ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪ್ರತಿಭಟನಾಕಾರರ ಮೇಲೆ ದರ್ಪ: ಮಹಿಳೆಯನ್ನು ತುಳಿದ ಪೊಲೀಸ್‌; ವಿಡಿಯೊ ವೈರಲ್‌

Viral Video: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸ್‌ ಅಧಿಕಾರಿಯೊಬ್ಬರು ಮಹಿಳೆಯನ್ನು ತುಳಿದು ದರ್ಪ ಮೆರೆದಿದ್ದಾರೆ. ಸದ್ಯ ಈ ಘಟನೆಯ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ.

ಮಹಿಳೆಯನ್ನು ತುಳಿದ ಪೊಲೀಸ್‌; ವಿಡಿಯೊ ನೋಡಿ

Profile Ramesh B Mar 17, 2025 8:27 PM

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ (Jammu & Kashmir)ದಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸ್‌ ಅಧಿಕಾರಿಯೊಬ್ಬರು ಮಹಿಳೆಯನ್ನು ತುಳಿದು ದರ್ಪ ಮೆರೆದಿದ್ದಾರೆ. ಸದ್ಯ ಈ ಘಟನೆಯ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ (Viral Video) ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಘಟನೆಯ ಬಗ್ಗೆ ತನಿಖೆ ನಡೆಸಲು ಪೊಲೀಸರು ಆದೇಶ ಹೊರಡಿಸಿದ್ದಾರೆ. ಕುಲ್ಗಾಮ್‌ ಜಿಲ್ಲೆ (Kulgam district)ಯಲ್ಲಿ ಈ ಘಟನೆ ನಡೆದಿದೆ. ಶಾಂತಿಯುತ ಪ್ರತಿಭಟನೆ ನಡೆಯುತ್ತಿದ್ದಾಗ ಪೊಲೀಸ್‌ ಅಧಿಕಾರಿಯೊಬ್ಬರು ಮಹಿಳೆಯನ್ನು ತುಳಿಯುತ್ತಿರುವುದು ಸ್ಪಷ್ಟವಾಗಿ ವಿಡಿಯೊದಲ್ಲಿ ಕಂಡು ಬಂದಿದೆ.

"ಕುಲ್ಗಾಮ್‌ನಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆಯ ಜತೆ ಕೆಟ್ಟದಾಗಿ ವರ್ತಿಸಿದ ದೃಶ್ಯ ಸೋಶಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಂಡಿದೆ. ಭಾನುವಾರ (ಮಾ. 17) ಈ ಘಟನೆ ನಡೆದಿದೆ. ಈ ಪ್ರಕರಣದ ತನಿಖೆಗೆ ಮುಂದಾಗಿದ್ದೇವೆʼʼ ಎಂದು ಕಾಶ್ಮೀರ ವಲಯ ಪೊಲೀಸರು ಎಕ್ಸ್‌ನಲ್ಲಿ ತಿಳಿಸಿದ್ದಾರೆ.

ವೈರಲ್‌ ಆದ ಪೋಸ್ಟ್‌ ಇಲ್ಲಿದೆ:



ಭಾನುವಾರ ನಡೆದ ಘಟನೆಯ ಬಗ್ಗೆ ದಕ್ಷಿಣ ಕಾಶ್ಮೀರ ವಲಯದ ಡಿಐಜಿ (SKR) ತನಿಖೆ ನಡೆಸಿ 10 ದಿನಗಳಲ್ಲಿ ವರದಿ ಸಲ್ಲಿಸಲಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಪಿಡಿಪಿ ನಾಯಕಿ ಇಲ್ತಿಜಾ ಮುಫ್ತಿ (Iltija Mufti) ಎಕ್ಸ್‌ನಲ್ಲಿ ವಿಡಿಯೊ ಹಂಚಿಕೊಂಡು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Assault Case: ಪಾರ್ಕಿಂಗ್‌ ವಿಚಾರಕ್ಕಾಗಿ ಸೇನಾಧಿಕಾರಿ ಮೇಲೆ ನಡೆಸಿದ ಪೊಲೀಸರು; ಸಿಸಿಟಿವಿಯಲ್ಲಿ ದೃಶ್ಯ ಸೆರೆ

"ದೇವ್ಸರ್ ಕುಲ್ಗಾಮ್‌ನಲ್ಲಿ ನಿಗೂಢ ಸಾವುಗಳ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯನ್ನು ಪೊಲೀಸ್ ಒದೆಯುವ ದೃಶ್ಯ ನೋಡಿ ಆಘಾತವಾಗಿದೆ. ಕಾನೂನನ್ನು ಎತ್ತಿ ಹಿಡಿಯಬೇಕಾದ ಅಧಿಕಾರಿಗಳ ಈ ನಡವಳಿಕೆ ಆಕ್ಷೇಪಾರ್ಹ. ಇಂತಹ ಘಟನೆ ಜನರನ್ನು ಅಧಿಕಾರಿಗಳಿಂದ ಮತ್ತುಷ್ಟು ದೂರವಾಗಿಸುತ್ತದೆʼʼ ಎಂದು ಮುಫ್ತಿ ಬರೆದುಕೊಂಡಿದ್ದಾರೆ.

ಘಟನೆ ಹಿನ್ನೆಲೆ

ಕುಲ್ಗಾಮ್‌ ಜಿಲ್ಲೆಯಲ್ಲಿ ಒಂದು ತಿಂಗಳಿಂದೀಚೆಗೆ 3 ಯುವಕರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಅಲ್ಲದೆ ಇತ್ತೀಚೆಗೆ ಯುವಕನೊಬ್ಬನ ಮೃತದೇಹ ಪತ್ತೆಯಾಗಿತ್ತು. ಅದಕ್ಕಿಂತ ಮೊದಲು ಆತನ ಸಹೋದರನ ಮೃತದೇಹವೂ ಕಂಡುಬಂದಿತ್ತು. ಸದ್ಯ ನಾಪತ್ತೆಯಾದ ಇನ್ನೊಬ್ಬ ಯುವಕನ ಸುಳಿವು ಇನ್ನೂ ಸಿಕ್ಕಿಲ್ಲ. ಆತನ ಪತ್ತೆಗೆ ತನಿಖೆ ನಡೆಯುತ್ತಿದೆ. ಅದಾಗ್ಯೂ ಈ ಪ್ರಕರಣದ ತನಿಖೆ ಚುರುಕುಗೊಳಿಸಬೇಕೆಂದು ಆಗ್ರಹಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪೊಲೀಸ್‌ ಅಧಿಕಾರಿ ಮಹಿಳೆಯನ್ನು ತುಳಿದಿದ್ದಾನೆ.

ನೆಟ್ಟಿಗರು ಏನಂದ್ರು?

ಇಲ್ತಿಜಾ ಮುಫ್ತಿ ಹಂಚಿಕೊಂಡ ವಿಡಿಯೊ ನೋಡಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ʼʼಈ ವಿಡಿಯೊ ಶೇರ್‌ ಮಾಡಿದ್ದಕ್ಕೆ ಧನ್ಯವಾದಗಳು. ನಮ್ಮ ಹಳ್ಳಿಯಲ್ಲಿ ಮಾಧ್ಯಮಗಳನ್ನು ನಿರ್ಬಂಧಿಸಲಾಗಿದೆʼʼ ಎಂದು ಒಬ್ಬರು ತಿಳಿಸಿದ್ದಾರೆ. ʼʼಪೊಲೀಸ್‌ ಇಲಾಖೆಯ ಸುಧಾರಣೆಗಳ ಅಗತ್ಯ. ಅವರು ಇನ್ನೂ ವಸಾಹತುಶಾಹಿ ಮನಸ್ಥಿತಿ ಹೊಂದಿದ್ದಾರೆʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. ʼʼಇದಕ್ಕಿಂತ ಆಘಾತಕಾರಿ ದೃಶ್ಯ ಮತ್ತೊಂದಿಲ್ಲʼʼ ಎಂದು ನೆಟ್ಟಿಗರೊಬ್ಬರು ಶಾಕ್‌ ವ್ಯಕ್ತಪಡಿಸಿದ್ದಾರೆ. ʼʼಅಧಿಕಾರಿಗಳ ಕ್ರೂರ ವರ್ತನೆಗೆ ನಾಚೆಗೆಯಾಗಬೇಕುʼʼ ಎಂದು ಮಗದೊಬ್ಬರು ಹೇಳಿದ್ದಾರೆ. ಪೊಲೀಸ್‌ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು ಎಂದು ಹಲವರು ಆಗ್ರಹಿಸಿದ್ದಾರೆ.