ ಕುಮಾರ್ (ಸಸುರಾಲ್, 1961), ಮತ್ತು ಸುನಿಲ್ ದತ್ (ಬೇಟಿ ಬೇಟೆ, 1964) ಜೊತೆಯೂ ಕೆಲಸ ಮಾಡಿದ್ದರು.

ಮೊದಲ ಯಶಸ್ಸು: 17ನೇ ವಯಸ್ಸಿನಲ್ಲಿ ಕನ್ನಡದ ಕ್ಲಾಸಿಕ್ ಚಿತ್ರ ‘ಮಹಾಕವಿ ಕಾಳಿದಾಸ’ (1955) ಮೂಲಕ ಬಣ್ಣ ಹಚ್ಚಿದ ಸರೋಜಾ ದೇವಿ, ತಮ್ಮ ಪ್ರಭಾವಿ ಅಭಿನಯಕ್ಕೆ ರಾಷ್ಟ್ರೀಯ ಪ್ರಶಸ್ತಿಯನ್ನು ಗಳಿಸಿದರು. ತಮಿಳಿನ ‘ನಾಡೋಡಿ ಮನ್ನನ್’ (1958) ಚಿತ್ರವು ದಕ್ಷಿಣ ಭಾರತದಾದ್ಯಂತ ಅವರಿಗೆ ಖ್ಯಾತಿಯನ್ನು ತಂದಿತು. 1967ರಲ್ಲಿ ವಿವಾಹವಾದರೂ ಅವರು ವರ್ಷಗಟ್ಟಲೆ ಪ್ರಮುಖ ನಾಯಕಿಯಾಗಿ ಮಿಂಚಿದರು.



ಅಗಲಿದ ನಟಿಗೆ ಸಂತಾಪ ಸೂಚಿಸಿದ ಸೂಪರ್‌ಸ್ಟಾರ್ ರಜನಿಕಾಂತ್, "ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದ ಮಹಾನ್ ನಟಿ ಸರೋಜಾದೇವಿ ಇನ್ನಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಬರೆದಿದ್ದಾರೆ.



"ಅಭಿನಯ ಸರಸ್ವತಿ ಎಂದೇ ಹೆಸರಾದ ಬಹುಭಾಷಾ ತಾರೆ ಶ್ರೀಮತಿ ಸರೋಜ ದೇವಿ ಅವರು ತಮ್ಮ ಮೋಹಕತೆಯೊಂದಿಗೆ ಹೊರಟಿದ್ದಾರೆ. ಹಲವು ಭಾಷೆಗಳ ಪ್ರೌಡಿಮೆ ಹೊಂದಿದ್ದ ಅವರು ಅನೇಕ ದಿಗ್ಗಜರೊಂದಿಗೆ ನಟಿಸಿ ತಾನೇ ಪಾತ್ರವಾಗಿ ಬೆಳ್ಳಿತೆರೆಯಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಪಾರಿಜಾತ ಪುಷ್ಪವೊಂದು ತನ್ನ ಪರಿಮಳದೊಂದಿಗೆ ತುಂಬು ಜೀವನ ನೆಡೆಸಿ ನಮ್ಮನ್ನು ಆಗಲಿ ಹೊರಟಿದೆ. ಕಲಾ ಸರಸ್ವತಿಗೆ ವಿನಯಪೂರ್ವಕ ನಮನ” ಎಂದು ನಟ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.



ಇನ್ನು ನಮ್ಮ ಕನ್ನಡ ಚಿತ್ರರಂಗದ ಹಿರಿಯ ನಟಿ ಶ್ರೀಮತಿ ಬಿ. ಸರೋಜಾದೇವಿ ಅವರು ಇಂದು ನಮ್ಮನ್ನು ಅಗಲಿದ್ದು, ಅವರ ಅಗಲಿಕೆಯಿಂದ ಕನ್ನಡ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ನಟ, ನಿರ್ದೇಶಕ ಮತ್ತು ಸಂಗೀತ ನಿರ್ದೇಶಕ ಸಾಧುಕೋಕಿಲ ಅವರೂ ಅಭಿನಯ ಸರಸ್ವತಿಗೆ ಭಾವಪೂರ್ವಕ ವಿದಾಯ ತಿಳಿಸಿದ್ದಾರೆ.



"ಸರೋಜಾ ದೇವಿ ಅಮ್ಮ ಎಲ್ಲಕಾಲಕ್ಕೂ ಮಹಾನ್ ನಟಿ. ದಕ್ಷಿಣದಲ್ಲಿ ಯಾವ ನಟಿಯೂ ಅವರ ಖ್ಯಾತಿಗೆ ಸಾಟಿಯಿಲ್ಲ. ಆಕೆಯ ಆತ್ಮೀಯತೆಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ,” ಎಂದು ನಟಿ ಮತ್ತು ರಾಜಕಾರಣಿ ಖುಷ್ಬು ಸುಂದರ್ ಹೇಳಿದ್ದಾರೆ.

ಈ ಸುದ್ದಿಯನ್ನು ಓದಿ: B Saroja devi: ಅಭಿನಯ ಸರಸ್ವತಿಗೆ ಒಲಿದು ಬಂದ ಪ್ರಶಸ್ತಿಗಳಾವುವು? ಅಪರೂಪದ ಫೋಟೋಗಳು ಇಲ್ಲಿವೆ



ಬಹುಭಾಷಾ ನಟಿ, ಅಭಿನಯ ಸರಸ್ವತಿ ಎಂದೇ ಖ್ಯಾತಿ ಪಡೆದಿದ್ದ ಬಿ.ಸರೋಜಾ ದೇವಿಯವರ ಅಗಲಿಕೆ ದುಃಖವನ್ನುಂಟು ಮಾಡಿದ್ದು, ಅವರು ಆಗಲಿಕೆ ತುಂಬಲಾರದ ನಷ್ಟ. ಆದರೆ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ಸದಾ ನೆನಪಿನಲ್ಲಿ ಉಳಿಯಲಿದೆ. ಮನೋಹರವಾದ ನಟನೆಯ ಮೂಲಕ ಸರೋಜಮ್ಮ ತಮ್ಮದೇ ಆದ ಛಾಪು ಮೂಡಿಸಿದ್ದರು ಎಂದು ನಟಿ ಸಿಮ್ರಾನ್ ಟ್ವೀಟ್ ಮಾಡಿದ್ದಾರೆ.