ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Basangouda Patil Yatnal: ಬಿಜೆಪಿ ಕೇಂದ್ರ ಶಿಸ್ತು ಸಮಿತಿ ನೋಟಿಸ್​ಗೆ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ

ಬಹಿರಂಗವಾಗಿಯೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಧ್ವನಿ ಎತ್ತಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕೇಂದ್ರ ಶಿಸ್ತು ಸಮಿತಿ ನೋಟಿಸ್ ನೀಡಿತ್ತು. ಇದಕ್ಕೆ ಯತ್ನಾಳ್‌ ನೀಡಿದ ಪ್ರತಿಕ್ರಿಯೆ ಇದೀಗ ಬಹಿರಂಗಗೊಂಡಿದೆ. ಅವರ ಇಮೇಲ್‌ನಲ್ಲಿ ಏನಿದೆ ಎನ್ನುವ ವಿವರ ಇಲ್ಲಿದೆ.

ಬಿಜೆಪಿ ಕೇಂದ್ರ ಶಿಸ್ತು ಸಮಿತಿ ನೋಟಿಸ್​ಗೆ ಯತ್ನಾಳ್ ಪ್ರತಿಕ್ರಿಯೆ

ಬಸನಗೌಡ ಪಾಟೀಲ್ ಯತ್ನಾಳ್.

Profile Ramesh B Feb 18, 2025 4:36 PM

ಹೊಸದಿಲ್ಲಿ: ಇತ್ತೀಚೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B.Y.Vijayendra) ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಬಣಗಳ ನಡುವಣ ಸಂಘರ್ಷ ತೀವ್ರಗೊಂಡಿತ್ತು. ಯತ್ನಾಳ್‌ ಬಹಿರಂಗವಾಗಿಯೇ ವಿಜಯೇಂದ್ರ ವಿರುದ್ಧ ಧ್ವನಿ ಎತ್ತಿದ್ದರು. ಈ ಹಿನ್ನೆಲೆಯಲ್ಲಿ ಯತ್ನಾಳ್​​ಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ನೋಟಿಸ್ ನೀಡಿ 72 ಗಂಟೆಯೊಳಗೆ ಉತ್ತರಿಸುವಂತೆ ಸೂಚನೆ ನೀಡಿತ್ತು. ಈ ನೋಟಿಸ್​​ಗೆ ಯತ್ನಾಳ್ ನೀಡಿದ ಉತ್ತರ ಇದೀಗ ಬಹಿರಂಗಗೊಂಡಿದೆ. ಕೇಂದ್ರ ಶಿಸ್ತು ಸಮಿತಿ ನೋಟಿಸ್​ಗೆ ಯತ್ನಾಳ್​ ಇ ಮೇಲ್ ಮೂಲಕ ಉತ್ತರ ನೀಡಿದ್ದಾರೆ.

ಯತ್ನಾಳ್ ನೀಡಿದ ಉತ್ತರದಲ್ಲಿ ಏನಿದೆ?

ಬಿಜೆಪಿ ಕೇಂದ್ರ ಶಿಸ್ತು ಸಮಿತಿಗೆ ಯತ್ನಾಳ್ ನೀಡಿರುವ ಉತ್ತರವೇನು ಎಂಬುದರ ಸಂಪೂರ್ಣ ವಿವರ ಬಹಿರಂಗವಾಗಿಲ್ಲ. ಆದಾಗ್ಯೂ ವಿಜಯೇಂದ್ರ ವಿರುದ್ಧ ವಿವಿಧ ದೂರುಗಳನ್ನು ಸಲ್ಲಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಣ ರಾಜಕೀಯ ಮಾಡುತ್ತಿದೆ. ನಾನು ಯಾವುದೇ ಬಣ ರಾಜಕೀಯ ಮಾಡಿಲ್ಲ. ಪಕ್ಷದ ಶಿಸ್ತನ್ನು ನಾನು ಉಲ್ಲಂಘಿಸಿಲ್ಲ ಎಂದು ಉತ್ತರಿಸಿದ್ದಾರೆ ಎನ್ನಲಾಗಿದೆ.

ಪಕ್ಷದ ಚೌಕಟ್ಟಿನಲ್ಲಿ ವಕ್ಫ್‌​ ವಿರುದ್ಧ ಹೋರಾಟ ಸಂಘಟಿಸಿದ್ದೇವೆ. ತಂಡವಾಗಿ ಹೋರಾಟ ಮಾಡಿ ನಾವು ಯಶಸ್ವಿಯಾಗಿದ್ದೇವೆ. ವಕ್ಫ್ ಕುರಿತ​ ಹೋರಾಟವನ್ನು ಉನ್ನತ ನಾಯಕರು ಸಮರ್ಥಿಸಿದ್ದಾರೆ. ಆದರೆ ಬಿ.ವೈ.ವಿಜಯೇಂದ್ರ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಕಾರ್ಯಕರ್ತರು, ನಾಯಕರ ಭಾವನೆಯನ್ನು ವ್ಯಕ್ತಪಡಿಸಿದ್ದೇನೆ ಎಂದು ಯತ್ನಾಳ್ ವಿವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಜಯೇಂದ್ರ ಅವರು ಸ್ವಜನ ಪಕ್ಷಪಾತ ಮಾಡುತ್ತಿದ್ದು, ಹಿರಿಯರನ್ನು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ. ಇದರಿಂದಲೇ ರಾಜ್ಯದಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದ್ದು, ಕುಟುಂಬ ರಾಜಕಾರಣ ನಿಲ್ಲಬೇಕು ಎಂದು ಯತ್ನಾಳ್‌ ತಿಳಿಸಿದ್ದಾರೆ.



ನೋಟಿಸ್ ಬಗ್ಗೆ ಯತ್ನಾಳ್‌ ಹೇಳಿದ್ದೇನು?

ಈ ಹಿಂದೆ ತಮಗೆ ಯಾವುದೇ ನೋಟಿಸ್‌ ಬಂದಿಲ್ಲ ಎಂದು ಯತ್ನಾಳ್‌ ತಿಳಿಸಿದ್ದರು. ಭಾರತೀಯ ಜನತಾ ಪಕ್ಷದ ಕೇಂದ್ರ ಶಿಸ್ತು ಸಮಿತಿಯಿಂದ ಯತ್ನಾಳರಿಗೆ ನೋಟೀಸು ಬಂದಿದೆ ಎಂದು ಮಾಧ್ಯಮಗಳು ವಿಜೃಂಭಿಸುತ್ತಿದೆ. ನನಗೆ ಅಧಿಕೃತವಾಗಿ ಯಾವುದೇ ನೋಟೀಸು ಬಂದಿರುವುದಿಲ್ಲ. ನೋಟೀಸು ಬಂದಮೇಲೆ ಕೆಲವ್ಯಕ್ತಿಗಳ ಏಕಸ್ವಾಮ್ಯತೆ, ಏಕಪಕ್ಷೀಯ ನಿರ್ಧಾರಗಳು, ಉತ್ತರ ಕರ್ನಾಟಕದ ಕಡೆಗಣನೆ, ಕುಟುಂಬ ರಾಜಕಾರಣ, ಕಾಂಗ್ರೆಸ್ ಪಕ್ಷದ ವೈಫಲ್ಯಗಳನ್ನು ರಾಜ್ಯದ ಜನತೆಗೆ ವಿವರಿಸಲು ವಿಫಲವಾಗಿರುವ ಪಕ್ಷದ ಧೋರಣೆ, ಹೊಂದಾಣಿಕೆ ರಾಜಕೀಯ ಸೇರಿದಂತೆ ಸ್ವಜನಪಕ್ಷಪಾತದ ಬಗ್ಗೆ ವಿವರವಾಗಿ ಲಿಖಿತ ರೂಪದಲ್ಲಿ ಉತ್ತರ ನೀಡುತ್ತೇನೆ ಎಂದು ಹೇಳಿದ್ದರು.

ಈ ಸುದ್ದಿಯನ್ನೂ ಓದಿ: CM Siddaramaiah: ಅನಧಿಕೃತ ಬಡಾವಣೆಗಳಲ್ಲಿ ಮನೆ ಕಟ್ಟಿದವರಿಗೆ ಬಿ ಖಾತೆ ಕೊಡಿ: ಸಿಎಂ ಸಿದ್ದರಾಮಯ್ಯ ಸೂಚನೆ

ಇದು ಮೊದಲ ಸಲವೇನಲ್ಲ

ಬಸನಗೌಡ ಪಾಟೀಲ್ ಯತ್ನಾಳ್​ ಅವರಿಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಈ ಹಿಂದೆ ಕೂಡ ನೋಟಿಸ್ ನೀಡಿತ್ತು. ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿರುವುದಕ್ಕೆ ಯತ್ನಾಳ್​ ಸಿಡಿದೆದ್ದಿದ್ದು, ಬಹಿರಂಗವಾಗಿಯೇ ಮಾಜಿ ಬಿ.ಎಸ್‌.ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಟೀಕೆಗಳನ್ನು ಮಾಡುತ್ತಲೇ ಬಂದಿದ್ದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪದೇ ಪದೆ ವಾಗ್ದಾಳಿ ನಡೆಸುತ್ತಾ, ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದ ಯತ್ನಾಳ್ ಅವರಿಗೆ 2021ರಲ್ಲಿಯೂ ಹೈಕಮಾಂಡ್ ನೋಟಿಸ್ ಜಾರಿ ಮಾಡಿತ್ತು. ಆಡಳಿತ ಪಕ್ಷದ ಶಾಸಕರಾಗಿ ಪಕ್ಷದ ಶಿಸ್ತು ಉಲ್ಲಂಘನೆ ಮಾಡುತ್ತಿದ್ದು, ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಿದ್ದರ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿತ್ತು.