German Singer CassMae: ಕ್ಯಾಸ್‌ಮೇ ಅದ್ಭುತ ಗಾಯಕಿ; ಭಾರತದ ಮಗಳಾದ ಜರ್ಮನ್‌ನ ಅಂಧ ಬಾಲಕಿ!
ಕೊಯಮತ್ತೂರಿನಲ್ಲಿರುವ ಇಶಾ ಫೌಂಡೇಶನ್‌ನ ಶಿವರಾತ್ರಿ ಕಾರ್ಯಕ್ರಮದಲ್ಲಿ ಕಸಾಂಡ್ರಾ ಮೇ ಸ್ಪಿಟ್‌ಮನ್ ಎನ್ನುವ ಗಾಯಕಿ ಭಕ್ತಿಭಾವದಿಂದ ಭಕ್ತಿಗೀತೆಗಳು, ಭಜನ್‌ಗಳು, ಶಂಕರಾಚಾರ್ಯರ ನಿರ್ವಾಣ ಶತಕಂ ನೆರೆದಿರುವವರನ್ನು ಮಂತ್ರಮುಗ್ಧಗೊಳಿಸಿದ್ದಾರೆ. ಜರ್ಮನ್ ಮೂಲದ ಈ ಗಾಯಕಿಯನ್ನು ಈ ಹಿಂದೆ ಪ್ರಧಾನಿ ಮೋದಿ ಕೂಡ ಕೊಂಡಾಡಿದ್ದರು. ಅವರ ಹಿನ್ನೆಲೆಯ ವಿವರ ಇಲ್ಲಿದೆ.

ಕ್ಯಾಸ್‌ಮೇ.

ಚೆನ್ನೈ: ಕೊಯಮತ್ತೂರಿನಲ್ಲಿರುವ ಇಶಾ ಫೌಂಡೇಶನ್ (Isha Foundation)ನಲ್ಲಿ ನಡೆದ ಶಿವರಾತ್ರಿ (Shivaratri) ಕಾರ್ಯಕ್ರಮದಲ್ಲಿ ಸದ್ಗುರು ಜಗ್ಗಿ ವಾಸುದೇವ್ (Sadhguru Jaggi Vasudev) ಅವರ ಮುಂದೆ ಹಾಡಿ ಲಕ್ಷಾಂತರ ಮಂದಿಯನ್ನು ಮಂತ್ರಮುಗ್ಧಗೊಳಿಸಿದ ಜರ್ಮನ್ ಹುಡುಗಿಯನ್ನು ನೀವು ಗಮನಿಸಿರಬಹುದು. ಹಾಗೆ ಗಮನಿಸಿದ್ದರೆ, ಆಕೆ ಕಣ್ಣುಗಳಿಲ್ಲ ಒಬ್ಬ ಅಂಧ ಬಾಲಕಿ ಅಂತ ಗೊತ್ತಾಗಿರುತ್ತೆ. ಆದರೆ ಅವಳ ಧ್ವನಿಗೆ ನಮ್ಮೆಲ್ಲರ ಅಂತರಂಗವನ್ನು ಸ್ಪರ್ಶಿಸುವಂಥ ಅದಮ್ಯವಾದ ಶಕ್ತಿ ಇದೆ (German Singer CassMae). ಭಕ್ತಿಗೀತೆಗಳು, ಭಜನ್‌ಗಳು, ಶಂಕರಾಚಾರ್ಯರ ನಿರ್ವಾಣ ಶತಕಂ ಇವುಗಳನ್ನು ಆಕೆ ಹಾಡ್ತಾ ಇದ್ದರೆ ಅಲ್ಲಿದ್ದ ಎಲ್ಲರ ಕಣ್ಣು ತೇವವಾಗಿತ್ತು. ಎಲ್ಲರ ಭಕ್ತಿಯ ಕಣ್ಣನ್ನು ತೆರೆಸುವಂತಿರುವ ಈ ಕಣ್ಣಿಲ್ಲದ ಹುಡುಗಿ ಯಾರು? ಏನಿವಳ ಕಥೆ? ಪ್ರಧಾನಿ ಮೋದಿ ಅವರಿಂದಲೇ "ಭಾರತದ ಜರ್ಮನ್ ಮಗಳು" ಅಂತ ಈಕೆ ಕರೆಸಿಕೊಂಡಿರೋದರ ಹಿನ್ನೆಲೆ ಏನು? ಈ ಎಲ್ಲವನ್ನೂ ನೋಡೋಣ ಬನ್ನಿ.
ಈ ಹುಡುಗಿಯ ಹೆಸರು ಪೂರ್ಣ ಹೆಸರು ಕಸಾಂಡ್ರಾ ಮೇ ಸ್ಪಿಟ್‌ಮನ್ (Cassandra Mae Spittmann) ಅಂತ. ಜನ ಪ್ರೀತಿಯಿಂದ ಈಕೆಯನ್ನು ಕರೆಯೋದು ಕ್ಯಾಸ್‌ಮೇ ಅಂತ. ಜರ್ಮನಿ ದೇಶದ ಡ್ಯೂಸ್‌ಬರ್ಗ್ ಈಕೆಯ ಹುಟ್ಟೂರು. ಗಾಯಕಿ- ಗೀತರಚನೆಕಾರ್ತಿ ಆಗಿರೋ ಈ 22 ವರ್ಷದ ಹುಡುಗಿ, ಭಾರತೀಯ ಶಾಸ್ತ್ರೀಯ ಸಂಗೀತ, ಗೀತೆಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ನಂಬಲಾಗದಷ್ಟು ಜನಪ್ರಿಯರಾಗಿದ್ದಾರೆ.
ಹುಟ್ಟುವಾಗಲೇ ದೃಷ್ಟಿ ಇರಲಿಲ್ಲ
ಹುಟ್ಟುವಾಗಲೇ ದೃಷ್ಟಿಯನ್ನು ಕಳೆದುಕೊಂಡು ಹುಟ್ಟಿರುವ ಕ್ಯಾಸ್‌ಮೇ, ತನ್ನ ಸಂಗೀತದ ಮೂಲಕವೇ ಕೋಟ್ಯಂತರ ಜನರನ್ನು ತಲುಪಿದ್ದಾಳೆ. ಯುರೋಪ್ ಮತ್ತು ಭಾರತದಲ್ಲಿ ಸಾವಿರಾರು ಮಂದಿಯನ್ನು ತನ್ನ ಮಧುರ ಧ್ವನಿಯಿಂದ ಮೋಡಿ ಮಾಡಿದ್ದಾಳೆ. ಈಕೆ ಕನ್ನಡದ ಭಕ್ತಿಗೀತೆಗಳನ್ನೂ ಹಾಡಿದ್ದಾಳೆ. ಕನ್ನಡ, ಸಂಸ್ಕೃತ, ಹಿಂದಿ, ಮಲಯಾಳಂ, ತಮಿಳು, ಅಸ್ಸಾಮಿ, ಬೆಂಗಾಲಿ, ಮರಾಠಿ ಮತ್ತು ಉರ್ದು ಸೇರಿ ಹಲವಾರು ಭಾರತೀಯ ಭಾಷೆಗಳಲ್ಲಿ ಹಾಡೋಕೆ ಈಕೆಗೆ ಬರುತ್ತೆ.
ಸಂಸೃತ ಪದ್ಯಗಳನ್ನು ಯಾವುದೇ ಉಚ್ಛಾರದೋಷವಿಲ್ಲದೆ ನಿರರ್ಗಳವಾಗಿ ಮತ್ತು ಅಷ್ಟೇ ಮಧುರವಾಗಿ ಹಾಡಬಲ್ಲಳು. ಶಂಕರಾಚಾರ್ಯರ ಶ್ಲೋಕಗಳನ್ನು ಹಾಡಿದಷ್ಟೇ ಚೆನ್ನಾಗಿ ಶಬರಿಮಲೆ ಸ್ವಾಮಿ ಅಯ್ಯಪ್ಪನ ಕನ್ನಡದ ಹಾಡುಗಳನ್ನೂ ಹಾಡೋದು ಈಕೆಗೆ ಗೊತ್ತು. ಕೊಯಮತ್ತೂರಿನಲ್ಲಿ ನಡೆದ ಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮುನ್ನ ಕ್ಯಾಸ್‌ಮೇ ಅವರು ಇದಕ್ಕೂ ಮುನ್ನ ಭಾರತಕ್ಕೆ ಹಾಗೂ ಇಶಾ ಯೋಗ ಕೇಂದ್ರಕ್ಕೆ ಭೇಟಿ ನೀಡಿದ್ದರು.
ಎರಡು ವರ್ಷಗಳ ಹಿಂದೆ ತಮಿಳುನಾಡಿನ ವೆಲ್ಲಿಯಂಗಿರಿ ಪರ್ವತಗಳ ತಪ್ಪಲಿನಲ್ಲಿ ಇರುವ ಇಶಾ ಯೋಗ ಕೇಂದ್ರದಲ್ಲಿ ನಡೆದಿದ್ದ ಒಂದು ರಿಟ್ರೀಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕ್ಯಾಸ್‌ಮೇ ಸದ್ಗುರುವನ್ನು ಆಗ ಮೊದಲ ಬಾರಿಗೆ ಭೇಟಿಯಾಗಿ ಹಾಡಿದ್ದರು. ಆಗ ಇವರ ಹಾಡುಗಾರಿಕೆಯಿಂದ ಸಂತೋಷಗೊಂಡಿದ್ದ ಸದ್ಗುರು, ತಾವು ಧರಿಸಿದ್ದ ಒಂದು ಹೂವಿನ ಹಾರವನ್ನು ಈಕೆಗೆ ಹಾಕಿ ಗೌರವಿಸಿದ್ದರು. ಇದು ತನ್ನ ಜೀವನದ ಮರೆಯಲಾಗದ ಕ್ಷಣ ಅಂತ ಕ್ಯಾಸ್‌ಮೇ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು. ಕ್ಯಾಸ್‌ಮೇ ಧ್ವನಿ ಹಾಗೂ ಭಕ್ತಿಗೆ ಮನಸೋತಿರುವ ಸದ್ಗುರು ಈ ಬಾರಿ ಶಿವರಾತ್ರಿ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಿದ್ದರು.
ಮೋದಿ ಮನಸ್ಸನ್ನು ಗೆದ್ದಿದ್ದ ಕ್ಯಾಸ್‌ಮೇ
ಕ್ಯಾಸ್‌ಮೇ ಅವರು ತಮ್ಮ ಹಾಡುಗಾರಿಕೆಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಮನಸ್ಸನ್ನೂ ಗೆದ್ದುಕೊಂಡಿದ್ದಾರೆ. 2023ರಲ್ಲಿ ತಾವು ನೀಡಿದ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಜರ್ಮನ್ ಹಾಡುಗಾರ್ತಿಯನ್ನು ಮನಸ್ಫೂರ್ತಿಯಾಗಿ ಶ್ಲಾಘಿಸಿದ್ದರು.
“21 ವರ್ಷದ ಕ್ಯಾಸ್‌ಮೇ Instagramನಲ್ಲಿ ಸಾಕಷ್ಟು ಜನಪ್ರಿಯವಾಗಿದ್ದಾರೆ. ಜರ್ಮನಿಯ ನಿವಾಸಿಯಾದ ಕ್ಯಾಸ್‌ಮೇ ಭಾರತಕ್ಕೆ ಎಂದಿಗೂ ಬಂದಿಲ್ಲ, ಭಾರತವನ್ನು ನೋಡಿಲ್ಲ. ಆದರೆ ಆಕೆ ಭಾರತೀಯ ಸಂಗೀತದ ಅಭಿಮಾನಿ ಮತ್ತು ಭಾರತೀಯ ಭಕ್ತಿ ಸಂಗೀತದಲ್ಲಿ ಆಕೆ ಮಾಡ್ತಾ ಇರುವ ಸಾಧನೆ ತುಂಬಾ ಸ್ಫೂರ್ತಿದಾಯಕವಾದದ್ದು" ಎಂದು ಮೆಚ್ಚಿಕೊಂಡಿದ್ದರು. "ಭಾರತೀಯ ಸಂಸ್ಕೃತಿ ಮತ್ತು ಸಂಗೀತ ಇಂದು ಜಾಗತಿಕವಾಗಿ ವಿಸ್ತಾರಗೊಳ್ತಾ ಇದೆ. ಹೆಚ್ಚು ಹೆಚ್ಚು ಯುವಜನತೆ ಇದರ ಕಡೆಗೆ ಆಕರ್ಷಿತರಾಗುತ್ತಿದ್ದಾರೆ" ಅಂತ ಪ್ರಧಾನಿ ಮೋದಿ ಹೇಳಿದ್ದರು.
ನಂತರದ ವರ್ಷ ಭಾರತಕ್ಕೆ ಬಂದ ಕ್ಯಾಸ್‌ಮೇ, ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದರು. ಪಲ್ಲಾಡಂ ನಗರಕ್ಕೆ ಭೇಟಿ ನೀಡಿದ್ದ ಪ್ರಧಾನಿಯವರನ್ನು ಕ್ಯಾಸ್‌ಮೇ ಭೇಟಿ ಮಾಡಿ ಮಾತಾಡಿದ್ರು. ಭೇಟಿಯ ನಂತರ ಪಿಎಂ ಮೋದಿ ಈ ಬಗ್ಗೆ ಟ್ವೀಟ್ ಮಾಡಿದ್ರು. “ನಮ್ಮ ಮಾತುಕತೆಯಲ್ಲಿ ನಂಗೆ ಗೊತ್ತಾಗಿದ್ದು ಏನಂದ್ರೆ, ಭಾರತದ ಮೇಲಿನ ಕ್ಯಾಸ್‌ಮೇ ಅವರ ಪ್ರೀತಿ ಅದ್ಭುತವಾದದ್ದು. ಆಕೆಯ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು" ಅಂದಿದ್ದರು.
"ಇಂಡಿಯಾಸ್ ಜರ್ಮನ್ ಡಾಟರ್" ಎಂದು ಹೃದಯ ತುಂಬಿ ಆಕೆಯನ್ನು ಕರೆದಿದ್ದರು ಮೋದಿ. 2024ರಲ್ಲಿ ಅಯೋಧ್ಯೆಯ ರಾಮ ಮಂದಿರದಲ್ಲಿ ಶ್ರೀರಾಮ ಮೂರ್ತಿಯ ಪ್ರಾಣಪ್ರತಿಷ್ಠೆ ನಡೆದಾಗ ಈಕೆ ʼರಾಮ್ ಆಯೇಂಗೆʼ ಎಂಬ ಭಕ್ತಿಗೀತೆಯನ್ನು ಹಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿ ಕೋಟ್ಯಂತರ ರಾಮಭಕ್ತರ ಮನಸೂರೆಗೊಂಡಿದ್ದರು.
ಮೂರನೇ ವಯಸ್ಸಿನಲ್ಲೇ ಸಂಗೀತ ಲೋಕದತ್ತ
ಕ್ಯಾಸ್‌ಮೇ ತನ್ನ ಮೂರನೇ ವಯಸ್ಸಿನಲ್ಲೇ ಸಂಗೀತದತ್ತ ಆಕರ್ಷಿತಳಾದಳು. ಖ್ಯಾತ ಪಿಯಾನೋ ವಾದಕ ಫ್ರೆಡರಿಕ್ ಚಾಪಿನ್‌ನ ಸಂಗೀತದಿಂದ ಆಕರ್ಷಿತಳಾದ ಈಕೆ ಪಿಯಾನೋ ಕಲಿಯೋಕೆ ಆರಂಭಿಸಿದಳು. ನಿಧಾನವಾಗಿ ತನ್ನದೇ ಹಾಡುಗಳನ್ನು ರಚಿಸಿ ಹಾಡೋಕೆ ಶುರುಮಾಡಿದಳು. ರೇಡಿಯೊದಲ್ಲಿ ಮತ್ತು ಟಿವಿ ಶೋಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದಳು. ಕೊನೆಗೆ ಅಂತಾರಾಷ್ಟ್ರೀಯ ಕಲಾವಿದರೊಂದಿಗೆ ಕೆಲಸ ಮಾಡಿದಳು. 2016ರಿಂದ ಈಕೆ ಯುವ ಸಂಗೀತ ಸಂಯೋಜಕರಿಗೆ "ಡೈನ್ ಸಾಂಗ್" ಎಂಬ ಟಿವಿ ಶೋ ನಡೆಸಿಕೊಡ್ತಿದಾಳೆ. ಜರ್ಮನಿಯ ಪಾರ್ಲಿಮೆಂಟ್ ಸೇರಿದಂತೆ ಪ್ರತಿಷ್ಠಿತ ಸ್ಥಳಗಳಲ್ಲಿ, ಮಾಜಿ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅವರ ಮುಂದೆ ಎಲ್ಲ ಪ್ರದರ್ಶನ ನೀಡಿದ್ದಾಳೆ. ಸಂಗೀತಕ್ಕೆ ಸಂಬಂಧಿಸಿದ ಅನೇಕ ಪ್ರಶಸ್ತಿಗಳನ್ನೂ ಗೆದ್ದಿದ್ದಾಳೆ.
ಗಾಯತ್ರಿ ಮಂತ್ರದಿಂದ ಅಜ್ಜಿಯನ್ನು ಗುಣಪಡಿಸಿದ್ದ ಬಾಲಕಿ!
ಭಕ್ತಿಗೀತೆ ಹಾಗೂ ಮಂತ್ರಗಳನ್ನು ಈಕೆ ಹಾಡುವುದು ಮಾತ್ರ ಅಲ್ಲ, ಅವುಗಳ ಅರ್ಥವನ್ನೂ ತಿಳಿದು, ಅವುಗಳ ಭಾವಕ್ಕೆ ತಕ್ಕಂತೆ ಹಾಡ್ತಾಳೆ ಅಂದ್ರೆ ನಿಮಗೆ ಆಶ್ಚರ್ಯ ಆಗಬಹುದು. ಭಾರತೀಯ ಸನಾತನ ಸಂಪ್ರದಾಯವನ್ನೂ ಆಕೆ ತಿಳಿದುಕೊಂಡಿರುವುದು, ಅದನ್ನು ಆಚರಿಸ್ತಾ ಇರೋದೇ ವಿಶೇಷ. ಒಮ್ಮೆ ಆಕೆಯ ಅಜ್ಜಿ ತುಂಬಾ ಗಂಭೀರವಾದ ಆರೋಗ್ಯ ಸಮಸ್ಯೆಯಿಂದ ನರಳ್ತಾ ಇದ್ರಂತೆ. ಆಗ ಕ್ಯಾಸ್‌ಮೇ ರುದ್ರ ಗಾಯತ್ರಿ ಮಂತ್ರವನ್ನು ಆರು ವಾರಗಳ ಕಾಲ ಜಪಿಸಿದಳಂತೆ. ಸೋಜಿಗ ಅನ್ನೋ ಹಾಗೆ ಆಕೆಯ ಅಜ್ಜಿ ಬಲುಬೇಗ ಗುಣಮುಖ ಆದ್ರಂತೆ. ಈ ವಿಚಾರವನ್ನು ಕ್ಯಾಸ್‌ಮೇ ಒಂದು ಸಂದರ್ಶನದಲ್ಲಿ ಮುಗ್ಧವಾಗಿ ಹಾಗೂ ಪ್ರಾಮಾಣಿಕವಾಗಿ ಹೇಳ್ಕೊಂಡಿದಾರೆ.
ಈ ಸುದ್ದಿಯನ್ನೂ ಓದಿ: SEBI: SEBI ಮುಖ್ಯಸ್ಥರಾಗಿ ತುಹಿನ್ ಕಾಂತಾ ಪಾಂಡೆ ಆಯ್ಕೆ; ಯಾರಿವರು? ಹಿನ್ನಲೆಯೇನು?
ʼಕಾಂತಾರʼ ಹಾಡು ಹಾಡಿ ರೋಮಾಂಚನಗೊಳಿಸಿದ್ದ ಕ್ಯಾಸ್‌ಮೆ
ಅಂದ ಹಾಗೆ ಕ್ಯಾಸ್‌ಮೆ ಅವರು ರಿಷಬ್ ಶೆಟ್ಟಿ ನಿರ್ದೇಶನದ ಸೂಪರ್ ಹಿಟ್ ಚಿತ್ರ ʼಕಾಂತಾರʼದ ʼವರಾಹ ರೂಪಂʼ ಹಾಡನ್ನು 2022ರ ನವೆಂಬರ್‌ನಲ್ಲಿ ಹಾಡಿ ಕನ್ನಡಿಗರನ್ನು ಖುಷಿಪಡಿಸಿದ್ದರು. ಕನ್ನಡ ಹಾಡನ್ನು ಹಾಡಿ ಅಂತ ತುಂಬಾ ಜನ ಮೆಸೆಜ್ ಮಾಡ್ತಾ ಇರ್ತಾರೆ. ಈಗ ಆ ಸಮಯ ಬಂದಿದೆ ಎಂದು ಕ್ಯಾಸ್‌ಮೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಇದನ್ನು ರಿಷಬ್ ಶೆಟ್ಟಿ ಹಂಚಿಕೊಂಡು ಧನ್ಯವಾದ ಹೇಳಿದ್ದರು. ಹೀಗೆ ಕ್ಯಾಸ್‌ಮೇ ಅನ್ನೋ ಜರ್ಮನ್ ಹುಡುಗಿ ಸಂಗೀತದ ಮೂಲಕ ಭಾರತೀಯಳೇ ಆಗಿಬಿಟ್ಟಿರೋದು ಒಂದು ಅಚ್ಚರಿಯೇ ಸರಿ. ಆಕೆಗೆ ನಿಮ್ಮಿಂದಲೂ ಒಂದು ದೊಡ್ಡ ಚಪ್ಪಾಳೆ ಇರಲಿ.