Monday, 17th June 2024

ಹೆಬ್ಬಾಳ ಜಂಕ್ಷನ್ ನಲ್ಲಿ ಬರಲಿದೆ ಇನ್ನೂ ಮೂರು ಲೇನ್ ಫ್ಲೈಓವರ್

– ಮೇಲ್ಸೇತುವೆ ವಿಸ್ತರಣೆ ಯೋಜನೆಗೆ ಹೊಸ ವರ್ಷದ ಮೊದಲ ದಿನ ಚಾಲನೆ
– ಭೂಮಿ ಪೂಜೆ ನೆರವೇರಿಸಿದ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್
– 87 ಕೋಟಿ ರೂಪಾಯಿ ವೆಚ್ಚದ ಮೊದಲ ಹಂತದ ಕಾಮಗಾರಿ ಆರಂಭ
– ಮೂರು ಲೇನ್ ಮೇಲ್ಸೇತುವೆ ಮತ್ತು ಮೂರು ಲೇನ್ ಅಂಡರ್ ಪಾಸ್
– 12 ತಿಂಗಳಲ್ಲಿ ಕಾಮಗಾರಿ ಪೂರ್ಣ

ಬೆಂಗಳೂರು: ಕಳೆದ ಒಂದು ದಶಕದಿಂದ ನೆನಗುದಿಗೆ ಬಿದ್ದಿದ್ದ ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಯೋಜನೆ ಕಾಮಗಾರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರು ಭಾನುವಾರ ಭೂಮಿಪೂಜೆ ನೆರವೇರಿಸಿದರು.

ಈ ಫ್ಲೈಓವರ್ ನಲ್ಲಿ ಆಗುತ್ತಿದ್ದ ವಾಹನ ದಟ್ಟಣೆ ನಿವಾರಣೆ ಮಾಡುವ ನಿಟ್ಟಿನಲ್ಲಿ ಈ ವಿಸ್ತರಣೆ ಯೋಜನೆ ಮಹತ್ವದ್ದಾಗಿದ್ದು, ಯೋಜನೆಯ ಮೊದಲ ಹಂತದಲ್ಲಿ ವಿಮಾನನಿಲ್ದಾಣ ರಸ್ತೆ ಯಿಂದ ಬೆಂಗಳೂರು ಕಡೆಗೆ ಮೂರು ಲೇನ್ ಗಳ ಮೇಲ್ಸೇತುವೆ ರಸ್ತೆ ಮತ್ತು ಯಶವಂತ ಪುರ- ಕೆಆರ್ ಪುರ ಮಾರ್ಗದಲ್ಲಿ ಮೂರು ಲೇನ್ ನ ಅಂಡರ್ ಪಾಸ್ ನಿರ್ಮಾಣವಾಗಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವನಾಥ್, ನಾನಾ ಕಾರಣಗಳಿಂದ ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಯೋಜನೆ ಕಳೆದ ಒಂದು ದಶಕದಿಂದ ನೆನಗುದಿಗೆ ಬಿದ್ದಿತ್ತು. ಇದರಿಂದ ಯಲಹಂಕ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ಬರುವ ವಾಹನಗಳು ಸುಗಮ ವಾಗಿ ಸಂಚಾರ ನಡೆಸಲು ದುಸ್ತರವಾಗಿತ್ತು. ಸದಾ ಕಾಲ ವಾಹನ ದಟ್ಟಣೆಯಿಂದ ಸಾರ್ವಜನಿ ಕರು ತೊಂದರೆ ಅನುಭವಿಸುತ್ತಿದ್ದರು. ಈ ಸಮಸ್ಯೆಯನ್ನು ಅರಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಲೇ ವಿಸ್ತರಣೆ ಕಾಮಗಾರಿಗೆ ಚಾಲನೆ ನೀಡಿ ಆದಷ್ಟೂ ಶೀಘ್ರದಲ್ಲಿ ಕಾಮಗಾರಿಯನ್ನು ಮುಗಿಸಬೇಕೆಂದು ಸೂಚನೆ ನೀಡಿದ್ದರು ಎಂದರು.

ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ನೀಡಿದ ಸೂಚನೆ ಹಿನ್ನೆಲೆಯಲ್ಲಿ ಬಿಡಿಎ ಇಂದು ಕಾಮಗಾರಿಗೆ ಚಾಲನೆ ನೀಡುವ ಮೂಲಕ ಬೆಂಗಳೂರು ನಾಗರಿಕರಿಗೆ ಹೊಸ ವರ್ಷದ ಮೊದಲ ದಿನದಲ್ಲಿ ಶುಭ ಸುದ್ದಿಯನ್ನು ನೀಡಿದೆ. ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆಗೆ ಒಟ್ಟು 225 ಕೋಟಿ ರೂಪಾಯಿಗಳ ಯೋಜನೆಯನ್ನು ಸಿದ್ಧಪಡಿಸ ಲಾಗಿದ್ದು, ಹಣವನ್ನೂ ಮಂಜೂರು ಮಾಡಲಾಗಿದೆ. ಈಗ ಮೊದಲ ಹಂತದ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಇದಕ್ಕಾಗಿ 87 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗುತ್ತಿದೆ ಎಂದರು.

12 ತಿಂಗಳಲ್ಲಿ ಕಾಮಗಾರಿ ಪೂರ್ಣ
ವಿಮಾನನಿಲ್ದಾಣ ಕಡೆಯಿಂದ ಬೆಂಗಳೂರು ನಗರದ ಕಡೆಗೆ ಒಟ್ಟು 715 ಮೀಟರ್ ಉದ್ದದ ಮೇಲ್ಸೇತುವೆಯನ್ನು ನಿರ್ಮಾಣ ಮಾಡಲಾಗುತ್ತದೆ. ವಿಮಾನನಿಲ್ದಾಣದ ಕಡೆಯಿಂದ ಆರಂಭದಲ್ಲಿ ಎರಡು ಪಥವಿದ್ದು, ರೈಲ್ವೆ ಹಳಿಯ ಮೇಲೆ ಕೆಆರ್ ಪುರದಿಂದ ಲೂಪ್ ಬಂದು ಸೇರಿಕೊಳ್ಳುತ್ತದೆ. ಈ ಸ್ಥಳದಿಂದ ಒಟ್ಟು ಮೂರು ಪಥಗಳು ನಿರ್ಮಾಣವಾಗಲಿವೆ.

ಅದೇ ರೀತಿ ಯಶವಂತಪುರ ಕಡೆಯಿಂದ ಕೆಆರ್ ಪುರ ಕಡೆಗೆ ಮೂರು ಲೇನ್ ನ ಅಂಡರ್ ಪಾಸ್ ನಿರ್ಮಾಣವಾಗಲಿದೆ ಎಂದು ತಿಳಿಸಿದ ವಿಶ್ವನಾಥ್, ಈ ಹಿಂದೆ ಕಾಮಗಾರಿಗೆ 26 ತಿಂಗಳ ಕಾಲ ಮಿತಿಯನ್ನು ಹಾಕಲಾಗಿತ್ತು. ಆದರೆ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶ ದಿಂದ ಕಾಮಗಾರಿಯನ್ನು ಒಂದು ವರ್ಷದಲ್ಲಿ ಮುಗಿಸುವಂತೆ ಗುತ್ತಿಗೆದಾರರಿಗೆ ಕಟ್ಟಪ್ಪಣೆ ಮಾಡಲಾಗಿದೆ ಎಂದು ವಿವರಿಸಿದರು.

ತಿಂಗಳಲ್ಲಿ ಎರಡನೇ ಹಂತದ ಕಾಮಗಾರಿ
ಮೇಲ್ಸೇತುವೆ ವಿಸ್ತರಣೆ ಯೋಜನೆಗೆ ನಮ್ಮ ಮೆಟ್ರೋ ಕೈಜೋಡಿಸಿದ್ದು, ವಿಸ್ತರಣೆಗೆ ಸಂಬಂಧಿಸಿದಂತೆ ವಿನ್ಯಾಸವನ್ನು ಸಿದ್ಧಗೊಳಿಸುತ್ತಿದೆ. ಈ ವಿನ್ಯಾಸ ಸದ್ಯದಲ್ಲೇ ಬರಲಿದ್ದು, ಮುಂದಿನ ತಿಂಗಳಾಂತ್ಯದ ವೇಳೆಗೆ ಎರಡನೇ ಹಂತದ ಕಾಮಗಾರಿಗೂ ಚಾಲನೆ ನೀಡಲಾಗುತ್ತದೆ ಎಂದು ಹೇಳಿದರು.

ಎರಡನೇ ಹಂತದಲ್ಲಿ ಪ್ರಮುಖವಾಗಿ ಕೆಆರ್ ಪುರ, ನಾಗವಾರ ರಸ್ತೆಯನ್ನು ಸಂಪರ್ಕಿಸುವ ಈಗಿರುವ ಲೂಪ್ ಅನ್ನು ತೆಗೆದುಹಾಕಿ ಸಿಗ್ನಲ್ ಮುಕ್ತಗೊಳಿಸುವ ರೀತಿಯಲ್ಲಿ ಮೇಲ್ಸೇತುವೆಯನ್ನು ನಿರ್ಮಾಣ ಮಾಡಲಾಗುತ್ತದೆ. ಇದರಿಂದ ಕೆಆರ್ ಪುರದಿಂದ ಬರುವ ವಾಹನಗಳು ತಡೆರಹಿತವಾಗಿ ವಿಮಾನನಿಲ್ದಾಣ ರಸ್ತೆಯತ್ತ ಸಾಗಬಹುದಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರು ಉತ್ತರ ಲೋಕಸಭಾ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು, ನಮ್ಮ ಕ್ಷೇತ್ರ ವ್ಯಾಪ್ತಿಯ ಈ ಹೆಬ್ಬಾಳ ಜಂಕ್ಷನ್ ನಲ್ಲಿ ವಾಹನ ದಟ್ಟಣೆ ಅಧಿಕವಾಗಿದ್ದು, ವಾಹನ ಸವಾರರಿಗೆ ಸಮಸ್ಯೆ ಉಂಟಾಗುತ್ತಿತ್ತು. ಬಿಡಿಎ ಇದೀಗ ವಿಸ್ತರಣೆ ಮಾಡುತ್ತಿರುವುದು ಸ್ವಾಗತಾರ್ಹವಾಗಿದ್ದು, ಕಾಮಗಾರಿಯನ್ನು ವಿಳಂಬವಾಗದ ರೀತಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸಲಹೆ ನೀಡಿದರು.

ಹೆಬ್ಬಾಳ ಶಾಸಕ ಬೈರತಿ ಸುರೇಶ್ ಅವರು ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರು, ಪಕ್ಷಬೇಧವಿಲ್ಲದೇ ಕಾಂಗ್ರೆಸ್ ಶಾಸಕನಾಗಿದ್ದರೂ ನನ್ನ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಕೊಟ್ಟಿ ದ್ದಾರೆ. ಅವರಿಗೆ ಮತದಾರರ ಪರವಾಗಿ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ ಮತ್ತು ಮೇಲ್ಸೇತುವೆ ಕಾಮಗಾರಿಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಸಮಾರಂಭದಲ್ಲಿ ಬಿಡಿಎ ಆಯುಕ್ತ ಕುಮಾರ ನಾಯಕ್, ಕಾರ್ಯದರ್ಶಿ ಶಾಂತರಾಜು, ಅಭಿಯಂತರ ಸದಸ್ಯ ಶಾಂತರಾಜಣ್ಣ, ಬಿಡಿಎ ಪೊಲೀಸ್ ವರಿಷ್ಠಾಧಿಕಾರಿ ನಂಜುಂಡೇಗೌಡ ಸೇರಿದಂತೆ ಬಿಡಿಎ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಮೊದಲ ಹಂತದ ಯೋಜನೆ ವಿವರ
– ಒಟ್ಟು ಮೊತ್ತ 87 ಕೋಟಿ ರೂಪಾಯಿ
– ವಿಮಾನನಿಲ್ದಾಣ ರಸ್ತೆ ಕಡೆಯಿಂದ ಬೆಂಗಳೂರು ಕಡೆಗೆ (ಎಡ ಭಾಗದಲ್ಲಿ) ಮೂರು ಲೇನ್ ಗಳ ಮೇಲ್ಸೇತುವೆ ನಿರ್ಮಾಣ
– ಒಟ್ಟು ಉದ್ದ 715 ಮೀಟರ್
– ಯಶವಂತಪುರ ರಸ್ತೆಯಿಂದ ಕೆಆರ್ ಪುರ ರಸ್ತೆವರೆಗೆ ಮೂರು ಲೇನ್ ನ ಅಂಡರ್ ಪಾಸ್ ನಿರ್ಮಾಣ
– 12 ತಿಂಗಳೊಳಗೆ ಕಾಮಗಾರಿ ಪೂರ್ಣಕ್ಕೆ ಕಾಲಮಿತಿ ನಿಗದಿ

error: Content is protected !!