ಮೇ 19ರಿಂದ ಬೆಂಗಳೂರಿನಲ್ಲಿ ಸುಟ್ಟ ಗಾಯಗಳಿಗೆ ಉಚಿತ ಪ್ಲಾಸ್ಟಿಕ್ ಸರ್ಜರಿ ಶಿಬಿರ
Tumkur News: ಬೆಂಗಳೂರಿನ ಫ್ರೆಂಡ್ಸ್ ವೆಲ್‌ಫೇರ್ ಆರ್ಗನೈಸೇಷನ್ ವತಿಯಿಂದ ಮೇ 19ರಿಂದ 10 ದಿನಗಳ ಕಾಲದ ಸುಟ್ಟ ಗಾಯಗಳಿಗೆ ಉಚಿತವಾಗಿ ಪ್ಲಾಸ್ಟಿಕ್ ಸರ್ಜರಿ ನಡೆಸುವ ಶಿಬಿರವನ್ನು ಬೆಂಗಳೂರಿನ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರೆಂಡ್ಸ್ ವೆಲ್‌ಫೇರ್ ಆರ್ಗನೈಸೇಷನ್‌ನ ಪಾಯಲ್ ತಿಳಿಸಿದ್ದಾರೆ.


ತುಮಕೂರು: ಬೆಂಗಳೂರಿನ ಫ್ರೆಂಡ್ಸ್ ವೆಲ್‌ಫೇರ್ ಆರ್ಗನೈಸೇಷನ್ ವತಿಯಿಂದ ಮೇ 19ರಿಂದ 10 ದಿನಗಳ ಕಾಲದ ಸುಟ್ಟ ಗಾಯಗಳಿಗೆ ಉಚಿತವಾಗಿ ಪ್ಲಾಸ್ಟಿಕ್ ಸರ್ಜರಿ ನಡೆಸುವ ಶಿಬಿರವನ್ನು ಬೆಂಗಳೂರಿನ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಫ್ರೆಂಡ್ಸ್ ವೆಲ್‌ಫೇರ್ ಆರ್ಗನೈಸೇಷನ್‌ನ ಪಾಯಲ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಟ್ಟ ಅಪಘಾತ ಸಂತ್ರಸ್ತರಿಗೆ, ಆಸಿಡ್ ಹೊಡೆತ ಒಳಗಾದವರಿಗೆ ಮತ್ತು ಕೈಗಾರಿಕಾ, ವಿದ್ಯುತ್ ಸುಟ್ಟ ಗಾಯಗಳಿಗೆ ಉಚಿತವಾಗಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಿದ್ದು, ಮೇ 19ರಿಂದ ಫ್ರೆಂಡ್ಸ್ ವೆಲ್‌ಫೇರ್ ಆರ್ಗನೈಸೇಷನ್ 28ನೇ ಉಚಿತ ಪ್ಲಾಸ್ಟಿಕ್ ಸರ್ಜರಿ ಶಿಬಿರವನ್ನು ಬೆಂಗಳೂರಿನಲ್ಲಿ ಆಯೋಜಿಸುತ್ತಿದೆ.
ಅಮೆರಿಕದ ಮೂವರು ಪ್ಲಾಸ್ಟಿಕ್ ಸರ್ಜರಿ ತಜ್ಞರ ವೈದ್ಯರೊಂದಿಗೆ 10 ಜನ ವೈದ್ಯರ ತಂಡ 10 ದಿನಗಳ ಕಾಲ ಬೆಂಗಳೂರಿನಲ್ಲಿ ಅಗತ್ಯವಿರುವ ರೋಗಿಗಳಿಗೆ ಉಚಿತವಾಗಿ ಪ್ಲಾಸ್ಟಿಕ್ ಸರ್ಜರಿ ಮಾಡಲಿದೆ ಎಂದರು.
ಅಮೆರಿಕದ ರೋಟಾಪ್ಲಾಸ್ಟ್ ತಜ್ಞ ವೈದ್ಯರ ತಂಡ ಆಗಮಿಸಿ ಸೂಕ್ತ ಚಿಕಿತ್ಸೆ ಮತ್ತು ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಲಿದೆ. ರೋಗಿಗಳಿಗೆ ಪ್ರಯಾಣ, ಶಸ್ತ್ರ ಚಿಕಿತ್ಸೆ, ಔಷಧಿ ಮತ್ತು ಊಟದ ವೆಚ್ಚವನ್ನು ಫ್ರೆಂಡ್ಸ್ ವೆಲ್‌ಫೇರ್ ಆರ್ಗೆನೈಸೇಷನ್ ಭರಿಸುತ್ತೇವೆ. ಇದು ಸಾಮಾನ್ಯವಾಗಿ ರೂ 1.5-5 ಲಕ್ಷ ನಡುವೆ ವೆಚ್ಚವಾಗುತ್ತದೆ ಮತ್ತು ಹಲವರಿಗೆ ಈ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಫ್ರೆಂಡ್ಸ್ ವೆಲ್‌ಫೇರ್ ಆರ್ಗನೈಸೇಷನ್ ಈ ಎಲ್ಲಾ ವೆಚ್ಚವನ್ನು ಭರಿಸುವ ಮೂಲಕ ರೋಗಿಗಳಿಗೆ ಶೇ.100 ರಷ್ಟು ಉಚಿತ ಶಸ್ತ್ರಚಿಕಿತ್ಸೆ ನಡೆಸಲಿದೆ ಎಂದು ಸ್ಪಷ್ಟಪಡಿಸಿದರು.
ತುಮಕೂರು ಜಿಲ್ಲೆಯಲ್ಲಿರುವ ಈ ರೀತಿಯ ಸುಟ್ಟ ಗಾಯಗಳ ರೋಗಿಗಳಿಗೆ ಶಸ್ತ್ರಚಿಕಿತ್ಸಾ ಪೂರ್ವ ಪರೀಕ್ಷೆಯನ್ನು ಮೇ 16ರಂದು ತುಮಕೂರು ನಗರದಲ್ಲಿರುವ ಸರ್ವೋದಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿ, ಅಗತ್ಯವಿರುವ ರೋಗಿಗಳ ಮತ್ತು ಅವರ ಕುಟುಂಬದವರನ್ನು ಬೆಂಗಳೂರಿಗೆ ಕರೆಯಿಸಿ ಶಸ್ತ್ರಚಿಕಿತ್ಸೆ ನಡೆಸಲಾಗುವುದು. ಅಗತ್ಯವಿರುವ ವ್ಯಕ್ತಿಗಳು ಮೇ 16ರ ಶುಕ್ರವಾರ ನಡೆಯುವ ತಪಾಸಣೆಯಲ್ಲಿ ಪಾಲ್ಗೊಳ್ಳುವಂತೆ ಪಾಯಲ್ ಮನವಿ ಮಾಡಿದರು.
ಮೇ 19ರಿಂದ 10 ದಿನಗಳ ಕಾಲ ಬೆಂಗಳೂರಿನ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆಯುತ್ತಿರುವುದು ಸುಟ್ಟಗಾಯಗಳಿಂದ ತೊಂದರೆಗೆ ಒಳಗಾದ ರೋಗಿಗಳಿಗೆ ಮಾಡುತ್ತಿರುವ ಪ್ಲಾಸ್ಟಿಕ್ ಸರ್ಜರಿಯೇ ಹೊರತು, ಸೌಂದರ್ಯವರ್ಧಕ ಚಿಕಿತ್ಸೆಯಲ್ಲ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಸದಸ್ಯರಿಗೆ 9880307780 ಅಥವಾ 9148741707 ಗೆ ಸಂಪರ್ಕಿಸುವಂತೆ ಅವರು ಮನವಿ ಮಾಡಿದರು.
ಈ ಸುದ್ದಿಯನ್ನೂ ಓದಿ | Dinesh Gundu Rao: ರಾಜ್ಯ ಸರ್ಕಾರದಿಂದಲೇ ಇನ್ಮುಂದೆ 108 ಆಂಬ್ಯುಲೆನ್ಸ್ ನಿರ್ವಹಣೆ: ದಿನೇಶ್ ಗುಂಡೂರಾವ್
ಸುದ್ದಿಗೋಷ್ಠಿಯಲ್ಲಿ ಫ್ರೆಂಡ್ಸ್ ವೆಲ್‌ಫೇರ್ ಅಸೋಸಿಯೇಷನ್‌ನ ಮಹೇಂದ್ರ ಜೈನ್ ಮತ್ತು ತುಮಕೂರಿನ ಸರ್ವೋದಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮಾರುತಿ ಉಪಸ್ಥಿತರಿದ್ದರು.