Actor Suriya: ʼಕಂಗುವʼ ಸೋಲಿನಿಂದ ಹೊರ ಬರಲು ಸೂರ್ಯ ಕಸರತ್ತು; ವೆಂಕಿ ಅಟ್ಲುರಿ ನಿರ್ದೇಶನದ ತಮಿಳು ಚಿತ್ರ ಒಪ್ಪಿಕೊಂಡ ʼಸಿಂಗಂʼ
Retro Movie: ಕಾಲಿವುಡ್ ಸೂಪರ್‌ಸ್ಟಾರ್ ಸೂರ್ಯ ಸದ್ಯ ಬಹು ನಿರೀಕ್ಷಿತ ʼರೆಟ್ರೋʼ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕಾರ್ತಿಕ್ ಸುಬ್ಬರಾಜ್ ನಿರ್ದೇಶಿಸುತ್ತಿರುವ ʼರೆಟ್ರೋʼ ಸಿನಿಮಾ ಮೇ 1ರಂದು ತೆರೆಗೆ ಬರಲಿದ್ದು, ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಈ ಮಧ್ಯೆ ಸೂರ್ಯ ತೆಲುಗು ನಿರ್ದೇಶಕ ವೆಂಕಿ ಅಟ್ಲುರಿ ಅವರು ಮುಂದಿನ ತಮಿಳು ಚಿತ್ರವನ್ನು ಒಪ್ಪಿಕೊಂಡಿದ್ದಾರೆ.

ನಟ ಸೂರ್ಯ.

ಹೈದರಾಬಾದ್: ಕಳೆದ ವರ್ಷ ಬಹು ನಿರೀಕ್ಷೆಯೊಂದಿಗೆ ತೆರೆಕಂಡ ಸೂರ್ಯ (Actor Suriya) ಅಭಿನಯದ ತಮಿಳು ಚಿತ್ರ ʼಕಂಗುವʼ (Kanguva) ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಸೂರ್ಯನಂತಹ ಸ್ಟಾರ್ ನಟ, ಶಿವ ಅವರಂತಹ ಜನಪ್ರಿಯ ನಿರ್ದೇಶಕ, ಸಂಗೀತ ನಿರ್ದೇಶಕ ದೇವಿಶ್ರೀ ಅವರ ಮ್ಯೂಸಿಕ್ ಇದ್ದರೂ ಚಿತ್ರ ಗಮನ ಸೆಳೆಯುವಲ್ಲಿ ವಿಫಲವಾಗಿತ್ತು. ಈ ಸೋಲಿನಿಂದ ಹೊರ ಬರಲು ಇದೀಗ ಸೂರ್ಯ ಮುಂದಾಗಿದ್ದಾರೆ. ಹೊಸ ಅಲೆಯ ಚಿತ್ರಗಳನ್ನು ನೀಡುವ ಮೂಲಕ ಕಾಲಿವುಡ್‌ನಲ್ಲಿ ಇತಿಹಾಸ ಬರೆದ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ (Karthik Subbaraj) ಆ್ಯಕ್ಷನ್ ಹೇಳಿರುವ ಬಹು ನಿರೀಕ್ಷಿತ ʼರೆಟ್ರೋʼ (Retro) ಸಿನಿಮಾದಲ್ಲಿ ಸೂರ್ಯ ನಟಿಸಿದ್ದು, ಮೇ 1ರಂದು ತೆರೆಗೆ ಬರಲಿದೆ. ಇದರ ಪ್ರಮೋಷನ್ ಕಾರ್ಯದಲ್ಲಿ ನಿರತರಾಗಿರುವ ಸೂರ್ಯ ಇದೀಗ ತಮ್ಮ ಅಭಿಮಾನಿಗಳಿಗೆ ಮತ್ತೊಂಡು ಗುಡ್‌ನ್ಯೂಸ್ ನೀಡಿದ್ದಾರೆ.
ಕಳೆದ ವರ್ಷ ರಿಲೀಸ್ ಆದ ದುಲ್ಖಾರ್ ಸಲ್ಮಾನ್-ಮೀನಾಕ್ಷಿ ಚೌಧರಿ ಅಭಿನಯದ ʼಲಕ್ಕಿ ಭಾಸ್ಕರ್ʼ ಸಿನಿಮಾ ಮೂಲಕ ಛಾಪು ಮೂಡಿಸಿದ ತೆಲುಗು ನಿರ್ದೇಶಕ ವೆಂಕಿ ಅಟ್ಲುರಿ ತಮಿಳು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ಮುಂದಾಗಿದ್ದು, ನಾಯಕನಾಗಿ ಸೂರ್ಯ ಆಯ್ಕೆ ಮಾಡಿದ್ದಾರೆ.
ಸೂರ್ಯ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್:
ಅಧಿಕೃತ ಘೋಷಣೆ
ಈ ಚಿತ್ರದ ಬಗ್ಗೆ ಸ್ವತಃ ಸೂರ್ಯ ಮಾಹಿತಿ ನೀಡಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ʼರೆಟ್ರೋ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೆಂಕಿ ಅಟ್ಲುರಿ ನಿರ್ದೇಶನದ ಮುಂದಿನ ತಮಿಳು ಸಿನಿಮಾದಲ್ಲಿ ನಟಿಸುವುದಾಗಿ ತಿಳಿಸಿದ್ದಾರೆ. ಜನಪ್ರಿಯ ಪ್ರೊಡಕ್ಷನ್ ಕಂಪನಿ ಸಿತಾರಾ ಎಂಟರ್‌ಟೈನ್‌ಮೆಂಟ್ ಇದನ್ನು ನಿರ್ಮಿಸಲಿದೆ.
ಈ ಸುದ್ದಿಯನ್ನೂ ಓದಿ: Urvashi Rautela: ದಬಿಡಿ ದಿಬಿಡಿ ಹಾಡಿನ ಲಿರಿಕ್ಸ್ ಮರೆತು ಟ್ರೋಲ್ ಆದ ನಟಿ ಊರ್ವಶಿ ರೌಟೇಲಾ!
ಸೂರ್ಯ ಹೇಳಿದ್ದೇನು?
ʼʼಹೈದರಾಬಾದ್‌ನಲ್ಲಿ ನಾನು ಇದುವರೆಗೆ ಹಲವು ಸಿನಿಮಾಗಳ ಶೂಟಿಂಗ್‌ನಲ್ಲಿ ಭಾಗವಹಿಸಿದ್ದೇನೆ. ಮೇಯಿಂದ ನನ್ನ ಮತ್ತು ವೆಂಕಿ ಅಟ್ಲುರಿ ಕಾಂಬಿನೇಷನ್‌ನ ಚಿತ್ರ ಆರಂಭವಾಗಲಿದೆ. ಎಂದಿನಂತೆ ಎಲ್ಲ ಸಹಕಾರ ಕೋರುತ್ತಿದ್ದೇವೆʼʼ ಎಂದು ಸೂರ್ಯ ಮನವಿ ಮಾಡಿದ್ದಾರೆ.
ಗಮನ ಸೆಳೆದ ʼರೆಟ್ರೋʼ
ಸೋಲಿನಿಂದ ಕಂಗೆಟ್ಟಿರುವ ಸೂರ್ಯ ಅವರಿಗೆ ತುರ್ತಾಗಿ ಗೆಲುವೊಂದು ಬೇಕಾಗಿದೆ. ಹೀಗಾಗಿ ʼರೆಟ್ರೋʼ ಮೂಲಕ ಅವರು ಭರ್ಜರಿಯಾಗಿ ಕಂಬ್ಯಾಕ್ ಮಾಡಲಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಈಗಾಗಲೇ ರಿಲೀಸ್ ಆಗಿರುವ ಸಿನಿಮಾದ ಟ್ರೈಲರ್ ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೇ ಕಾರಣಕ್ಕೆ ಚಿತ್ರದ ಮೇಲೆ ನಿರೀಕ್ಷೆ ತುಸು ಹೆಚ್ಚೇ ಇದೆ. ಇದರಲ್ಲಿ ನಾಯಕಿಯಾಗಿ ಪೂಜಾ ಹೆಗ್ಡೆ ಕಾನಿಸಿಕೊಂಡಿದ್ದಾರೆ. ಕಾರ್ತಿಕ್ ಸುಬ್ಬರಾಜ್-ಸೂರ್ಯ-ಪೂಜಾ ಹೆಗ್ಡೆ ಮೊದಲ ಬಾರಿ ಒಂದಾಗುತ್ತಿರುವುದು ಕೂಡ ʼರೆಟ್ರೋʼ ಚಿತ್ರದ ಮತ್ತೊಂದು ವೈಶಿಷ್ಟ್ಯ. ಇನ್ನು ಸಿನಿಮಾದಲ್ಲಿ ಜೋಜು ಜಾರ್ಜ್, ಜಯರಾಮ್, ಕರುಣಾಕರನ್ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕಾಗಿ ಸೂರ್ಯ ಥಾಯ್ಲೆಂಟ್‌ನಲ್ಲಿ ಮಾರ್ಷಲ್ ಆರ್ಟ್ ತರಬೇತಿ ಕೂಡ ಪಡೆದುಕೊಂಡಿದ್ದರು.
ವೆಂಕಿ ಅವರ ಮುಂದಿನ ತಮಿಳು ಚಿತ್ರಗಳಲ್ಲದೆ ಸೂರ್ಯ ಸದ್ಯ ವೆಟ್ರಿಮಾರನ್ ಅವರ ʼವಾಡಿವಾಸಲ್ʼ ಮತ್ತು ಆರ್.ಜೆ.ಬಾಲಾಜಿ ಅವರ ಮುಂದಿನ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಇವೆಲ್ಲ ಈಗಾಗಲೇ ಕುತೂಹಲ ಮೂಡಿಸಿವೆ.