Lakshmi Hebbalkar: ಬಿಜೆಪಿಯವರು ಮೊದಲು ಕನ್ನಡಿಯಲ್ಲಿ ತಮ್ಮ ಮುಖ ನೋಡಿಕೊಳ್ಳಬೇಕು: ಲಕ್ಷ್ಮೀ ಹೆಬ್ಬಾಳಕರ್ ಹೀಗೆ ಅಂದಿದ್ದೇಕೆ?
Lakshmi Hebbalkar: ಬಿಜೆಪಿಯವರ ಆಡಳಿತವನ್ನು ರಾಜ್ಯದ ಜನರು ನೋಡಿದ್ದಾರೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಎಷ್ಟು ಜನರಿಗೆ ತಲುಪಿವೆ ಎನ್ನುವುದನ್ನು ಅವರು ಮೊದಲು ಅವಲೋಕನ ಮಾಡಿಕೊಳ್ಳಲಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿರುಗೇಟು ನೀಡಿದ್ದಾರೆ.


ಬೆಂಗಳೂರು: ರಾಜ್ಯದಲ್ಲಿ ನಾಲ್ಕು ವರ್ಷಗಳ ಕಾಲ ಬಿಜೆಪಿಯವರು ಏನೆಲ್ಲ ಮಾಡಿದ್ದರೆನ್ನುವುದು ಎಲ್ಲರಿಗೂ ಗೊತ್ತಿದೆ. ರಾಜ್ಯಪಾಲರ ಭಾಷಣವನ್ನು ಟೀಕಿಸುವುದಕ್ಕೂ ಮುನ್ನ ಬಿಜೆಪಿಯವರು ಮೊದಲು ಕನ್ನಡಿಯಲ್ಲಿ ತಮ್ಮ ಮುಖ ನೋಡಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ (Lakshmi Hebbalkar) ಕಿಡಿಕಾರಿದ್ದಾರೆ. ಸೋಮವಾರ ಆರಂಭಗೊಂಡ ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ಮಾಡಿದ ರಾಜ್ಯಪಾಲರ ಭಾಷಣದ ಬಗ್ಗೆ ಬಿಜೆಪಿ ನಾಯಕರ ಟೀಕೆಗೆ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿಯವರ ಆಡಳಿತವನ್ನು ರಾಜ್ಯದ ಜನರು ನೋಡಿದ್ದಾರೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಎಷ್ಟು ಜನರಿಗೆ ತಲುಪಿವೆ ಎನ್ನುವುದನ್ನು ಅವರು ಮೊದಲು ಅವಲೋಕನ ಮಾಡಿಕೊಳ್ಳಲಿ ಎಂದು ಅವರು ತಿರುಗೇಟು ನೀಡಿದರು.
ಎಥಿಕ್ಸ್ ಕಮಿಟಿ ವಿಚಾರ ಗೊತ್ತಿಲ್ಲ
ಸಚಿವರ ವಿರುದ್ಧ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅಶ್ಲೀಲ ಪದ ಬಳಕೆ ಆರೋಪ ಪ್ರಕರಣವನ್ನು ಎಥಿಕ್ಸ್ ಕಮಿಟಿಗೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ನಾನು ಇಂದು ಬೆಂಗಳೂರಿಗೆ ಬಂದಿದ್ದು, ನಿಮಗೆ (ಮಾಧ್ಯಮ) ಎಷ್ಟು ಮಾಹಿತಿ ಇದೆಯೋ, ಅಷ್ಟೇ ಮಾಹಿತಿ ನನಗೂ ಇದೆ. ಎಥಿಕ್ಸ್ ಕಮಿಟಿಗೆ ನೀಡಿರುವ ವಿಚಾರ ನನಗೆ ಗೊತ್ತಿಲ್ಲ ಎಂದು ಹೇಳಿದರು. ನಾನು ಆಸ್ಪತ್ರೆಯಲ್ಲಿದ್ದಾಗ ಸಭಾಪತಿ ಬಸವರಾಜ ಹೊರಟ್ಟಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಆ ವೇಳೆಯಲ್ಲೂ ಪ್ರಕರಣದ ಬಗ್ಗೆ ಏನೂ ಮಾತನಾಡಲಿಲ್ಲ. ಈ ರೀತಿ ಯಾರಿಗೂ ಆಗಬಾರದೆನ್ನುವುದೇ ನನ್ನ ಕಳಕಳಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಲೈಂಗಿಕ ದೌರ್ಜನ್ಯ ಎಸಗಿದ ಶಿಕ್ಷಕನ ವಿರುದ್ಧ ಕಠಿಣ ಕ್ರಮ
ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಶಾಲೆಯ ಶಿಕ್ಷಕನೋರ್ವ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ವರದಿ ಗಮನಕ್ಕೆ ಬಂದಿದ್ದು, ಖಂಡಿತವಾಗಿ ಸರ್ಕಾರವು ಮಕ್ಕಳ ಹಾಗೂ ಪೋಷಕರ ಪರ ನಿಲ್ಲುತ್ತದೆ. ಲೈಂಗಿಕ ದೌರ್ಜನ್ಯ ಪಿಡುಗನ್ನು ಬೇರು ಸಮೇತ ಕಿತ್ತೊಗೆಯಬೇಕಿದೆ. ಈ ಪ್ರಕರಣದಲ್ಲಿ ದೂರು ದಾಖಲಾಗಿರುವ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಅವರನ್ನು ಪೊಲೀಸ್ ಠಾಣೆಗೆ ಕಳುಹಿಸಿ ವರದಿ ತರಿಸಿಕೊಳ್ಳಲಾಗುವುದು. ಈ ಬಗ್ಗೆ ದೂರು ದಾಖಲಿಸಿಕೊಳ್ಳುವಂತೆಯೂ ತಿಳಿಸಿರುವುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಚುನಾವಣೆ ನಡೆಯುವ ಕ್ಷೇತ್ರಗಳಿಗೆ ಮಾತ್ರ ಗೃಹಲಕ್ಷ್ಮೀ ಹಣ ಹಾಕಲಾಗುತ್ತದೆ ಎಂಬುದು ಶುದ್ಧ ಸುಳ್ಳು: ಲಕ್ಷ್ಮೀ ಹೆಬ್ಬಾಳಕರ್
ಬೆಂಗಳೂರು: ಗ್ಯಾರಂಟಿ ಯೋಜನೆಗಳು ಇರುವುದೇ ಬಡವರಿಗಾಗಿ, ಪಕ್ಷಾತೀತವಾಗಿ ಗೃಹಲಕ್ಷ್ಮೀ ಯೋಜನೆಯ (Gruhalakshmi Scheme) ಹಣವನ್ನು ಯಜಮಾನಿಯರ ಖಾತೆಗೆ ಹಾಕಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ (Lakshmi Hebbalkar) ಹೇಳಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ನಡೆಯುವ ಕ್ಷೇತ್ರಗಳಿಗೆ ಮಾತ್ರ ಗೃಹಲಕ್ಷ್ಮೀ ಹಣ ಹಾಕಲಾಗುತ್ತದೆ ಎಂಬುದು ಶುದ್ಧ ಸುಳ್ಳು. ಇದು ಆಧಾರರಹಿತ ಆರೋಪ. ಜಿಎಸ್ಟಿ, ಜಿಎಸ್ಟಿಯೇತರ, ಆದಾಯ ತೆರಿಗೆ... ಹೀಗೆ ಫಲಾನುಭವಿಗಳನ್ನು ವಿಂಗಡಿಸಲಾಗಿದೆ. ಈಗಾಗಲೇ ನವೆಂಬರ್, ಡಿಸೆಂಬರ್ ತಿಂಗಳ ಬಿಲ್ ಆಗಿದ್ದು, ಎಲ್ಲಾ ಫಲಾನುಭವಿಗಳಿಗೂ ಹಣ ಸಂದಾಯವಾಗಲಿದೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Budget session: ರಾಜ್ಯದಲ್ಲಿ ಅಭಿವೃದ್ಧಿ ವೇಗ ಚುರುಕು; ಗ್ಯಾರಂಟಿ ಯೋಜನೆಗಳನ್ನು ಹಾಡಿ ಹೊಗಳಿದ ರಾಜ್ಯಪಾಲ ಗೆಹ್ಲೋಟ್
ಇದು ಚುನಾವಣೆಗೋಸ್ಕರ ಮಾಡಿರುವ ಯೋಜನೆಗಳಲ್ಲ. ಚುನಾವಣೆ ಮುಗಿದ ಬಳಿಕವೂ ಯೋಜನೆಗಳು ಮುಂದುವರಿದಿವೆ. ಗೃಹಲಕ್ಷ್ಮೀ ಯೋಜನೆ ನಿರಂತರವಾಗಿ ಮುಂದುವರಿಯಲಿದೆ. ಕಾಂಗ್ರೆಸ್ ಸರ್ಕಾರ ಇರುವವರೆಗೂ ಗೃಹಲಕ್ಷ್ಮೀ ಯೋಜನೆ ಇರಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ ಹಾಜರಿದ್ದರು.