Tuesday, 2nd July 2024

ಟೀಮ್ ಇಂಡಿಯಾ ಟಿ20 ವಿಶ್ವಕಪ್ ಚಾಂಪಿಯನ್

ಬಾರ್ಬಡೋಸ್: ಟೀಮ್ ಇಂಡಿಯಾ 2ನೇ ಟಿ20 ವಿಶ್ವಕಪ್ ಟ್ರೋಫಿ ಗೆದ್ದು ದಾಖಲೆ ಬರೆಯಿತು. 2024ರ ಟಿ20 ವಿಶ್ವಕಪ್ ಫೈನಲ್​ನಲ್ಲಿ ರೋಚಕ ಗೆಲುವು ಸಾಧಿಸಿದ ರೋಹಿತ್​ ಪಡೆ, ಎರಡು ಚುಟುಕು ಟ್ರೋಫಿ ಗೆದ್ದ 3ನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 8 ರನ್​ಗಳ ರೋಚಕ ಜಯ ದಾಖಲಿಸಿ ಕೊನೆಗೂ ಟ್ರೋಫಿ ಬರ ಕೊನೆಗೊಳಿಸಿತು.

2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ನಂತರ, ಅಂದರೆ 11 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಗೆದ್ದು ಬೀಗಿದ ಭಾರತ ತಂಡವು, ರೋಹಿತ್​ ಶರ್ಮಾ ನಾಯಕತ್ವದಲ್ಲಿ ಚಾಂಪಿಯನ್ ಪಟ್ಟಕ್ಕೇರಿತು. ಸೌತ್ ಆಫ್ರಿಕಾ ತನಗಿರುವ ಚೋಕರ್ಸ್ ಹಣೆಪಟ್ಟಿಯನ್ನು ಕಳಚಲು ವಿಫಲವಾಯಿತು.

ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಬಲದಿಂದ 20 ಓವರ್​​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್​​ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ  ಆಫ್ರಿಕಾ, ಬೆಂಕಿ ಬಿರುಗಾಳಿ ಬ್ಯಾಟಿಂಗ್ ನಡೆಸಿತು. ಹೆನ್ರಿಚ್ ಕ್ಲಾಸೆನ್ ಅದ್ಭುತ ಪ್ರದರ್ಶನ ನೀಡಿದರು.

177 ರನ್​ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಆರಂಭದಲ್ಲೇ ಆಘಾತಕ್ಕೆ ಒಳಗಾಯಿತು. ರೀಜಾ ಹೆಂಡ್ರಿಕ್ಸ್ ಮತ್ತು ಏಡನ್ ಮಾರ್ಕ್ರಮ್ ಬೇಗನೇ ಔಟಾದರು. ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ಭಾರತಕ್ಕೆ ಮುನ್ನಡೆ ತಂದುಕೊಟ್ಟರು.  ಬಳಿಕ ಟ್ರಿಸ್ಟಾನ್ ಸ್ಟಬ್ಸ್ ಮತ್ತು ಕ್ವಿಂಟನ್ ಡಿ ಕಾಕ್ ಬೌಲರ್​ಗಳ ಮೇಲೆ ಸವಾರಿ ನಡೆಸಿದರು. 3ನೇ ವಿಕೆಟ್​ಗೆ 58 ರನ್​ಗಳ ಪಾಲುದಾರಿಕೆ ಬಂತು. ಈ ಹಂತದಲ್ಲಿ ಅಕ್ಷರ್​ ಪಟೇಲ್ ವಿಕೆಟ್ ಪಡೆದರು. ಸ್ಟಬ್ಸ್ 31 ರನ್ ಗಳಿಸಿ ಔಟಾದರು.

ಡಿ ಕಾಕ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರೆ, ಸ್ಟಬ್ಸ್ ಬಳಿಕ ಕಣಕ್ಕಿಳಿದ ಹೆನ್ರಿಚ್ ಕ್ಲಾಸೆನ್ ಸ್ಫೋಟಕ ಬ್ಯಾಟಿಂಗ್​ಗೆ ಒತ್ತು ಕೊಟ್ಟರು. ಕ್ರೀಸ್​ಗೆ ಬಂದ ತಕ್ಷಣವೇ 3 ಸಿಕ್ಸರ್ ಚಚ್ಚಿದರು. ಪಂದ್ಯ ಕೈ ತಪ್ಪುತ್ತಿದ್ದ ಹಂತದಲ್ಲಿ ಅರ್ಷದೀಪ್ ಮುನ್ನಡೆ ತಂದುಕೊಟ್ಟರು. ಕ್ವಿಂಟನ್ ಡಿ ಕಾಕ್ ಉಪಯುಕ್ತ 39 ರನ್ ಗಳಿಸಿ ಕ್ಯಾಚ್​ ನೀಡಿದರು. ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ಟೀಮ್ ಇಂಡಿಯಾ ಬೌಲರ್​ಗಳನ್ನು ಚೆಂಡಾಡಿದರು. ಕ್ಲಾಸೆನ್ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. 24 ಎಸೆತಗಳಲ್ಲಿ 26 ರನ್ ಬೇಕಿದ್ದ ಅವಧಿಯಲ್ಲಿ ಭಾರತ ಗೆಲ್ಲುವುದು ಬಹುತೇಕ ಕಷ್ಟವಾಗಿತ್ತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ ಸ್ಫೋಟಕ ಆರಂಭ ಪಡೆಯುವ ಭರವಸೆ ನೀಡಿತು. ಆದರೆ ಎರಡನೇ ಓವರ್​ ಎಸೆದ ಕೇಶವ್ ಮಹಾರಾಜ್, ಭಾರತಕ್ಕೆ ಡಬಲ್ ಆಘಾತ ನೀಡಿದರು. ರೋಹಿತ್​ ಶರ್ಮಾ (9) ಮತ್ತು ರಿಷಭ್ ಪಂತ್ (೦) ಅವರನ್ನ ಹೊರದಬ್ಬಿದರು. ನಂತರ ಸೂರ್ಯಕುಮಾರ್ (3) ಕೂಡ ಹೆಚ್ಚು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಈ ವೇಳೆ ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ತಂಡವನ್ನು ರಕ್ಷಿಸಿದರು. ಅಕ್ಷರ್ ಪಟೇಲ್ ಅಬ್ಬರದ 47 ರನ್ ಸಿಡಿಸಿದರೆ, ವಿರಾಟ್ ಕೊಹ್ಲಿ ಟೂರ್ನಿಯಲ್ಲಿ ಮೊದಲ ಅರ್ಧಶತಕ ಸಿಡಿಸಿದರು. ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.

ನಂತರ ಶಿವಂ ದುಬೆ ಮತ್ತು ವಿರಾಟ್ ಕೊಹ್ಲಿ ಕೂಡ ಆಕರ್ಷಕ ಆಟವಾಡಿದರು. 5ನೇ ವಿಕೆಟ್​ಗೆ 50+ಪಾಲುದಾರಿಕೆ ಒದಗಿಸಿದರು. ಆದರೆ ಕೊಹ್ಲಿ 59 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಿತ 76 ರನ್ ಸಿಡಿಸಿ ಔಟಾದರು. ಕೊನೆಯಲ್ಲಿ ಶಿವಂ ದುಬೆ 27, ಹಾರ್ದಿಕ್ ಪಾಂಡ್ಯ 5*, ರವೀಂದ್ರ ಜಡೇಜಾ 2 ರನ್ ಗಳಿಸಿದರು.

ಭಾರತ ತಂಡ ಐಸಿಸಿ ಟಿ20 ವಿಶ್ವಕಪ್ 2024ರ ಫೈನಲ್ ಪಂದ್ಯವನ್ನು ಗೆದ್ದು ಬೀಗಿದ್ದು, ಈ ಮೂಲಕ ಹೊಸ ಇತಿಹಾಸ ನಿರ್ಮಾಣ ಮಾಡಿದೆ. 2007 ರಲ್ಲಿ ಮೊದಲ ಬಾರಿಗೆ ಟಿ20 ವಿಶ್ವಕಪ್ ಟ್ರೋಫಿ ಗೆದ್ದಿದ್ದ ಭಾರತಕ್ಕೆ 2024 ರಲ್ಲಿ ಮತ್ತೊಮ್ಮೆ ವಿಜಯಲಕ್ಷ್ಮೀ ಒಲಿದು ಬಂದಿದ್ದು, ಇಡೀ ಭಾರತವೇ ಈಗ ಸಂಭ್ರಮಾಚರಣೆ ನಡೆಸುತ್ತಿದೆ.

13 ವರ್ಷಗಳ ಕಾಯುವಿಕೆಯನ್ನ ಕೊನೆಗೊಳಿಸಿದ ನಿರ್ಣಾಯಕ ಪಂದ್ಯದಲ್ಲಿ ಭಾರತ ಟಾಸ್ ಗೆದ್ದಿದ್ದು, ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.

ಈ ಪಂದ್ಯದಲ್ಲಿ ಟಾಸ್ ಗೆದ್ದ ತಂಡವು ಬ್ಯಾಟಿಂಗ್ ಆಯ್ಕೆ ಮಾಡುತ್ತದೆ ಎಂದು ಮಾಜಿ ಆಟಗಾರರು ಈಗಾಗಲೇ ಭವಿಷ್ಯ ನುಡಿದಿದ್ದರು. ನಿರ್ಣಾಯಕ ಟಾಸ್ ಗೆದ್ದ ಭಾರತ ತಂಡದ ನಾಯಕ ಎರಡನೇ ಆಲೋಚನೆಯಿಲ್ಲದೇ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.

Leave a Reply

Your email address will not be published. Required fields are marked *

error: Content is protected !!