ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs LSG: ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು!

RCB vs LSG: ಲಖನೌದ ಏಕನಾ ಕ್ರೀಡಾಂಗಣದಲ್ಲಿ ಇದೀಗ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಲಖನೌ ಸೂಪರ್‌ ಜಯಂಟ್ಸ್‌ ತಂಡಗಳು 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಕೊನೆಯ ಲೀಗ್‌ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಆರ್‌ಸಿಬಿ ತಂಡದ ನಾಯಕ ಜಿತೇಶ ಶರ್ಮಾ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.

RCB vs LSG: ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಆರ್‌ಸಿಬಿ!

ಆರ್‌ಸಿಬಿ vs ಎಲ್‌ಎಸ್‌ಜಿ

Profile Ramesh Kote May 27, 2025 7:07 PM

ಲಖನೌ: ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ಇದೀಗ ನಡೆಯುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಕೊನೆಯ ಲೀಗ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಲಖನೌ ಸೂಪರ್‌ ಜಯಂಟ್ಸ್‌ (RCB vs LSG) ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಆರ್‌ಸಿಬಿ ತಂಡದ ನಾಯಕ ಜಿತೇಶ್‌ ಶರ್ಮಾ (Jitesh Sharma) ಬೌಲಿಂಗ್‌ ಆಯ್ದುಕೊಂಡಿದ್ದಾರೆ. ಆ ಮೂಲಕ ಎದುರಾಳಿ ಎಲ್‌ಎಸ್‌ಜಿ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿದ್ದಾರೆ. ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಎರಡರಲ್ಲಿ ಸ್ಥಾನ ಪಡೆಯಬೇಕೆಂದರೆ ಆರ್‌ಸಿಬಿ ಈ ಪಂದ್ಯವನ್ನು ಕಡ್ಡಾಯವಾಗಿ ಗೆಲ್ಲಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಪಂದ್ಯ ಬೆಂಗಳೂರು ತಂಡಕ್ಕೆ ಅತ್ಯಂತ ನಿರ್ಣಾಯಕವಾಗಿದೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪ್ಲೇಯಿಂಗ್‌ XIನಲ್ಲಿ ಎರಡು ಬದಲಾವಣೆಯನ್ನು ತರಲಾಗಿದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ನಿಮಿತ್ತ ಲುಂಗಿ ಎನ್ಗಿಡಿ ತವರಿಗೆ ಮರಳಿದ್ದಾರೆ. ಇವರ ಸ್ಥಾನಕ್ಕೆ ಶ್ರೀಲಂಕಾ ವೇಗಿ ನುವಾನ್‌ ತುಷಾರ ಬಂದಿದ್ದರೆ, ಗಾಯಾಳು ಟಿಮ್‌ ಡೇವಿಡ್‌ ಸ್ಥಾನಕ್ಕೆ ಲಿಯಾಮ್‌ ಲಿವಿಂಗ್‌ಸ್ಟೋನ್‌ ಪ್ಲೇಯಿಂಗ್‌ xiಗೆ ಲಗ್ಗೆ ಇಟ್ಟಿದ್ದಾರೆ. ಈ ಬಗ್ಗೆ ಟಾಸ್‌ ವೇಳೆ ಹಂಗಾಮಿ ನಾಯಕ ಜಿತೇಶ್‌ ಶರ್ಮಾ ಮಾಹಿತಿ ನೀಡಿದ್ದಾರೆ. ರಜತ್‌ ಪಾಟಿದಾರ್‌ ಈ ಪಂದ್ಯದಲ್ಲಿಯೂ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಆಡಲಿದ್ದಾರೆ.

IPL 2025: ಮುಂಬೈ ಅಲ್ಲ! ಈ 2 ತಂಡಗಳು ಫೈನಲ್‌ ಆಡುವುದು ಪಕ್ಕಾ ಎಂದ ರಾಬಿನ್‌ ಉತ್ತಪ್ಪ!

ಇನ್ನು ಲಖನೌ ಸೂಪರ್‌ ಜಯಂಟ್ಸ್‌ ತಂಡದ ಆಡುವ ಬಳಗದಲ್ಲಿಯೂ ಎರಡು ಬದಲಾವಣೆಯನ್ನು ತರಲಾಗಿದೆ. ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ನಿಮಿತ್ತ ಏಡೆನ್‌ ಮಾರ್ಕ್ರಮ್‌ ದಕ್ಷಿಣ ಆಫ್ರಿಕಾ ತಂಡಕ್ಕೆ ಮರಳಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಮ್ಯಾಥ್ಯೂ ಬ್ರಿಟ್ಜ್‌ ಆಡಲಿದ್ದಾರೆ. ಇನ್ನು ದ್ವಿಗ್ವೇಶ್‌ ಸಿಂಗ್‌ ರಾಠಿ ಆಡುವ ಬಳಗಕ್ಕೆ ಮರಳಿದ್ದಾರೆಂದು ಎಲ್‌ಎಸ್‌ಜಿ ನಾಯಕ ರಿಷಭ್‌ ಪಂತ್‌ ಟಾಸ್‌ ವೇಳೆ ತಿಳಿಸಿದ್ದಾರೆ.



ಇತ್ತಂಡಗಳ ಪ್ಲೇಯಿಂಗ್‌ XI

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: ಫಿಲ್‌ ಸಾಲ್ಟ್‌, ವಿರಾಟ್‌ ಕೊಹ್ಲಿ, ಮಯಾಂಕ್‌ ಅಗರ್ವಾಲ್‌, ರಜತ್‌ ಪಾಟಿದಾರ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌, ಜಿತೇಶ ಶರ್ಮಾ (ನಾಯಕ, ವಿ.ಕೀ), ರೊಮ್ಯಾರಿಯೊ ಶೆಫರ್ಡ್‌, ಕೃಣಾಲ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಯಶ್‌ ದಯಾಳ್‌, ನುವಾನ್‌ ತುಷಾರ



ಲಖನೌ ಸೂಪರ್‌ ಜಯಂಟ್ಸ್‌: ಮಿಚೆಲ್‌ ಮಾರ್ಷ್‌, ಮ್ಯಾಥ್ಯೂ ಬ್ರೀಟ್ಜ್‌, ನಿಕೋಲಸ್‌ ಪೂರನ್‌, ರಿಷಭ್‌ ಪಂತ್‌ (ನಾಯಕ, ವಿ.ಕೀ), ಆಯುಷ್‌ ಬದೋನಿ, ಅಬ್ದುಲ್‌ ಸಮದ್‌, ಹಿಮತ್‌ ಸಿಂಗ್‌, ಶಹಬಾಝ್‌ ಅಹ್ಮದ್‌, ದಿಗ್ವೇಶ್‌ ಸಿಂಗ್‌, ಆವೇಶ್‌ ಖಾನ್‌, ವಿಲಿಯಮ್‌ ರೌರ್ಕಿ



ಆರ್‌ಸಿಬಿ ಗೆದ್ದರೆ ಏನು?

ಈ ಪಂದ್ಯದಲ್ಲಿ ಆರ್‌ಸಿಬಿ ತಂಡ ಗೆಲುವು ಪಡೆದರೆ 2025ರ ಐಪಿಎಲ್‌ ಟೂರ್ನಿಯ ಪಾಯಿಂಟ್‌ ಟೇಬಲ್‌ನಲ್ಲಿ ಅಗ್ರ ಎರಡರಲ್ಲಿ ಸ್ಥಾನ ಪಡೆಯಲಿದೆ ಹಾಗೂ ಮೇ 29 ರಂದು ಚಂಡೀಗಢದ ಮಹಾರಾಜ ಯದವೀಂದ್ರ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯುವ ಮೊದಲನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಕಾದಾಟ ನಡೆಸಲಿದೆ. ಒಂದು ವೇಳೆ ಸೋಲು ಅನುಭವಿಸಿದರೆ, ಮೇ 30 ರಂದು ಇದೇ ಅಂಗಣದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಎಲಿಮಿನೇಟರ್‌ ಪಂದ್ಯವನ್ನು ಆಡಲಿದೆ.