Chhatrapati Sambhaji Maharaj: ಯಾರು ಈ ಛತ್ರಪತಿ ಸಂಭಾಜಿ ಮಹಾರಾಜ? ವಿಕ್ಕಿ ಕೌಶಲ್ ನಟನೆಯ ʼಛಾವಾʼದಲ್ಲಿದೆ ಈ ಮರಾಠ ಹೋರಾಟಗಾರನ ಕಥೆ
ಈ ವರ್ಷದ ಬಹು ನಿರೀಕ್ಷಿತ ಹಿಂದಿ ಚಿತ್ರ ʼಛಾವಾʼ ಫೆ. 14ರಂದು ತೆರೆಗೆ ಬರಲಿದೆ. ಈ ಚಿತ್ರ ಅಪ್ರತಿಮ ದೇಶಪ್ರೇಮಿ, ಅಪ್ರತಿಮ ಹೋರಾಟಗಾರ ಛತ್ರಪತಿ ಶಿವಾಜಿ ಮಹಾರಾಜರ ಹಿರಿಯ ಪುತ್ರ ಛತ್ರಪತಿ ಸಂಭಾಜಿ ಮಹಾರಾಜ ಅವರ ಜೀವನದ ಮೇಲೆ ಬೆಳಕು ಚೆಲ್ಲಲಿದೆ. ಹಾಗಾದರೆ ಯಾರು ಈ ಸಂಭಾಜಿ ಮಹಾರಾಜ? ಇಲ್ಲಿದೆ ವಿವರ.
![ಯಾರು ಈ ಛತ್ರಪತಿ ಸಂಭಾಜಿ ಮಹಾರಾಜ? ಇಲ್ಲಿದೆ ವಿವರ](https://cdn-vishwavani-prod.hindverse.com/media/original_images/Chhatrapati_Sambhaji_Maharaj.jpg)
ವಿಕ್ಕಿ ಕೌಶಲ್.
![Profile](https://vishwavani.news/static/img/user.png)
ಮುಂಬೈ: ಫೆ. 14ರಂದು ಬಹು ನಿರೀಕ್ಷಿತ ಹಿಂದಿ ಚಿತ್ರ ʼಛಾವಾʼ (Chhaava) ರಿಲೀಸ್ ಆಗಲಿದೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬಾಲಿವುಡ್ ನಟ ವಿಕ್ಕಿ ಕೌಶಲ್ (Vicky Kaushal)-ಪ್ರತಿಭಾನ್ವಿತ ನಿರ್ದೇಶಕ ಲಕ್ಷ್ಮಣ್ ಉಟೇಕರ್ (Laxman Utekar) ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಮೊದಲ ಬಾರಿಗೆ ಒಂದಾಗುತ್ತಿರುವ ಈ ಚಿತ್ರ ಈಗಾಗಾಗಲೇ ಕುತೂಹಲ ಕೆರಳಿಸಿದೆ. ಐತಿಹಾಸಿಕ ಕಥಾ ಹಂದರ ಹೊಂದಿರುವ ಈ ಚಿತ್ರ ದೇಶ ಕಂಡ ಅಪ್ರತಿಮ ದೇಶಪ್ರೇಮಿ, ಅಪ್ರತಿಮ ಹೋರಾಟಗಾರ ಛತ್ರಪತಿ ಶಿವಾಜಿ ಮಹಾರಾಜರ ಹಿರಿಯ ಪುತ್ರ ಛತ್ರಪತಿ ಸಂಭಾಜಿ ಮಹಾರಾಜ (Chhatrapati Sambhaji Maharaj) ಜೀವನದ ಮೇಲೆ ಬೆಳಕು ಚೆಲ್ಲಲಿದೆ. ಈ ಚಿತ್ರದಲ್ಲಿ ವಿಕ್ಕಿ ಕೌಶಲ್ ಅವರು ಛತ್ರಪತಿ ಸಂಭಾಜಿ ಮಹಾರಾಜರ ಪಾತ್ರದಲ್ಲಿ ಕಾಣಿಸಿಕೊಂಡರೆ, ಅವರ ಪತ್ನಿ ಮಹಾರಾಣಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ಅಭಿನಯಿಸಿದ್ದಾರೆ. ಹಾಗಾದರೆ ಯಾರು ಈ ಛತ್ರಪತಿ ಸಂಭಾಜಿ ಮಹಾರಾಜ? ಇತಿಹಾಸ ಪುಟದಲ್ಲಿ ಅವರ ಪ್ರಾಧಾನ್ಯತೆ ಏನು? ಇಲ್ಲಿದೆ ವಿವರ.
ಸಂಭಾಜಿ ಮರಾಠ ಸಾಮ್ರಾಜ್ಯದ 2ನೇ ಆಡಳಿತಗಾರರಾಗಿದ್ದರು. 9 ವರ್ಷಗಳ ಅವರ ಅಲ್ಪಾವಧಿಯ ಆಳ್ವಿಕೆಯಲ್ಲಿ ಸಂಭಾಜಿ ತಮ್ಮ ಶೌರ್ಯ ಮತ್ತು ದೇಶಭಕ್ತಿಗಾಗಿ ವ್ಯಾಪಕ ಮನ್ನಣೆ ಪಡೆದಿದ್ದಾರೆ.
ಸಿಂಹಾಸನ ಏರಿದ ರೀತಿ
ಶಿವಾಜಿ ಮಹಾರಾಜ ಹಿಂದೂ ಯೋಧರಾಗಿದ್ದು, ಅವರ ಸಾಮ್ರಾಜ್ಯವು ಡೆಕ್ಕನ್ ಪ್ರಸ್ಥಭೂಮಿಯ ಪಶ್ಚಿಮ ಭಾಗದ ಜತೆಗೆ ಪೂರ್ವ ಘಟ್ಟಗಳನ್ನು ಒಳಗೊಂಡಿತ್ತು. ಅವರು ಉತ್ತರ ಭಾರತದಲ್ಲಿ ಮುಸ್ಲಿಂ ಮೊಘಲ್ ದೊರೆಗಳ ವಿರುದ್ಧ ಹೋರಾಡಿದರು. 1674ರಲ್ಲಿ ಶಿವಾಜಿ ಮಹಾರಾಜರು ತಮ್ಮನ್ನು ಚಕ್ರವರ್ತಿ ಎಂದು ಘೋಷಿಸಿಕೊಂಡು 'ಛತ್ರಪತಿ' ಎಂಬ ಬಿರುದನ್ನು ಪಡೆದರು.
ಸಂಭಾಜಿ 1657ರಲ್ಲಿ ಜನಿಸಿದರು. 1680ರ ಏಪ್ರಿಲ್‌ನಲ್ಲಿ ಶಿವಾಜಿಯ ಮರಣದ ನಂತರ ಸಂಭಾಜಿ ಸಿಂಹಾಸನ ಏರಿದರು. ಅವರು ಸಿಂಹಾಸನ ಏರದಂತೆ ಒಳಸಂಚು ನಡೆದಿದ್ದವು. ಅದನ್ನೆಲ್ಲ ಮೀರಿ ಅವರು ಮರಾಠ ಸೇನಾಧಿಪತಿ ಹಂಬಿರಾವ್ ಮೋಹಿತೆ ಸಹಾಯದಿಂದ 1681ರಲ್ಲಿ ಅಧಿಕೃತವಾಗಿ ಸಿಂಹಾಸನ ಏರಿದರು. ಅವರ ವಿರುದ್ಧ ಸಂಚು ರೂಪಿಸಿದ್ದ ರಾಜಾರಾಮ್, ಸೋಯ್ರಾಭಾಯಿ ಮತ್ತಿತರರನ್ನು ಗೃಹ ಬಂಧನದಲ್ಲಿ ಇರಿಸಲಾಯಿತು.
ಮೊಘಲ್ ವಿರುದ್ಧ ನಡೆದ ಹೋರಾಟ ಹೇಗಿತ್ತು?
ಮೊಘಲರು ಮರಾಠರ ಬದ್ಧ ವೈರಿಗಳಾಗಿದ್ದರು. ಅವರ ನಡುವೆ ನಡೆದ ಹೆಚ್ಚಿನ ಯುದ್ಧಗಳು ಸಂಭಾಜಿಯ ಆಳ್ವಿಕೆಯಲ್ಲೇ ನಡೆದವು ಎನ್ನುವುದು ವಿಶೇಷ. ಮೊದಲ ಯುದ್ಧ ಸಂಭಾಜಿ ಮಧ್ಯ ಪ್ರದೇಶದ ಶ್ರೀಮಂತ ಮೊಘಲ್ ನಗರ ಮತ್ತು ಅವರಿಗೆ ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದ ಬುರ್ಹಾನ್‌ಪುರದ ಮೇಲೆ ದಾಳಿ ಮಾಡಿದಾಗ ನಡೆಯಿತು. ಮೊಘಲ್ ಚಕ್ರವರ್ತಿ ಔರಂಗಜೇಬ ಡೆಕ್ಕನ್‌ನಲ್ಲಿ ತನ್ನ ಸಾಮ್ರಾಜ್ಯ ವಿಸ್ತರಿಸುವ ಯೋಜನೆಗಳ ಬಗ್ಗೆ ತಿಳಿದ ನಂತರ ಸಂಭಾಜಿ ನಗರದ ಮೇಲೆ ದಾಳಿ ನಡೆಸಿದರು.
1681ರಲ್ಲಿ ಔರಂಗಜೇಬನ ಪುತ್ರ ಅಕ್ಬರ್ ತನ್ನ ತಂದೆಯ ವಿರುದ್ಧ ಸೈನ್ಯವನ್ನು ಒಗ್ಗೂಡಿಸಲು ಡೆಕ್ಕನ್‌ಗೆ ಬಂದನು. ದಂಗೆಯನ್ನು ತಡೆಯಲು ಮತ್ತು ಮರಾಠ ರಾಜ್ಯವನ್ನು ನಾಶ ಪಡಿಸಲು ಔರಂಗಜೇಬನು ದಿಲ್ಲಿಯಿಂದ ಮಹಾರಾಷ್ಟ್ರದ ಬಳಿಯ ಖಿರ್ಕಿಗೆ (ಇಂದಿನ ಔರಂಗಾಬಾದ್) 4-5 ಲಕ್ಷ ಸೈನಿಕರ ಪಡೆಯೊಂದಿಗೆ ದಂಡಯಾತ್ರೆ ಕೈಗೊಂಡನು. ಔರಂಗಜೇಬನ ವಿರುದ್ಧದ ಹೋರಾಟದಲ್ಲಿ ತನಗೆ ಸಹಾಯ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದ ಸಂಭಾಜಿಯಿಂದ ಅಕ್ಬರ್ ಸಹಾಯಕ್ಕೆ ಮನವಿ ಮಾಡಿದನು.
ಅದಾಗ್ಯೂ ಮೊಘಲರು ನಾಸಿಕ್ ಮತ್ತು ಬಾಗ್ಲಾನಾ ಪ್ರದೇಶಗಳಲ್ಲಿ ಮರಾಠರು ಹೊಂದಿದ್ದ ಕೋಟೆಗಳನ್ನು ವಶಪಡಿಸಿಕೊಳ್ಳಲು ಬಯಸಿದ್ದರು. 1682ರಲ್ಲಿ ಅವರು ನಾಸಿಕ್ ಬಳಿಯ ರಾಮ್‌ಸೇಜ್ ಕೋಟೆಯ ಮೇಲೆ ದಾಳಿ ಮಾಡಿದರು. ಆದರೆ ತಿಂಗಳ ಪ್ರಯತ್ನಗಳ ಹೊರತಾಗಿಯೂ ಕೋಟೆಯನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸಂಭಾಜಿ ಇದಕ್ಕೆ ಅವಕಾಶ ನೀಡಲಿಲ್ಲ.
ಇತರ ಮುಖ್ಯ ಹೋರಾಟಗಳು
ಕೊಂಕಣ ಕರಾವಳಿಯ ಮೇಲೆ ಹಿಡಿತ ಸಾಧಿಸಲು ಬಯಸಿದ ಅಬಿಸ್ಸಿನಿಯನ್ ಸಿದ್ದಿ ಆಡಳಿತಗಾರರೊಂದಿಗೂ ಸಂಭಾಜಿ ಹೋರಾಡಿದರು. ಇಂದಿನ ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿರುವ ಜಂಜೀರಾ ದ್ವೀಪಕ್ಕೆ ಅವರನ್ನು ಸೀಮಿತಗೊಳಿಸಿದ ಖ್ಯಾತಿ ಸಂಭಾಜಿಗೆ ಸಲ್ಲುತ್ತದೆ.
1683ರ ಕೊನೆಯಲ್ಲಿ ಗೋವಾದಲ್ಲಿ ಪೋರ್ಚುಗೀಸ್ ವಸಾಹತುಗಾರರೊಂದಿಗೂ ಸಂಭಾಜಿ ಹೋರಾಡಿದರು. ಮರಾಠರ ದಾಳಿಯಿಂದ ಕಂಗೆಟ್ಟ ಪೋರ್ಚುಗೀಸರು ಮೊಘಲರ ಸಹಾಯ ಕೋರಿದರು. ಮೊಘಲ್ ಸೈನ್ಯ ಮತ್ತು ನೌಕಾಪಡೆಯು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ಬಳಿಕ 1684ರ ಜನವರಿಯಲ್ಲಿ ಸಂಭಾಜಿ ಗೋವಾದಿಂದ ಹಿಮ್ಮೆಟ್ಟಬೇಕಾಯಿತು. 1681ರಲ್ಲಿ ಸಂಭಾಜಿ ಕಣ್ಣು ಮೈಸೂರಿನ ಮೇಲೆ ಬಿತ್ತು. ಇಲ್ಲಿ ಆಡಳಿತ ನಡೆಸುತ್ತಿದ್ದ ಚಿಕ್ಕದೇವರಾಜ ಅವರನ್ನು ಹಿಮ್ಮೆಟಿಸಲು ಮುಂದಾಗಿದ್ದರು. ಆದರೆ ಇದರಲ್ಲಿ ಅವರು ಯಶಸ್ವಿಯಾಗಲಿಲ್ಲ.
ಈ ಸುದ್ದಿಯನ್ನೂ ಓದಿ: Rashmika Mandanna: ಗಾಯದಿಂದ ಸಂಪೂರ್ಣ ಚೇತರಿಸಿಕೊಂಡ ರಶ್ಮಿಕಾ; ವಿಡಿಯೊ ನೋಡಿ ಫ್ಯಾನ್ಸ್ ಫುಲ್ ಖುಷ್
ಸಂಭಾಜಿ ಮೃತಪಟ್ಟಿದ್ದು ಹೇಗೆ?
1687ರಲ್ಲಿ ನಡೆದ ವಾಯೈ ಯುದ್ಧದಲ್ಲಿ ಸಂಭಾಜಿ ಅವರ ಮುಖ್ಯ ಬೆಂಬಲಿಗ ಹಂಬಿರಾವ್ ಮೋಹಿತೆ ಮೃತಪಟ್ಟರು. ಈ ಯುದ್ಧದಲ್ಲಿ ಮರಾಠ ಸೈನ್ಯ ಜಯಗಳಿಸಿದರೂ, ಹಂಬಿರಾವ್ ಮೋಹಿತೆ ನಿಧನ ಪ್ರಭಾವ ಬೀರಿತು. ಒಬ್ಬೊಬ್ಬರಾಗಿ ತುಕುಡಿಯಿಂದ ಹೊರ ಬೀಳತೊಡಗಿದರು. 1689ರಲ್ಲಿ ಸಂಭಾಜಿ ಸೈನ್ಯವನ್ನು ಮೊಘಲರು ಸೋಲಿಸಿದರು. ಆದರೆ ಸಂಭಾಜಿ ಶರಣಾಗಲು ನಿರಾಕರಿಸಿದರು. ದೇವರು, ಧರ್ಮ ಮತ್ತು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರು.
ಇತಿಹಾಸಕಾರರ ಪ್ರಕಾರ, ಸಂಭಾಜಿಗೆ ತನ್ನ ಎಲ್ಲ ಕೋಟೆಗಳು, ಸಂಪತ್ತನ್ನು ಬಿಟ್ಟುಕೊಟ್ಟರೆ ಮತ್ತು ಅಂತಿಮವಾಗಿ ಇಸ್ಲಾಂಗೆ ಮತಾಂತರಗೊಂಡರೆ ಸುಮ್ಮನೆ ಬಿಟ್ಟು ಬಿಡುವುದಾಗಿ ತಿಳಿಸಿದರು. ಆದರೆ ಸಂಭಾಜಿ ಹಾಗೆ ಮಾಡಲು ನಿರಾಕರಿಸಿದರು. ಪರಿಣಾಮವಾಗಿ ಮರಣ ದಂಡನೆ ವಿಧಿಸಲಾಯಿತು. ಅಲ್ಲಿಗೆ ಬಹುದೊಡ್ಡ ಹೋರಾಟದ ಅಧ್ಯಾಯವೊಂದು ಅತಂತ್ಯವಾದಂತಾಯಿತು. ʼಛಾವಾʼ ಚಿತ್ರದಲ್ಲಿ ಸಂಭಾಜಿ ಮಹಾರಾಜರ ಶೌರ್ಯವನ್ನು ತೆರೆಗೆ ತರಲು ಲಕ್ಷ್ಮಣ್ ಉಟೇಕರ್ ಯತ್ನಿಸಿದ್ದಾರೆ. ಇದು ಎಷ್ಟರ ಮಟ್ಟಿಗೆ ಯಸಸ್ವಿಯಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.