ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Boycott Turkey: ಟರ್ಕಿ ಕಂಪನಿಯ ಏರ್‌ಪೋರ್ಟ್ ಸೇವೆ ರದ್ದುಪಡಿಸಿದ ಕೇಂದ್ರ

ಭಾರತದ ವಿರುದ್ಧ ನಡೆದ ಸಂಘರ್ಷದ ವೇಳೆ ಪಾಕಿಸ್ತಾನಕ್ಕೆ ನೆರವಾದ ಟರ್ಕಿ ವಿರುದ್ಧ ಇದೀಗ ಭಾರತೀಯರು ʼಬಾಯ್ಕಾಟ್‌ ಟರ್ಕಿʼ ಅಭಿಯಾನ ಆರಂಭಿಸಿದ್ದಾರೆ. ಈ ಮಧ್ಯೆ ಟರ್ಕಿ ಮೂಲದ ಸೆಲೆಬಿ ಏರ್‌ಪೋರ್ಟ್‌ ಇಂಡಿಯಾ ಸರ್ವೀಸ್‌ ಕಂಪನಿಗೆ ಕೊಟ್ಟಿದ್ದ ಅನುಮೋದನೆಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿದೆ.

ಟರ್ಕಿ ಕಂಪನಿಯ ಏರ್‌ಪೋರ್ಟ್ ಸೇವೆ ರದ್ದುಪಡಿಸಿದ ಕೇಂದ್ರ

ಸಾಂದರ್ಭಿಕ ಚಿತ್ರ.

Profile Ramesh B May 15, 2025 8:10 PM

ದಿಲ್ಲಿ: ಪಹಲ್ಗಾಮ್‌ ಭಯೋತ್ಪಾದಕ ದಾಳಿಯ (Pahalgam Attack) ಬಳಿಕ ಪಾಕಿಸ್ತಾನಕ್ಕೆ ಬೆಂಬಲ ನೀಡಿರುವ ಟರ್ಕಿಯ ವಿರುದ್ಧ ಭಾರತ ಇದೀಗ ಕ್ರಮ ಜರುಗಿಸಿದೆ (Boycott Turkey). ಮುಂಬಯಿ, ಬೆಂಗಳೂರು, ದಿಲ್ಲಿ, ಗೋವಾ, ಚೆನ್ನೈ, ಅಹಮದಾಬಾದ್‌, ಹೈದರಾಬಾದ್‌, ಕೊಚ್ಚಿ, ಚೆನ್ನೈ, ಕಣ್ಣೂರು ವಿಮಾನ ನಿಲ್ದಾಣದಲ್ಲಿ ಗ್ರೌಂಡ್‌ ಹ್ಯಾಂಡ್ಲಿಂಗ್‌ ಸೇವೆಯನ್ನು ನೀಡುತ್ತಿದ್ದ ಟರ್ಕಿ ಮೂಲದ ಸೆಲೆಬಿ ಏರ್‌ಪೋರ್ಟ್‌ ಇಂಡಿಯಾ ಸರ್ವೀಸ್‌ (Celebi Airport Services India) ಕಂಪನಿಗೆ ಕೊಟ್ಟಿದ್ದ ಅನುಮೋದನೆಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿದೆ.

ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿ ದೃಷ್ಟಿಯಿಂದ ಟರ್ಕಿ ಕಂಪನಿಗೆ ನೀಡಿದ್ದ ಸೆಕ್ಯುರಿಟಿ ಕ್ಲಿಯರೆನ್ಸ್‌ ಅನ್ನು ಕೇಂದ್ರ ಸರಕಾರ ರದ್ದುಪಡಿಸಿದೆ ಎಂದು ಪ್ರಕಟಣೆ ತಿಳಿಸಿದೆ. ಈ ಕಂಪನಿಯು ಭಾರತದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ನಿರ್ವಹಣೆ, ಲೋಡ್‌ ಕಂಟ್ರೋಲ್‌, ಫ್ಲೈಟ್‌ ಆಪರೇಷನ್ಸ್‌, ಬ್ಯಾಗೇಜ್‌ ನಿರ್ವಹಣೆ, ಸರಕು ಸಾಗಣೆ, ಅಂಚೆ, ವೇರ್‌ ಹೌಸ್ ಇತ್ಯಾದಿ ಸೇವೆಗಳನ್ನು ವಹಿಸುತ್ತಿತ್ತು.‌



ಈ ಸುದ್ದಿಯನ್ನೂ ಓದಿ: Boycott Turkey: ಭಾರತದಲ್ಲಿ ಜೋರಾಯ್ತು ಬಾಯ್ಕಾಟ್‌ ಟರ್ಕಿ ಅಭಿಯಾನ; ಪಾಕಿಸ್ತಾನಕ್ಕೆ ನೆರವಿನ ಹಸ್ತ ಚಾಚಿ ಬಲವಾದ ಹೊಡೆತ ತಿಂದ ಮುಸ್ಲಿಂ ರಾಷ್ಟ್ರ

ಸೆಲೆಬಿ ಕಂಪನಿಯು ಹತ್ತು ವರ್ಷಗಳ ಹಿಂದೆ ಮುಂಬಯಿ ಇಂಟರ್‌ ನ್ಯಾಶನಲ್‌ ಏರ್‌ ಪೋರ್ಟ್‌ ಸಹಭಾಗಿತ್ವದಲ್ಲಿ ಭಾರತೀಯ ವೈಮಾನಿಕ ಕ್ಷೇತ್ರವನ್ನು ಪ್ರವೇಶಿಸಿತ್ತು. ಮುಂಬಯಿ ಏರ್‌ ಪೋರ್ಟ್‌ನ ಗ್ರೌಂಡ್‌ ಆಪರೇಷನ್ಸ್‌ನ 70% ನಿರ್ವಹಣೆಯನ್ನು ಇದುವೇ ಮಾಡುತ್ತಿತ್ತು. ಸೆಲೆಬಿ ವರ್ಷಕ್ಕೆ 58,000ಕ್ಕೂ ಹೆಚ್ಚು ವಿಮಾನ ಟ್ರಿಪ್‌ಗಳನ್ನು ಮತ್ತು 5,40,000 ಟನ್‌ ಸರಕು ಸಾಗಣೆಯನ್ನು ನಿರ್ವಹಿಸಿತ್ತು. ಟರ್ಕಿಯ ಅಧ್ಯಕ್ಷ ಎರ್ಡೊಗನ್ ಬಹಿರಂಗವಾಗಿಯೇ ಪಾಕಿಸ್ತಾನವನ್ನು ಬೆಂಬಲಿಸಿದ್ದಾರೆ.

ಒಪ್ಪಂದ ರದ್ದು

ಟರ್ಕಿಶ್ ಸಂಸ್ಥೆಗಳೊಂದಿಗಿನ ಎಲ್ಲ ರೀತಿಯ ಶೈಕ್ಷಣಿಕ ಸಂಬಂಧವನ್ನು ದಿಲ್ಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ರದ್ದುಪಡಿಸಿದೆ. ಟರ್ಕಿಯ ಜಾಗತಿಕ ನಿಲುವಿನ ವಿರುದ್ಧ ಇತ್ತೀಚೆಗೆ ಉಂಟಾದ ಉದ್ವಿಗ್ನತೆ ಮತ್ತು ರಾಷ್ಟ್ರವ್ಯಾಪಿ ಪ್ರತಿಭಟನೆಗಳ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜಾಮಿಯಾ ವಿವಿ ಹೊರಡಿಸಿದ ನೋಟಿಸ್‌ನಲ್ಲಿ "ಜಾಮಿಯಾ ಮಿಲಿಯಾ ಇಸ್ಲಾಮಿಯಾ ಮತ್ತು ಟರ್ಕಿಯ ಸರ್ಕಾರದೊಂದಿಗೆ ಸಂಯೋಜಿತವಾಗಿರುವ ಯಾವುದೇ ಸಂಸ್ಥೆಯ ನಡುವಿನ ತಿಳುವಳಿಕೆ ಒಪ್ಪಂದವನ್ನು (MoU) ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಅಮಾನತುಗೊಳಿಸಲಾಗಿದೆ" ಎಂದು ಹೇಳಿದೆ. ವಿಶ್ವವಿದ್ಯಾನಿಲಯವು "ರಾಷ್ಟ್ರದೊಂದಿಗೆ ದೃಢವಾಗಿ ನಿಲ್ಲುತ್ತದೆ" ಎಂದು ಕೂಡ ಹೇಳಿದೆ.

ಈ ಹಿಂದೆ ದಿಲ್ಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (JNU) ಟರ್ಕಿಶ್ ಸಂಸ್ಥೆಗಳೊಂದಿಗಿನ ಒಪ್ಪಂದವನ್ನು ಕೊನೆಗೊಳಿಸಿತ್ತು. ಅದಾದ ಬಳಿಕ ಕಾನ್ಪುರ ವಿಶ್ವವಿದ್ಯಾಲಯವು ಟರ್ಕಿಯ ಇಸ್ತಾನ್‌ಬುಲ್ ವಿಶ್ವವಿದ್ಯಾಲಯದೊಂದಿಗಿನ ತನ್ನ ಒಪ್ಪಂದವನ್ನು ಸ್ಥಗಿತಗೊಳಿಸಿತ್ತು. ಆ ಮೂಲಕ ಪಾಕಿಸ್ತಾನದ ಪರವಾಗಿ ನಿಂತ ಟರ್ಕಿಗೆ ಭಾರತ ಬಲವಾದ ಹೊಡೆತ ನೀಡಿದೆ.

ಬಾಯ್ಕಾಟ್‌ ಅಭಿಯಾನ

ಈಗಾಗಲೇ ದೇಶದಲ್ಲಿ ಬಾಯ್ಕಾಟ್‌ ಟರ್ಕಿ ಅಭಿಯಾನ ಆರಂಭವಾಗಿದೆ. ಟರ್ಕಿಯ ಉತ್ಪನ್ನಗಳನ್ನು ಖರೀದಿಸದಂತೆ ಮತ್ತು ಅಲ್ಲಿಗೆ ಪ್ರವಾಸಕ್ಕೆ ತೆರಳದಂತೆ ಆಗ್ರಹಿಸಲಾಗುತ್ತಿದೆ. ಈಗಾಗಲೇ ಹಲವರು ಟರ್ಕಿಯ ಪ್ರವಾಸವನ್ನು ರದ್ದುಪಡಿಸಿದ್ದಾರೆ. ಇದು ಟರ್ಕಿ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.