ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mock Drill: ನಾಳೆ ನಡೆಯಲಿರುವ ಮಾಕ್‌ ಡ್ರಿಲ್‌ ಬಗ್ಗೆ ನಿಮಗೆಷ್ಟು ಗೊತ್ತು? ಈ ಬಗ್ಗೆ ಮೊದಲೇ ತಿಳಿದಿರಲಿ

ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯ ಬಳಿಕ ಪಾಕಿಸ್ತಾನದ ವಿರುದ್ಧ ಹಲವಾರು ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡಿರುವ ಭಾರತವು ಯುದ್ಧದ ಕುರಿತು ಇನ್ನೂ ಯಾವುದೇ ನಿರ್ಧಾರಗಳನ್ನು ಕೈಗೊಂಡಿಲ್ಲ. ಆದರೆ ಈ ನಡುವೆ ಕೇಂದ್ರ ಗೃಹ ಸಚಿವಾಲಯ ಸೋಮವಾರ ರಾಜ್ಯಗಳಿಗೆ ಮೇ 7ರಂದು ನಾಗರಿಕ ರಕ್ಷಣೆಗಾಗಿ ಅಣಕು ಕವಾಯತುಗಳನ್ನು ನಡೆಸುವಂತೆ ಸೂಚಿಸಿದೆ.

ಮಾಕ್‌ ಡ್ರಿಲ್‌ ಬಗ್ಗೆ ಈ ಸಂಗತಿಗಳು ತಿಳಿದಿರಲಿ

ನವದೆಹಲಿ: ದೇಶಾದ್ಯಂತ ಮೇ 7ರಂದು ಯುದ್ಧದ ಸೈರನ್ ಮೊಳಗಲಿದೆ. ಹಾಗಂತ ಇದು ಯುದ್ಧದ ಮುನ್ಸೂಚನೆ ಅಲ್ಲ. ಯುದ್ಧಕ್ಕೆ ಸಿದ್ಧರಾಗಲು ನಾಗರಿಕರಿಗೆ ನೀಡುವ ತರಬೇತಿಯಾಗಿದೆ. ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಈ ಕಾರ್ಯಕ್ರಮ(Mock Drill) ದೇಶಾದ್ಯಂತ ನಡೆಯಲಿದೆ. ಇದರಲ್ಲಿ ದೇಶದ ನಾಗರಿಕರಿಗೆ ಯುದ್ಧ ತರಬೇತಿಯನ್ನು ನೀಡಲಾಗುತ್ತದೆ. ಇದಕ್ಕಾಗಿ ಜಿಲ್ಲಾಧಿಕಾರಿಗಳು ಪ್ರತಿ ಜಿಲ್ಲೆಯಲ್ಲಿ ಮೇ 7ರಿಂದ ನಾಗರಿಕ ರಕ್ಷಣಾ ಸ್ವಯಂಸೇವಕರ ಪಟ್ಟಿಯನ್ನು ಸಿದ್ಧಪಡಿಸುತ್ತಾರೆ. ತುರ್ತು ಸಂದರ್ಭದಲ್ಲಿ ದೇಶ ರಕ್ಷಣಾ ಕಾರ್ಯಕ್ಕೆ ಇವರನ್ನು ಆಯ್ಕೆ ಮಾಡಲಾಗುತ್ತದೆ.

ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯ ಬಳಿಕ ಪಾಕಿಸ್ತಾನದ ವಿರುದ್ಧ ಹಲವಾರು ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡಿರುವ ಭಾರತವು ಯುದ್ಧದ ಕುರಿತು ಇನ್ನೂ ಯಾವುದೇ ನಿರ್ಧಾರಗಳನ್ನು ಕೈಗೊಂಡಿಲ್ಲ. ಆದರೆ ಈ ನಡುವೆ ಕೇಂದ್ರ ಗೃಹ ಸಚಿವಾಲಯ ಸೋಮವಾರ ರಾಜ್ಯಗಳಿಗೆ ಮೇ 7ರಂದು ನಾಗರಿಕ ರಕ್ಷಣೆಗಾಗಿ ಅಣಕು ಕವಾಯತುಗಳನ್ನು ನಡೆಸುವಂತೆ ಸೂಚಿಸಿದೆ.

ಇದರ ಅಡಿಯಲ್ಲಿ ಯುದ್ಧದ ಸಮಯದಲ್ಲಿ, ವಾಯುದಾಳಿ ಎಚ್ಚರಿಕೆಯ ಸೈರನ್‌ಗಳನ್ನು ಸಕ್ರಿಯಗೊಳಿಸಲಾಗುತ್ತದೆ ಮತ್ತು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಹೀಗಾಗಿ ಮೇ 7 ರಂದು ದೇಶದ ವಿವಿಧ ಭಾಗಗಳಲ್ಲಿ ವಾಯುದಾಳಿಯ ಸೈರನ್‌ಗಳು ಮೊಳಗಲಿವೆ. ಯಾಕೆಂದರೆ ನಾಗರಿಕರು ಯುದ್ಧದ ಸಂದರ್ಭದಲ್ಲಿ ಸ್ವಯಂ ರಕ್ಷಣೆಗಾಗಿ ಸಿದ್ಧಪಡಿಸುವ ಉದ್ದೇಶದಿಂದ ದೇಶಾದ್ಯಂತ ಅಣಕು ಕವಾಯತುಗಳಲ್ಲಿ ಭಾಗವಹಿಸಲಿದ್ದಾರೆ.

1971ರ ಅನಂತರ ಇದೇ ಮೊದಲ ಬಾರಿಗೆ ಈ ಕವಾಯತುಗಳನ್ನು ನಡೆಸಲಾಗುತ್ತಿದ್ದು, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯ ಅನಂತರ ಪಾಕಿಸ್ತಾನದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಈ ಕವಾಯತುಗಳನ್ನು ನಡೆಸಲು ಆದೇಶಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ನಾಗರಿಕ ರಕ್ಷಣಾ ಮಹಾನಿರ್ದೇಶಕ ವಿವೇಕ್ ಶ್ರೀವಾಸ್ತವ, ದೇಶಾದ್ಯಂತ ಈ ಅಣಕು ಕವಾಯತು ನಡೆಯಲಿದೆ ಎಂದು ತಿಳಿಸಿದರು.

ನಾಗರಿಕ ರಕ್ಷಣಾ ಕವಾಯತುಗಳನ್ನು ನಿಯಮಿತವಾಗಿ ಕೆಲವು ಜಿಲ್ಲೆಗಳಲ್ಲಿ ನಡೆಸುತ್ತಿರುತ್ತೇವೆ. ಆದರೆ ಈ ಬಾರಿ ಅದು ಸಂಪೂರ್ಣ ಭಾರತದಲ್ಲಿ ಏಕಕಾಲಕ್ಕೆ ನಡೆಯಲಿದೆ. ಇದು ಒಂದೆರಡು ದಿನಗಳ ಕಾಲ ನಡೆಯುವ ಸಾಧ್ಯತೆ ಇದೆ. ನಾಗರಿಕ ರಕ್ಷಣೆಗಾಗಿ ನಡೆಯುವ ಈ ಅಣಕು ಕವಾಯತು ಜನರನ್ನು ಭಯಭೀತರನ್ನಾಗಿಸಲು ನಡೆಸಲಾಗುತ್ತಿಲ್ಲ. ಇದು ನಾಗರಿಕ ರಕ್ಷಣಾ ಸ್ವಯಂಸೇವಕರ ಪಟ್ಟಿಯನ್ನು ಮರು ಪರಿಶೀಲನೆ ನಡೆಸಲು ಮಾಡಲಾಗುತ್ತದೆ. ಇದು ಮುಂದೆ ಸನ್ನಿವೇಶಕ್ಕೆ ನಮ್ಮನ್ನು ಸಜ್ಜುಗೊಳಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.

ನಾಗರಿಕ ರಕ್ಷಣಾ ಅಣಕು ಕವಾಯತು ಕೊನೆಯ ಬಾರಿಗೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ಉತ್ತರ ಪ್ರದೇಶದ ಗೋರಖ್‌ಪುರ ನಗರದಲ್ಲಿ ನಡೆಸಲಾಗಿತ್ತು. ಆದರೆ ಮುಂದಿನ ಬುಧವಾರ ನಡೆಯಲಿರುವ ಅಣಕು ಕವಾಯತು ಸಂಪೂರ್ಣ ಭಿನ್ನವಾಗಿರಲಿದೆ ಎಂದು ಅವರು ಹಳಿದರು.

dril1

ಏನಿದು ಅಣಕು ಕವಾಯತು?

ದೇಶದ ನಾಗರಿಕ ರಕ್ಷಣೆಯನ್ನು ನಾಗರಿಕ ರಕ್ಷಣಾ ಕಾಯ್ದೆಯಡಿ ನಿಯಂತ್ರಿಸಲಾಗುತ್ತದೆ. ಇದರಲ್ಲಿ ಜಿಲ್ಲಾಧಿಕಾರಿಯು ಪ್ರತಿ ಜಿಲ್ಲೆಯಲ್ಲಿ ನಾಗರಿಕ ರಕ್ಷಣೆಯ ನೋಡಲ್ ಅಧಿಕಾರಿಯಾಗಿದ್ದಾರೆ. ಇವರು ಮೇ 7ರಿಂದ ನಾಗರಿಕ ರಕ್ಷಣಾ ಸ್ವಯಂಸೇವಕರ ಪಟ್ಟಿಯನ್ನು ಮರುಪರಿಶೀಲಿಸಿ ಯಾವುದೇ ತುರ್ತು ಸಂದರ್ಭದಲ್ಲಿ ಇವರ ಸಹಾಯವನ್ನು ಪಡೆಯಲು ಸಂಪರ್ಕ ಸಂಖ್ಯೆಗಳನ್ನು ಪಟ್ಟಿ ಮಾಡುತ್ತಾರೆ.

ದೇಶಾದ್ಯಂತ ಇರುವ ಕೆಲವು ದುರ್ಬಲವಾಗಿರುವ ಜಿಲ್ಲೆಗಳಲ್ಲಿ ಈ ಕಾರ್ಯಾಚರಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಡೆಸಲು ಮತ್ತು ನಾಗರಿಕರಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಯುದ್ಧದ ಸಮಯದಲ್ಲಿ ನಾಗರಿಕರನ್ನು ರಕ್ಷಿಸುವುದು ಜಿನೀವಾ ಸಮಾವೇಶದ ಅಡಿಯಲ್ಲಿ ಒಂದು ಅವಶ್ಯಕತೆಯಾಗಿದೆ. ಆದ್ದರಿಂದ ನಾವು ಅವರಿಗೆ ಅಧಿಕಾರ ನೀಡಬೇಕು. ತಮ್ಮನ್ನು ತಾವು ರಕ್ಷಿಸಿಕೊಳ್ಳಲು ತರಬೇತಿ ನೀಡಬೇಕು. ಕೊನೆಯ ಬಾರಿಗೆ ಇಂತಹ ತರಬೇತಿ 1999ರಲ್ಲಿ ಮತ್ತು ಅದಕ್ಕಿಂತ ಮೊದಲು 1971ರಲ್ಲಿ ನಡೆದಿತ್ತು. ಆದರೆ ಇಂದಿನ ಪೀಳಿಗೆಯ ಹೆಚ್ಚಿನ ಯುವಜನರಿಗೆ ಈ ಬಗ್ಗೆ ತಿಳಿದಿಲ್ಲ. ಆದ್ದರಿಂದ ಈ ಕವಾಯತಿನ ಅವಶ್ಯಕತೆಯಿದೆ ಎಂದು ನಾಗರಿಕ ರಕ್ಷಣೆಯ ಉಸ್ತುವಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏರ್‌ಸ್ಟ್ರೈಕ್‌ ಬಗ್ಗೆ ಎಚ್ಚರಿಕೆ

ಈ ಕವಾಯತಿನಲ್ಲಿ ವಾಯುದಾಳಿ ಎಚ್ಚರಿಕೆ ನೀಡುವ ವ್ಯವಸ್ಥೆಯ ಪರಿಶೀಲನೆ ನಡೆಸಲಾಗುತ್ತದೆ. ಇದು ತುರ್ತು ಪರಿಸ್ಥಿತಿಯಲ್ಲಿ ನಾಗರಿಕರಿಗೆ ಎಚ್ಚರಿಕೆ ನೀಡುವ ಮೊದಲ ಹೆಜ್ಜೆ. ವಾಯುಪಡೆಯು ಎಚ್ಚರಿಕೆಯನ್ನು ನೀಡುತ್ತದೆ ಮತ್ತು ಪ್ರತಿ ಜಿಲ್ಲೆಯು ತನ್ನ ವಾಯುದಾಳಿ ಎಚ್ಚರಿಕೆ ಸೈರನ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು.

ಬಂಕರ್‌ಗಳು

ಕೆಲವು ಪ್ರದೇಶಗಳಲ್ಲಿ ನಾಗರಿಕರನ್ನು ಸುರಕ್ಷಿತವಾಗಿ ಇರಿಸಲು ಬಂಕರ್ ಗಳನ್ನು ಸಿದ್ಧಪಡಿಸಲಾಗುತ್ತದೆ. ಇದರಲ್ಲಿ ನಾಗರಿಕರನ್ನು ಸಂರಕ್ಷಿತ ಪ್ರದೇಶದಲ್ಲಿ ಇರಿಸುವುದು ಸೇರಿರುತ್ತದೆ. ಕಾಶ್ಮೀರದ ಉರಿಯಂತಹ ಪ್ರದೇಶದಲ್ಲಿ ಈಗಾಗಲೇ ಸಮುದಾಯ ಬಂಕರ್‌ಗಳನ್ನು ಸಿದ್ಧಪಡಿಸಲು ಪ್ರಾರಂಭಿಸಲಾಗಿದೆ. ಇದರೊಂದಿಗೆ ಅಂತಾರಾಷ್ಟ್ರೀಯ ಗಡಿಯಲ್ಲಿರುವ ವಿದ್ಯಾರ್ಥಿಗಳನ್ನು ತುರ್ತು ಸಮಯದಲ್ಲಿ ಸ್ಥಳಾಂತರಿಸಲು ಅಣಕು ಕವಾಯತುಗಳನ್ನು ಅಭ್ಯಾಸ ನಡೆಸಲಾಗುತ್ತದೆ.

ಬ್ಲ್ಯಾಕೌಟ್ ಸೈರನ್

ಮೇ 7ರಂದು ನಡೆಯುವ ಅಣಕು ಕವಾಯತಿನಲ್ಲಿ ಬ್ಲ್ಯಾಕೌಟ್ ಸೈರನ್ ಗಳ ಬಗ್ಗೆಯೂ ಅಭ್ಯಾಸ ಮಾಡಲಾಗುತ್ತದೆ. ಈ ಸೈರನ್ ಮೊಳಗಿದರೆ ಕೆಲವೊಂದು ನಿಯಮವನ್ನು ಅನುಸರಿಸಬೇಕು. ಈ ಸೈರನ್ ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಮತ್ತು ಜನರು ಇದಕ್ಕೆ ಎಷ್ಟು ತ್ವರಿತವಾಗಿ ಪ್ರತಿಕ್ರಿಯಿಸುತ್ತಾರೆಯೇ ಎಂಬುದನ್ನು ನಿರ್ಣಯಿಸಲಾಗುತ್ತದೆ. ನಾಗರಿಕ ರಕ್ಷಣಾ ಸ್ವಯಂಸೇವಕರು ಈ ಬಗ್ಗೆ ಚೆನ್ನಾಗಿ ತಿಳಿದಿರಬೇಕು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಮುಖ ಸುರಕ್ಷತೆ ಕ್ರಮಗಳು

ನಾಗರಿಕ ರಕ್ಷಣೆಗಾಗಿ ಅಣಕು ಕವಾಯತಿನಲ್ಲಿ ರಕ್ಷಣೆ, ಪ್ಯಾರಾ ಮಿಲಿಟರಿ, ಆಸ್ಪತ್ರೆಗಳಲ್ಲಿನ ವ್ಯವಸ್ಥೆಗಳ ಪರಿಶೀಲನೆಯನ್ನು ನಡೆಸಲಾಗುತ್ತದೆ. ಇದು ನಾಗರಿಕ ರಕ್ಷಣಾ ಕಾರ್ಯತಂತ್ರದ ಪ್ರಮುಖ ಭಾಗವಾಗಿದೆ. ಆದೇಶ ಬಂದ ತಕ್ಷಣ ರಕ್ಷಣಾ ಪಟ್ಟಿಯಲ್ಲಿ ಉಲ್ಲೇಖಿಸಿರುವ ಪ್ರಮುಖ ಸವಲತ್ತುಗಳನ್ನು ರಕ್ಷಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ.

ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ತರಬೇತಿ

ನಾಗರಿಕ ರಕ್ಷಣಾ ಕವಾಯತಿನ ಇನ್ನೊಂದು ಪ್ರಮುಖ ಅಂಶವೆಂದರೆ ನಾಗರಿಕರು, ವಿದ್ಯಾರ್ಥಿಗಳು, ಆಸ್ಪತ್ರೆ ಸಿಬ್ಬಂದಿಯನ್ನು ನಾಗರಿಕ ರಕ್ಷಣಾ ಸ್ವಯಂಸೇವಕರೊಂದಿಗೆ ಪರಿಚಯಿಸುವುದು. ಇದರಿಂದ ತುರ್ತು ಸಮಯದಲ್ಲಿ ಅವರ ಸೂಚನೆಗಳನ್ನು ಅನುಸರಿಸಲಾಗುತ್ತದೆ. ಅಣಕು ಕವಾಯತು ನಡೆದಾಗ ಅಂತಹ ಸಂಸ್ಥೆಗಳಲ್ಲಿ ಅಧಿಕಾರಿಗಳೊಂದಿಗೆ ಸ್ಥಳಾಂತರದ ಯೋಜನೆಗಳನ್ನು ಚರ್ಚಿಸಲಾಗುತ್ತದೆ.

ಇದನ್ನೂ ಓದಿ: India-Pak: ಯುದ್ಧ ನಡೆದರೆ ಯಾರ ಪರ ನಿಲ್ಲುತ್ತೀರಾ? ಪಾಕ್‌ ಧರ್ಮಗುರು ಕೇಳಿದ ಪ್ರಶ್ನೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌

ಪ್ರಮುಖ ಉದ್ದೇಶಗಳು

ಯುದ್ಧದ ಸಂದರ್ಭದಲ್ಲಿ ಎದುರಾಗಬಹುದಾದ ಅಪಾಯವನ್ನು ಅಥವಾ ದುಷ್ಪರಿಣಾಮವನ್ನು ಕಡಿಮೆ ಮಾಡುವ ಉದ್ದೇಶದಿಂದ ಇದನ್ನು ನಡೆಸಲಾಗುತ್ತಿದೆ. ಇದರಲ್ಲಿ ವಾಯು ದಾಳಿ ಎಚ್ಚರಿಕೆ ವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು, ಭಾರತೀಯ ವಾಯುಪಡೆಯೊಂದಿಗೆ ಹಾಟ್ ಲೈನ್ ಅಥವಾ ರೇಡಿಯೋ ಸಂವಹನದ ಪರೀಕ್ಷೆ, ನಿಯಂತ್ರಣ ಕೊಠಡಿ, ನೆರಳು ನಿಯಂತ್ರಣ ಕೊಠಡಿಗಳ ಪರಿಶೀಲನೆ, ದಾಳಿಯ ಸಂದರ್ಭದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ನಾಗರಿಕ ರಕ್ಷಣಾ ಅಂಶಗಳ ಕುರಿತು ನಾಗರಿಕರು, ವಿದ್ಯಾರ್ಥಿಗಳಿಗೆ ತರಬೇತಿ. ಕ್ರ್ಯಾಶ್ ಬ್ಲ್ಯಾಕೌಟ್ ಕ್ರಮಗಳ ಮಾಹಿತಿ, ಪ್ರಮುಖ ಸ್ಥಾವರಗಳು, ಸ್ಥಾಪನೆಗಳ ಮರೆಮಾಚುವಿಕೆ, ತುರ್ತು ಸೇವೆಗಳು, ಅಗ್ನಿಶಾಮಕ, ರಕ್ಷಣಾ ಕಾರ್ಯಾಚರಣೆ ಮತ್ತು ಡಿಪೋ ನಿರ್ವಹಣೆ ಸೇರಿದಂತೆ ನಾಗರಿಕ ರಕ್ಷಣಾ ಸೇವೆಗಳ ಪರಿಶೀಲನೆ ನಡೆಯಲಿದೆ.

ಅಣಕು ಕಾರ್ಯಾಚರಣೆ ವೇಳೆ ಏನು ನಡೆಯಲಿದೆ?

ವಾಯು ದಾಳಿ ಎಚ್ಚರಿಕೆ ಸೈರನ್‌ಗಳು ಮೊಳಗಳಿವೆ, ಭಾರತೀಯ ವಾಯುಪಡೆಯಿಂದ ಎಚ್ಚರಿಕೆ ಸಂದೇಶಗಳು ದೊರೆಯಲಿದೆ, ನಾಗರಿಕ ರಕ್ಷಣಾ ಅಂಶಗಳ ಕುರಿತು ತರಬೇತಿ, ಪ್ರಮುಖ ಸ್ಥಾವರ, ಸ್ಥಾಪನೆಗಳ ಆರಂಭಿಕ ಮರೆಮಾಚುವಿಕೆ, ಬಂಕರ್‌, ಕಂದಕಗಳ ಶುಚಿಗೊಳಿಸುವಿಕೆ ಮೊದಲಾದ ಕಾರ್ಯಗಳನ್ನು ನಡೆಸಲಾಗುತ್ತದೆ.

ಏಪ್ರಿಲ್ 22 ರ ಭಯೋತ್ಪಾದಕ ದಾಳಿಯಲ್ಲಿ ಪಾಲ್ಗೊಂಡಿರುವ ದುಷ್ಕರ್ಮಿಗಳು ಮತ್ತು ಪಿತೂರಿಯ ಭಾಗವಾಗಿರುವವರನ್ನು ಅವರ ಕಲ್ಪನೆಗೂ ಮೀರಿ ಶಿಕ್ಷೆ ವಿಧಿಸಲು ಭೂಮಿಯ ತುದಿಯವರೆಗೆ ಹಿಂಬಾಲಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಪ್ರತಿಜ್ಞೆ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಭಾರತಕ್ಕೆ ಹಲವು ರೀತಿಯ ಬೆದರಿಕೆಗಳನ್ನು ಒಡ್ಡಿದೆ. ಈ ಹಿನ್ನೆಲೆಯಲ್ಲಿ ನಾಗರಿಕರು ಮತ್ತು ಸಾರ್ವಜನಿಕ ಸೊತ್ತುಗಳ ರಕ್ಷಣೆಯ ಮೊದಲ ಹೆಜ್ಜೆಯಾಗಿ ಈ ಕವಾಯತುಗಳನ್ನು ನಡೆಸುವುದು ಯುದ್ಧ ಭೀತಿಯ ಸಂದರ್ಭದಲ್ಲಿ ಕೈಗೊಳ್ಳುವ ಒಂದು ಪ್ರಮುಖ ಕಾರ್ಯವಾಗಿದೆ.