Tuesday, 25th June 2024

ಸಮರ್ಥರನ್ನು ಕೈಬಿಟ್ಟರೆ ಅಭಿವೃದ್ದಿ ಹೇಗಾದೀತು ?

ಬುಲೆಟ್ ಪ್ರೂಫ್

ವಿನಯ್ ಖಾನ್

vinaykhan078@gmail.com

ಪ್ರತಾಪ್ ಮಾಡಿದ ತಪ್ಪಾದರೂ ಏನು? ಭ್ರಷ್ಟಾಚಾರ ಮಾಡಿ, ಲೂಟಿ ಹೊಡೆದು ಜೈಲಿಗೆ ಹೋಗಿದ್ದರಾ? ಚುನಾವಣೆಗೊಮ್ಮೆ ಪಕ್ಷದಿಂದ ಪಕ್ಷಕ್ಕೆ ಹಾರುತ್ತ ತಮ್ಮ ಮನೆಯ ಸಂಪತ್ತನ್ನು ಗಟ್ಟಿ ಮಾಡಿದ್ದರಾ? ಎಲ್ಲ ಪಕ್ಷದವರ ಜತೆಗೂಡಿ ಅಡ್ಜಸ್ಟ್‌ಮೆಂಟ್ ಮಾಡಿಕೊಂಡಿದ್ದರಾ? ದೇಶ-ಪಕ್ಷಕ್ಕಿಂತ ತಾನೇ ದೊಡ್ಡವ ಎಂಬುದನ್ನ ಸಾಬೀತುಪಡಿಸಲು ಹೋಗಿದ್ದರಾ?

ಈ ರಾಜ್ಯ ಬಿಜೆಪಿಯವರಿಗೆ ಏನಾಗಿದೆ? ಬಿಜೆಪಿಯ ನಾಯಕರು ತಮ್ಮ ಶಾಣ್ಯಾತನ ತೋರಿಸಲು ಹೋಗಿ ಮುಗ್ಗರಿಸಿ ಬೀಳುವುದು ಇತ್ತೀಚೆಗೆ ಕಾಮನ್. ಕೆಲ
ತಿಂಗಳ ಹಿಂದೆ ನಡೆದ ವಿಧಾನಸಭೆ ಚುನಾವಣೆ ಯಲ್ಲೇ ಅದರ ರುಚಿಯನ್ನು ಇವರು ಅನುಭವಿಸಿದ್ದಾರೆ. ಮೊದಲನೆಯದಾಗಿ, ಗಟ್ಟಿಯಾದ ನಾಯ
ಕತ್ವ ಇಲ್ಲ. ಇರುವ ನಾಯಕತ್ವಕ್ಕೂ ಹಲವರಲ್ಲಿ ಬೆಲೆ ಇಲ್ಲ. ಇದ್ದವರಲ್ಲೇ ನೂರಾರು ಗುಂಪು-ಒಳ ಗುಂಪುಗಳು. ಸಾಲದೆಂಬಂತೆ ಹೊರಗಿನಿಂದ ಬಂದ
‘ನಾಯಕ’ರ ಅಬ್ಬರ ಬೇರೆ.

ಎಷ್ಟೋ ಚುನಾವಣೆಗಳು ಮೋದಿ ಹೆಸರಲ್ಲಿ ನಡೆದರೂ, ಅಲ್ಲಿಯೂ ಸೋಲುಣ್ಣುವಂಥ ಕಾರ್ಯತಂತ್ರಗಳು. ಬಿಜೆಪಿಯ ಚಾಣಕ್ಯ ಅಮಿತ್ ಶಾ ಅಥವಾ ನಿಜವಾದ ಚಾಣಕ್ಯ ಬಂದರೂ, ತಮ್ಮ ಇಂಥ ಕೆಲಸಗಳಿಂದ ಇವರು ಸೋಲನ್ನು ಅನುಭವಿಸುತ್ತಲೇ ಬಂದಿದ್ದಾರೆ. ಆದರೂ ಹೇಗೋ ಏನೋ ಮಾಡಿ, ಗುರುತು- ಪರಿಚಯವಿಲ್ಲದ ಕೆಲವರು ಮತ್ತು ಹೆಸರಾಂತರೂ ಸೇರಿ ಮೋದಿ ಹೆಸರಲ್ಲಿ ೨೦೧೯ರ ಚುನಾವಣೆಯಲ್ಲಿ ಗೆದ್ದು ೨೫ ಜನ ಸಂಸತ್ತಿಗೆ ಹೋದರು.

ಅವರಲ್ಲಿ ಕೆಲವರಂತೂ ಮನೆಯಲ್ಲೇ ಕುಳಿತರು. ಅವರ ಬಗ್ಗೆ ಇನ್ನೂ ಹೇಳಬೇಕೆಂದರೆ, ಕಳೆದ ಚುನಾವಣೆಯ ವೇಳೆ ಜನರಿಗೆ ಮುಖ ತೋರಿಸಿದವರು ಇನ್ನೂ ಮನೆಯಾಚೆ ಬಂದಿಲ್ಲ. ೨೦೧೮ರ ವಿಧಾನಸಭೆ ಚುನಾವಣೆಯಾಗಿ ಕೆಲ ವರ್ಷಗಳ ನಂತರ ‘ಆಪರೇಷನ್ ಕಮಲ’ ಮಾಡಿ ಅಧಿಕಾರಕ್ಕೆ ಬಂದವರು, ತಮ್ಮದೇ ಒಳಜಗಳಗಳಿಂದ ೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ತಳಕಚ್ಚಿದರು. ಆ ಸೋಲನ್ನೇ ಒಬ್ಬರ ಮೇಲೊಬ್ಬರು ಹಾಕಿಕೊಂಡು ತಮ್ಮ ‘ಪ್ರೌಢಿಮೆ’ ಮೆರೆದರು. ಕೊನೆಗೆ ಎಲ್ಲ ಸೋಲನ್ನು ಮೈಮೇಲೆ ಹಾಕಿಕೊಂಡವರು ‘ಚರೈವೇತಿ ಚರೈ ವೇತಿ’ ಅಂತ ಹೇಳಿ ಸುಮ್ಮನಾದರು.

ಈಗ ಮತ್ತೊಮ್ಮೆ ಆ ‘ಚರೈವೇತಿ’ ನಾಯಕರಿಂದ ಅದೇ ಹಳೇ ಡೈಲಾಗ್ ಹೇಳಿಸಲು, ಲೋಕಸಭೆ ಚುನಾವಣೆ ಯಲ್ಲಿ ಮತ್ತದೇ ‘ಪ್ರೌಢಿಮೆ’ ತೋರಿಸಲು ಸಿದ್ಧ
ವಾಗಿದ್ದಾರೆ. ಮೊದಲೇ ಹೇಳಿದಂತೆ, ಎಷ್ಟೋ ಜನ ಸಂಸದರು ಮನೆಯಿಂದ ಹೊರಗೇ ಬಂದಿಲ್ಲ. ಆದರೆ ಅವರೆಲ್ಲ ಸಂಸದರೇ. ಇನ್ನು ಲೋಕಸಭೆಗೆ ಹೋಗಿ ಪ್ರಶ್ನೆ ಕೇಳಿದವರೆಷ್ಟು? ಜನಪರ ದನಿ ಎತ್ತಿದವರೆಷ್ಟು? ರಾಜ್ಯಕ್ಕಾಗುತ್ತಿದ್ದ ಅನ್ಯಾಯದ ಬಗ್ಗೆ ಅಳಲು ತೋಡಿಕೊಂಡವರೆಷ್ಟು? ಅಭಿವೃದ್ಧಿ ಮಾಡಿದವರೆಷ್ಟು? ಪಕ್ಷದ ಪರ ಮಾತಾಡಿದವರೆಷ್ಟು? ವಿಧಾನ ಸಭೆ ಚುನಾವಣೆಗಳಲ್ಲಿ ಓಡಾಡಿ ಬಿಜೆಪಿಯ ಅಭ್ಯರ್ಥಿಗಳನ್ನು ಗೆಲ್ಲಿಸಿದವರೆಷ್ಟು? ಮೋದಿ
ಸರಕಾರದ ಹೊಸ ಹೊಸ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಜಾರಿ ಮಾಡಿ ಮನೆಮನೆಗೆ ತಲುಪಿಸುವ ಕೆಲಸ ಮಾಡಿದವರೆಷ್ಟು? ಜನರಿಗಾಗಿ,
ಅವರ ಕೆಲಸಕ್ಕಾಗಿ ಸದಾಕಾಲ ಸಿಗುತ್ತಿದ್ದ ಸಂಸದ ರೆಷ್ಟು? ಕಾಂಗ್ರೆಸ್ ಸರಕಾರದ ವಿರುದ್ಧ ಹೋರಾಡಿದವರೆಷ್ಟು? ಪಕ್ಷ ಸಂಘಟನೆ ಮಾಡಿದವರೆಷ್ಟು? ಪಕ್ಷ
ಕ್ಕಾಗಿ ಹೊಸ ಕಾರ್ಯಕ್ರಮಗಳನ್ನು ಜಾರಿ ಮಾಡಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿದವರೆಷ್ಟು? ಕಾರ್ಯಕರ್ತರ ಬೇಕು-ಬೇಡಗಳನ್ನು ಕೇಳಿಸಿ
ಕೊಂಡವರು, ಬರ-ನೆರೆ ಬಂದಾಗ ಸಂತ್ರಸ್ತರ ಬಳಿ ಹೋದವರು ಎಷ್ಟು? ಹೀಗೆ ಪಟ್ಟಿಮಾಡುತ್ತಾ ಹೋದರೆ ಬೆಳೆಯುತ್ತಲೇ ಇರುತ್ತದೆ.

೨೦೧೯ರ ಸಾರ್ವತ್ರಿಕ ಚುನಾವಣೆಯ ನಂತರ ಎಷ್ಟೋ ಕ್ಷೇತ್ರದ ಸಂಸದರು ಜನರ ಕೈತಪ್ಪಿ ಹೋಗಿದ್ದಾರೆ. ತಮ್ಮ ಮನೆಯಲ್ಲೋ, ತೋಟದ ಮನೆಯ ಲ್ಲೋ, ಬೇರೆಡೆಯಲ್ಲೋ ಪಾರ್ಟಿ ಮಾಡುತ್ತಾ, ಫೋನುಗಳನ್ನು ಸ್ವಿಚ್ ಆಫ್ ಮಾಡಿ, ತಮ್ಮ ಇರುವಿಕೆಯನ್ನೂ ತೋರಿಸದೆ ಬಚ್ಚಿಟ್ಟು ಕೊಂಡಿದ್ದಾರೆ. ಅವರ ಕ್ಷೇತ್ರಕ್ಕೆ ಪ್ರಧಾನಿ ಮೋದಿ ಯಾವಾಗಲೋ ಒಮ್ಮೆ ಬಂದಾಗ, ಅವರೊಂದಿಗೆ ವೇದಿಕೆಯೇರಿ ಜನರೆಡೆಗೆ ಕೈಬೀಸಿದ್ದು ಬಿಟ್ಟರೆ, ಕೆಲವರು ೫ ವರ್ಷಗಳ ಕಾಲ ಮಾಡಿದ ಅಭಿವೃದ್ಧಿಯ ಕುರುಹುಗಳೂ ಇಲ್ಲ. ಇಷ್ಟೊಂದು ಇಲ್ಲಗಳ ನಡುವೆ ರಾಜ್ಯದ ಕೆಲವೇ ಸಂಸದರು ಆಗಾಗ ಮಾಧ್ಯಮಗಳ ಮುಂದೆ ಕಾಣುತ್ತಿದ್ದರು.

ಹೀಗಿದ್ದಾಗ ರಾಜ್ಯದ ಏಕೈಕ ಸಂಸದ ಸದಾಕಾಲ ಸುದ್ದಿಯಲ್ಲಿದ್ದುದು. ಅದು ಅಭಿವೃದ್ಧಿಯ ಕಾರಣಕ್ಕೋ, ಪಕ್ಷದ ಬೆಂಬಲಕ್ಕೋ, ಹಿಂದುತ್ವದ ವಿರುದ್ಧ ಮಾತಾಡಿದವರ ಹೆಡೆಮುರಿ ಕಟ್ಟಲಿಕ್ಕೋ, ಪ್ರತಾಪ್ ಸಿಂಹ ಹೆಚ್ಚು ಕಡಿಮೆ ಸುದ್ದಿಯಲ್ಲಿರುತ್ತಿದ್ದರು. ೨೦೧೪-೨೦೧೯ರ ಅವಧಿಯಲ್ಲಿ ಅವರ ಹೆಸರು ಈ ಮಟ್ಟಕ್ಕಿರದಿದ್ದರೂ, ೨೦೧೯ರಿಂದ ಇಲ್ಲಿಯವರೆಗೆ ಪ್ರತಿದಿನ ಪ್ರತಾಪ್ ಅವರ ಹೆಸರು ಜನರ ಬಾಯಲ್ಲಿ ಕೇಳಿಬರುತ್ತಿತ್ತು. ರಾಜ್ಯಕ್ಕೇ ಮಾದರಿಯಾಗುವಂಥ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇಯನ್ನು ಅವರು ತಂದಾಗ, ವಿರೋಧಿಗಳೂ ಅವರನ್ನು ಹೊಗಳಿದರು. ಇದನ್ನು ಕಾಂಗ್ರೆಸ್‌ನವರು ವಿರೋಧ ಮಾಡಿದ್ದು ಬೇರೆ ಮಾತು.

ಹಾಗೇ, ಪ್ರತಾಪರೇ ಹೇಳಿಕೊಂಡಂತೆ, ಹಲವು ಸೈದ್ಧಾಂತಿಕ ವಿರೋಧಿಗಳೂ ಅವರನ್ನು ಮೆಚ್ಚಿ ಶುಭಾಶಯ ಕೋರಿದ್ದರಂತೆ. ಮೊನ್ನೆ ರಾತ್ರಿ ಫೇಸ್‌ಬುಕ್ ಲೈವ್‌ನಲ್ಲಿ ಅವರಾಡಿದ ಮಾತುಗಳನ್ನು ಕೇಳಿದಾಗ, ರಾಜಕಾರಣಿಯೊಬ್ಬ ಏನೆಲ್ಲಾ ಕೆಲಸ ಗಳನ್ನು ಮಾಡಬಹುದು ಎಂಬ ವಿಚಾರ ಮನದಲ್ಲಿ ಸುಳಿಯಿತು. ಲೈವ್‌ನಲ್ಲಿ ಅವರು ಹೇಳಿದ್ದು: ‘ನಾನು (ಪ್ರತಾಪ್ ಸಿಂಹ) ನನ್ನ ಬಗ್ಗೆ ದೇವರಲ್ಲಿ ಎಂದಿಗೂ ಬೇಡಿಕೊಂಡಿಲ್ಲ. ಏಕೆಂದರೆ, ನಾನು ಬೇಡಿದ್ದ ಕ್ಕಿಂತ ಹೆಚ್ಚಿನದನ್ನು ಕೊಟ್ಟಿದ್ದಾರೆ. ಆದರೆ ಮೈಸೂರಿಗೆ ಪಾಸ್‌ಪೋರ್ಟ್ ಸೇವಾಕೇಂದ್ರಕ್ಕಾಗಿ ಎಷ್ಟೋ ಸಲ ಓಡಾಡಿದೆ. ಪ್ರತಿಸಲವೂ ಅದು ಕೈತಪ್ಪುತ್ತಿತ್ತು.

ಒಂದು ಸಲ ದೇವರಿಗೆ ಹರಕೆ ಕಟ್ಟಿ ಚೀಟಿಯನ್ನು ಹಾಕಿದ ಮೇಲೆ ಈ ಸೇವಾಕೇಂದ್ರ ದಕ್ಕಿತು. ಜತೆಗೆ ಯಾವುದೋ ಒಂದು ಕೆಲಸಕ್ಕಾಗಿ ಅಧಿಕಾರಿಯ
ಕಾಲು ಹಿಡಿತೀನಿ- ನನಗೆ ಇದೊಂದು ಕೆಲಸ ಮಾಡಿ ಕೊಡಿ ಅಂತ’. ಇಡೀ ಕಾಂಗ್ರೆಸ್ ಪ್ರತಾಪ್ ಸಿಂಹರನ್ನು ಟಾರ್ಗೆಟ್ ಮಾಡಿ, ಅವರನ್ನು ಹೆಡೆಮುರಿ
ಕಟ್ಟಿ ಚುನಾವಣೆಯಲ್ಲಿ ಸೋಲಿಸಲು ಅಭ್ಯರ್ಥಿಗಳೇ ಸಿಗದ ಪರಿಸ್ಥಿತಿಯಲ್ಲಿತ್ತು. ಎಲ್ಲವನ್ನೂ ಬಿಡಿ, ಕೆಲ ಕಾಂಗ್ರೆಸಿಗರು ಬಿಜೆಪಿಯ ಬಗ್ಗೆ ಅವಹೇಳನಕಾರಿ
ಯಾಗಿ ಮಾತನಾಡುತ್ತಿದ್ದಾಗ, ಅದಕ್ಕೆಲ್ಲ ಮೊದಲು ಪ್ರತಿಕ್ರಿಯಿಸುತ್ತಿದ್ದುದು ಇದೇ ಪ್ರತಾಪ್ ಸಿಂಹ!

ಕರ್ನಾಟಕದಲ್ಲಿ ಯಾವ ಎಂಪಿಯೂ ಮಾಡದಿರುವಷ್ಟು ಕೆಲಸವನ್ನು ಪ್ರತಾಪ್ ಮಾಡಿದ್ದಾರೆ. ತಮ್ಮ ಕೆಲಸದಿಂದಾಗಿಯೇ ಅವರು ರಾಜ್ಯದ ಗಮನ ವನ್ನು ಸೆಳೆದವರು. ಹೀಗಾಗಿ, ಅವರಿಗೆ ಟಿಕೆಟ್ ತಪ್ಪುವ ಸಂಭವವಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ, ರಾಜ್ಯಾದ್ಯಂತದ ಜನರು ಪ್ರತಾಪ್ ಸಿಂಹರ ಪರವಾಗಿ ಮಾತನಾಡತೊಡಗಿದರು. ‘ಮೈಸೂರಿನ ಟಿಕೆಟ್ ಸಿಗದಿದ್ದರೆ ನಮ್ಮ ಕ್ಷೇತ್ರಕ್ಕೆ ಬನ್ನಿ’ ಎಂಬ ಪೋಸ್ಟರ್‌ಗಳು ಸಾಮಾಜಿಕ
ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳತೊಡಗಿದವು. ಇನ್ನೂ ಎಷ್ಟೋ ಜನ ಪ್ರತಿದಿನ ಅವರಿಗೆ ಬೆಂಬಲ ಸೂಚಿಸುವ ಮಾತುಗಳನ್ನೂ, ಪೋಸ್ಟ್‌ಗಳನ್ನೂ
ಹಾಕುತ್ತಲೇ ಇದ್ದಾರೆ. ಹಾಗೆಯೇ ಮೈಸೂರಿನ ಎಲ್ಲ ಸಮುದಾಯದವರೂ ಪ್ರತಾಪರಿಗೆ ಬೆಂಬಲ ಕೊಡುತ್ತಿದ್ದಾರೆ. ಆದರೆ ಅವರನ್ನು ಬೆಂಬಲಿಸಬೇಕಿದ್ದ
ಪಕ್ಷದ ನಾಯಕರೇ ಅವರ ಪರ ಮಾತನಾಡದೇ ಸುಮ್ಮನಿದ್ದಾರೆ.

ಹಾಗಾದರೆ ಪ್ರತಾಪ್ ಮಾಡಿದ ತಪ್ಪಾದರೂ ಏನು? ಭ್ರಷ್ಟಾಚಾರ ಮಾಡಿ, ಲೂಟಿ ಹೊಡೆದು ಜೈಲಿಗೆ ಹೋಗಿದ್ದರಾ? ಚುನಾವಣೆಗೊಮ್ಮೆ ಪಕ್ಷದಿಂದ ಪಕ್ಷಕ್ಕೆ ಹಾರುತ್ತ ತಮ್ಮ ಮನೆಯ ಸಂಪತ್ತನ್ನು ಗಟ್ಟಿ ಮಾಡಿದ್ದರಾ? ಎಲ್ಲ ಪಕ್ಷದವರ ಜತೆಗೂಡಿ ಅಡ್ಜಸ್ಟ್‌ಮೆಂಟ್ ಮಾಡಿಕೊಂಡಿದ್ದರಾ? ದೇಶ-ಪಕ್ಷಕ್ಕಿಂತ ತಾನೇ ದೊಡ್ಡವ ಎಂಬುದನ್ನ ಸಾಬೀತುಪಡಿಸಲು ಹೋಗಿದ್ದರಾ? ಪಕ್ಷದ ಮೇಲೆ, ಬಿಜೆಪಿ ನಾಯಕರ ವಿರುದ್ಧ ಅಸಂಬದ್ಧವಾಗಿ ಮಾತನಾಡಿದವರ ಪರ ನಿಂತಿದ್ದರಾ? ದೊಡ್ಡ ಸ್ಥಾನಗಳಿಗಾಗಿ ಲಾಬಿ ಮಾಡಿದ್ದರಾ? ಕುಟುಂಬ ರಾಜಕೀಯ ಮಾಡಿದ್ದರಾ? ತಮ್ಮ ಹೆಂಡತಿಗೆ ಎಂಎಲ್‌ಎ ಟಿಕೆಟ್ ಕೊಡಿಸಿ ವಿಧಾನಸಭೆಗೆ ಕಳಿಸಿದ್ದರಾ? ಜನರಿಂದ ದೂರವುಳಿಯಲು ತಿಂಗಳಿಗೊಮ್ಮೆ ವಿದೇಶ ಪ್ರವಾಸ ಮಾಡುತ್ತಿದ್ದರಾ? ಅಭಿವೃದ್ಧಿ ಕೆಲಸದ ಬದಲು ಹೊಸ ಬಂಗಲೆ, ಐಷಾರಾಮಿ ಕಾರು ಖರೀದಿಸಿ ಶೋಕಿ ಮಾಡುತ್ತಿದ್ದರಾ? ತಮ್ಮ ಪಕ್ಷದವರ ವಿರುದ್ಧ ಹೇಳಿಕೆ ಕೊಡುತ್ತಿದ್ದರಾ? ಊರು ತುಂಬಾ ಆಸ್ತಿ ಮಾಡಿ, ತಮ್ಮದೇ ಶಾಲಾ-ಕಾಲೇಜು, ಆಸ್ಪತ್ರೆ, ಕಾರ್ಖಾನೆ ಕಟ್ಟಿಸಿ, ಈ ದೇಶದ ಶ್ರೀಮಂತರ ಪಟ್ಟಿಗೆ ಹೋಗುವ ಮಟ್ಟಕ್ಕೆ ಬೆಳೆದರಾ? ಸಾವಿರಾರು ಕೋಟಿ ಭ್ರಷ್ಟಾ ಚಾರದ ಆರೋಪ ಹೊತ್ತು, ವಾರಕ್ಕೊಮ್ಮೆ ಇಡಿ, ಐಟಿ ಕಚೇರಿಗಳಿಗೆ ಕುಟುಂಬ ಸಮೇತರಾಗಿ ಭೇಟಿಕೊಟ್ಟು ಬರುತ್ತಿದ್ದರಾ? ಈ ಯಾವ ಆರೋಪವೂ ಅವರ ಮೇಲಿಲ್ಲ!

ಸಂಸತ್ ಮೇಲೆ ದಾಳಿ ನಡೆಸಿದ ಆರೋಪಿಗಳ ಪಾಸ್ ಇವರ ಕಚೇರಿಯಿಂದ ಹೋದ ಕಾರಣಕ್ಕೆ ಪ್ರತಾಪರಿಗೆ ಟಿಕೆಟ್ ಸಿಕ್ಕಲ್ಲ ಎಂಬ ವಾದವೂ
ಕೇಳಿಬರುತ್ತಿದೆ. ಆದರೆ, ಬಿಜೆಪಿಯಲ್ಲಿರುವವರು ಎಲ್ಲರೂ ಸಾಚಾಗಳಾ? ಕಳೆದ ಬಿಜೆಪಿ ಸರಕಾರದಲ್ಲೇ ಹಲವಾರು ಹಗರಣಗಳ ಬಗ್ಗೆ ಕಾಂಗ್ರೆಸ್ ಹೋರಾಟ
ಮಾಡಿತು. ಅದಕ್ಕೆ ಯಾವುದೇ ಪುರಾವೆಗಳಿಲ್ಲದ ಕಾರಣ (ಅದೂ ಅಡ್ಜಸ್ಟ್‌ಮೆಂಟ್ ಇರಬಹುದು) ಕಾಂಗ್ರೆಸ್ ಸರಕಾರ ಬಂದಮೇಲೆ ಹಿಂದಿನ ಸರಕಾರ
ದಲ್ಲಿ ನಡೆದ ಎಲ್ಲ ಹಗರಣಗಳ ಫೈಲ್‌ಗಳೂ ಮುಚ್ಚಿ ಧೂಳು ಹಿಡಿದವು. ಹಾಗೇ ಅಂಥ ಹಗರಣಗಳ ಬಗ್ಗೆ ಒಂದು ಚಿಕ್ಕ ಮಾತನ್ನೂ ಪ್ರತಾಪ್ ಅವರ ವಿರೋಧಿಗಳ ಬಾಯಲ್ಲಿ ಕೇಳಲಿಲ್ಲ.

ರಾಜ್ಯದ ಜನರಿಗೆ ಮೋದಿಯನ್ನು ಪರಿಚಯಿಸಿದ್ದು ಇದೇ ಪ್ರತಾಪ್ ಸಿಂಹ. ಗೋಧ್ರಾ ಹತ್ಯಾಕಾಂಡವಾದಾಗ ಮಾಧ್ಯಮ ಗಳು ಮೋದಿಯವರ ವಿರುದ್ಧ ನಿಂತಿದ್ದರೆ, ಈ ಮನುಷ್ಯ ಮಾತ್ರ ಮೋದಿ ಪರವಾಗಿ ಅಂಕಣ ಬರೆಯಲು ಶುರು ಮಾಡಿದ್ದರು. ಅದಾದ ಮೇಲೆ ‘ಮೋದಿ ಯಾರೂ ತುಳಿಯದ ಹಾದಿ’ ಎಂಬ ಪುಸ್ತಕ ಬರೆದು, ಇಡೀ ರಾಜ್ಯದ ಜನತೆಗೆ ಮೋದಿಯವರ ಜೀವನ-ರಾಜಕೀಯ-ಗುಜರಾತ್ ಮಾಡೆಲ್ ಬಗ್ಗೆ ತೋರಿಸಿದ್ದರು. ಇನ್ನು, ಹಿಂದುತ್ವ
ಸಿದ್ಧಾಂತದ ಪರವಾಗಿ ಮೊದಲನೇ ಬಾರಿಗೆ ಬರೆಯಲು ಶುರುಮಾಡಿದ್ದೇ ಪ್ರತಾಪ್. ಆಗಿನ ಎಷ್ಟೋ ಬಿಜೆಪಿ ನಾಯಕರ ಭಾಷಣಗಳಿಗೆ ಆಧಾರ ವಾಗುತ್ತಿದ್ದುದು ಪ್ರತಾಪರ ಲೇಖನಗಳೇ.

ಇಷ್ಟೆಲ್ಲ ಮಾಡಿದ್ದರೂ ಪ್ರತಾಪ್‌ಗೆ ಟಿಕೆಟ್ ಇಲ್ಲ ಎಂದರೆ? ಮೋದಿಯವರು ಸದಾಕಾಲ ಅಭಿವೃದ್ಧಿಯ ಕುರಿತೇ ಮಾತನಾಡುತ್ತಾರೆ. ಈ ದೇಶದ ಅಭಿವೃದ್ಧಿ
ಯನ್ನು ಮಾಡಿದ್ದು ತಮ್ಮ ಪಕ್ಷವೆಂದೇ ಎಲ್ಲೆಡೆ ಹೇಳಿಕೊಳ್ಳುವ ಧಾಟಿಯಲ್ಲೇ ಬಿಜೆಪಿಯ ಪ್ರತಿಯೊಬ್ಬರೂ ಮಾತನಾಡುವುದು. ಹಾಗಿದ್ದರೆ, ಅಭಿವೃದ್ಧಿ ಯನ್ನೇ ಜಪ ಮಾಡಿಕೊಂಡಿದ್ದ ಸಂಸದನಿಗೆ ಟಿಕೆಟ್ ತಪ್ಪುವುದೇಕೆ? ಹೇಗಿದ್ದರೂ ಮೋದಿ ಹೆಸರಿನಲ್ಲಿ ಚುನಾವಣೆ ಗಳು ನಡೆಯುತ್ತಿವೆ. ಬಿಜೆಪಿಯವರ ಪ್ರತಿ ಪ್ರಣಾಳಿಕೆಯಲ್ಲಿ ಮುದ್ರಣಗೊಳ್ಳುತ್ತಿದ್ದ ರಾಮಂದಿರವೂ ಆಯಿತು, ಸಿಎಎ ಮೊನ್ನೆ ತಾನೇ ಜಾರಿಗೆ ಬಂತು. ಅದರ ಹವಾದಲ್ಲಿಯೇ ಬಿಜೆಪಿ ಅನಾಯಾಸದಿಂದ ಗೆದ್ದುಬಿಡುತ್ತೆ ಎಂಬ ಭ್ರಮೆಯಲ್ಲಿರುವ ನಾಯಕ ರಿಗೆ, ತಮ್ಮದೇ ಪಕ್ಷದ ಆಕ್ಟಿವ್ ಸಂಸದನಿಗೆ ಟಿಕೆಟ್ ಕೈತಪ್ಪುತ್ತಿರುವ ವಿಚಾರ ಏನು ಮಾಡೀತು? ಹೀಗೆ ಬರೀ ಕಾಲು ಹಿಡಿಯುವವರಿಗೆ, ಬಕೆಟ್ ಹಿಡಿಯುವವರಿಗೆ ಮನ್ನಣೆ ನೀಡುತ್ತಾ ಹೋದರೆ ಬಿಜೆಪಿಯ ಭವಿಷ್ಯವಾದರೂ ಏನಾದೀತು? ಸೊಕ್ಕಿನಿಂದ ಮಾತನಾಡುವ ಬಿಜೆಪಿಯವರಿಗೆ ಬುದ್ಧಿಯಾದರೂ ಯಾವಾಗ ಬಂದೀತು? ರಾಜಕಾರಣವನ್ನು ಜಮೀನ್ದಾರಿಕೆಯನ್ನಾಗಿ ಮಾಡಿಕೊಂಡವರ ಸೊಕ್ಕು ಮುರಿಯುವುದಾದರೂ ಹೇಗೆ? ಕಳೆದ ಚುನಾವಣೆಯಲ್ಲೇ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ್ ಸವದಿ ಅವರಿಗೆ ಟಿಕೆಟ್ ಕೈತಪ್ಪಿದ್ದರಿಂದ ಅಲ್ಪ ಸ್ವಲ್ಪ ಹಿನ್ನಡೆಯಂತೂ ಆಗಿತ್ತು. ಮತ್ತೆ ಅಂಥ ತಪ್ಪನ್ನೇ ಈ ಚುನಾವಣೆಯಲ್ಲೂ ಮಾಡಲು ಹೊರಟಿದ್ದಾರಾ? ಚರೈವೇತಿ ಚರೈವೇತಿ!

(ಲೇಖಕರು ಪತ್ರಕರ್ತರು)

Leave a Reply

Your email address will not be published. Required fields are marked *

error: Content is protected !!