ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr K S Chaithra Column: ಡಬ್ಬಾ ಕಾರ್ಟೆಲ್‌ !

2025ರ ಫೆಬ್ರವರಿ ೨೮ರಿಂದ ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರವಾಗಿರುವ ಹಿತೇಶ್ ಭಾಟಿಯಾ ನಿರ್ದೇಶಿಸಿ ರುವ ಏಳು ಸಂಚಿಕೆಗಳ ವೆಬ್ ಸರಣಿ ಡಬ್ಬಾ ಕಾರ್ಟೆಲ್! ಮುಖ್ಯ ಪಾತ್ರದಲ್ಲಿ ಶಬಾನ ಆಜ್ಮಿ ಜ್ಯೋತಿಕಾ, ಶಾಲಿನಿ ಪಾಂಡೆ, ಗಜರಾಜ್ ರಾವ್ ಮುಂತಾದವರಿದ್ದಾರೆ. ಮಾದಕ ವಸ್ತು ಕಳ್ಳ ಸಾಗಣೆ ಸಮಸ್ಯೆಯನ್ನು ತೋರಿಸುವ ವಿಭಿನ್ನ ಕಥಾವಸು; ಮುಂಬೈನ ಡಬ್ಬಾ ವ್ಯವಸ್ಥೆ ಪ್ರಸಿದ್ಧವಾದದ್ದು. ಬೆಳಿಗ್ಗೆ ಬೇಗನೆದ್ದು ದೂರದೂರದ ಆಫೀಸು- ಕಾಲೇಜುಗಳಿಗೆ ತೆರಳುವ ಉದ್ಯೋಗಿ/ ವಿದ್ಯಾರ್ಥಿಗಳು ಹೊತ್ತಿಗೆ ಸರಿಯಾಗಿ ಬಿಸಿಬಿಸಿಯಾಗಿ ಊಟವನ್ನು ಮಾಡಲು ಡಬ್ಬಾಗಳ ಮೊರೆ ಹೋಗುವುದು ಸಾಮಾನ್ಯ.

ಡಬ್ಬಾ ಕಾರ್ಟೆಲ್‌ !

Profile Ashok Nayak Mar 31, 2025 8:12 AM

ಮಾದಕವಸ್ತು ಕಳ್ಳಸಾಗಾಣಿಕೆಯ ವಸ್ತು ಹೊಂದಿರುವ ಈ ಧಾರಾವಾಹಿ, ಜನಸಾಮಾನ್ಯರಿಗೆ ಗೊತ್ತಿಲ್ಲದ ಹಲವು ಬೆಚ್ಚಿಬೀಳಿಸುವ ವಿಚಾರಗಳನ್ನು ಬಿತ್ತರಿಸುತ್ತದೆ.

ಮುಂಬೈನ ಠಾಣಾದಲ್ಲಿ ವಾಸವಾಗಿರುವ ಫಾರ್ಮ ಕಂಪನಿಯ ಉದ್ಯೋಗಿ ಹರಿ, ಆತನ ಪತ್ನಿ ರಾಜಿ ಮತ್ತು ತಾಯಿ ಶೀಲಾರದ್ದು ಮಧ್ಯಮ ವರ್ಗದ ಪುಟ್ಟ ಕುಟುಂಬ. ಹರಿಗೆ ಮಾಡಿ ಜರ್ಮನಿಗೆ ತೆರಳಿ ಹಾಯಾಗಿರುವ ಕನಸು. ರಾಜಿಗೆ ಹೇಗಾದರೂ ಗಂಡನ ಕನಸಿಗೆ ನೆರವಾಗುವ ಮನಸ್ಸು. ಹೀಗಾಗಿ ಮನೆ ಸಹಾಯಕಿ ಮಾಲಾಳ ಜೊತೆಗೆ ಸೇರಿ ಉದ್ಯೋಗಸ್ಥರಿಗೆ ಊಟ ಕಳಿಸುವ ಡಬ್ಬಾದ ಪುಟ್ಟ ಉದ್ಯೋಗ. ಸಿತಾರಾ ಎನ್ನುವ ಬೊಟಿಕ್ ನಡೆಸುತ್ತಾ ಮಹತ್ವಾಕಾಂಕ್ಷೆ ಹೊಂದಿದ್ದರೂ ನಷ್ಟದಲ್ಲಿ ರುವ ವರುಣಾ ಒಂದೆಡೆಯಾದರೆ, ಮನೆ -ಆಸ್ತಿ ಖರೀದಿಗೆ ಸಹಾಯ ಮಾಡುವ ಪ್ರಾಪರ್ಟಿ ಬ್ರೋಕರ್ ಶಹೀದಾ ಮತ್ತೊಂದೆಡೆ. ಒಟ್ಟಿನಲ್ಲಿ ಸ್ವರೂಪ, ಸ್ವಭಾವ, ವಯಸ್ಸು, ಅಂತಸ್ತು ,ಆಕಾಂಕ್ಷೆ ,ಎಲ್ಲವೂ ಬೇರೆಯಾಗಿರುವ ಐವರು ಮಹಿಳೆಯರು ಒಂದಾಗುತ್ತಾರೆ; ತಮ್ಮದೇ ಆದ ಒಕ್ಕೂಟ ರೂಪಿಸಿ ಕೊಳ್ಳಬೇಕಾಗುತ್ತದೆ ಕಾರಣ ಸೀಕ್ರೆಟ್ ವಸ್ತುವಿಗಾಗಿ! ಅದು ಮಾದಕವಸ್ತು!

2025ರ ಫೆಬ್ರವರಿ ೨೮ರಿಂದ ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರವಾಗಿರುವ ಹಿತೇಶ್ ಭಾಟಿಯಾ ನಿರ್ದೇಶಿಸಿ ರುವ ಏಳು ಸಂಚಿಕೆಗಳ ವೆಬ್ ಸರಣಿ ಡಬ್ಬಾ ಕಾರ್ಟೆಲ್! ಮುಖ್ಯ ಪಾತ್ರದಲ್ಲಿ ಶಬಾನ ಆಜ್ಮಿ ಜ್ಯೋತಿಕಾ, ಶಾಲಿನಿ ಪಾಂಡೆ, ಗಜರಾಜ್ ರಾವ್ ಮುಂತಾದವರಿದ್ದಾರೆ. ಮಾದಕ ವಸ್ತು ಕಳ್ಳ ಸಾಗಣೆ ಸಮಸ್ಯೆಯನ್ನು ತೋರಿಸುವ ವಿಭಿನ್ನ ಕಥಾವಸು; ಮುಂಬೈನ ಡಬ್ಬಾ ವ್ಯವಸ್ಥೆ ಪ್ರಸಿದ್ಧವಾದದ್ದು. ಬೆಳಿಗ್ಗೆ ಬೇಗನೆದ್ದು ದೂರದೂರದ ಆಫೀಸು- ಕಾಲೇಜುಗಳಿಗೆ ತೆರಳುವ ಉದ್ಯೋಗಿ/ ವಿದ್ಯಾರ್ಥಿಗಳು ಹೊತ್ತಿಗೆ ಸರಿಯಾಗಿ ಬಿಸಿಬಿಸಿಯಾಗಿ ಊಟವನ್ನು ಮಾಡಲು ಡಬ್ಬಾಗಳ ಮೊರೆ ಹೋಗುವುದು ಸಾಮಾನ್ಯ.

ಇದನ್ನೂ ಓದಿ: Srivathsa Joshi Column: ವಸಂತ ಬರೆದನು ಒಲವಿನ ಓಲೆ ಚಿಗುರಿದ ಎಲೆಎಲೆ ಮೇಲೆ...

ಗೃಹಿಣಿಯರು ಮನೆಯಲ್ಲಿಯೇ ಊಟವನ್ನು ತಯಾರಿಸಿ ಅವುಗಳನ್ನು ಪೂರೈಸುತ್ತಾರೆ.ಮುಂಬೈನಲ್ಲಿ ದೊಡ್ಡ ಜಾಲವನ್ನು ಹೊಂದಿರುವ ಈ ಡಬ್ಬಾಗಳನ್ನು ಬಳಸಿ ಮಾದಕ ವಸ್ತುಗಳನ್ನು ಸಾಗಣೆ ಮಾಡುವ ಕಥೆಯಿದು. ಕಾರ್ಟೆಲ್ ಎಂದರೆ ಒಕ್ಕೂಟ (ದುಷ್ಟಕೂಟ ಎನ್ನಬಹುದು). ಅನ್ನ ನೀಡುವ ಡಬ್ಬಾದಲ್ಲಿ ವಿಷವಿಡುವ ವ್ಯವಸ್ಥೆಯಾಗಿ ಬದಲಾಗುವುದರಲ್ಲಿ ಈ ಗುಂಪು ಪಾತ್ರ ವಹಿಸುತ್ತದೆ!

ಮಾದಕ ವಸ್ತುಗಳ ಸೇವನೆ ಬಹು ಆಯಾಮಗಳನ್ನು ಹೊಂದಿರುವ ಕ್ಲಿಷ್ಟಕರ ಸಮಸ್ಯೆ. ಇದನ್ನು ಎದುರಿಸುವುದು ನಿಜಕ್ಕೂ ಬಹುದೊಡ್ಡ ಸವಾಲು. ಮಾದಕ ವಸ್ತುಗಳನ್ನು ಗುಳಿಗೆ ಅಥವಾ ಪುಡಿಯ ರೂಪದಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ. ಪ್ರಚೋದನಕಾರಿ ಮತ್ತು ಭ್ರಮೆಯನ್ನು ಸೃಷ್ಟಿಸುವ ಈ ಮಾದಕವಸ್ತುಗಳ ಸೇವನೆಯಿಂದ ನರವಾಹಕಗಳು ಪ್ರಚೋದನೆಗೊಂಡು ಆನಂದದ ಅನು ಭವದ ಜೊತೆ ಎಲ್ಲ ಹಿಂಜರಿಕೆಗಳು ಮಾಯವಾಗಿ ಆತಂಕ ಕಡಿಮೆಯಾಗುತ್ತದೆ.

ಆತ್ಮವಿಶ್ವಾಸ ಹೆಚ್ಚಿ ಏನನ್ನಾದರೂ ಮಾಡಬಲ್ಲೆ ಎನಿಸುತ್ತದೆ. ಆದರೆ ಇದೆಲ್ಲವೂ ಕ್ಷಣಿಕವಾದ ಅನುಭವ. ವಾಸ್ತವಕ್ಕೆ ಮರಳಿದ ನಂತರ ಮತ್ತೆ ಮನಸ್ಸು ಆ ಅನುಭವಕ್ಕೆ ಹಾತೊರೆಯುತ್ತದೆ. ಆದರೆ ಇದರಿಂದಾಗುವ ಅಪಾಯ ಅಷ್ಟಿಷ್ಟಲ್ಲ!

ಇದೊಂದು ದುಷ್ಟಕೂಟ?

‘ಡಬ್ಬಾ ಕಾರ್ಟೆಲ್’ ಕಾಲ್ಪನಿಕ ಕಥೆ ನಿಜ; ಆದರೆ ನೋಡುತ್ತಾ ಹೋದಂತೆ ಮಾದಕ ವಸ್ತು ಸಾಗಣೆಯ ಜಾಲ ಹೇಗೆ ತನ್ನ ಕಬಂಧ ಬಾಹುಗಳನ್ನು ಚಾಚಿದೆ ಎನ್ನುವುದನ್ನು ಸಶಕ್ತವಾಗಿ ತೋರಿಸುತ್ತದೆ. ಜನಸಾಮಾನ್ಯರೂ ಹೇಗೆ ಹಣ, ಹೆಸರು,ಆಮಿಷ, ಒತ್ತಡಕ್ಕೆ ಬಲಿಯಾಗಿ ಪೆಡ್ಲರ್ಗಳಾಗಬಲ್ಲರು ಎನ್ನುವುದು ಅರಿವಾದಂತೆ ಹೆದರಿಕೆಯಾಗುತ್ತದೆ. ಪಕ್ಕದ ಮನೆಯ ಆಂಟಿ, ಮಾದಕವಸ್ತು ಕಳ್ಳ ಸಾಗಾಣಿಕೆಯ ವಸ್ತು ಹೊಂದಿರುವ ಈ ಧಾರಾವಾಹಿ, ಜನಸಾಮಾನ್ಯರಿಗೆ ಗೊತ್ತಿಲ್ಲದ ಹಲವು ಬೆಚ್ಚಿ ಬೀಳಿಸುವ ವಿಚಾರಗಳನ್ನು ಬಿತ್ತರಿಸುತ್ತದೆ.

ಮನೆ ಕೆಲಸದಾಕೆ, ಮೂಲೆ ಮನೆಯ ಅಜ್ಜಿ ..ಹೀಗೆ ಊಹಿಸಲೂ ಸಾಧ್ಯವಿಲ್ಲದವರೂ ಈ ವಿಷ ವರ್ತುಲದಲ್ಲಿ ಸಕ್ರಿಯರಾಗಿರಬಹುದು! ಎಲ್ಲೋ ನಡೆದ ರಸ್ತೆ ಅಪಘಾತ, ಯಾರದ್ದೋ ಕೊಲೆಗೆ ಹೀಗೆ ಸಂಬಂಧ ಪಡದ ವಿಷಯಗಳೆಲ್ಲವೂ ಚಕ್ರವ್ಯೂಹದ ಭಾಗ ಎಂದರಿತಾಗ ಬೆಚ್ಚುವಂತಾಗುತ್ತದೆ. ಈ ‘ಡಬ್ಬಾ ಬಿಸಿನೆಸ್’ ಎನ್ನುವುದು ನಾನಾ ರೂಪಗಳನ್ನು ಪಡೆಯುತ್ತಾ ಐವರು ಮಹಿಳೆಯರ ಬದುಕನ್ನು ನಿಯಂತ್ರಿಸುವ ಮುಖ್ಯ ಸೂತ್ರವಾಗುತ್ತದೆ.

ಡಬ್ಬಾ ಕಾರ್ಟೆಲ್‌ನ ಕಥಾವಸ್ತು ಮತ್ತು ನಿರೂಪಣೆ ಹೊಸತು. ಪಾತ್ರವರ್ಗ ಉತ್ತಮವಾಗಿದೆ. ಅದರಲ್ಲಿಯೂ ಅಭಿನಯವೆಂದರೆ ಕೂಗಿ ಕಿರುಚಬೇಕಿಲ್ಲ, ಕೇವಲ ಕಣ್ಣಿನ ಹೊರಳು, ಕೆಲವೇ ಮಾತು, ಮುಖಭಾವವೇ ಸಾಕು ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ಹಿರಿಯ ನಟಿ ಶಬಾನ ಆಜ್ಮಿ. ಪ್ರತಿ ಸಂಚಿಕೆ ಕುತೂಹಲ ಕೆರಳಿಸಿದರೂ ಕೆಲವೊಮ್ಮೆ ಅನಗತ್ಯವಾಗಿ ಎಳೆದಂತೆಯೂ ಅನಿಸುತ್ತದೆ. ಕೆಲವು ಕಡೆ ಕಥೆಯ ಹಂದರ ಅನೇಕ ಕವಲುಗಳನ್ನು ಹೊಂದಿ ಗೊಂದಲವನ್ನೂ ಮೂಡಿಸುತ್ತದೆ. ಹೊಡೆಯುವ- ಕೊಲ್ಲುವ ದೃಶ್ಯಗಳಿಂದ ಕಸಿವಿಸಿಯಾಗುತ್ತದೆ. ಇಂಥ ಧಾರಾವಾಹಿಗಳು ಕೇವಲ ಮನರಂಜನೆ, ಮೂಡಿಸುವಲ್ಲಿ ಥ್ರಿಲ್‌ಗಾಗಿ ಪ್ರಮುಖ ಅನ್ನಿಸಿದ್ದಂತೂ ನಿಜ!