Basanagouda Patil Yatnal: ವಿಜಯೇಂದ್ರನ ಚಮಚಾಗಳಿದ್ರೆ ಗೆಟ್ ಔಟ್; ಮಾಧ್ಯಮಗಳ ಬಗ್ಗೆ ಯತ್ನಾಳ್ ಸಿಡಿಮಿಡಿ
Basanagouda Patil Yatnal: ಯತ್ನಾಳ್ ಕಾಂಗ್ರೆಸ್ ಸೇರ್ತಾರಾ ಅಥವಾ ಹೊಸ ಪಕ್ಷ ಕಟ್ಟುತ್ತಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಗರಂ ಆಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಕಾಂಗ್ರೆಸ್ ಪಕ್ಷಕ್ಕೆ ಈ ಜನ್ಮದಲ್ಲೂ ಹೋಗಲ್ಲ, ಮುಂದಿನ ಜನ್ಮದಲ್ಲೂ ಹೋಗಲ್ಲ. ಅದು ಮುಸ್ಲಿಮರ ಪಕ್ಷ. ವಿಜಯೇಂದ್ರನ ಟೀಂ ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ. ಇಂಥ ಪ್ರಶ್ನೆಗಳನ್ನು ಕೇಳುವ ವಿಜಯೇಂದ್ರನ ಚಮಚಾಗಳಿದ್ದರೆ ಗೆಟ್ ಔಟ್ ಎಂದು ಪತ್ರಕರ್ತರ ವಿರುದ್ಧ ಯತ್ನಾಳ್ ಕಿಡಿಕಾರಿದ್ದಾರೆ.


ಕೊಪ್ಪಳ: ಸುದ್ದಿಗೋಷ್ಠಿ ವೇಳೆ ಮಾಧ್ಯಮಗಳ ವಿರುದ್ಧ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಡಿಮಿಡಿಗೊಂಡಿರುವ ಘಟನೆ (Basanagouda Patil Yatnal) ಕೊಪ್ಪಳದಲ್ಲಿ ನಡೆದಿದೆ. ಯತ್ನಾಳ್ ಕಾಂಗ್ರೆಸ್ ಸೇರ್ತಾರಾ ಅಥವಾ ಹೊಸ ಪಕ್ಷ ಕಟ್ಟುತ್ತಾರಾ ಎಂಬ ಪ್ರಶ್ನೆಗೆ ಗರಂ ಆಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಕಾಂಗ್ರೆಸ್ ಪಕ್ಷಕ್ಕೆ ಈ ಜನ್ಮದಲ್ಲೂ ಹೋಗಲ್ಲ, ಮುಂದಿನ ಜನ್ಮದಲ್ಲೂ ಹೋಗಲ್ಲ. ಅದು ಮುಸ್ಲಿಮರ ಪಕ್ಷ. ವಿಜಯೇಂದ್ರನ ಟೀಂಗೆ ನಕಲಿ ಸಾಮಾಜಿಕ ಜಾಲತಾಣವಿದೆ. ಅದರಲ್ಲಿ ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ. ಕೆಲವೊಂದು ಮಾಧ್ಯಮಗಳಿಂದ ಅವರಿಗೆ ಬೆಂಬಲವಿದೆ ಎಂದಿರುವ ಅವರು, ಇಂಥ ಪ್ರಶ್ನೆಗಳನ್ನು ಕೇಳುವ ವಿಜಯೇಂದ್ರನ ಚಮಚಾಗಳಿದ್ರೆ ಗೆಟ್ ಔಟ್ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ರಮೇಶ್ ಜಾರಕಿಹೊಳಿ, ಕುಮಾರ ಬಂಗಾರಪ್ಪ ನಿಮ್ಮ ಜತೆ ಇರುತ್ತಾರಾ ಎಂಬ ಪ್ರಶ್ನೆಗೆ ಸಿಡಿಮಿಡಿಗೊಂಡ ಅವರು, ನಿಮಗೆ ವಿಜಯೇಂದ್ರ ಏನಾದರೂ ಈ ರೀತಿ ಪ್ರಶ್ನೆ ಕೇಳುವಂತೆ ಕಳಿಸಿದ್ದಾನಾ? ಪದೇಪದೆ ಅದೇ ಕೇಳುತ್ತೀರಾ? ಮಾಧ್ಯಮದವರು ಪಾರದರ್ಶಕರಾಗಿರಿ, ವಿಜಯೇಂದ್ರ ವಾಟ್ಸಾಪ್‌ನಲ್ಲಿ ಕಳುಹಿಸಿದ್ದನ್ನು ನನಗೆ ಕೇಳಬೇಡಿ. ವಿಜಯೇಂದ್ರನ ಚಮಚಾಗಳಿದ್ದರೆ ನನಗೆ ಪ್ರಶ್ನೆ ಕೇಳಬೇಡಿ ಗೆಟ್ ಔಟ್. ವಿಜಯೇಂದ್ರ ಕಡೆ ದುಡ್ಡು ತೆಗೆದುಕೊಂಡು ನನಗೆ ಪ್ರಶ್ನೆ ಕೇಳುವ ಹಾಗಿದ್ದರೆ ನನ್ನ ಪ್ರೆಸ್ ಮೀಟ್‌ಗಳಿಗೆ ಬರಬೇಡಿ ಎಂದು ಗರಂ ಆಗಿದ್ದಾರೆ.
ಯಡಿಯೂರಪ್ಪ ಹಾಗೂ ಅವನ ಮಗನದ್ದು ಸಾಕಷ್ಟು ಹಗರಣ ಇದೆ, ಅವರು ಹಣ ಕೊಟ್ಟು ಕೆಲವರನ್ನ ಖರೀದಿ ಮಾಡಿರಬಹುದು. ನಾನು ಇಡಿ ರಾಜ್ಯ ಸುತ್ತಾಡಿ ಜನರ ಅಭಿಪ್ರಾಯ ಸಂಗ್ರಹ ಮಾಡುತ್ತೇನೆ. ಯಡಿಯೂರಪ್ಪ ಮತ್ತು ವಿಜಯೇಂದ್ರ ವೀರಶೈವ ಲಿಂಗಾಯತರಿಗೆ ಮೀಸಲಾತಿ ತಪ್ಪಿಸಿದರು. ಇನ್ನು ಕಾಂಗ್ರೆಸ್ ಮಹಾನಾಯಕ ಮತ್ತು ಬಿಜೆಪಿಯ ಮಹಾಕಳ್ಳರು ಸೇರಿ ರಾಜಣ್ಣನ ಹನಿಟ್ರ‍್ಯಾಪ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ಯತ್ನಾಳ್ ಮಾತನಾಡುವಾಗ ಬೆಂಬಲಿಗರೂ ಮಾಧ್ಯಮಗಳ ವಿರುದ್ಧ ಕೊಂಕು ಮಾತನ್ನಾಡಿದ್ದಾರೆ. ಹೀಗಾಗಿ ಯತ್ನಾಳ್ ಹಾಗೂ ಬೆಂಬಲಿಗರಿಗೆ ಕೊಪ್ಪಳ ಮಾಧ್ಯಮ ಪ್ರತಿನಿಧಿಗಳು ತರಾಟೆ ತೆಗೆದುಕೊಂಡಿದ್ದಾರೆ. ಮಾಧ್ಯಮಗಳು ಯಾರ ಚೇಲಾಗಳೂ ಅಲ್ಲ, ನೀವ್ಯಾಕೆ ಆ ರೀತಿ ಮಾತನ್ನಾಡುತ್ತೀರಿ ಎಂದು ಯತ್ನಾಳ್ ವಿರುದ್ಧ ಮಾಧ್ಯಮ ಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿ, ಸುದ್ದಿಗೋಷ್ಠಿಯಿಂದ ಅರ್ಧದಲ್ಲೇ ಹೊರನಡೆದಿದ್ದಾರೆ.
ನಾಮ ಹಾಕಿದ ಮಾತ್ರಕ್ಕೆ ಹಿಂದು ಆಗಲ್ಲ: ಯತ್ನಾಳ್ ವಿರುದ್ಧ ಕಲ್ಲಡ್ಕ ಪ್ರಭಾಕರ್ ಭಟ್ ಕಿಡಿ
ಮಂಡ್ಯ: ನಾಮ ಹಾಕಿದ ಮಾತ್ರಕ್ಕೆ ಹಿಂದು ಆಗುವುದಿಲ್ಲ. ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿದರೆ ಮಾತ್ರ ಹಿಂದುತ್ವ ಆಗುತ್ತದೆಯೇ? ಹಿಂದುತ್ವದಲ್ಲಿ ಒಂದು ಶಿಸ್ತಿದೆ, ಅನುಶಾಸನ ಇದೆ. ಅನುಶಾಸನ ಇಲ್ಲದಿದ್ದರೆ ಶಿಸ್ತಾಗುವುದಿಲ್ಲ. ಪಕ್ಷದ ಅನುಶಾಸನದಲ್ಲೂ ಇರಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಕಲ್ಲಡ್ಕ ಪ್ರಭಾಕರ ಭಟ್ (kalladka Prabhakar Bhat) ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯಪುರ ಶಾಸಕ ಹಾಗೂ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿರುವುದನ್ನು ಸಮರ್ಥಿಸಿಕೊಂಡರು.
ಈ ಸುದ್ದಿಯನ್ನೂ ಓದಿ |MLC Rajendra: ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಸಂಚು; ಸುಪಾರಿ ಕುರಿತ ಸ್ಫೋಟಕ ಆಡಿಯೊ ವೈರಲ್!
ಹಿಂದುತ್ವವಾದಿ ಎಂದು ಏನು ಬೇಕಾದರೂ ಮಾತನಾಡುವುದಲ್ಲ. ಮಾತನಾಡುವಾಗ ಪ್ರಜ್ಞೆ ಇರಬೇಕು. ಮಾತಿನ ಮೇಲೆ ನಿಗಾ ವಹಿಸಬೇಕು.ಒಂದು ಸಂಘಟನೆಯಲ್ಲಿದ್ದಾಗ ಮಾತು ಗಡಿ ಮೀರಿ ಹೋಗಬಾರದು. ಪಕ್ಷದ ಸಮಿತಿ ಒಳಗೆ ಮಾತನಾಡಬೇಕು. ಬೀದಿಯಲ್ಲಿ ಮಾತನಾಡುವುದು ಹಿಂದುತ್ವದ ಲಕ್ಷಣ ಅಲ್ಲ. ಹಿಂದುತ್ವದಲ್ಲಿ ಶಿಸ್ತು ಇದೆ. ಅದು ಇಲ್ಲದಿದ್ದರೆ ಹಿಂದುತ್ವವಾದಿ ಆಗಲು ಸಾಧ್ಯವಿಲ್ಲ. ಪಕ್ಷದಲ್ಲಿ ಶಿಸ್ತಿನಿಂದ ಇರದಿದ್ದರೆ ಇಂತಹ ಸಮಸ್ಯೆ ಆಗುತ್ತವೆ ಎಂದು ತಿಳಿಸಿದರು.